Thursday, July 18, 2024

ಪ್ರೇಯಸಿ ಪಡೆಯಲು ಕೋಮುಗಲಭೆ ಲೆಟರ್‌ ಬರೆದು ಅಂದರ್‌ ಆದ ಭೂಪ

ಶಿವಮೊಗ್ಗ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಮುಂದುವರಿಸುವ ಉದ್ದೇಶದಿಂದ ಆಕೆಯ ಪತಿಯನ್ನೇ ಪ್ರಕರಣವೊಂದರಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲು ಮಾಸ್ಟರ್ ಪ್ಲಾನ್ ಮಾಡಿದ್ದ ಖತರ್ನಾಕ್ ಕಿಲಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಶಿವಮೊಗ್ಗದಲ್ಲಿ  ಬೆಚ್ಚಿಬೀಳಿಸುವ ಪತ್ರ ಪತ್ತೆಯಾಗಿತ್ತು. ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ಗಂಗಾಪರಮೇಶ್ವರಿ ದೇಗುಲ  ಬಳಿ ಈ  ಅನಾಮಧೇಯ ಪತ್ರ ಪತ್ತೆಯಾಗಿದ್ದು, ಗಣಪತಿ ಹಬ್ಬಕ್ಕೆ ಮೂವರು ಕೊಲೆಗೆ ಸಂಚು ಎಂದು ಉಲ್ಲೇಖ ಮಾಡಲಾಗಿತ್ತು. ಪತ್ರ ಸಿಕ್ಕಿದ ವ್ಯಕ್ತಿ ಪ್ರಶಾಂತ್ ಎಂಬವರು ಕೋಟೆ ಪೊಲೀಸರಿಗೆ  ಈ ಸಂಬಂಧ ದೂರು ನೀಡಿದ್ದಾರೆ. ಪತ್ರ ಬರೆದ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಪ್ರಶಾಂತ್ ಮನವಿ ಮಾಡಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ರ ಬರೆದಿದ್ದ ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸಿದ್ದಾರೆ.  ಫೈಜಲ್ ಪತ್ನಿಯೊಂದಿಗೆ ಅಯೂಬ್ ನಂಟು  ಹೊಂದಿದ್ದನು. ಹೀಗಾಗಿ ಫೈಜಲ್​ನ್ನು ಜೈಲಿಗೆ ಕಳುಹಿಸಿ ಪತ್ನಿ ಜೊತೆಗಿರಲು ಅಯೂಬ್ ಪ್ಲ್ಯಾನ್ ಮಾಡಿಕೊಂಡು ಪತ್ರ ಬರೆದಿದ್ದನು ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಶಿವಮೊಗ್ಗದಲ್ಲಿ ಈಗಷ್ಟೇ ಸಾವರ್ಕರ್ ಫೋಟೋ ಅಳವಡಿಕೆ ವಿವಾದ ತಣ್ಣಗಾಗಲಾರಂಭಿಸಿದೆ. ಇದರ ಬೆನ್ನಲ್ಲೇ ಶಿವಮೊಗ್ಗದ ಗಾಂಧಿ ಬಜಾರ್‌ನ ಗಂಗಾಪರಮೇಶ್ವರಿ ದೇವಸ್ಥಾನವೊಂದರ ಬಳಿ ಅನಾಮಧೇಯ ಪತ್ರವೊಂದು ಪತ್ತೆಯಾಗಿತ್ತು. ದೇವಾಲಯ ಪಕ್ಕದ ಅಂಗಡಿ ಮಾಲೀಕರೊಬ್ಬರು ಶಾಪ್ ಕ್ಲೋಸ್ ಮಾಡಿ ಹೋಗುವ ವೇಳೆ ಓಪನ್‌ ಕವರ್‌ನಲ್ಲಿದ್ದ ಲೆಟರ್ ನೋಡಿದ್ದಾರೆ. ಅದರ ಮೇಲೆ ಪೊಲೀಸರಿಗೆ ಈ ಲೆಟರ್‌ ತಲುಪಿಸಿ ಎಂದು ಬರೆಯಲಾಗಿತ್ತು. ಆ ಲೆಟರ್ ನೋಡಿದಾಗ ಅಂಗಡಿ ಮಾಲೀಕ ಒಂದು ಕ್ಷಣ ಯೋಚಿಸಿ ಪತ್ರದಲ್ಲೇನಿದೆ ಎಂದು ನೋಡದೆ ಶಿವಮೊಗ್ಗ ನಗರದ ಕೋಟೆ ಪೊಲೀಸರಿಗೆ ಕರೆ ಮಾಡಿ ಹಸ್ತಾಂತರಿಸಿದ್ದ.

ಪೊಲೀಸರು ಪತ್ರ ಓದಿದಾಗ ಅಚ್ಛರಿ ಕಾದಿತ್ತು. ಕೋಮು ಗಲಭೆ ತಪ್ಪಿಸಿ, ಮೂವರ ಪ್ರಾಣ ಉಳಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಗಲಭೆ ಸೃಷ್ಟಿಸಲು ಪ್ಲಾನ್ ಮಾಡಿದ್ದಾರೆ. ಗಾಂಧಿ ಬಜಾರ್ ಬಳಿ ಮೂವರು ಗಾಂಜಾ ಸೇದುತ್ತಾ ನಿಂತಿದ್ದವರನ್ನ ತಾನು ಕದ್ದಾಲಿಸಿದ್ದೇನೆ. ಅವರು ಗಲಭೆ ಸೃಷ್ಟಿಸುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಈ ಮಾತಿನಿಂದ ನಾನು ಭಯಭೀತನಾಗಿದ್ದೇನೆ. ಮೂವರನ್ನ ಮಂಗಳೂರಿನಿಂದ ಕರೆಯಿಸಬೇಕು. ಅವರು ಮೊಬೈಲ್ ಫೋನ್ ಬಳಸಬಾರದು, ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಯಾರಿಗೂ ಈ ಬಗ್ಗೆ ತಿಳಿಯಬಾರದು. ಗಲಾಟೆ ನಡೆದರೇನೆ ಈ ಹಬ್ಬ ಆಚರಣೆ ತಡೆಯೋಕಾಗೋದು ಎಂದು ಅವರು ಮಾತನಾಡಿಕೊಂಡಿರೋದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಪತ್ರದಲ್ಲಿ ಬಹಳ ಮುಖ್ಯವಾಗಿ ಮೊಹಮ್ಮದ್‌ ಫೈಸಲ್ ಯಾನೆ ಚೆನ್ನು ಎಂಬಾತ ಮಾದಕ ವಸ್ತುಗಳನ್ನ ಮಾರುತ್ತಾನೆ. ಆತ ವ್ಯಸನಿಯೂ ಹೌದು..! ಈತ ಆಜಾದ್ ನಗರದಲ್ಲಿ ರೌಡಿ ತರ ವರ್ತಿಸುತ್ತಾನೆ. ಆತನೇ ಗಲಭೆ ಸೃಷ್ಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಲೆಟರ್‌ನಲ್ಲಿ ವಿವರಿಸಲಾಗಿತ್ತು. ಲೆಟರ್‌ ಪೊಲೀಸರಿಗೆ ತಲೆನೋವು ತಂದಿತ್ತಾದರೂ ಕೆಲವೇ ಕ್ಷಣದಲ್ಲಿ ಲೆಟರ್‌ ಬರೆದಾತನನ್ನ ಅರೆಸ್ಟ್‌ ಮಾಡಿ ವಿಚಾರಣೆಗೆ ಒಳಪಡಿಸಿದ್ದಾಗ ಇಡೀ ವೃತ್ತಾಂತಕ್ಕೆ ಬೇರೆಯದ್ಧೇ ಆಯಾಮ ದೊರೆತಿದೆ.

ಪೊಲೀಸರ ತನಿಖೆ ವೇಳೆ ಅಪರಿಚಿತ ಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್‌ ಹಾಗೂ ಫೈಸಲ್‌‌ ವಿಚಾರಣೆ ಮಾಡಿದಾಗ ಅಯೂಬ್ ಎಂಬಾತನ ಬಗ್ಗೆ ಮಾಹಿತಿ ಸಿಕ್ಕಿದೆ. ಆಯೂಬ್‌ನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಅಲ್ಲೊಂದು ವಿವಾಹಿತೆಯೊಂದಿಗಿನ ಸಂಬಂಧ ತೆರೆದುಕೊಂಡಿದೆ. ಪತ್ರದಲ್ಲಿ ಉಲ್ಲೇಖವಾಗಿದ್ದ ಫೈಸಲ್ ಎಂಬಾತನ ಪತ್ನಿಯೊಂದಿಗೆ ಈ ಅಯೂಬ್ ಅಕ್ರಮ ಸಂಬಂಧ ಹೊಂದಿದ್ದ. ಫೈಸಲ್ ಆ ಯುವತಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಆದರೆ ಆ ಯುವತಿಯ ಜೊತೆಗೆ ಈ ಅಯೂಬ್ ವಿವಾಹಪೂರ್ವದಿಂದಲೂ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಫೈಸಲ್‌ನನ್ನು ಹೇಗಾದರೂ ಮಾಡಿ ಜೈಲಿಗಟ್ಟುವ ಉದ್ದೇಶದಿಂದ ಆಯೂಬ್‌ ಈ ಲೆಟರ್‌ ಬರೆದಿದ್ದಾನೆ. ಈ ಬಗ್ಗೆ ಶಿವಮೊಗ್ಗ ಎಸ್‌ ಪಿ ಬಿಎಂ ಲಕ್ಷ್ಮಿ ಪ್ರಸಾದ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಜಿಲ್ಲೆ

ರಾಜ್ಯ

error: Content is protected !!