Saturday, June 15, 2024

ಮೇರು ವ್ಯಕ್ತಿತ್ವದ ಅಪರೂಪದ ಜನನಾಯಕ ಡಾ. ಬಸಪ್ಪ ದಾನಪ್ಪ ಜತ್ತಿ.

ಬಸವಾದಿ ಶರಣರ ಬದುಕು ಮೌಲ್ಯಗಳು ಆಗರವಾಗಿತ್ತು. 12 ನೆಯ ಶತಮಾನವನ್ನು ಶರಣ ಸಂಸ್ಕೃತಿಯ ಪರ್ವಕಾಲ ಎಂದೇ ಕರೆಯಬಹುದು. ಸರಳತೆ ಹಾಗೂ ಸಾತ್ವಿಕತೆ ಜೀವನಕ್ಕೆ ಅಡಿಪಾಯಗಳಾಗಿದ್ದವು. ದುಡಿಮೆಯೇ ದೇವರು ಎಂದು ನಂಬಿ ಅದರ ಜೊತೆಗೆ ಮನುಷ್ಯ ಪ್ರೀತಿಯ ಹೂರಣವನ್ನು ವಚನಗಳ ಮೂಲಕ ಜನಸಾಮಾನ್ಯರ ಹೃದಯಕ್ಕೆ ಉಣಬಡಿಸುವ ಶರಣರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಅಂತಹ ವಚನ ಸಾಹಿತ್ಯ ಹಾಗೂ ಶರಣರ ತತ್ವಾದರ್ಶಗಳ ನೆರಳಿನಲ್ಲಿ ಬದುಕು ಕಟ್ಟಿಕೊಂಡ ಅಪರೂಪದ ವ್ಯಕ್ತಿ ಡಾ. ಬಸಪ್ಪ ದಾನಪ್ಪ ಜತ್ತಿಯವರು. ಬಸಪ್ಪ ಎಂದು ಬಸವಣ್ಣನ ಹೆಸರನ್ನು ಹೊಂದಿ ವಿಶ್ವಗುರು ಬಸವಣ್ಣನವರ ತತ್ವ, ಆದರ್ಶಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಸಿಕೊಂಡು ಬಂದ ಜತ್ತಿಯವರ ಜನ್ಮದಿನ ಇಂದು.

ಶರಣರೊಸಗೆಗೆ ಜೇನು ಹುಟ್ಟು ಹಾಕಿದ ಧೀರ
ನೂರು ನಂದಾದೀಪ: ಬೆಳಕಿಗೆ ನಮಸ್ಕಾರ”

ಕವಿ ಚೆನ್ನವೀರ ಕಣವಿಯವರ ಈ ಎರಡು ಸಾಲುಗಳು ಡಾ. ಬಿ.ಡಿ. ಜತ್ತಿಯವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತಿವೆ. ಸತತ ಪ್ರಯತ್ನ ಹಾಗೂ ನಿರಂತರ ಪರಿಶ್ರಮ ಸಾಮಾನ್ಯ ವ್ಯಕ್ತಿಯನ್ನೂ ಸಾಧನೆಯ ಶಿಖರಕ್ಕೆ ಕರೆದೊಯ್ಯಬಲ್ಲದು ಎಂಬುದಕ್ಕೆ ಡಾ. ಬಸಪ್ಪ ದಾನಪ್ಪ ಜತ್ತಿ ಜೀವಂತ ನಿದರ್ಶನ. ಪ್ರಾಮಾಣಿಕತೆ, ಛಲ, ಉತ್ಸಾಹ, ಕಾಯಕನಿಷ್ಠೆ, ಶಿಸ್ತು, ಬದ್ಧತೆ ಅವರನ್ನು ಪುಟ್ಟ ಹಳ್ಳಿಯಿಂದ ದೇಶದ ರಾಜಧಾನಿಯ ಗದ್ದುಗೆಯ ಮೇಲೆ ಕುಳ್ಳಿರಿಸಿದ್ದು ರೋಚಕ ಇತಿಹಾಸ. ಗ್ರಾಮ ಪಂಚಾಯತಿಯಿಂದ ದೇಶದ ರಾಷ್ಟ್ರಪತಿ ಹುದ್ದೆಗೆ ಏರಿದ ವಿಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಜತ್ತಿಯವರು ವಿವಿಧ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡ ಅಪರೂಪದ ಜನನಾಯಕರು. ಅವರ ಮುಂದಾಲೋಚನೆ, ದೃಢ ನಿರ್ಧಾರ, ಅಪಾರ ಆಡಳಿತಾತ್ಮಕ ಜ್ಞಾನ, ಚಾಣಕ್ಷತೆ, ಪರಿಸ್ಥಿತಿ ನಿರ್ವಹಿಸುವ ಕೌಶಲ್ಯ ಮೆಚ್ಚುವಂತದ್ದು. ಶರಣ ಜೀವನ ನಡೆಸಿದ ಸರಳ ಸಜ್ಜನ ಜೀವಿ. ಮಹಾತ್ಮ ಗಾಂಧೀಜಿಯರು ಹಾಕಿಕೊಟ್ಟ ಮಾರ್ಗದಲ್ಲಿ ಹೆಜ್ಜೆ ಹಾಕಿದ ವ್ಯಕ್ತಿ.

ಶುಭ್ರವಾದ ಬಿಳಿ ಧೋತ್ರ, ತಲೆಯ ಮೇಲೆ ಕಿರೀಟದಂತಿರುವ ಗಾಂಧಿ ಟೋಪಿ, ಹಣೆಯ ಮೇಲೆ ಹೊಳೆಯುವ ವಿಭೂತಿ ಇದು ಡಾ. ಬಿ.ಡಿ.ಜತ್ತಿಯವರ ಬಹಿರಂಗದ ಶಿಸ್ತು. ಮೊಗದಲ್ಲಿ ಆತ್ಮವಿಶ್ವಾಸದ ಮುಗುಳುನಗೆ, ಎದೆಯಲ್ಲಿ ಮುನ್ನಡೆಯುವ ಹಂಬಲ, ದಣಿಯದ ಹುಮ್ಮಸ್ಸು, ನರನಾಡಿಯಲ್ಲಿ ಹರಿದಾಡುವ ಕ್ರಿಯಾಶೀಲತೆ, ರಕ್ತಗತವಾದ ವಿನಯತೆ ಇವು ಅವರ ಅಂತರಂಗದ ಆಭರಣಗಳು. ನುಡಿದಂತೆ ನಡೆಯಬೇಕೆನ್ನುವ ತವಕ, ಸದಾ ಚಟುವಟಿಕೆಯಿಂದಿರುವ ಮನಸ್ಸು, ಸೇವೆ ಮಾಡಬೇಕೆನ್ನುವ ಮಹದಾಸೆ ಜತ್ತಿಯವರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಮೂರ್ತಿ ಚಿಕ್ಕದಾದರೂ ದಕ್ಷತೆ, ಶಕ್ತಿ, ಸಾಮರ್ಥ್ಯ ಬೆರಗುಗೊಳಿಸುವಂತದ್ದು. ಬಡತನದ ಬೇಗೆಯಲ್ಲಿ ಬೆಂದು, ಕಷ್ಟಗಳ ಮೂಸೆಯಲ್ಲಿ ನೊಂದು ಎದುರಾದ ಎಲ್ಲ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಸಾಧಿಸಿ ತೋರಿಸಿದ ಜತ್ತಿಯವರದ್ದು ಹೋರಾಟದ ಬದುಕು.

ಬಸವ ಸಮಿತಿಯ ಕಾರ್ಯಕ್ರಮವೊಂದರಲ್ಲಿ
ಡಾ.ಬಿ.ಡಿ ಜತ್ತಿ, ರಾಷ್ಟ್ರಕವಿ ಕುವೆಂಪು, ಡಾ. ಸಿದ್ದಯ್ಯ ಪುರಾಣಿಕ( ಕಾವ್ಯಾನಂದ), ಡಾ. ದೇ.ಜವರೇಗೌಡ, ಕೆ.ಎಂ.ನಂಜಪ್ಪ, ಡಾ.ಎಂ.ಎಚ್.ಮರಿಗೌಡ ಅವರ ಅಪರೂಪದ ಚಿತ್ರ

ಡಾ.ಬಿ.ಡಿ.ಜತ್ತಿ ಅವರು ಜಮಖಂಡಿ ತಾಲೂಕಿನ ಸಾವಳಗಿ ಎಂಬ ಪುಟ್ಟ ಗ್ರಾಮದಲ್ಲಿ 10 ಸೆಪ್ಟೆಂಬರ 1912 ರಲ್ಲಿ ಜನಿಸಿದರು. ತಂದೆ ದಾನಪ್ಪ. ತಾಯಿ ಬಾಗವ್ವ. ಸಾಮಾನ್ಯ ಕುಟುಂಬವಾದರೂ ಸಂಸ್ಕಾರದ ಶ್ರೀಮಂತಿಕೆಗೆ ಯಾವುದೇ ಕೊರತೆ ಇರಲಿಲ್ಲ. ಪ್ರಾಥಮಿಕ ಸ್ವಗ್ರಾಮದಲ್ಲಿಯೇ ಪೂರೈಸಿ ಬಿಜಾಪುರದ (ಈಗಿನ ವಿಜಯಪುರ) ಶ್ರೀ ಸಿದ್ಧೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾದರು. 1922 ರಲ್ಲಿ ಸಂಗವ್ವನೊಂದಿಗೆ ವಿವಾಹವಾಯಿತು. 1934 ರಲ್ಲಿ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ಆಗಲೇ ಬಸವ ಬಳಗವನ್ನು ಸ್ಥಾಪಿಸಿದ್ದು ಅವರ ನಾಯಕತ್ವ ಗುಣವನ್ನು ಎತ್ತಿ ತೋರಿಸುತ್ತದೆ. ತಂದೆಯ ಮರಣದಿಂದ ಹೊಲ-ಮನೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಾಯಿತು. ಮುಂದೆ ಕಾನೂನು ಪದವಿ ಪಡೆದು ಜಮಖಂಡಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಜತ್ತಿಯವರ ಉತ್ತಮ ಜನಸೇವೆ ಬಹಳ ಬೇಗ ಅವರಿಗೆ ಹೆಸರು ತಂದುಕೊಟ್ಟಿತು.

1936 ರಲ್ಲಿ ಸಾವಳಗಿ ಗ್ರಾಮಪಂಚಾಯತಿ ಪ್ರವೇಶ. 1939 ರಲ್ಲಿ ಗಾಂಧೀತತ್ವದೆಡೆ ಒಲವು ಹೆಚ್ಚಿತು. ಅಪ್ಪಟ ದೇಶಪ್ರೇಮಿಯಾದ ಜತ್ತಿಯವರು 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದರು. 1943 ರಿಂದ 1945 ರವರೆಗೆ ಜಮಖಂಡಿ ಪುರಸಭೆಗೆ ಅಧ್ಯಕ್ಷರಾಗಿ ಸೇವೆ. 1945 ರಿಂದ 1947 ರವರೆಗೆ ಅದೇ ಸಂಸ್ಥಾನದ ಮಂತ್ರಿಯಾದರು. 1947ರಲ್ಲಿ ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಗಳಾಗಿ ಉತ್ತಮ ಜನಸೇವೆ ಮಾಡಿದರು. 1949 ರಲ್ಲಿ ಮುಂಬೈ ವಿಧಾನಸಭೆಗೆ ನಾಮಕರಣಗೊಂಡರು. 1952 ರಲ್ಲಿ ಮುಂಬೈ ರಾಜ್ಯದಲ್ಲಿ ಉಪಮಂತ್ರಿಗಳಾಗಿ, 1957 ರಲ್ಲಿ ರಾಜ್ಯ ಭೂ ಸುಧಾರಣಾ ಮಂಡಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1958 ರಿಂದ 1962 ರವರೆಗೆ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ ಜನಸೇವೆ ಮಾಡಿ ಉತ್ತಮ ಆಡಳಿತ ನೀಡಿದರು. 1962 ರಿಂದ 1965 ರವರೆಗೆ ರಾಜ್ಯದ ಹಣಕಾಸು ಮಂತ್ರಿಗಳಾಗಿ, 1965 ರಿಂದ 1967 ರವರೆಗೆ ರಾಜ್ಯದ ಆಹಾರ ಮಂತ್ರಿಗಳಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. 1968 ರಿಂದ 1972 ರವರೆಗೆ ಪಾಂಡಿಚೇರಿಯ ಲೆಪ್ಟಿನೆಂಟ್ ಗವರ್ನರ ಆಗಿ, 1972 ರಿಂದ 1974 ರವರೆಗೆ ಓಡಿಸ್ಸಾದ ರಾಜ್ಯಪಾಲರಾಗಿ ನಾಡಿನ ಕೀರ್ತಿಯನ್ನು ಹೊರರಾಜ್ಯಗಳಿಗೂ ಹರಡಿಸಿದರು. 1974 ರಲ್ಲಿ ಭಾರತದ ಘನತೆವೆತ್ತ ಉಪರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಆಗಿನ ರಾಷ್ಟ್ರಪತಿ ಫಕ್ರುದ್ದೀನ ಅಲಿ ಅಹಮ್ಮದ ನಿಧನರಾದಾಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದು ಅವರ ಬದುಕಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ದಿನ. ಹೀಗೆ ಡಾ. ಬಿ.ಡಿ ಜತ್ತಿಯವರು ತಮ್ಮ ಬದುಕಿನ ಸುಮಾರು 50 ವರ್ಷಗಳನ್ನು ರಾಜಕೀಯದ ವಿವಿಧ ಹುದ್ದೆಗಳಿಗೆ, ಜನಸೇವೆಗೆ ವಿನಿಯೋಗಿಸಿ ಉತ್ತಮ ಆಡಳಿತ ನೀಡಿ ಅನುಪಮ ಸೇವೆ ಸಲ್ಲಿಸಿರುವ ಅಪರೂಪದ ವ್ಯಕ್ತಿ.

ಡಾ.ಬಿ.ಡಿ ಜತ್ತಿ ಅವರ ಇನ್ನೊಂದು ಸಾಧನೆ ಬಸವ ಸಮಿತಿಯ ಸ್ಥಾಪನೆ. ಬಾಲ್ಯದಿಂದಲೂ ಶರಣ ಸಂಸ್ಕೃತಿಯ ನೆರಳಲ್ಲಿ ಬೆಳೆದ ಜತ್ತಿಯವರಿಗೆ ಪ್ರೇರಕ ಶಕ್ತಿಯಾಗಿದ್ದು ಬಸವಣ್ಣ. ಅಲ್ಲದೇ ಫ.ಗು ಹಳಕಟ್ಟಿ ಅವರ ಪರಿಶ್ರಮದ ಸಾಧನೆಯ ಅರಿವೂ ಅವರಿಗಿತ್ತು. ಮನುಕುಲದ ಒಳಿತಿಗಾಗಿ ವಚನ ಸಾಹಿತ್ಯದ ಸಾರ, ಶರಣ ತತ್ವದ ಪ್ರಸಾರ ಅಗತ್ಯವೆಂದು ಭಾವಿಸಿ ಸಮಾನಮಸ್ಕರೊಂದಿಗೆ ಬಸವ ಸಮಿತಿ ಹುಟ್ಟುಹಾಕಿದ್ದು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ದಿನಾಂಕ 26-09-1964ರಲ್ಲಿ ಬಸವ ಸಮಿತಿಯನ್ನು ನೋಂದಾಯಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾಗಿ 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಬಸವ ಸಮಿತಿಯ ಹಿರಿಮೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದರು. ಸದ್ಯ ಬಸವ ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಡಿ.ಜತ್ತಿಯವರ ಮಗ ಶ್ರೀ ಅರವಿಂದ ಜತ್ತಿ ಅವರು ತಂದೆಯಂತೆಯೇ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಡಾ. ಬಿ.ಡಿ ಜತ್ತಿಯವರ ಆತ್ಮ ಕಥನ ‘ನನಗೆ ನಾನೇ ಮಾದರಿ. ನಿಜಕ್ಕೂ ಅವರಿಗೆ ಅವರೇ ಮಾದರಿಯಾಗಿದ್ದರು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ಸ್ಥಿತಪ್ರಜ್ಞರು. ಬಡತನದಿಂದ ಎದ್ದು ಬಂದವರಾದ್ದರಿಂದ ಸರ್ವಾಂಗೀಣ ವಿಕಾಸ ಅವರ ಮುಖ್ಯ ಧ್ಯೇಯವಾಗಿತ್ತು. 1979 ರಿಂದ ತಮ್ಮ ನಿವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಕಳೆದರು. ಸಾರ್ಥಕ ಬದುಕು ಸಾಗಿಸಿದ ಅದಮ್ಯ ಚೇತನ ದಿನಾಂಕ 07-06-2002 ರಲ್ಲಿ ಪಂಚಭೂತಗಳಲ್ಲಿ ಲೀನವಾಯಿತು. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡ ಡಾ. ಬಿ.ಡಿ.ಜತ್ತಿಯವರ ಆದರ್ಶಮಯ ಮಾದರಿ ಜೀವನ ಎಲ್ಲರಿಗೂ ಪ್ರೇರಕವಾಗಲಿ.

 

ಲೇಖಕರು: ಎನ್.ಆರ್.ಠಕ್ಕಾಯಿ  ಮುಖ್ಯಶಿಕ್ಷಕರು, ಸರಕಾರಿ ಪ್ರೌಢಶಾಲೆ ಬೂದಿಹಾಳ ತಾ: ಬೈಲಹೊಂಗಲ ಜಿ: ಬೆಳಗಾವಿ ಮೊ: 9844491490

 

ಜಿಲ್ಲೆ

ರಾಜ್ಯ

error: Content is protected !!