Saturday, June 15, 2024

ಬಿಜೆಪಿ ಸರ್ಕಾರದಲ್ಲಿ 2ನೇ ತಲೆದಂಡ!ಅಂದು ರೇಪ್ ಕೇಸಲ್ಲಿ ರಮೇಶ ಇಂದು ಭ್ರಷ್ಟಾಚಾರದ ಕೇಸಲ್ಲಿ ಈಶ್ವರಪ್ಪ

ಬೆಳಗಾವಿ(ಏ.15): ಈಶ್ವರಪ್ಪ ಅವರ ರಾಜೀನಾಮೆಯೊಂದಿಗೆ ಬಿಜೆಪಿ ಸರ್ಕಾರ ರಚನೆಯಾದ ನಂತರ ವಿವಾದಗಳಿಗೆ ಸಿಲುಕಿ ಇಬ್ಬರು ಸಚಿವರ ತಲೆದಂಡವಾದಂತಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ಅತ್ಯಾಚಾರ ಆರೋಪ ಪ್ರಕರಣದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ.

ರಮೇಶ್‌ ಜಾರಕಿಹೊಳಿ ವಿರುದ್ಧ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರಿಂದ ರಾಜ್ಯದಲ್ಲಿ ತೀವ್ರ ಸಂಚಲನ ಉಂಟಾಗಿತ್ತು. ಪ್ರಕರಣದಿಂದ ಬಿಜೆಪಿಗೆ ತೀವ್ರ ಮುಜಗರ ಅನುಭವಿಸಿತು. ಹೀಗಾಗಿ ರಮೇಶ್‌ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅಂತೆಯೇ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್‌ ಕೇಳಿದ್ದರು ಎಂಬ ಆರೋಪವನ್ನು ಗುತ್ತಿಗೆದಾರ ಸಂತೋಷ ಪಾಟೀಲ್‌ ಮಾಡಿದ್ದರು. ಇದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಮುಜುಗರವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ರಾಜೀನಾಮೆ ನೀಡಿದರು.

ಕಮಿಷನ್‌ ಆರೋಪ ಕೇಳಿ ಬಂದಾಗ ಪ್ರತಿಪಕ್ಷ ಕಾಂಗ್ರೆಸ್‌ ವಿಧಾನಸಭೆಯಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿತು. ಆದರೂ ಈಶ್ವರಪ್ಪ ರಾಜೀನಾಮೆ ನೀಡಿರಲಿಲ್ಲ. ಆದರೆ, ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಶರಣಾಗುವ ಮುನ್ನ ಈಶ್ವರಪ್ಪ ಹೆಸರನ್ನು ವಾಟ್ಸಪ್‌ನಲ್ಲಿ ಬರೆದಿರುವ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಪಡೆದುಕೊಂಡಿದೆ. ಅಲ್ಲದೇ, ಬಿಜೆಪಿಯು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ಅವರು ರಾಜೀನಾಮೆಗೆ ತೀರ್ಮಾನಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!