Saturday, June 15, 2024

ಜನರ ಸೇವೆ ಮಾಡುವ ಉತ್ತಮ ಅವಕಾಶ ದೊರೆಕಿದೆ:ಸಾಹಿತ್ಯಾ ಆಲದಕಟ್ಟಿ

ಬೈಲಹೊಂಗಲ: ಜನರ ಸೇವೆ ಮಾಡುವ ಉತ್ತಮ ಅವಕಾಶ ದೊರೆಕಿದೆ ಎಂದು ಐ.ಎ.ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 250 ನೆಯ ಹಾಗೂ ರಾಜ್ಯಕ್ಕೆ 10 ನೆಯ ರ‍್ಯಾಂಕ್ ಪಡೆದ ಸಾಹಿತ್ಯಾ ಆಲದಕಟ್ಟಿ ಹೇಳಿದರು. ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕ ಹಾಗೂ ಬೈಲಹೊಂಗಲ ತಾಲೂಕಾ ಘಟಕದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಗಲಾ ಶ್ರೀಶೈಲ ಮೆಟಗುಡ್ಡ ಹೆಮ್ಮೆಯ ಸಾಧಕಿಯನ್ನು ಅಭಿನಂದಿಸಿ ಮಾತನಾಡಿ ಸಾಹಿತ್ಯಾ ಆಲದಕಟ್ಟಿ ಅವರ ಸಾಧನೆ ಎಲ್ಲ ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದರು. ಮಧ್ಯಮ ಕುಟುಂಬದಲ್ಲಿ ಜನಿಸಿ ಅದ್ಭುತ ಸಾದನೆ ಮಾಡಿ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದು ನಮಗೆಲ್ಲ ಸಂತಸ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾ ಘಟಕದ ಮಾರ್ಗದರ್ಶನ ಮಂಡಳಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಆಡಳಿತದಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕಿವಿಮಾತು ಹೇಳಿದರು.

 

ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾ ಅಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಮಾತನಾಡಿ ಸಾಹಿತ್ಯಾ ಅವರ ಸಾಧನೆ ಎಲ್ಲರ ಸಂಭ್ರಮಕ್ಕೆ ಕಾರಣವಾಗಿದ್ದು ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ಆಲದಕಟ್ಟಿ ಅವರೇ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು. ಮಲ್ಲಿಕಾರ್ಜುನ ಆಲದಕಟ್ಟಿ ಮಾತನಾಡಿ ಮಗಳ ಛಲ, ಧೈರ್ಯ, ವಿಧೇಯತೆ, ಸರಳತೆ ಅವಳ ಸಾಧನೆಗೆ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು. ವಿದ್ಯಾವತಿ ಆಲದಕಟ್ಟಿ ಮಾತನಾಡಿ ಮಗಳು ಬಾಲ್ಯದಿಂದಲೂ ಪ್ರತಿಭಾವಂತೆಯಾಗಿದ್ದು ಶಿಸ್ತುಬದ್ಧ ಅಧ್ಯಯನ ಮಾಡುತ್ತಿದ್ದಳು. ಶ್ರದ್ಧೆ ಮತ್ತು ಬದ್ಧತೆ ಅವಳನ್ನು ಗುರಿ ಸೇರಿಸಿದೆ ಎಂದು ಹೆಮ್ಮೆಯಿಂದ ಹೇಳಿದರು. ಜನರ ಪ್ರೀತಿ ಅಭಿಮಾನದಿಂದ ಮನೆಯಲ್ಲಿ ಸಂಭ್ರಮ ಹೆಚ್ಚಾಗಿದೆ ಎಂದು ಅವರು ಭಾವುಕರಾದರು.

ಕಾರ್ಯಕ್ರಮದಲ್ಲಿ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಶಿಕ್ಷಕಿ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಭೀಮಪ್ಪ ಕಸಾಳೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಆಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಸಂಪಗಾವಿಯ ಆರ್.ಇ.ಎಸ್. ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ, ಜನಪದ ಹಾಡುಗಾರ್ತಿ ಲಕ್ಷ್ಮೀ ಮುಗಡ್ಲಿಮಠ, ದೀಪಾ ಮುಗಡ್ಲಿಮಠ, ಅನುಷಾ ಅಲದಕಟ್ಟಿ ಉಪಸ್ಥಿತರಿದ್ದರು. ರಾಜು ಹಕ್ಕಿ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲೆ

ರಾಜ್ಯ

error: Content is protected !!