Friday, April 19, 2024

ಬಸವ ಸಮಿತಿಯ ಬುನಾದಿ ಮಾಜಿ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿಯವರು.

ಮಹಾನ್ ಶರಣ ಶಕ್ತಿ ಡಾ.ಬಿ.ಡಿ.ಜತ್ತಿಯವರು.ಅವರು ಕೇವಲ ಒಂದು ವ್ಯಕ್ತಿ ಮಾತ್ರಅಲ್ಲ ಅದ್ಬುತ ಶಕ್ತಿ. ಅವರ ಆದರ್ಶಮಯ ಬದುಕು ನಮಗೆಲ್ಲ ದಾರಿದೀಪ. ಅಂಥ ಪುಣ್ಯಾತ್ಮನ ನೆನಪು ನಂದಾದೀಪ. ನಾಳೆ ಸೆ.10ರಂದು ಅವರ ಜನ್ಮ ದಿನ. ಅವರನ್ನು ಹೃದಯತುಂಬಿ ಗೌರವಿಸಬೇಕಾದುದ್ದು ಮತ್ತು ಸ್ಮರಿಸಬೇಕಾದುದ್ದು ನಮ್ಮೆಲ್ಲರ ಕರ್ತವ್ಯ.

12 ನೆಯ ಶತಮಾನ ಪ್ರಪಂಚದ ಪ್ರಸಿದ್ಧ ವಚನ ಕ್ರಾಂತಿಯ ಯುಗ. ಬಸವಾದಿ ಪ್ರಮಥರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ಶ್ರಮಿಸಿದವರು. ತಮ್ಮ ಅದಮ್ಯ ಅನುಭವ ಮತ್ತು ವಿಚಾರಧಾರೆಗಳನ್ನು ವಚನಗಳ ಮೂಲಕ ಬೋಧಿಸಿ ನುಡಿದಂತೆ ನಡೆದು ಮಾನವ ಕುಲಕ್ಕ ಮಾದರಿಯಾದವರು. ಅವರ ನೀತಿ ಬೋಧನೆಗಳು ಸರ್ವಕಾಲಕ್ಕೂ ದಾರಿ ದೀಪಗಳಾಗಿವೆ. ಆದರೆ ಅಂತಹ ಮೌಲ್ಯಯುಕ್ತವಾದ ಸಾಹಿತ್ಯ ಹೆಗ್ಗಣ ನುಸಿಗಳ ಪಾಲಾಗಿ ಹೋಗುತ್ತಿರುವ ಸಂದರ್ಭದಲ್ಲಿ ಅವೆಲ್ಲವುಗಳನ್ನು ಸಂರಕ್ಷಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಡಾ:ಫ.ಗು.ಹಳಕಟ್ಟಿಯವರ ನಂತರ ವಚನ ಸಂಪತ್ತನ್ನು ಇಡೀ ದೇಶ ಮತ್ತು ವಿದೇಶಗಳಲ್ಲಿ ಪ್ರಚುರ ಪಡಿಸಿದ ಶ್ರೇಯಸ್ಸು ಡಾ.ಬಿ.ಡಿ.ಜತ್ತಿಯವರಿಗೆ ಸಲ್ಲುತ್ತದೆ.

1964  ರಲ್ಲಿ ಬೆಂಗಳೂರಿನಲ್ಲಿ ಇವರ ನೇತ್ರತ್ವದಲ್ಲಿ ಬಸವ ಸಮಿತಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ಶರಣರ ದಿವ್ಯ ತತ್ವಗಳನ್ನು ಮನೆ ಮನೆಗೆ ಮತ್ತು ಮನ ಮನಗಳಿಗೆ ತಲುಪಿಸುತ್ತಾ,ವಿಶ್ವ ಮಾನವ ಸಂದೇಶವನ್ನು ಸಾರುತ್ತಾ,ಮಾನವ ಜನಾಂಗದ ಕಲ್ಯಾಣ ಬಯಸುವ ಬಸವ ಸಮಿತಿ ಬಾನಂಗಳದೆತ್ತರಕ್ಕೆ ಬೆಳೆದು ನಿಂತಿರುವುದು ವರ್ಣಾತೀತ. ಡಾ. ಬಿ. ಡಿ. ಜತ್ತಿಯವರು ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದರೂ ಶರಣ ತತ್ವವನ್ನು ಮೈಗೂಡಿಸಿಕೊಂಡು “ನುಡಿದಂತೆ ನಡೆ ಅದೇ ಜನ್ಮಕಡೆ” ಎಂಬ ಶರಣರ ಅಮೃತ ವಾಣಿಯಂತೆ ಬದುಕಿ ಅಮರವಾಗಿದ್ದಾರೆ. ಇವರ ಘನ ವ್ಯಕ್ತಿತ್ವ ಕಪ್ಪೆಚಿಪ್ಪಿನೊಳಗಿನ ಮುತ್ತಿದ್ದಂತೆ. ತೆರೆದು ನೋಡಿದಾಗಲೇ ಸಮಗ್ರ ಜೀವನ ಸಾಧನೆ ಅರ್ಥವಾಗುತ್ತದೆ.

 

ಬಾಲ್ಯ ಮತ್ತು ಶಿಕ್ಷಣ
“ಸದುವಿನಯವೇ ಸದಾಶಿವನ ಒಲುಮೆ” ಎಂಬ ಮಾತಿನಂತೆ ಸರಳ ಸಂಪನ್ನರು ಮತ್ತು ಸೌಜನ್ಯ ಶೀಲರಾದ ಡಾ. ಬಿ. ಡಿ. ಜತ್ತಿಯವರು 1912  ಸಪ್ಟಂಬರ್ 10 ರಂದು ಜಮಖಂಡಿ ತಾಲೂಕಿ ಸಾವಳಗಿ ಗ್ರಾಮದಲ್ಲಿ ತಂದೆ ದಾನಪ್ಪ ತಾಯಿ ಭಾಗೀರಥಿ ದಂಪತಿಗಳ ಉದರದಲ್ಲಿ ಜನಿಸಿದ್ಧಾರೆ.ಬಡತನದ ಬೇಗೆಯಲ್ಲಿ ಬೆಳೆದ ಜತ್ತಿಯವರು ಆ ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದು ನಿಂತಿದ್ದು ಅಮೋಘ.ಶ್ರೀಯುತರು ಸ್ವಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿಕೊಂಡು ತಂದೆಯವರ ಆಸೆಯಂತೆ ಎಲ್.ಎಲ್. ಬಿ ಪದವಿಯನ್ನು ಮುಗಿಸಿಕೊಂಡು 1941 ರಲ್ಲಿ ಜಮಖಂಡಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಅವರ ಪ್ರಾಮಾಣಿಕ ಮತ್ತು ನಿಷ್ಠೆಯ ವೃತ್ತಿ ಹಾಗೂ ಕರ್ತವ್ಯ ಪ್ರೇಮ ಶೀಘ್ರದಲ್ಲಿಯೇ ಅವರನ್ನು ಪರಿಚಯಿಸಿಕೊಟ್ಟಿತು. ಕೆಲ ದಿನಗಳಲ್ಲಿಯೇ ಬಿ.ಡಿ. ಜತ್ತಿಯವರು ಪ್ರಜಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ನೇಮಕಗೊಂಡರು.

ರಾಜಕೀಯರಂಗ ಪ್ರವೇಶ: ಡಾ. ಬಿ. ಡಿ. ಜತ್ತಿಯವರು ಜನ ಸೇವೆಯೇ ಜನಾರ್ಧನ ಸೇವೆ ಎಂದು ಬಲವಾಗಿ ನಂಬಿದ ಅವರು ಜಮಖಂಡಿ ಪುರಸಭೆಗೆ ಚುನಾಯಿತರಾಗಿ 1942ರಲ್ಲಿ  ಜನೇವರಿ 05 ರಂದು ಪುರಸಭೆ ಅಧ್ಯಕ್ಷರಾಗುತ್ತಾರೆ. ಮೂರು ವರ್ಷಗಳ ಕಾಲ ಉತ್ತಮ ಕೆಲಸ ಮಾಡಿ ಜನಪ್ರಿಯರಾಗುತ್ತಾರೆ. ನಂತರ 1945  ರಲ್ಲಿ ಇವರು ಸಾವಳಗಿ ಮತಕ್ಷೇತ್ರದಿಂದ ಪ್ರಜಾ ಪರಿಷತ್ತಿಗೆ ಚುನಾಯಿತಗೊಂಡು 1945ರ ಎಪ್ರಿಲ್ 15  ರಂದು ಜಮಖಂಡಿ ಸಂಸ್ಥಾನದಲ್ಲಿ ಮಂತ್ರಿಯಾದರು. ಮುಂದೆ ಮುಂಬೈ ವಿಧಾನ ಸಭೆಗೆ ನಾಮಕರಣಗೊಂಡರು. ಅಂದಿನ ಮುಖ್ಯಮಂತ್ರಿ ಬಿ. ಜಿ. ಖೇರ ಅವರು ಜತ್ತಿಯವರನ್ನು ತಮ್ಮ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಮುರಾರ್ಜಿ ದೇಸಾಯಿಯವರು ಮುಖ್ಯಮಂತ್ರಿಯಾದಾಗ ಜತ್ತಿಯವರನ್ನುಆರೋಗ್ಯ ಮತ್ತು ಕಾರ್ಮಿಕ ಮಂತ್ರಿಯಾಗಿ ನೇಮಿಸಿದರು.1956 ನವಂಬರ್ 01 ರಂದು  ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂತು.  ಜತ್ತಿಯವರು ಭೂಸುಧಾರಣ ಸಮಿತಿಯ ಅದ್ಯಕ್ಷರಾಗಿ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೂಂಡರು.ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರು. ಬಿ.ಡಿ.ಜತ್ತಿಯವರು ಕಾರ್ಯ ಸಾಧನೆಯಿಂದ ಪಾಂಡಿಚೇರಿಯ ಲೆಪ್ಟನೆಂಟ್‌ ಗವರ್ನರಾಗಿ ನೇಮಕಗೊಳ್ಳುತಾರೆ.ಇವರ ದಕ್ಷತೆಯನ್ನು ಮನಗಂಡ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಜತ್ತಿಯವರನ್ನು 1972 ನವಂಬರ್ 14  ರಂದು ಓಡಿಸಾದ ರಾಜ್ಯಪಾಲರಾಗಿ ನೇಮಿಸಿದರು .ಜತ್ತಿಯವರು ತಮ್ಮ ಅನುಪಮ ರಾಜಕೀಯ ಸೇವೆಯಿಂದ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಜಯಶೀಲರಾಗಿ 1973  ಅಗಸ್ಟ 31 ರಂದು ಅಧಿಕಾರ ವಹಿಸಿಕೊಂಡರು.  ಆಗಿನ ರಾಷ್ಟ್ರಪತಿ ಫಕ್ರುದಿನ್‌ ಅಲಿಹಮ್ಮದ ನಿಧನರಾದ ನಂತರ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು.  ಹೀಗೆ ಡಾ. ಬಿ. ಡಿ. ಜತ್ತಿಯವರು ರಾಜಕೀಯ ರಂಗದಲ್ಲಿ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿ ರಾಜಕಾರಣಿಗಳಿಗೆ ಮಾದರಿಯಾದರು.

ರಾಷ್ಟ್ರಪತಿ ಜತ್ತಿಯವರು ಪ್ರಧಾನಮಂತ್ರಿ ಮುರಾರ್ಜಿ ದೇಸಾಯಿ ಅವರಿಗೆ ಪ್ರಮಾಣ ವಚನ ಬೋಧಿಸುತ್ತಿರುವುದು

ಸಮಾಜ ಸೇವೆ

ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ
ಮಾಡಿಯೂ ಮಾಡದಂತಿಪ್ಪೆ ನೋಡಾ
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಡನೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವಾ

ಎಂಬ ಹಿತ ನುಡಿಯಂತೆ ತಮ್ಮ ಎಲ್ಲ ತನು ಮನ ಧನಗಳನ್ನು ಸಮಾಜ ಸೇವೆಗೆ ಒಪ್ಪಿಸಿ ಅಂತರಂಗ ಬಹಿರಂಗಗಳೆರಡನ್ನು ಏಕಮುಖವಾಗಿಸಿಕೊಂಡು ದೇಶದ ಪ್ರಗತಿಗಾಗಿ ಹಗಲಿರಳು ದುಡಿದ ಕ್ರಮ ಅವಿಸ್ಮರಣಿಯ. ರಾಜಕೀಯ ಕಾರ್ಯದ ಜೊತೆಗೆ ಜತ್ತಿಯವರು ಭಾರತ ಬಿಟ್ಟುತೊಲಗಿ ಚಳುವಳಿಯಲ್ಲಿ ಭಾಗವಹಿಸಿ ದೇಶ ಪ್ರೇಮವನ್ನು ಮೆರೆದರು. ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಹೋರಾಡಿದರು.ಅಷ್ಟೇ ಅಲ್ಲದೆ, ಜನತೆಯ ಆರೋಗ್ಯದ ಬಗ್ಗೆ ಅಪಾರ ಕಳಕಳಿಯುಳ್ಳ ಜತ್ತಿಯವರು ಅನೇಕ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಶ್ರಮಿಸಿದರು. ಬಿ.ಎಲ್.ಡಿ ಯಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು.

ಬಸವ ಸಮಿತಿ ಸ್ಥಾಪನೆ

ಡಾ. ಬಿ. ಡಿ. ಜತ್ತಿಯವರಿಗೆ ಶರಣ ಸಂಸ್ಕೃತಿ ಬಗ್ಗೆ ಅಪಾರ ಗೌರವ. ಶರಣ ಸಂದೇಶಗಳಿಂದ ಮಾತ್ರ ಮಾನವ ಕಲ್ಯಾಣ ಮತ್ತು ವಿಶ್ವಾಶಾಂತಿ ಸಾಧ್ಯ ಎಂದು ಬಲವಾಗಿ ನಂಬಿದ ಅವರು ವಚನ ಪರಂಪರೆಗೆ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ಮಹಾನ್ ವೇದಿಕೆಯೊಂದನ್ನು ನಿರ್ಮಿಸಿದರು.ಶ್ರೀಯುತರು 1933-34 ರಲ್ಲಿ ಕೊಲ್ಲಾಪುರದಲ್ಲಿ ಬಿ.ಎ.ವ್ಯಾಸಂಗ ಮಾಡುತ್ತಿರುವಾಗಲೇ ಕೆಲವು ಗೆಳೆಯರೊಂದಿಗೆ “ಬಸವ ಬಳಗ” ಸ್ಥಾಪಿಸಿದರು. ಮುಂಬೈದಲ್ಲಿ ಪಾರ್ಲಿಮೆಂಟರಿ ಕಾರ್ಯದರ್ಶಿಗಳಾಗಿದ್ದಾಗ ಅಲ್ಲಿಯ ಬಸವಾಭಿಮಾನಿಗಳ ಸಹಕಾರದಿಂದ ಮುಂಬೈದಲ್ಲಿ“ಬಸವ ಸದನ” ಕಟ್ಟಿಸಿದರು. 1958ರಲ್ಲಿ ಬಸವಣ್ಣನವರ ಕಾರ್ಯ ಕ್ಷೇತ್ರವಾಗಿದ್ದ ಕಿಲ್ಲಾ ಕಲ್ಯಾಣವನ್ನು ಹೊಸದಾಗಿ“ಬಸವ ಕಲ್ಯಾಣ” ಎಂದು ನಾಮಕರಣಗೊಳಿಸಿ ಅದನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದರು. ಹಾಗೂ ತ್ರಿಪುರಾಂತಕ ಕೆರೆಯ ದಂಡೆಯ ಮೇಲೆ “ಅನುಭವ ಮಂಟಪ” ನಿರ್ಮಿಸಿ ಭಾಲ್ಕಿ ಶ್ರೀ ಚನ್ನಬಸವ ಪಟ್ಟದೇವರ ಸಹಕಾರದಿಂದ ಬಸವಗೋಷ್ಠಿಗಳು ನಿರಂತರವಾಗಿ ನಡೆಯುವಂತೆ ಮಾಡಿದರು.

ಶರಣ ನಿದ್ರೆಗೈದಡೆಜಪಕಾಣಿರೊ
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ
ಶರಣ ನಡೆದುದೆ ಪಾವನ ಕಾಣಿರೊ
ಶರಣ ನುಡಿದುದೆ ಶಿವತತ್ವ ಕಾಣಿರೊ
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ

ಎಂಬ ವಚನಕೋಕ್ತಿಯಂತೆ ಡಾ.ಬಿ.ಡಿ.ಜತ್ತಿಯವರು ತಮ್ಮ ಜೀವನದೂದ್ದಕ್ಕೂ ಶರಣ ಸಂಸ್ಕೃತಿಯ ಪ್ರಸಾರದ ಕನಸು ಕಂಡು ಅದನ್ನು ನನಸಾಗಿಸಲು ನಡೆಸಿದ ನಿರಂತರ ಹೋರಾಟ ಅವರಿಗೆ ಫಲವನ್ನು ನೀಡುತ್ತದೆ.
1964 ರಲ್ಲಿ ಧಾರವಾಡದಲ್ಲಿ ಬಸವಾಭಿಮಾನಿಗಳ ಮತ್ತು ಸಮಾನ ಮನಸ್ಕರ ಸಭೆಯನ್ನು ಮಾಡಿ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಬಸವೇಶ್ವರ ತತ್ವ ಹಾಗೂ ವಚನ ಪ್ರಚಾರಕ್ಕಾಗಿ ಬಸವ ಸಮಿತಿ ಸ್ಥಾಪಿಸಲು ನಿರ್ಧರಿಸಿ ಬಸವ ಸಮಿತಿಯನ್ನು ಹುಟ್ಟು ಹಾಕಿ ಅದರ ಅಧ್ಯಕ್ಷರಾದರು. ಸಮಿತಿಯಲ್ಲಿ 20 ಜನ ಸದಸ್ಯರ ಸಮಿತಿಯನ್ನು ರಚಿಸಿದರು ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಹಾಗೂ ಇತರ ರಾಜ್ಯಗಳಲ್ಲಿಯೂ ಬಸವ ಸಮಿತಿ ರಚಿಸಲು 09 ಜನರ ಕಾರ್ಯಕಾರಿ ಸಮಿತಿಮತ್ತು 30 ಜನ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಬಸವಾದಿ ಪ್ರಮಥರ ತತ್ವ ಪ್ರಸಾರಕ್ಕಾಗಿ ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ 1966 ಎಪ್ರೀಲ್‌ 01 ರಿಂದ ಹಂಪೆಯಿಂದ ಬಸವ ಕಲ್ಯಾಣದವರೆಗೆ ಪಾದಯಾತ್ರೆ ಕೈಗೊಳ್ಳಲಾಯಿತು. ಸರಕಾರದ ಸಹಯೋಗದೊಂದಿಗೆ 1967 ಡಿಸೆಂಬರ 26 ರಿಂದ 1968 ಫೆಬ್ರವರಿ ರವರೆಗೆ ಶ್ರೀ ಬಸವೇಶ್ವರರ 08ನೆಯ ಶತಮಾನೋತ್ಸವವನ್ನು ನಾಡಿನಾದ್ಯಂತ ಆಚರಿಸಲಾಯಿತು. ಈ ಸಮಾರಂಭದಲ್ಲಿ ಪ್ರಧಾನಮಂತ್ರಿಗಳು, ಸಚಿವರು, ಮಠಾಧೀಶರು, ಸಾಹಿತಿಗಳು ಭಾಗವಹಿಸಿದ್ದು ಮರೆಯಲಾರದ ಇತಿಹಾಸ. ಈ ಸಂದರ್ಭದಲ್ಲಿ “ಶ್ರೀ ಬಸವೇಶ್ವರರು” ಎಂಬ ಸ್ಮರಣ ಸಂಚಿಕೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪ್ರಕಟಿಸಲಾಯಿತು.

ಬೆಂಗಳೂರಿನ ಹೈಗ್ರೌಂಡನಲ್ಲಿ ಕರ್ನಾಟಕ ಘನ ಸರಕಾರದ ಸಹಕಾರದಿಂದ“ಬಸವ ಭವನ” ನಿರ್ಮಾಣಗೊಂಡಿತು. 1972 ಎಪ್ರೀಲ್‌ 29 ರಂದು ಬಸವ ಸಮಿತಿ ಟ್ರಸ್ಟ ಅಸ್ತಿತ್ವಕ್ಕೆ ಬಂತು.ಇದರ ಅಡಿಯಲ್ಲಿ ಅನುಭವ ಮಂಟಪ ನಿರ್ಮಾಣ, ಪುಸ್ತಕಗಳ ಪ್ರಕಟಣೆ, ಬಸವಾಶ್ರಮ, ಬಸವಣ್ಣನವರ ಪುತ್ಥಳಿ ಸ್ಫಾಪನೆ, ಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹ, ಸಂಚಾರಿ ಆಸ್ಪತ್ರೆ, ಹೊಲಿಗೆ ತರಬೇತಿ ಕೇಂದ್ರ ಮುಂತಾದ ಅವಿಸ್ಮರಣೀಯ ಕಾರ್ಯಗಳು ನಡೆಯುತ್ತಲೇ ಇವೆ. ಡಾ. ಬಿ. ಡಿ. ಜತ್ತಿಯವರು ತಮ್ಮ ಜೀವಿತದ ಅಂತ್ಯ ಕಾಲದವರೆಗೂ{ 07-06-2002}ಬಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿ ಅನುಪಮವಾದ ಸೇವೆ ಸಲ್ಲಿಸಿ ಸಕಲ ಶರಣ ಬಂಧುಗಳ ಅಂತರಂಗದಲ್ಲಿ ಅಜರಾಮರವಾಗಿದ್ದಾರೆ.

ಒಟ್ಟಾರೆಯಾಗಿ ಡಾ.ಬಸಪ್ಪ ದಾನಪ್ಪ ಜತ್ತಿಯವರು ತಮ್ಮ ಅಸಾಧಾರಣ ವ್ಯಕ್ತತ್ವ ದಿಂದ ಜನ ಸೇವೆಗೈದು ಇತಿಹಾಸದ ಪುಟದಲ್ಲಿ ಮಹಾನ್‌ ದಾಖಲೆಯೊಂದನ್ನು ನಿರ್ಮಿಸಿದ್ಧಾರೆ. ಇಂಥ ಒಬ್ಬಅಪ್ಪಟ ದೇಶಭಕ್ತನ ಆದರ್ಶಮಯ ಜೀವನ ಸಾಧನೆ ಪ್ರತಿ ಮನಸ್ಸಿಗೆ ಸ್ಪೂರ್ತಿ. “ನನಗೆ ನಾನೇ ಮಾದರಿ” ಎಂಬ ಅವರ ಆತ್ಮಕಥೆ ಅವರ ಅನುಪಮ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಸುಂದರ ದರ್ಪಣವಾಗಿದೆ. “ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ” ಎಂಬ ಅಣ್ಣ ಬಸವಣ್ಣನವರ ಮಾತಿನಂತೆ ಏನೆಲ್ಲ ಸಾಧನೆಯನ್ನು ಮಾಡಿದ್ದರೂ ಪ್ರಚಾರ ಬಯಸದ ಮಹಾನ್ ಶರಣ ಶಕ್ತಿ ಡಾ. ಬಿ. ಡಿ. ಜತ್ತಿಯವರು.ಅವರು ಕೇವಲ ಒಂದು ವ್ಯಕ್ತಿ ಮಾತ್ರಅಲ್ಲ ಅದ್ಬುತ ಶಕ್ತಿ. ಅವರ ಆದರ್ಶಮಯ ಬದುಕು ನಮಗೆಲ್ಲ ದಾರಿದೀಪ. ಅಂಥ ಪುಣ್ಯಾತ್ಮನ ನೆನಪು ನಂದಾದೀಪ. ನಾಳೆ ಸೆ.10ರಂದು ಅವರ ಜನ್ಮ ದಿನ. ಅವರನ್ನು ಹೃದಯತುಂಬಿ ಗೌರವಿಸಬೇಕಾದುದ್ದು ಮತ್ತು ಸ್ಮರಿಸಬೇಕಾದುದ್ದು ನಮ್ಮೆಲ್ಲರ ಕರ್ತವ್ಯ.

 

 

ಲೇಖಕರು:ಡಾ.ಫಕೀರನಾಯ್ಕ ದುಂಡಪ್ಪ ಗಡ್ಡಿಗೌಡರ
ಮುಖ್ಯಸ್ಥರು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬೈಲಹೊಂಗಲ 

 

 

ಜಿಲ್ಲೆ

ರಾಜ್ಯ

error: Content is protected !!