Friday, July 26, 2024

ಇಂದು ಡಾ. ಎಂ. ಎಂ. ಕಲಬುರ್ಗಿಯವರ ಪುಣ್ಯಸ್ಮರಣೆ. ನಿಮಿತ್ಯ ಅವರ ಕುರಿತ ಹೊಸ ಕೃತಿಯ ಪರಿಚಯ

ಲಬುರ್ಗಿಯವರ ಹತ್ಯೆಯಾಗಿ ಏಳು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಅವರನ್ನು ನೆನಪಿಸುವ ಕೃತಿಯಾಗಿ ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯ 50ನೇ ಕೃತಿಯಾಗಿ ಎಂ. ಎಂ. ಕಲಬುರ್ಗಿ ಕೃತಿ ಪ್ರಕಟಿಸಿದೆ.

ನವಕರ್ನಾಟಕ ಪ್ರಕಾಶನ ಸಂಸ್ಥೆಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಮಾಲಿಕೆಯನ್ನು ಡಾ. ಹಾ. ಮಾ. ನಾಯಕ ಮತ್ತು ಪ್ರಧಾನ ಗುರುದತ್ತ ಅವರ ಸಂಪಾದಕತ್ವದಲ್ಲಿ ಪ್ರಾರಂಭಿಸಿತು. ತಲಾ 12 ಕೃತಿಗಳಂತೆ 24 ಕೃತಿಗಳು ಕೆಲವೆ ದಿನಗಳಲ್ಲಿ ಪ್ರಕಟವಾಗಿ ಜನಪ್ರಿಯವಾದವು. ಈ ವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರ ಜೀವನ-ಕೃತಿಗಳ ಪರಿಚಯದ ಜೊತೆಗೆ ಪ್ರಶಸ್ತಿ ಪಡೆದ ಕೃತಿಯ ತಲಸ್ಪರ್ಶಿ ಚಿಂತನೆಗಳು ಈ ಮಾಲಿಕೆಯ ಕೃತಿಗಳಲ್ಲಿ ಅಡಕವಾಗಿರುತ್ತವೆ. ಈ ಮಾಲಿಕೆಯಲ್ಲಿ ಈಗಾಗಲೇ 46 ಕೃತಿಗಳು ಪ್ರಕಟಗೊಂಡಿದ್ದವು. ಡಾ. ಕಲಬುರ್ಗಿಯವರ ಚರಿತ್ರೆ ಮಾತ್ರ ಬಹಳ ವರ್ಷಗಳ ಕಾಲ ಬರಲೇ ಇಲ್ಲ. ಕಲಬುರ್ಗಿಯವರಿಗಿಂತ ಇತ್ತೀಚೆಗೆ ಪ್ರಶಸ್ತಿ ಪಡೆದವರ ಚರಿತ್ರೆಗಳೆಲ್ಲ ಈ ಮಾಲಿಕೆಯಲ್ಲಿ ಬಂದರೂ ಡಾ. ಕಲಬುರ್ಗಿಯವರ ಚರಿತ್ರೆ ಮಾತ್ರ ಬರಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ತಡವಾದರೂ ಚಿಂತೆಯಿಲ್ಲ, ಕಲಬುರ್ಗಿಯವರ ಹತ್ಯೆಯಾಗಿ ಏಳು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಅವರನ್ನು ನೆನಪಿಸುವ ಕೃತಿಯಾಗಿ ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯ 50ನೇ ಕೃತಿಯಾಗಿ ಎಂ. ಎಂ. ಕಲಬುರ್ಗಿ ಕೃತಿ ಪ್ರಕಟವಾಗಿದೆ.

ಡಾ. ಕಲಬುರ್ಗಿಯವರ ಜೀವನ ಮತ್ತು ಸಂಶೋಧನೆಯ ಸಮಗ್ರ ವಿವರಗಳನ್ನು ಈ ಕೃತಿಯಲ್ಲಿ ತುಂಬಾ ಅರ್ಥಪೂರ್ಣವಾಗಿ ಸಿದ್ದನಗೌಡರು ಕಟ್ಟಿಕೊಟ್ಟಿದ್ದಾರೆ. ಏಳು ಅಧ್ಯಾಯಗಳಲ್ಲಿ ಮೂಡಿಬಂದಿರುವ ಪ್ರಸ್ತುತ ಕೃತಿಯಲ್ಲಿ ಡಾ. ಕಲಬುರ್ಗಿಯವರ ಜೀವನದ ಸಂಕ್ಷಿಪ್ತ ವಿವರಣೆ ಜೊತೆಗೆ ಅವರ ಸಂಶೋಧನೆಯ ಎಲ್ಲಾ ಆಯಾಮಗಳನ್ನು ತುಂಬಾ ವಾಸ್ತವಿಕ ನೆಲೆಯಲ್ಲಿ ವಿಶ್ಲೇಷಿಸುವ ಕಾರ್ಯವನ್ನು ಇಲ್ಲಿ ಮಾಡಲಾಗಿದೆ. ‘ಕಲಬುರ್ಗಿ ಅವರ ಚಿಂತನೆಗಳನ್ನು ಒಪ್ಪದಿರಬಹುದು ಆದರೆ ನಿರಾಕರಿಸಲಾಗುವುದಿಲ್ಲ’ ಎಂಬ ಮಾತುಗಳನ್ನು ಆಡುತ್ತಲೇ ಕಲಬುರ್ಗಿಯವರ ಚಿಂತನೆಯ ಉದಾತ್ತ ಅಂಶಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಾನವ ಸಮಾಜದ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಗತಿಗಾಮಿ ಮತ್ತು ಪ್ರತಿಗಾಮಿ ಚಿಂತನೆಗಳ ಸಂಘರ್ಷ ನಿರಂತರವಾಗಿ ನಡೆದುಕೊಂಡು ಬಂದಿದೆ ಎನ್ನುವ ಸಿದ್ದನಗೌಡರು ಕಲಬುರ್ಗಿಯವರ ಚಿಂತನೆಗಳು ಕೂಡ ಸಂಘರ್ಷಮಯವಾಗುತ್ತಲೇ ಸಾರ್ವಕಾಲಿಕವಾಗಿರುವುದನ್ನು ಗುರುತಿಸಿದ್ದಾರೆ.

ವಿಜಯಪುರ ಜಿಲ್ಲೆಯ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಕಲಬುರ್ಗಿಯವರು ವಿಜಯಪುರದ ವಿಜಯ ಕಾಲೇಜಿನ ವಿದ್ಯಾರ್ಥಿಯಾಗಿ, ಸಾಸನೂರ ಅವರ ಪರಮಾಪ್ತ ಶಿಷ್ಯರಾಗಿ, ಶಬ್ದಮಣಿದರ್ಪಣವನ್ನು ಅಧ್ಯಯನ ಮಾಡುತ್ತಲೇ ಗುರುವನ್ನು ಮೀರಿಸಿದ ಶಿಷ್ಯನಾಗಿ ಬೆಳೆದ ಪರಿಯನ್ನು ಚಿತ್ರಿಸಲಾಗಿದೆ. ಕಲಬುರ್ಗಿಯವರ ಬಹುಮುಖ್ಯ ವ್ಯವಸಾಯ ವಚನಸಾಹಿತ್ಯದ ವ್ಯವಸಾಯ.

ಈಗಾಗಲೇ ಈ ವಿಷಯವನ್ನು ಕುರಿತು ಪಿಎಚ್.ಡಿ ಮಹಾಪ್ರಬಂಧಗಳು ಪ್ರಕಟವಾಗಿರುವುದರಿಂದ ವಚನಸಾಹಿತ್ಯದ ಒಟ್ಟು ಕೊಡುಗೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತ ಈವರೆಗೆ ಪ್ರಕಟವಾಗಿರುವ 8 ಮಾರ್ಗ ಸಂಪುಟಗಳನ್ನು ಸಿದ್ದನಗೌಡರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅಲ್ಲಿಯ ವಿಚಾರಗಳನ್ನು ಸಮತೂಕ ದಿಂದ ತೂಗಿ ನೋಡಿ ವಸ್ತುನಿಷ್ಠವಾಗಿ ವಿಮರ್ಶಿಸಿದ್ದಾರೆ. ಕಲ್ಬುರ್ಗಿಯವರ ಮಾರ್ಗ ಸಂಪುಟ 4 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮಹತ್ವದ ಕೃತಿ.

ಈ ಕೃತಿಯಲ್ಲಿ ಅಡಕವಾಗಿರುವ 100 ಸಂಶೋಧನಾ ಲೇಖನಗಳನ್ನು ವರ್ತಮಾನದ ನೆಲೆಯಲ್ಲಿ ವಿವೇಚಿಸಿದ್ದಾರೆ. ಲಿಂಗಾಯತ ಧರ್ಮವು ಸ್ವತಂತ್ರ ಧರ್ಮ ಎಂಬುದನ್ನು ಕುರಿತು ಡಾ. ಕಲಬುರ್ಗಿಯವರ ಸಂಶೋಧನಾತ್ಮಕ ಬಹುತೇಕ ಬರಹಗಳು ಮಾರ್ಗ ಸಂಪುಟ ನಾಲ್ಕರಲ್ಲಿ ಇರುವುದನ್ನು ಗಮನಿಸಬಹುದು. ನಾಥಪಂಥ ಮತ್ತು ಶರಣ ಪಂಥಗಳ ನಡುವಿನ ಹೋಲಿಕೆಗಳನ್ನು ಕುರಿತು ಮೊಟ್ಟಮೊದಲ ಬಾರಿಗೆ ಕಲಬುರ್ಗಿಯವರು ಸಂಶೋಧನಾತ್ಮಕ ದೃಷ್ಟಿಯಿಂದ ಕನ್ನಡದ ಜನಕ್ಕೆ ತಿಳಿಸುವ ಕೆಲಸವನ್ನು ಮಾಡಿದ್ದಾರೆ ಎಂಬುದನ್ನು ಗೌಡರು ತಿಳಿಸುತ್ತಾರೆ.

ಧಾರ್ಮಿಕ ಸಾಂಸ್ಕೃತಿಕ ಸಂಘರ್ಷಗಳನ್ನು ಕುರಿತು ಕಲಬುರ್ಗಿಯವರ ವಿಚಾರಗಳನ್ನು ಇಲ್ಲಿ ಪುನರ್ಪರಿಶೀಲನೆ ಮಾಡಲಾಗಿದೆ. ಕೃಷ್ಣದೇವರಾಯನ ತೆಲುಗು ಪ್ರೀತಿ ಗಂಗರಾಜನ ತಮಿಳು ಪ್ರೀತಿ ಚಾವುಂಡರಾಯನ ಮರಾಠಿ ಪ್ರೀತಿಗಳನ್ನು ಕುರಿತು ಕಲಬುರ್ಗಿ ಅವರ ವಿಚಾರಗಳು ಮನನೀಯವಾಗಿ ಮೂಡಿಬಂದಿವೆ. ಪಂಚಪೀಠಗಳ ಇತಿಹಾಸ ಸಿದ್ಧಾಂತ ಶಿಖಾಮಣಿಯ ಕೃತ್ರಿಮ ರಚನೆ ಜಾತವೇದಮುನಿ ಸುಳ್ಳಿನ ಕಂತೆಗಳನ್ನು ಕುರಿತು ಮೊದಲಬಾರಿಗೆ ಇಲ್ಲಿ ಕಲಬುರ್ಗಿಯವರು ತಮ್ಮ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ.

ಡಾ. ಸಿದ್ಧನಗೌಡರು ಬಹಳ ವರ್ಷಗಳ ತರುವಾಯ ಈ ಕೃತಿಯನ್ನು ಪೂರ್ಣಗೊಳಿಸಿದ್ದರೂ ಅವರ ಬರವಣಿಗೆ ತುಂಬ ಸರಳ ಸುಂದರವಾಗಿ ಮೂಡಿ ಬಂದಿದೆ. ಕಲಬುರ್ಗಿಯವರ ಒಟ್ಟು ಕೊಡುಗೆಯನ್ನು ಸಿದ್ಧನಗೌಡರು ವಿವರಿಸುವ ಬಗೆಯನ್ನು ಗುರುತಿಸುವುದಾದರೆ- ‘ಒಬ್ಬ ಸಂಶೋಧಕರಾಗಿ ಕಲಬುರ್ಗಿಯವರು ತಾವು ಕಂಡುಕೊಂಡ ಸತ್ಯಗಳನ್ನು ಮುಂದಿಡುತ್ತಾರೆ. ಅವರು ತಮ್ಮ ಅಭಿಪ್ರಾಯ, ವ್ಯಾಖ್ಯಾನಗಳಿಗೆ ಸಾಕಷ್ಟು ಆಕರಗಳನ್ನು ಶೋಧಿಸಿದಾಗಲೂ ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕೆಂದು ಹೇಳುತ್ತಾರೆ. ಅವರು ಮೊದಲೇ ಹೇಳಿದ ಹಾಗೆ ಸಂಶೋಧನೆಯೆನ್ನುವುದು ಅಲ್ಪವಿರಾಮದಿಂದ ಪೂರ್ಣವಿರಾಮದ ಕಡೆಗೆ ನಡೆಯುವ ಪಯಣ. ಇಂಥ ಅಲ್ಪವಿರಾಮಗಳನ್ನು ಹಾಕುವಾಗ ಅವರು ಹಲವಾರು ಪೂರ್ಣವಿರಾಮಗಳನ್ನು ಬದಲಿಸುತ್ತಾರೆ. ಅಂದರೆ ಈಗಾಗಲೇ ಒಪ್ಪಿತವಾಗಿರುವ, ಅಥವಾ ನಂಬಿರುವ ವಿಷಯಗಳನ್ನು ಅವರು ಪುನರ್ ಪರಿಶೀಲನೆ, ಪುನರ್ ಮೌಲೀಕರಣಕ್ಕೊಳಪಡಿಸುತ್ತಾರೆ.

ಶಾಸ್ತ್ರ ಸಾಹಿತ್ಯ, ಶಾಸನ ಇತಿಹಾಸದ ವಿದ್ಯಮಾನಗಳ ಕುರಿತು ಸಂಶೋಧನೆ ಒಂದು ಮಾದರಿಯಾದರೆ ‘ಘಟನಾಶೋಧದಿಂದ-ಕಾರಣಶೋಧ’ಕ್ಕಿಳಿಯುವಾಗ ಅವರು ಬಳಸಿಕೊಳ್ಳುವ ಆಕರಗಳು, ಊಹೆ, ತರ್ಕ ವಿಶಿಷ್ಟವಾಗಿವೆ. ಈ ವಿಶಿಷ್ಟತೆಯ ಹಿಂದೆಯೂ ಒಂದು ತಾತ್ವಿಕ ನೆಲೆ ಮತ್ತು ದೃಷ್ಟಿಕೋನವಿದೆ. ಡಾ. ಕಲಬುರ್ಗಿಯವರ ಒಟ್ಟು ಚಿಂತನೆ ಮತ್ತು ಬರೆಹ ಅವರು ರೂಪಿಸಿಕೊಂಡ, “ನಾನು ಗುರುತಿಸಿರುವ, ‘ಪಂಚಪ್ರಜ್ಞೆ’ಯ ಹಿನ್ನೆಲೆಯಿಂದ ಮೂಡಿ ಬಂದಿದೆ. ಪಂಚ ಪ್ರಜ್ಞೆಯೆಂದರೆ ಈಗಾಗಲೇ ಹೇಳಿದಂತೆ ಶರಣಪ್ರಜ್ಞೆ, ದೇಶೀ ಪ್ರಜ್ಞೆ ಸಮೂಹ (ಅವಿಭಕ್ತ) ಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆ ವೈಚಾರಿಕ ಪ್ರಜ್ಞೆ” ಇವುಗಳ ಹಿನ್ನೆಲೆಯಿಂದಲೇ ಅವರು ಇತಿ ಮತ್ತು ಗತವನ್ನು ಮುಂದಿಟ್ಟುಕೊಂಡು ವರ್ತಮಾನದಲ್ಲಿ ನಿಂತು ತಮ್ಮ ಶೋಧಗಳನ್ನು ನಡೆಸುತ್ತಾರೆ.

ಅಂಥವುಗಳಲ್ಲಿ ಈಗಾಗಲೇ ಅವರೇ ಹೇಳಿದ ಹಾಗೆ ಆಕರಶೋಧ, ಚಾರಿತ್ರಿಕಶೋಧ, ಸಾಮಾಜಿಕ ಪ್ರಕ್ರಿಯಾಶೋಧ ಮತ್ತು ಸಾಮಾಜಿಕ ಕಾರಣಶೋಧ ಹೀಗೆ ನಾಲ್ಕು ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಹುತೇಕ ಅವರ ಸಂಶೋಧನೆಗಳು, ಚಿಂತನೆಗಳು ‘ಮುರಿದುಕಟ್ಟುವ’ ಪ್ರಕ್ರಿಯೆಗೆ ಸಾಮಾಜಿಕ ಪ್ರಕ್ರಿಯಾಶೋಧದ ಹಿನ್ನೆಲೆಯಿಂದ ಒಳಗಾಗುವ ಕಾರಣ, ಅವರು ಸಾಮಾಜಿಕ ಸಾಮಾಜಿಕ ಕಾರಣಶೋಧಗಳನ್ನು ನಡೆಸುತ್ತಾರೆ, ಹಲವಾರು ಸಂದರ್ಭದಲ್ಲಿ ಅವರು ಘಟನಾಶೋಧದಿಂದ ಕಾರಣಶೋಧದತ್ತ ನಡೆಯುತ್ತಾರೆ.

ಈ ‘ಪ್ರಜ್ಞೆ ಮತ್ತು ಶೋಧ’ ಒಬ್ಬ ಸಂಶೋಧಕನ ಉದ್ದೇಶ ಮತ್ತು ಗುರಿಯನ್ನು ತೋರಿಸುತ್ತವೆ. ಡಾ. ಎಂ. ಎಂ. ಕಲಬುರ್ಗಿ ಯವರ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿದ್ದುದರಿಂದ ಅವರ ಉದ್ದೇಶಿತ ಗುರಿಯನ್ನು ಅವರು ನಿರೀಕ್ಷೆಗಿಂತಲೂ ವೇಗವಾಗಿಯೇ ತಲುಪಿದ್ದಾರೆ. ಸೃಜನ, ಸೃಜನೇತರ ಸಾಹಿತ್ಯದಲ್ಲಿ, ಅದಕ್ಕೆ ಸಂಬಂಧಿಸಿದ ಪ್ರಕಟನೆ ಮತ್ತು ಪ್ರಸಾರದಲ್ಲಿ ಅವಿರತವಾಗಿ ದುಡಿದ ಕಲಬುರ್ಗಿಯವರ ‘ಮಾರ್ಗ’ವನ್ನು ಒಪ್ಪಿದರೂ ಒಪ್ಪದಿದ್ದರೂ ಅದು ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಕ್ಷೇತ್ರದಲ್ಲಿ ಗಮನಿಸಲೇಬೇಕಾದ, ಗಮನ ಸೆಳೆಯುವ ಒಂದು ಮಹತ್ವದ ಮಾರ್ಗ.” ಎಂಬ ನಿರ್ಣಯಕ್ಕೆ ಗೌಡರು ಬರುತ್ತಾರೆ.

ಈ ಕೃತಿಯಲ್ಲಿ ನನ್ನ ಮನಸ್ಸಿನಾಳದಲ್ಲಿ ಅತ್ಯಂತ ದುಃಖವನ್ನುಂಟು ಮಾಡಿದ ಸಂಗತಿಯೆಂದರೆ ವೃಷಭೇಂದ್ರ ಸ್ವಾಮಿಗಳ ಪ್ರಕರಣ. ಸಂಪಾದಕರಾದ ಪ್ರಧಾನ ಗುರುದತ್ತ ಅವರು ವೃಷಭೇಂದ್ರಸ್ವಾಮಿಯ ಒಂದು ಕೆಟ್ಟ ನಡತೆಯನ್ನು ಪ್ರಸ್ತಾಪಿಸಿದ್ದರೆ, ಸಿದ್ಧನಗೌಡರು ತಮ್ಮ ಬರಹದಲ್ಲಿ ವೃಷಭೇಂದ್ರ ಸ್ವಾಮಿಯ ಕುತ್ಸಿತ ಬುದ್ಧಿ, ಸಂಕುಚಿತ ಮನಸ್ಸು, ರಾಗದ್ವೇಷಗಳಿಂದ ತುಂಬಿದ ಕೃತ್ರಿಮ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ.
ಈ ಕೃತಿಯಲ್ಲಿ ಗೌಡರು ಡಾ. ಕಲಬುರ್ಗಿಯವರ ಸಂಶೋಧನಾತ್ಮಕ ಕೃತಿಗಳನ್ನು ಒಂದಿಷ್ಟು ವಿಮರ್ಶಿಸಬೇಕಾಗಿತ್ತು. ಅದೊಂದು ಚಿಕ್ಕ ಕೊರತೆ ಈ ಕೃತಿಯಲ್ಲಿದೆ. ಪ್ರಾಯಶಃ ಪುಟಗಳ ಮಿತಿ ಇರುವುದರಿಂದ ಹಾಗೆ ಆಗಿರುವ ಸಾಧ್ಯತೆ ಇದೆ.

ಡಾ. ಕಲಬುರ್ಗಿ ಅವರ ಸಾಹಿತ್ಯ ಕೃಷಿಯನ್ನು ಸಿದ್ಧನಗೌಡರು ‘ಬರಹಾರಾಣ್ಯ’ ಎಂದು ಕರೆಯುತ್ತಾರೆ. ಈ ಬರಹಾರಾಣ್ಯದಲ್ಲಿ ಸುತ್ತಾಡಿ ಜನರಿಗೆ ಬೇಕಾದ ಶ್ರೀಗಂಧದ ಸೌಗಂಧವನ್ನು ಉಣಬಡಿಸುವ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಗೌಡರು ಮಾಡಿದ್ದಾರೆ. ತಮ್ಮಿಂದಲೇ ಬಹಳಷ್ಟು ತಡವಾಯಿತು ಎಂಬ ಬೇಸರವನ್ನು ಅವರು ವ್ಯಕ್ತ ಪಡಿಸಿದ್ದಾರೆ. ತಡವಾದರೂ ಗೌಡರು ತುಂಬ ಮೌಲಿಕವಾದ ಕೃತಿಯನ್ನೇ ನೀಡಿದ್ದಾರೆ. ಸಂಪಾದಕರಾದ ಪ್ರಧಾನ ಗುರುದತ್ತ ಅವರು ಹೇಳುವಂತೆ ‘ಈ ಮಾಲಿಕೆಯಲ್ಲಿ ಬಂದ ಅತ್ಯಂತ ಮೌಲಿಕ ಕೃತಿ’ ಇದಾಗಿರುವುದು ಸಂತೋಷದ ಸಂಗತಿಯಾಗಿದೆ. ಇಂಥ ಮೌಲಿಕ ಕೃತಿಯನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದ ಡಾ. ಸಿದ್ಧನಗೌಡ ಪಾಟೀಲ ಅವರಿಗೆ ವಂದನೆ-ಅಭಿನಂದನೆಗಳು.

 

ಲೇಖಕರು: ಪ್ರಕಾಶ ಗಿರಿಮಲ್ಲನವರ
ಬೆಳಗಾವಿ. ಮೊ: 9902130041

ಜಿಲ್ಲೆ

ರಾಜ್ಯ

error: Content is protected !!