Saturday, July 20, 2024

ವಿಶ್ವ ಸಾಹಿತ್ಯದ ಮೌಲ್ಯ ಹೆಚ್ಚಿಸಿದ್ದು ವಚನ ಸಾಹಿತ್ಯ :ಪ್ರೇಮಾ ಅಂಗಡಿ

ಬೆಳಗಾವಿ : ವಿಶ್ವ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ಕನ್ನಡದ ವಚನ ಸಾಹಿತ್ಯ.  ವಚನದ ರಸವನ್ನು ಹೀರಿದಾಗ ಮಾತ್ರ ಪರಿಪೂರ್ಣತೆ ಸಾಧಿಸುತ್ತದೆ. ಎಂದು ಬೆಳಗಾವಿಯ ಜಿ. ಎ ಕಾಲೇಜಿನಲ್ಲಿ ಜಿಲ್ಲಾ ಕ.ಸಾ.ಪ ವತಿಯಿಂದ  ನಡೆದ ದಿ. ಎಸ್. ವಿ. ಬಾಗಿ, ದಿ. ಸ. ಜ.ನಾಗಲೋಟಿಮಠ, ದಿ. ಎನ್. ಕೆ. ಇಂಚಲ ದತ್ತಿನಿಧಿ ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ್ತಿ ಪ್ರೇಮಕ್ಕ ಅಂಗಡಿ ಅಭಿಮತ ವ್ಯಕ್ತಪಡಿಸಿದರು.

“ಶರಣರ ವಚನ ಸಾಹಿತ್ಯ” ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಶರಣರು ಎಂದರೆ ಬದುಕಿನ ಮೌಲ್ಯ ಅರಿತವರು. ಮನುಷ್ಯರಾದವರು ಹೇಗಿರಬೇಕು ಎಂದು ಅರಿತು ಬದುಕಬೇಕು. ವಚನವೆಂದರೆ ಪ್ರಮಾಣ ನಡೆ,ನುಡಿಗಳು ಒಂದಾಗಿ ನೀತಿ ಬಿಡದೆ,ಜಾತಿ,ಸೂಚಕ ನಂಬದೇ ಬದುಕಬೇಕು. ನನಗೆ ತೋರಿದಂತೆ ಬರೆದರೆ ರಚನೆ. ಅಂತರಾತ್ಮದಲ್ಲಿ ತಿಳಿದಂತೆ ಬರೆದರೆ ವಚನ.ತನ್ನನ್ನು ತಾನು ಸಾಧಿಸಿದಾಗ ಮಾತ್ರ ಮುನ್ನಡೆಯ ಬಲ್ಲ ಎಂದು ವಚನಗಳನ್ನು ವಿವರಿಸುತ್ತಾ ತಿಳಿಸಿದರು.

ವಚನಗಳು ವೈಚಾರಿಕತೆ ಬದುಕಿನ ಸೂತ್ರಗಳು ಕುರಿತು ಉಪನ್ಯಾಸ ನೀಡಿದ ಬೈಲಹೊಂಗಲ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಎಫ್. ಡಿ. ಗದ್ದಿಗೌಡರ ಮಾತನಾಡಿ ವಚನ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯ. ಜಗತ್ತಿನ ಸುಮಾರು 34 ಭಾಷೆಗಳಲ್ಲಿ ಅನುವಾದಗೊಂಡಿರುವ ವಚನ ಸಾಹಿತ್ಯವನ್ನು ನಾವು ಓದುತ್ತಿದ್ದರೂ ಸದಾ ವೈಚಾರಿಕವಾಗಿ ಬದುಕುತ್ತಿಲ್ಲ. ವಿಚಾರಶೀಲನಾಗಿ ಮಾನವ ಜನ್ಮದ ಮೌಲ್ಯ ವೃದ್ಧಿಸುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಕೆಲಸ ಮಾಡಬೇಕಿದೆ. ವೈಚಾರಿಕ ಚಿಂತನೆಗಳನ್ನು ನಾವು ವಚನ ಸಾಹಿತ್ಯದಲ್ಲಿ ಕಾಣಬಹುದು ಅವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಲಹೊಂಗಲ ಖ್ಯಾತ ವೈದ್ಯ ಡಾ. ಬಿ. ಎಸ್ ಮಹಾಂತಶೆಟ್ಟಿ ಮಕ್ಕಳಿಗೆ ಚಿಕ್ಕಂದಿನಿಂದಲೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಬೇಕು. ಸಾಹಿತ್ಯ ಆಚಾರ ವಿಚಾರಗಳನ್ನು ಬದಲಿಸುತ್ತದೆ. ಮುಂದಿನ ದಿನಗಳಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿವರ್ಷ 10 ಸಾವಿರ ರೂಪಾಯಿಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಕನ್ನಡ ಎರವಲು ಭಾಷೆಯಲ್ಲ. ಅದೊಂದು ಅಪ್ಪಟ ದಿವ್ಯ ಭಾಷೆ. ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೇಡ. ಹಾಗೆ ದತ್ತಿ ನಿಧಿಗಳು ಹಿರಿಯ ಜೀವಗಳ ಆಸೆ-ಆಕಾಂಕ್ಷೆಗಳನ್ನು ಈಡೇರಿಸುವ ವೇದಿಕೆಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಚಾರ್ಯರಾದ ಎಂ.ಎಚ್ ಮಾರದ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಪುರಸಭೆ ಸದಸ್ಯೆ ವೀಣಾ ಕವಟಗಿಮಠ, ಶಾಂಭವಿ ಅಶ್ವಥಪುರ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ದತ್ತಿ ದಾನಿಗಳನ್ನು ಕ.ಸಾ.ಪ ವತಿಯಿಂದ ಸನ್ಮಾನಿಸಲಾಯಿತು. ಭಾವಗೀತೆ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಭಾರತಿ ಮಠದ, ಸುರೇಶ ಹಂಜಿ,ವೈ. ಬಿ. ಯಾಕೊಳ್ಳಿ, ಮಲ್ಲಿಕಾರ್ಜುನ ಕೋಳಿ, ಅನ್ನಪೂರ್ಣ ಕನೋಜ, ಬಸವರಾಜ ಬಾಗಿ, ಪ್ರತಿಭಾ ಕಳ್ಳಿಮಠ, ಗೌರಿ ಕಟ್ಟಿ, ಮಂಗಲಾ ಅಕ್ಕಿ, ಲಕ್ಷ್ಮಿ ಮೂಡಗ್ಲಿ ಮಠ, ಬಿ. ಆರ್. ಹುಲ್ಲೆಪ್ಪನವರ, ಮಹಾದೇವಿ ಕರ್ಕಿ, ಬಸವಪ್ರಭು ಹಿರೇಮಠ ಸೇರಿದಂತೆ ಕಸಾಪ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರು, ಜಿಎ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಎಂ.ವೈ ಮೆಣಸಿನಕಾಯಿ ಸ್ವಾಗತಿಸಿದರು , ವೀರಭದ್ರ ಅಂಗಡಿ ಅತಿಥಿಗಳನ್ನು ಪರಿಚಯಿಸಿದರು. ಸುನಿಲ ಹಲವಾಯಿ ಕಾರ್ಯಕ್ರಮವನ್ನು ನಿರ್ವಹಿಸಿ ನಿರೂಪಿಸಿದರು, ಶಿವಾನಂದ ತಲ್ಲೂರ ವಂದಿಸಿದರು

ಜಿಲ್ಲೆ

ರಾಜ್ಯ

error: Content is protected !!