Tuesday, May 28, 2024

ಬೆಳಗಾವಿ-ರಾಯಚೂರು ಮಧ್ಯೆ 12,500 ಕೋಟಿ ರೂ ವೆಚ್ಚದಲ್ಲಿ ಚತುಷ್ಪಥ ರಸ್ತೆ ಅತೀ ಶೀಘ್ರದಲ್ಲಿ ನಿರ್ಮಾಣ.

ಬೆಳಗಾವಿ.(ಸೆ 15): ಬಹು ದಿನಗಳ ಕನಸಾಗಿರುವ ಬೆಳಗಾವಿ-ರಾಯಚೂರು ಮಧ್ಯೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೊನೆಗೂ ಒಳ್ಳೆಯ ಕಾಲ ಕೂಡಿ ಬಂದಿದ್ದು, ಇನ್ನುಮುಂದೆ ಸಂಚಾರ ಸುಗಮವಾಗಲಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶದ ಕೆಲವು ಪ್ರಮುಖ ಮಾರ್ಗಗಳಲ್ಲಿ ಕೇಂದ್ರ ಸರಕಾರ ‘ಎಕನಾಮಿಕ್‌ ಕಾರಿಡಾರ್‌’ ಘೋಷಿಸಿದ್ದು, ಇದರಡಿ ಬೆಳಗಾವಿಯಿಂದ ರಾಯಚೂರುವರೆಗಿನ ಹೆದ್ದಾರಿಯೂ ಸೇರಿದ್ದು, ಕಾಮಗಾರಿಯಲ್ಲೂ ವೇಗ ಪಡೆಯುವ ನಿರೀಕ್ಷೆಯಿದೆ.

ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಎಕನಾಮಿಕ್‌ ಕಾರಿಡಾರ್‌ ಯೋಜನೆ ಕೈಗೆತ್ತಿಕೊಂಡಿವೆ. ‘ಎಕನಾಮಿಕ್‌ ಕಾರಿಡಾರ್‌ ಇಸಿ – 10’ ಎಂದು ಹೆಸರಿಸಿದ ಹೈದರಾಬಾದ್‌ – ಗೋವಾದ ಪಣಜಿ ಸಂಪರ್ಕ ಕಲ್ಪಿಸುವ ಚತುಷ್ಪಥ ಅಭಿವೃದ್ಧಿಗೆ ಯೋಜಿಸಲಾಗಿದೆ.

ಈ ಯೋಜನೆಯಲ್ಲಿ ಒಟ್ಟು 593 ಕಿ. ಮೀ. ಉದ್ದದ ಈ ಹೆದ್ದಾರಿಯ ಅಭಿವೃದ್ಧಿಯನ್ನು ಆರು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಹೈದರಾಬಾದ್‌ನಿಂದ ರಾಯಚೂರಿನವರೆಗೆ ಕಾಮಗಾರಿ ಬಹುತೇಕ ಆರಂಭಗೊಂಡಿದೆ. ಅದೇ ರೀತಿ ಬೆಳಗಾವಿ ವ್ಯಾಪ್ತಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೀಗ ರಾಯಚೂರು – ಹುನಗುಂದ ವ್ಯಾಪ್ತಿಯಲ್ಲಿ ಡಿಪಿಆರ್‌ ಸಿದ್ಧಗೊಂಡಿದ್ದು ಸಂಪುಟದಲ್ಲಿ ಶೀಘ್ರ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.

ಬೆಳಗಾವಿ-ರಾಯಚೂರು ಮಧ್ಯೆ ಒಟ್ಟು 325 ಕಿ. ಮೀ. ಅಂತರವಿದ್ದು, 12,500 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಿಸಲಾಗುತ್ತದೆ. ಬೆಳಗಾವಿ-ರಾಯಚೂರು ಚತುಷ್ಪಥ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಚೆಗೆ ರಾಯಚೂರು ಸಂಸದರ ನೇತೃತ್ವದ ನಿಯೋಗ, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಈ ಹೆದ್ದಾರಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದೆ. ಪ್ರಕ್ರಿಯೆ ಚುರುಕುಗೊಳಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಬೆಳಗಾವಿ-ರಾಯಚೂರು ಮಧ್ಯೆ 325 ಕಿ. ಮೀ. ಸಂಚರಿಸಲು 8 ಗಂಟೆಗಳ ಪ್ರಯಾಣ ಮಾಡಬೇಕಿದೆ. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿದ್ದು, ಅಪಘಾತಗಳಿಗೂ ಆಹ್ವಾನ ನೀಡುತ್ತಿದೆ. ಈ ಮಾರ್ಗದ ಸಂಚಾರ ಒತ್ತಡ ತಗ್ಗಿಸುವ ಉದ್ದೇಶದಿಂದಲೇ ‘ಎಕನಾಮಿಕ್‌ ಕಾರಿಡಾರ್‌’ ನಿರ್ಮಿಸಲು ಯೋಜಿಸಲಾಗಿದೆ. ವಾಹನಗಳ ಸಂಚಾರ ಸುಗಮಗೊಳಿಸುವುದು ಹಾಗೂ ಪ್ರಯಾಣದ ಸಮಯ ತಗ್ಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಎಕನಾಮಿಕ್‌ ಕಾರಿಡಾರ್‌ ಯೋಜನೆ ಅಡಿ ಬೆಳಗಾವಿ-ರಾಯಚೂರು – ಮಧ್ಯೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧವಾಗಿದ್ದು, ಕೇಂದ್ರ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಜಿಲ್ಲೆಯ ಪ್ರಗತಿಗೆ ಸಾಕಷ್ಟು ಅನುಕೂಲವಾಗಲಿದೆ. 

ಜಿಲ್ಲೆ

ರಾಜ್ಯ

error: Content is protected !!