Tuesday, May 28, 2024

ದುಡ್ಡಿನ ಆಸೆಗೆ ಸ್ವಾಮೀಜಿ ಜೊತೆ ಸಂಬಂಧ ಕಲ್ಪಿಸಿ ಅಪಪ್ರಚಾರ!ಗಂಡನ ಮೇಲೆ ದೂರಿದ ಹೆಂಡತಿ

ದಾವಣಗೆರೆ, ಸೆ.9: ನನ್ನ ಹಾಗೂ ಪತಿ ನಡುವೆ ವೈವಾಹಿಕ ಸಂಬಂಧ ಸರಿ ಇಲ್ಲ. ನಾನು ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದೇನೆ. ಆದ್ರೆ, ಈಗ ಇದನ್ನೇ ಮುಂದಿಟ್ಟುಕೊಂಡು ಆವರಗೊಳ್ಳದ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಹೆಸರು ಬಳಸಿ ಅಪಪ್ರಚಾರ, ಅಪನಿಂದನೆ ಅವಹೇಳನಕಾರಿ ಸಂದೇಶ ಹರಿಬಿಡಲಾಗುತ್ತಿದೆ ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಪ್ರೀತಿಸಿ ಚಂದ್ರಶೇಖರ್ ಎಂಬಾತನನ್ನು ವಿವಾಹವಾಗಿದ್ದೆ. ಮನೆ ಬಿಟ್ಟು ಹೋಗಿ ಅವರ ಜೊತೆ ಆರು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದೆ. ಪ್ರೀತಿ ಮಾಡಿದ ತಪ್ಪಿಗೆ ಆತ ಕೊಟ್ಟ ಎಲ್ಲಾ ರೀತಿಯ ಕಾಟ ಸಹಿಸಿಕೊಂಡಿದ್ದೆ. ಯಾವುದೇ ದುಡಿಮೆ ಮಾಡದೇ ಸಾಲ ಮಾಡಿ ಎಲ್ಲರಿಗೂ ವಂಚಿಸುತ್ತಿದ್ದ. ನನ್ನಗಂಡನ ದುಡ್ಡಿನ ಆಸೆ, ಈ ಕಿರುಕುಳದಿಂದ ಬೇಸತ್ತು ವರ್ಷದ ಹಿಂದೆಯೇ ದಾವಣಗೆರೆ ನ್ಯಾಯಾಲಯದಲ್ಲಿ ಡೈವೋರ್ಸ್‌ಗೆ ಅರ್ಜಿ ಹಾಕಿದ್ದೇನೆ ಎಂದು ತಿಳಿಸಿದರು.

ಡಿವೋರ್ಸ್‌ ಸಂಬಂಧಿಸಿದಂತೆ ನಾಲ್ಕು ಬಾರಿ ಸಮನ್ಸ್ ಕೊಟ್ಟರೂ ಕೋರ್ಟ್‌ಗೆ ಹಾಜರಾಗಿಲ್ಲ. ನನ್ನ ಖಾಸಗಿ ವಿಡಿಯೋ, ಫೋಟೋ ಅವರ ಬಳಿ ಇದ್ದು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. ಇದೀಗ ಬೆಂಗಳೂರಿನ ಖಾಸಗಿ ಯೂಟ್ಯೂಬ್ ಚಾನೆಲ್ ಮೂಲಕ ನನ್ನ ಚಾರಿತ್ರ್ಯಹರಣ ಮಾಡಲಾಗಿದೆ. ಹಾಗಾಗಿ ನನ್ನ ಪತಿ ಹಾಗೂ ಯೂಟ್ಯೂಬ್ ಚಾನೆಲ್ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದೇನೆ ಎಂದು ತಿಳಿಸಿದರು.

ನಾನು ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಭಕ್ತೆ. ಅವರದ್ದು ನನ್ನದು ಗುರು, ಶಿಷ್ಯೆಯ ಸಂಬಂಧ. ಆವರಗೊಳ್ಳದ ಕೆಲವರು ಈ ದುಷ್ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬ ಮಾಹಿತಿ ಇದೆ. ಗುರುಗಳ ಹೆಸರು ಬಳಸಿಕೊಂಡು ಹಣ ಲಪಟಾಯಿಸಲು ನನ್ನ ಪತಿ ಹೂಡಿರುವ ಸಂಚು ರೂಪಿಸಿದ್ದಾನೆ. ಅಲ್ಲದೆ ಅವನ ಜೊತೆಗೆ ಇರುವ ಫೋಟೋ, ವಿಡಿಯೋಗಳನ್ನು ನನಗೆ ಗೊತ್ತಿಲ್ಲದ ಹಾಗೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನ, ಮರ್ಯಾದೆ ತೆಗೆಯುತ್ತೇನೆ ಎಂಬುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದ

ಕೋರ್ಟ್ ನ ಯಾವುದೇ ವಿಚಾರಣೆಗೆ ಹಾಜರಾಗದೇ ನನ್ನ ಪತಿ ಚಂದ್ರಶೇಖರ್ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ನನ್ನ ಬಗ್ಗೆ ಹೇಳಿರುವುದೆಲ್ಲವೂ ಸುಳ್ಳು. ಆತ ಒಬ್ಬ ಸ್ಯಾಡಿಸ್ಟ್. ವಿಪರೀತ ಕುಡಿಯುವುದು, ಜಗಳ ಆಡುವುದು, ಫೈನಾನ್ಸ್ ಅವರಿಂದ ಹಣ ಪಡೆದು ವಂಚಿಸುವ ಜವಾಬ್ದಾರಿ ಇಲ್ಲದ ವ್ಯಕ್ತಿ. ಸಾಲ ಕೊಟ್ಟವರು ನಿತ್ಯವೂ ಮನೆಗೆ ಬರುತ್ತಿದ್ದ ಕಾರಣ ಶಿವಮೊಗ್ಗದಲ್ಲಿ ವಾಸವಿದ್ದ ಮನೆಯಿಂದ ಹೊರಬಂದಿದ್ದೇನೆ. ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಇರಲು ಬಿಡುತ್ತಿಲ್ಲ. ನನ್ನ ತೇಜೋವಧೆ ಮಾಡುವ ಮೂಲಕ ಸಮಾಜದಲ್ಲಿ ಮುಖ ತೋರಿಸಲು ಆಗದಂಥ ರೀತಿಯಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ದೂರಿದರು.

ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಗುರುಗಳಾಗಲೀ, ಕುಟುಂಬದವರಾಗಲೀ ಯಾರ ಮಾತನ್ನು ನಾನು ಕೇಳಿಲ್ಲ. ನನ್ನನ್ನು ಪತಿ ಚೆನ್ನಾಗಿ ನೋಡಿಕೊಂಡಿದ್ದರೆ ನನಗ್ಯಾಕೆ ಇಂಥ ಪರಿಸ್ಥಿತಿ ಬರುತಿತ್ತು. ಪ್ರೀತಿ ಮಾಡಿ ಮದುವೆಯಾದ ತಪ್ಪಿಗೆ ನನಗೆ ಈ ಶಿಕ್ಷೆಯಾ ಎಂದೆನಿಸುತ್ತಿದೆ. ಹೆಣ್ಣು ಮಗಳ ಬದುಕು ಹಾಳು ಮಾಡಿರುವುದಲ್ಲದೇ, ಪತ್ನಿಯ ಬಗ್ಗೆ ಅಪಪ್ರಚಾರ ನಡೆಸುವ ಇಂಥವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ನಾನು ಯಾರ ಜೊತೆ ಮಾತನಾಡಿದರೂ ಚಂದ್ರಶೇಖರ್ ಅವರೊಂದಿಗೆ ಅಫೇರ್ ಇದೆಯಾ ಎಂಬ ಪ್ರಶ್ನೆ ಮಾಡುತ್ತಿದ್ದ. ಅವರ ಜೊತೆಗೆ ಸಂಬಂಧವನ್ನೂ ಕಟ್ಟುತ್ತಿದ್ದ. ಈಗ ಹಣದ ಆಸೆಗೆ ಸ್ವಾಮೀಜಿಯವರ ಹೆಸರು ಬಳಸಿಕೊಂಡು ಚಾರಿತ್ರ್ಯಹರಣ ಮಾಡುತ್ತಿದ್ದಾನೆ. ಹಾವೇರಿ ಜಿಲ್ಲೆಯ ಶಿಗ್ಗಾವ್ ಮೂಲದ ಚಂದ್ರಶೇಖರ್ ತಂದೆ ಕಳೆದ ಹದಿನೈದು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಶಿವಮೊಗ್ಗದಲ್ಲಿ ಎಷ್ಟೋ ಮಾಧ್ಯಮಗಳಿವೆ. ಇಲ್ಲಿ ಯಾಕೆ ಮಾತನಾಡಿಲ್ಲ. ಬೆಂಗಳೂರಿಗೆ ಹೋಗಿ ಯೂಟ್ಯೂಬ್ ಚಾನೆಲ್ ಮೂಲಕ ಸಂಚು ರೂಪಿಸಿ ಕೆಟ್ಟದಾಗಿ ಬಿಂಬಿಸುವ ರೀತಿಯಲ್ಲಿ ಮಾತನಾಡಿರುವುದನ್ನು ನೋಡಿದರೆ ಇದೊಂದು ಷಡ್ಯಂತ್ರ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

 

 

 

 

 

 

 

 

 

 

 

By ದಾವಣಗೆರೆ ಪ್ರತಿನಿಧಿ Oneindia

ಜಿಲ್ಲೆ

ರಾಜ್ಯ

error: Content is protected !!