Thursday, July 25, 2024

ಪ್ರಯಾಣಿಕನ ಎದೆಗೆ ಒದ್ದು ಕೆಳಗೆ ಇಳಿಸಿದ ಬಸ್ ಕಂಡಕ್ಟರ್

ಸುಳ್ಯ(ದಕ್ಷಿಣ ಕನ್ನಡ): ಕೆಎಸ್​​​​ಆರ್​​ಟಿಸಿ ಬಸ್​​​ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿರುವ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿನ್ನೆ ನಡೆದಿದೆ.

ಈಶ್ವರಮಂಗಲ ಪೇಟೆಯ ಜಂಕ್ಷನ್​​​ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್‌ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ.

ಮೇಲ್ನೋಟಕ್ಕೆ ಈ ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದಾನೆ. ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆಸೆಯುತ್ತಾನೆ. ನಂತರ ಬಸ್ಸಿನಿಂದ ಕೆಳಗಿಳಿಯುವಂತೆ ಸೂಚಿಸಿದ ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಕೊನೆಗೆ, ಥೇಟ್‌ ಸಿನಿಮಾ ಶೇಲಿಯಲ್ಲೇ ಕಾಲಿನಿಂದ ಪ್ರಯಾಣಿಕನ ಎದೆಗೆ ಒದ್ದು, ರಸ್ತೆಗೆ ತಳ್ಳಿದ್ದಾನೆ. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿದೆ.

ನಿರ್ವಾಹಕ ಕೂಡಲೇ ಸೇವೆಯಿಂದ ಅಮಾನತು’: “ಬಸ್ಸಿನಲ್ಲಿರುವ ವ್ಯಕ್ತಿ ಯಾವುದೇ ಸ್ಥಿತಿಯಲ್ಲಿದ್ದರೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾವುದೇ ನಿರ್ವಾಹಕರಿಗಿಲ್ಲ. ಮೇಲ್ನೋಟಕ್ಕೆ ನಿರ್ವಾಹಕ ಮಾಡಿರುವುದು ತಪ್ಪು ಎಂದು ಕಾಣುತ್ತಿದೆ. ಹೀಗಾಗಿ, ಕೂಡಲೇ ಸೇವೆಯಿಂದ ಅಮಾನತು ಮಾಡಲಾಗುವುದು” ಎಂದು ಪುತ್ತೂರು ಕೆಎಸ್​​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾದ್ಯಮಕ್ಕೆ ತಿಳಿಸಿದ್ದಾರೆ.

ಇದು ವೈರಲ್​​ ಆಗುತ್ತಿದ್ದಂತೆ ಅನೇಕರು ಬಸ್ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಜೊತೆಗೆ, ಸೇವೆಯಿಂದ ಅಮಾನತುಗೊಳಿಸುವಂತೆಯೂ ಒತ್ತಾಯಿಸಿದ್ದರು.

ಜಿಲ್ಲೆ

ರಾಜ್ಯ

error: Content is protected !!