Thursday, July 25, 2024

ಮಳೆ ನೀರು ಮನೆ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ನಷ್ಟವಾದರೆ ಅಧಿಕಾರಿಗಳೆ ಹೊಣೆ

ದೆಹಲಿ: ವೈಜ್ಞಾನಿಕ ಚರಂಡಿಗಳನ್ನು ನಿರ್ಮಿಸಿ, ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ನೋಡಿಕೊಳ್ಳುವುದು ಮುನ್ಸಿಪಲ್ ಕಾರ್ಪೊರೇಷನ್‌ನ ಕರ್ತವ್ಯ. ಮಳೆ ನೀರು ಅಂಗಡಿ ಮುಂಗಟ್ಟು ಮನೆಗೆ ನುಗ್ಗಿ ನಷ್ಟ ಸಂಭವಿಸಿದರೆ ಅದಕ್ಕೆ ಕಾರ್ಪೊರೇಷನ್ ಹೊಣೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಸುಮಾರು 12 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಆದೇಶ ನೀಡಿದ ಹೈಕೋರ್ಟ್, ಅಧಿಕಾರಿಗಳ ವಿರುದ್ಧ ಚಾಟಿ ಬೀಸಿ ರೂ 9 ಲಕ್ಷ ಪರಿಹಾರ ನೀಡುವಂತೆ ಮುನ್ಸಿಪಲ್ ಅಧಿಕಾರಿಗಳಿಗೆ ಸೂಚಿಸಿದೆ.

ದೆಹಲಿಯಲ್ಲಿ ಒಬ್ಬರು ತಮ್ಮ ಮನೆ ನಿರ್ಮಿಸಿದಾಗ ಅದು ರಸ್ತೆಯ ಮಟ್ಟದಲ್ಲಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹಲವು ಬಾರಿ ರಸ್ತೆ ಪುನರ್‌ನಿರ್ಮಾಣ ಮಾಡಿದ ಕಾರಣ ರಸ್ತೆಯ ಮಟ್ಟವು ಏರಿ, ಮನೆ ತಗ್ಗು ಪ್ರದೇಶದಲ್ಲಿ ಉಳಿಯುವಂತೆ ಅಧಿಕಾರಿಗಳು ಮಾಡಿದ್ದಾರೆ. ಇದರಿಂದ ಮಾನ್ಸೂನ್ ಮಳೆಯ ವೇಳೆ ಮನೆಗೆ ನೀರು ನುಗ್ಗಿದೆ. ಸಮಸ್ಯೆಯನ್ನು ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸಿದರು ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿವಾದ ಮಂಡಿಸಿದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ ಅಧಿಕಾರಿಗಳು ಅಲ್ಲಲ್ಲಿ ನೀರಿನ ಚರಂಡಿಗಳು ಮುಚ್ಚಿಹೋಗಿರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಿಸುವಲ್ಲಿ ಸಂಸ್ಥೆ ವಿಫಲವಾಗಿದ್ದು ಒಂದರ ಮೇಲೆ ಒಂದು ರಸ್ತೆ ನಿರ್ಮಾಣ ಮಾಡಿದ್ದರಿಂದ ರಸ್ತೆಗಳ ಎತ್ತರ ಹೆಚ್ಚಾಗಿ ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಮಳೆ ನೀರಿನ ಚರಂಡಿಗಳಿದ್ದ ಕುರಿತು ಖಚಿತಪಡಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದೆ.

ಈ ಪ್ರಕರಣ ವಿಚಾರಣೆ ಬಳಿಕ ಆದೇಶ ನೀಡಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನೇತೃತ್ವದ ದ್ವಿ ಸದಸ್ಯ ಪೀಠ, ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಖರ ಉದ್ದೇಶಕ್ಕಾಗಿ ರಚಿತವಾದ ಮುನ್ಸಿಪಲ್ ಕಾರ್ಪೊರೇಷನ್ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಎಂಸಿಡಿ ತನ್ನ ಕಾರ್ಯವೈಖರಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದರಿಂದ, ಮೇಲ್ಮನವಿದಾರರಿಗೆ ಸಂಪೂರ್ಣ ನ್ಯಾಯ ಒದಗಿಸಬೇಕು. ಹೀಗಾಗಿ ಪರಿಹಾರ ಹಣವನ್ನು 3 ಲಕ್ಷದಿಂದ 9 ಲಕ್ಷ ರೂ.ಗೆ ಏರಿಸಬೇಕು ಎಂದು ಕೋರ್ಟ್ ಆದೇಶ ನೀಡಿತು.

ಜಿಲ್ಲೆ

ರಾಜ್ಯ

error: Content is protected !!