Tuesday, September 17, 2024

ಮಠೀಯ ವ್ಯವಸ್ಥೆ ಬದಲಿಸಲು ಇದು ಸಕಾಲ

ಇತ್ತೀಚೆಗಿನ ರಾಜ್ಯದ ಕೆಲವು ಅಹಿತಕರ ಘಟನೆಗಳನ್ನು ಗಮನಿಸಿದಾಗ ಮಠೀಯ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ಆಗಬೇಕು ಎನಿಸುವುದು ಸಹಜ.

ಕರ್ನಾಟಕದ ಲಿಂಗಾಯತ ಮಠಗಳ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ. ಒಂದು ವೇಳೆ ಲಿಂಗಾಯತ ಮಠಗಳ ಪ್ರಸಾದ ನಿಲಯಗಳು ಇರದೇ ಹೋಗಿದ್ದರೆ, ಲಕ್ಷಾಂತರ ಬಡವರಿಗೆ ಉನ್ನತ ಗುಣಮಟ್ಟದ ಶಿಕ್ಷಣ ಲಭಿಸುತ್ತಿರಲಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಬಡವರು, ಹಿಂದುಳಿದವರು ಲಿಂಗಾಯತ ಮಠಗಳ ಮೂಲಕ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಏರಿದ್ದಾರೆ. ಇದು ಮಠೀಯ ವ್ಯವಸ್ಥೆಯ ಬಹುದೊಡ್ಡ ಐತಿಹಾಸಿಕ ಕೊಡುಗೆ.

ಮಠದ ಸ್ವಾಮಿಗಳಾದವರು ಸನ್ಯಾಸಿಗಳು ಅಥವಾ ಬ್ರಹ್ಮಚಾರಿಗಳಾಗಿದ್ದರೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಗಾಢ ನಂಬಿಕೆಯನ್ನು ಬಹುಪಾಲು ಲಿಂಗಾಯತ ಮಠಗಳು ಪಾಲಿಸಿಕೊಂಡು ಬಂದಿವೆ. ಆಗ ಸ್ವಾಮಿಗಳು ಸ್ವಯಂ ಆಗುತ್ತಿದ್ದರು, ಯಾರೂ ಸ್ವಾಮಿಗಳನ್ನು ಸೃಷ್ಟಿ ಮಾಡುತ್ತಿರಲಿಲ್ಲ.ಈಗ ಮಠಗಳ ಸ್ಥಿತಿ ಕೂಡ ಬದಲಾಗುತ್ತ ಹೋಗಿದೆ. ಆಗ ಕಂತೆ ಭಿಕ್ಷೆ, ಜೋಳಿಗೆ, ಭಕ್ತರು ಮತ್ತವರ ಸೇವೆ… ಎಂಬ ಕಲ್ಪನೆಯ ಜೊತೆಗೆ ಬಡತನ ನಿರಂತರ ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ.

ಬಡತನದ ಬದಲಾಗಿ ಐಷಾರಾಮಿ ವಾತಾವರಣ ಸೃಷ್ಟಿಯಾಯಿತು. ಆಧುನಿಕ ಸೌಕರ್ಯಗಳಾದ ಕಾರು, ಬಂಗಲೆ, ಸೋಷಿಯಲ್ ಮೀಡಿಯಾ, ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾಗಿ ವ್ಯಕ್ತಿ ಮನೋ ನಿಗ್ರಹ ಕಳೆದುಕೊಳ್ಳುವಂತಾಯಿತು. ತ್ಯಾಗ, ಸಹನೆ, ಖಾಸಗಿ ಶಿಸ್ತು, ಕಟ್ಟುನಿಟ್ಟಿನ ಜೀವನಶೈಲಿ ಮಾಯವಾಯಿತು. ಹಾಗೆ ನೋಡಿದರೆ ಒಂದರ್ಥದಲ್ಲಿ ಸನ್ಯಾಸ ಅಥವಾ ಬ್ರಹ್ಮಚರ್ಯ ಮೂಲ ಲಿಂಗಾಯತ ಧರ್ಮದ ಆಚರಣೆ ಅಲ್ಲ. ನಮ್ಮ ಶರಣ ಧರ್ಮ ಸಂಸಾರಿಗಳಿಂದ ಸ್ಥಾಪಿತವಾಗಿದೆ. ಕೇವಲ ಕೆಲವೇ ಕೆಲವು ಶರಣರು ಸ್ವಯಂ ಪ್ರೇರಣೆಯಿಂದ ಮದುವೆ ಆಗಿರಲಿಲ್ಲ. ಉದಾಹರಣೆಗೆ ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಚೆನ್ನಬಸವಣ್ಣ ಅವರನ್ನು ಸ್ಮರಿಸಬಹುದು.

ನಂತರದ ದಿನಗಳಲ್ಲಿ ಮಠಗಳು ಸಂಸಾರಿ ಪರಂಪರೆಯನ್ನು ಹೊಂದಿದ್ದವು. ಕುಟುಂಬ ಮತ್ತು ಸಂಸಾರದ ಕಾರಣದಿಂದ ನಿಸ್ವಾರ್ಥ ವಾತಾವರಣ ಕಂಡು ಬರಲಿಲ್ಲ. ‌ಮಠದ ಸ್ವಾಮಿಗಳು ಬ್ರಹ್ಮಚರ್ಯ ಪಾಲಿಸಿ, ವಿರಕ್ತ ಪರಂಪರೆಯನ್ನು ಕಾಪಾಡಲಿ ಎಂಬ ಅಭಿಪ್ರಾಯ ಮೇಲುಗೈ ಸಾಧಿಸಿದ್ದು ಅಷ್ಟೇ ಸಮಯೋಚಿತ. ಅದೇ ಮಾದರಿಯ ಸಮಾಜಮುಖಿ ಜಂಗಮರು ಸಮಾಜದಲ್ಲಿ ಆದರ್ಶಪ್ರಾಯರಾಗಿದ್ದರು.

ಆದರೆ ಈಗ… ಕಾಲ ತುಂಬಾ ಮುಂದೆ ಸಾಗಿದೆ. ಸರ್ಕಾರ ಅನೇಕ ಸೌಲಭ್ಯಗಳನ್ನು ವಿಸ್ತರಿಸುತ್ತಾ ಸಾಗಿದೆ. ‌ಇಷ್ಟಾಗಿಯೂ ಕೆಲವು ಪ್ರಮುಖ ಮಠಗಳ ಮೂಲಕ ಸಾವಿರಾರು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಲಿದ್ದಾರೆ. ಇದರ ಜೊತೆ ಜೊತೆಗೆ ಅನೇಕ ಹಗರಣಗಳು ಬಯಲಾಗುತ್ತಲಿವೆ. ಮುಖ್ಯವಾಗಿ ಕಾಮ ಕೇಂದ್ರಿತ ಘಟನೆಗಳು ಬಯಲಾಗಿ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಸಂಕಷ್ಟದಲ್ಲಿ ಸಿಲುಕಿದ ಮಠಾಧೀಶರನ್ನು ದೂಶಿಸುವುದು ಸರಿಯಲ್ಲ.

ಸ್ವಾಮಿಗಳು ಕೂಡ ನಮ್ಮ ಹಾಗೆ ಮನುಷ್ಯರೇ! ಅವರಿಗೂ ಆಸೆ, ಆಮಿಷಗಳು ಇರುವುದು ಸಹಜ. ಹಸಿವು, ನಿದ್ರೆ, ನೀರಡಿಕೆ ಮತ್ತು ಕಾಮ ಮನುಷ್ಯ ಸಹಜ ಬಯಕೆಗಳು.ಆದ್ದರಿಂದ ಮಠಾಧೀಶರಿಗೆ ಕಾಮ ನಿಗ್ರಹದ ಕಟ್ಟುಪಾಡುಗಳು ಅವೈಜ್ಞಾನಿಕ. ಪೀಠ ಪರಂಪರೆ, ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಸಡಿಲಿಸಿ ಬದಲಾಯಿಸಬೇಕು.

ಎರಡು ವರ್ಷಗಳ ಹಿಂದೆ ಮಠಾಧೀಶರೊಬ್ಬರು ಒತ್ತಡದ ಸಂನ್ಯಾಸವನ್ನು ಬಹಿಷ್ಕರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ನಾನೊಂದು ಲೇಖನ ಬರೆದಾಗ, ಹಲವರು ತಕರಾರು ತೆಗೆದಿದ್ದರು. ‘ಮಠಗಳ ಸ್ವಾಮಿಗಳಿಗೆ ಬ್ರಹ್ಮಚರ್ಯ ಕಡ್ಡಾಯ ಬೇಡ ಎಂಬ ನಿಮ್ಮ ವಾದ ಸರಿಯಲ್ಲ’ ಎಂಬ ಅಭಿಪ್ರಾಯ ಬಂದಿತ್ತು.

ಕಳೆದ ವಾರ ದೊಡ್ಡ ಮಠದ ಹಗರಣ ಬಯಲಿಗೆ ಬಂತು, ಮಹಿಳೆಯರ ವಿಡಿಯೋ ವೈರಲ್ ಆಗಿ ಪಾಪ! ಅಮಾಯಕ ಸ್ವಾಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಉಳಿದವರು ಒಳಗೆ ಹೋದವರಿಗೆ ನೈತಿಕ ಬೆಂಬಲ ಎಂದು ಬೀದಿಗಿಳಿದರು. ಇದೆಲ್ಲಾ ನಮಗೆ ಬೇಕಾ?

ತುಂಬಾ ಹಿಂದೆ ಈ ವಿಷಯವನ್ನು ನಾನು ಅಪಾರ ಗೌರವ ಇಟ್ಟುಕೊಂಡ ಪೂಜ್ಯರೊಂದಿಗೆ ಮಾತನಾಡಿ, ‘ಮಠದ ಸ್ವಾಮಿಗಳಿಗೆ ಬ್ರಹ್ಮಚರ್ಯದ ಹಿಂಸೆ ಬೇಡ’ ಎಂದು ನಿವೇದಿಸಿಕೊಂಡಾಗ ಅವರು ನನ್ನ ವಾದವನ್ನು ಒಪ್ಪಲಿಲ್ಲ. ‘ಅಪರೂಪಕ್ಕಾದರೂ ಒಳ್ಳೆಯ ಸ್ವಾಮಿಗಳು ಬಂದಾಗ ಸಮಾಜ ಉದ್ಧಾರವಾಗುತ್ತದೆ’ ಎಂದರು. ‘ಆದರೆ ಸಾವಿರಕ್ಕೆ ಒಬ್ಬರು, ಅಪರೂಪಕ್ಕೆ ಒಳ್ಳೆಯವರು ಬರುತ್ತಾರೆ ಎಂಬ ನಂಬಿಕೆಯಿಂದ ಒಂಬೈನೂರಾ ತೊಂಬತ್ತೊಂಬತ್ತು ಕೆಟ್ಟವರನ್ನು ಸಹಿಸಿಕೊಳ್ಳುವುದು ಸಾಧುವಲ್ಲ’ ಎಂದು ಗೋಗರೆದೆ.

ಈಗಲೂ ಕಾಲ ಮಿಂಚಿಲ್ಲ, ಬಸವಾದಿ ಶರಣರ ತತ್ವಗಳಲ್ಲಿ ನಂಬಿಕೆ ಹೊಂದಿರುವ ಹಿರಿಯ ಮಠಾಧೀಶರು ಈ ಒತ್ತಾಯದ ಸನ್ಯಾಸಕ್ಕೆ ತೆರೆ ಎಳೆಯಲಿ. ‘ಈಗ ಒಳ್ಳೆಯ ಮರಿಗಳು ಸಿಗುತ್ತಿಲ್ಲ’ ಎಂದು ಆರೋಪಿಸುತ್ತಲೇ, ಸಿಕ್ಕ ಸಿಕ್ಕವರನ್ನು ಒತ್ತಾಯದಿಂದ ಉತ್ತರಾಧಿಗಳನ್ನಾಗಿ ಮಾಡುವುದು ಬೇಡ. ಕಾಮ ನಿಯಂತ್ರಣ ಅಸಾಧ್ಯ ಎಂದು ವಾದಿಸಿದ ಓಶೋನನ್ನು ‘ಸೆಕ್ಸ್ ಗುರು’ ಎಂದು ಇದೇ ಧರ್ಮ ಗುರುಗಳು ಟೀಕೆ ಮಾಡಿದ್ದರು. ಧ್ಯಾನ ಕೇಂದ್ರಿತ ಆಚಾರ, ವಿಚಾರಗಳಿಗಿಂತ, ಕೇವಲ ಆಚಾರ ಕೇಂದ್ರಿತ ‘ಗೌಪ್ಯ ಸನ್ಯಾಸ’ ಈಗ ಬೆತ್ತಲಾಗಿದೆ.

ಕರ್ನಾಟಕದ ಸಾವಿರಾರು ಮಠಾಧೀಶರು ಒಳಗೊಳಗೆ ಹಿಂಸೆ ಅನುಭವಿಸುತ್ತಿದ್ದಾರೆ. ಕದ್ದು ಮುಚ್ಚಿ ಅನುಭವಿಸುವ ಸಹಜ ಕ್ರಿಯೆ ಸಾರ್ವಜನಿಕವಾದಾಗ ವಿಕಾರವಾಗಿ ಬಿಡುತ್ತದೆ ಎಂಬ ಆತಂಕ ಕಾಡಲಾರಂಭಿಸಿ ತೊಳಲಾಡುವಂತಾಗಿದೆ.‘ತೋಳ ತಗ್ಗಿಗೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬ ಮಾತಿನಂತೆ ಗೌಪ್ಯ ಸಂಗತಿಗಳು ಬಯಲಾದಾಗ ಪಾಪಿಗಳನ್ನಾಗಿ ಬಿಂಬಿಸಲಾಗುವುದು.

ಈಗ ವಿವಾದಕ್ಕೆ ಒಬ್ಬರು ಮಾತ್ರ ಸಿಕ್ಕಿ ಬಿದ್ದಿದ್ದಾರೆ ಆದರೆ ಉಳಿದವರು? ಈಗ ಸ್ವಾಮಿತ್ವ ಎಂಬುದು ನಿಜಾರ್ಥದ ವಿರಕ್ತಿಯಾಗಿ ಉಳಿದಿಲ್ಲ. ಕಾವಿ ಕಂಡರೆ ಸಾಕು ಕಾಲು ಬೀಳುವುದನ್ನು ಕಂಡು ಮನಸು ಪುಳಕವಾಯಿತು. ಮಠ ಎಂದರೆ ಅಧಿಕಾರ ಎಂಬ ಭಾವನೆ ಮೂಡಿ ಜೋಳಿಗೆ ಮಾಯವಾಯಿತು. ಇಷ್ಟಲಿಂಗ ಹಿಡಿಯುವ ಅಂಗೈಯಲ್ಲಿ ಮೊಬೈಲ್ ಬಂತು. ಹಾಗಂತ ತಂತ್ರಜ್ಞಾನ ಬಳಕೆ ತಪ್ಪಲ್ಲ… ಆದರೆ ದುರ್ಬಳಕೆ ಆರಂಭವಾಯಿತು. ಅವರದೇ ಆದ ಅನುಯಾಯಿಗಳು ಹುಟ್ಟಿಕೊಂಡು ಜೈಕಾರ ಹಾಕಿದಾಗ ಮನಸು ಹಕ್ಕಿಯಂತೆ ಹಾರಲಾರಂಭಿಸಿ, ಅರಿಷಡ್ ವರ್ಗಗಳು ಜಾಗ್ರತವಾದವು. ಹಸಿವಾದಾಗ ಪ್ರಸಾದದ ಬದಲು ಮೃಷ್ಟಾನ್ನ, ಐಷಾರಾಮಿ ಏಕಾಂತ ಮಲಗಿದ ಕಾಮವನ್ನು ಎಚ್ಚರಿಸಿದ್ದು ಸಹಜ. ಅದನ್ನು ಪೋಷಣೆ ಮಾಡಿ ಮುಚ್ಚಿ ಹಾಕಲು ಖಾಸಗಿ ಆಡಳಿತ ವ್ಯೂಹ. ಅವರದೇ ಆದ ಕ್ಯಾಬಿನೆಟ್ ಮೂಲಕ ಅಸಹಾಯಕರ, ಅಬಲೆಯರ ಬೇಟೆಯಾಡುವ ವಾತಾವರಣ.

ನಡೆ ನುಡಿಯಲ್ಲಿ ವಿನಯ, ವಿವೇಕ ಮಾಯವಾಗಿ ಅಹಂಕಾರದ ಮಾತುಗಳ ಮೆರವಣಿಗೆ. ಬಸವಾದಿ ಶರಣರ ವಾಸ್ತವ ಮಾಯವಾದ ಹೊತ್ತಿನಲ್ಲಿ ಈಗ ಸಂಸಾರಿಗಳಿಂದ ಸ್ಥಾಪಿತವಾದ ಲಿಂಗಾಯತ ಮೌಲ್ಯಗಳನ್ನು ಸಂಸಾರಿಗಳೇ ಕಾಪಾಡುವ ಅನಿವಾರ್ಯತೆ ಇದೆ. ಈಗ ಇದನ್ನು ವಿನಾಕಾರಣ ಟೀಕೆ ಮಾಡದೇ, ಇಡೀ ಮಠೀಯ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಹೊಣೆಗಾರಿಕೆ ಹಿರಿಯ ಮಠಾಧೀಶರ ಮೇಲಿದೆ. ನಾಡಿನ ಪೂಜ್ಯರು, ಚಿಂತಕರು, ಸಮಾಜಮುಖಿ ಸಮಾನ ಮನಸ್ಕರು ಸುದೀರ್ಘ ಚರ್ಚೆ ಮಾಡಲು ತಮ್ಮ ಮೌನ ಮುರಿಯಬೇಕು.

 

 

ಲೇಖಕರು:-ಪ್ರೊ. ಸಿದ್ದು ಯಾಪಲಪರವಿ
ಕಾರಟಗಿ. (M)-9448358040

 

ಜಿಲ್ಲೆ

ರಾಜ್ಯ

error: Content is protected !!