Thursday, July 25, 2024

ಕರ್ತವ್ಯ ನಿರತ ಪೇದೆ​ ಮೇಲೆ ಎಸಿಪಿ ಹಲ್ಲೆ:ವಿಡಿಯೋ ವೈರಲ್​

ಕಲಬುರಗಿ: ಗಣೇಶ ವಿಸರ್ಜನೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಪೇದೆ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಕಳೆದ ರಾತ್ರಿ ನಗರದಲ್ಲಿ ಅದ್ದೂರಿಯಾಗಿ ಗಣೇಶ ಮೇರವಣಿಗೆ ಹಾಗೂ ವಿಸರ್ಜನೆ ನಡೆದಿತ್ತು. ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡಲು ನಗರದ ಅಪ್ಪಾ ಕೆರೆ ಬಳಿ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ, ಹುಡುಗರ ಗುಂಪೊಂದು ದಾಂಧಲೆ ಮಾಡುತ್ತಿರವುದನ್ನು ಕಂಡು ಸಂಚಾರಿ ಠಾಣೆ ಪೇದೆ, ಸಿದ್ದಪ್ಪ ಬಿರಾದರ್​ ಹುಡುಗರನ್ನ ಚದರಿಸುಲು ಮುಂದಾಗಿದ್ದಾರೆ. ಸ್ಥಳಕ್ಕೆ ಬಂದ ನಗರ ಪೊಲೀಸ್ ಇಲಾಖೆಯ ಎಸಿಪಿ ಗಿರೀಶ್, ಬಿರಾದರ್​ ಮೇಲೆ ಹಲ್ಲೆ ಮಾಡಿದ್ದಾರೆ.

ಕರ್ತವ್ಯ ನಿರತ ಪೇದೆ​ ಮೇಲೆ ಎಸಿಪಿ ಹಲ್ಲೆ

ಇದರಿಂದ ಪೇದೆ ಸಿದ್ದಪ್ಪ ಕಿವಿಗೆ ಬಲವಾಗಿ ಪೆಟ್ಟಾಗಿದ್ದು, ರಕ್ತಸ್ರಾವವಾಗಿದೆ. ಅಲ್ಲದೇ ಕುತ್ತಿಗೆ ಭಾಗಕ್ಕೂ ಪೆಟ್ಟಾಗಿದ್ದರಿಂದ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಸಿದ್ದಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮಾತನಾಡಿದ ಪೇದೆ ಸಿದ್ದಪ್ಪ, ನನ್ನ ಪಾಡಿಗೆ ನಾನು ಡ್ಯೂಟಿ ಮಾಡ್ತಿರುವಾಗ ಎಸಿಪಿ ಗಿರೀಶ್ ಅವರು ನನ್ನ ಮೇಲೆ ಹಲ್ಲೆ ಮಾಡಿ, ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಸಿಪಿ ದರ್ಪಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಗಲಾಟೆಯಾಗುತ್ತಿತ್ತು. ಈ ವೇಳೆ ಸಂಚಾರಿ ಠಾಣೆ ಪೇದೆ ಸಿದ್ದಪ್ಪ ಬಿರಾದಾರ ಲಘು ಲಾಠಿ ಚಾರ್ಜ್ ಮಾಡುತ್ತಿದ್ದರು.

ಆಗ ಸ್ಥಳಕ್ಕೆ ಎಸಿಪಿ ಗಿರೀಶ್ ಆಗಮಿಸಿ ಪರ್ಮಿಷನ್ ಇಲ್ಲದೆ ಲಾಠಿ ಚಾರ್ಜ್ ಮಾಡಬಾರದು ಅಂತಾ ಪೇದೆಗೆ ತಿಳಿ ಹೇಳುವ ಸಂದರ್ಭದಲ್ಲಿ ಎಸಿಪಿ ಗಿರೀಶ್ ಮೇಲೆ ಹಲ್ಲೆ ಮಾಡಿದಂತಹ ವಿಡಿಯೋ ರೆಕಾರ್ಡ್​ ಆಗಿದೆ. ಈ ಬಗ್ಗೆ ಪೇದೆ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಅಂತಾ ಪೊಲೀಸ್ ಆಯುಕ್ತ ರವಿಕುಮಾರ್ ಹೇಳಿದ್ದಾರೆ. ಈ ಕುರಿತು ಪೊಲೀಸ್ ಕಾನ್ಸ್​ಟೇಬಲ್​ ಸಿದ್ದಪ್ಪ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.

 

 

 

 

ETV.

ಜಿಲ್ಲೆ

ರಾಜ್ಯ

error: Content is protected !!