Saturday, July 27, 2024

*ಕುಂ. ರಿಷಿಕಾ ರೆಡ್ಡಿ ರಂಗಪ್ರವೇಶ ಕಾರ್ಯಕ್ರಮ*

ಬೆಂಗಳೂರು: ಅದೊಂದು ವಿಶಾಲ ಸಭಾಂಗಣ. ವೇದಿಕೆಯ ಮಧ್ಯೆ ಶಾರದಾಮಾತೆ ವಿರಾಜಮಾನ. ಮೇಲಿಂದ ಇಳಿಬಿಟ್ಟ ದೀಪಾಂಜನ. ವೇದಿಕೆಗೆ ಶಾಸ್ತ್ರೀಯ ಸಿಂಗರಣ.ಸಭಾಂಗಣದ ತುಂಬೆಲ್ಲ ಬಣ್ಣಗಳ ವಿದ್ಯುದೀಕರಣ. ವೇದಿಕೆಯ ಒಂದು ಬದಿ ನಟರಾಜನಿಗೆ ಪೂಜಾನಮನ. ಇನ್ನೊಂದು ಬದಿ ವಾದ್ಯವೃಂದದೊಂದಿಗೆ ಗೀತಗಾಯನ. ಸಭಾಂಗಣದ ತುಂಬೆಲ್ಲ ಕಾತರದಿಂದ ಕಾಯುತ್ತಿರುವ ಜನಮನ. ಆರಂಭವಾಯಿತು ನಿರೂಪಣ. ಮೆಲ್ಲಮೆಲ್ಲನೆ ಗೆಜ್ಜೆದೆಜ್ಜೆಯ ರಿಷಿಕಾಳ ಆಗಮನ. ವಿದ್ಯಾಧಿದೇವತೆ ಶಾರದೆಗೆ ನಮನ. ಇದೀಗ ಆರಂಭ ಭರತನಾಟ್ಯ ಪ್ರದರ್ಶನ. ಕ್ಲಿಷ್ಟ ನೃತ್ಯದ ಸ್ಪಷ್ಟ ಶಿಷ್ಟ ನೃತ್ಯಭಂಗಿಗಳಿಗೆ ವೇದಿಕೆ ತಲ್ಲಣ. ಸಭಿಕರು ರೋಮಾಂಚನ. ಮುಗಿಲು ಮುಟ್ಟಿತು ಕರತಾಡನ. ನೃತ್ಯಗಾತಿಯ ಮಾತಾಪಿತೃರು ಗುರುವರ್ಯರು ಪಾವನ. ಇದು ರಿಷಿಕಾಳ ರಂಗಪ್ರವೇಶದ ಚಿತ್ರಣ.

ಮಹೇಶ್ ಕುಮಾರ್ ಎಸ್ ಎ ಮತ್ತು ಶಿಲ್ಪಾ ಎಂ ರೆಡ್ಡಿ ದಂಪತಿಗಳ ಪುತ್ರಿ ಕುಂ. ರಿಷಿಕಾ ರೆಡ್ಡಿರವರ ರಂಗಪ್ರವೇಶ ಕಾರ್ಯಕ್ರಮವನ್ನು ಗುರುಗಳಾದ ಡಾ. ಜಯಲಕ್ಷ್ಮಿ ಜಿತೇಂದ್ರ ಭಾಗವತ್(ಕೈಲಾಸ ಕಲಾಧರ ಸ್ಥಾಪಕ / ನಿರ್ದೇಶಕ)ರವರ ಆಶೀರ್ವಾದಗಳೊಂದಿಗೆ ಬೆಂಗಳೂರಿನ ಜಯನಗರದ ಜೆ ಎಸ್ ಎಸ್ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನರಸಿಂಹಗಿರಿ ಸುಕ್ಷೇತ್ರದ ಎಲೆರಾಂಪುರ ಸಂಸ್ಥಾನಮಠದ ವೇದಬ್ರಹ್ಮ ಡಾ. ಹನುಮಂತನಾಥ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ “ಆಧುನಿಕ ಕಾಲಘಟ್ಟದಲ್ಲಿ ಸಂಸ್ಕೃತಿಗಳು, ಪರಂಪರೆಗಳು ಹಿನ್ನೆಲೆಗೆ ಸರಿಯುತ್ತಿರುವ ಸಂದರ್ಭದಲ್ಲಿ, ರಿಷಿಕಾ ರೆಡ್ಡಿಯವರ ರಂಗಪ್ರವೇಶ ಕಾರ್ಯಕ್ರಮ ಅತ್ಯಂತ ಮಹತ್ವವಾದುದು. ಯಾಂತ್ರಿಕ ಬದುಕಿನ ನಗರದ ಮಧ್ಯೆ ಇಂತಹ ಕಾರ್ಯಕ್ರಮಗಳು ಸಂಸ್ಕೃತಿಯ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಅಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ರಿಷಿಕಾರ ತಂದೆ ತಾಯಿಗಳನ್ನು ಹೃದಯತುಂಬಿ ಅಭಿನಂದಿಸುತ್ತೇನೆ” ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಕರ್ಶನ ಅಕಾಡೆಮಿ ನಿರ್ದೇಶಕರಾದ ಗುರು ಶ್ರೀಮತಿ ಡಾ. ಸುಮನಾ ರoಜಲ್ಕರ್ ರವರು ಮಾತನಾಡಿ “ಕಿರಿಯ ವಯಸ್ಸಿನ ರಿಷಿಕಾ ಸಾಧನೆ ಸ್ಫೂರ್ತಿದಾಯಕ.ಆಕೆ ಇನ್ನಷ್ಟು ಎತ್ತರಕ್ಕೆ ಏರಲಿ” ಎಂದು ಹಾರೈಸಿದರು.ಲಯಾಭಿನಯ ಕಲ್ಚರಲ್ ಫೌಂಡೇಶನ್ ನಿರ್ದೇಶಕಿಯಾದ ಡಾ. ಜಯಶ್ರೀ ರವಿ ಹೆಗಡೆಯವರು “ಬ್ರಹ್ಮನಿಂದ ಸೃಷ್ಟಿಯಾಗಿ ನಟರಾಜನಿಂದ ಜಗತ್ತಿಗೆ ಬಂದಿದ್ದು ಈ ನೃತ್ಯ. ಎಲ್ಲಾ ಜೀವಗಳು ಅವನ ಅಂಗಭಂಗಿಗಳು. ನಮ್ಮಲ್ಲಿಯ ಸತ್ವವನ್ನು ಉದ್ದೀಪನ ಮಾಡಿಕೊಂಡು, ನಮ್ಮೊಳಗಡಗಿರುವ ಸತ್ಯವನ್ನು ಕಂಡುಕೊಂಡು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದು ಪ್ರಾತಸ್ಮರಣೀಯರಾದ ಡಿ.ವಿ.ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಹೇಳಿದ್ದಾರೆ. ಆತ್ಮಸಾಕ್ಷಾತ್ಕಾರಕ್ಕೆ ಯೋಗ ಒಂದು ಗಂಭೀರ ಮಾರ್ಗವಾದರೆ, ನೃತ್ಯ ಜುಳುಜುಳು ಹರಿಯುವ ನದಿಯಂತೆ. ಕಲೆ ಜೀವನೋಪಾಯ, ಪ್ರಸಿದ್ಧಿ, ಹಾಗೂ ಆತ್ಮಸಾಕ್ಷಾತ್ಕಾರದ ಮಾರ್ಗವೂ ಹೌದು. ಆಯ್ಕೆ ನಮ್ಮದು. ಕಲಾವಿದೆಯಲ್ಲಿನ ಆಸಕ್ತಿ, ಶ್ರದ್ಧೆ, ತಂದೆತಾಯಿಯರ ಬೆಂಬಲ, ಹಾಗೂ ಗುರುವಿನ ಮಾರ್ಗದರ್ಶನ ಕಲಾವಿದೆ ಉನ್ನತ ಸ್ಥಾನಕ್ಕೇರಲು ಅವಶ್ಯಕ”ಎಂದು ಚಿಂತನೆಯ ಮಾತುಗಳನ್ನಾಡಿದರು.ಟ್ರಿಮಿಸ್ ಶಾಲೆಯ ಪ್ರಿನ್ಸಿಪಾಲ್ ಜ್ಯೋತಿಷ್ ಮ್ಯಾಥ್ಯೂರವರು ರಿಷಿಕಾ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

 

ಲೇಖಕ ಮತ್ತು ಪತ್ರಕರ್ತರಾದ ಮಣ್ಣೆ ಮೋಹನ್ ರವರು ಮಾತನಾಡಿ “ಎಂದೂ ಮಾಸದ ನಗು ಮೊಗದ ಕಲಾವಿದೆಯಾಗಿ, 90 ನಿಮಿಷಗಳ ನಿರಂತರ ನೃತ್ಯಪ್ರದರ್ಶನದಿಂದ ಕಿಂಚಿತ್ತೂ ಆಯಾಸಗೊಳ್ಳದ, ದಣಿವೇ ಅರಿಯದ ಚೈತನ್ಯದ ಚಿಲುಮೆಯಾಗಿ,ಸಾವಿರಾರು ವರ್ಷಗಳಿಂದ ಬಂದ ಭರತನಾಟ್ಯ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೊಂಡಿಯಾಗಿ, ಭರತಮುನಿಯ ನಾಟ್ಯದುಧ್ಯಾನದ ನಾಟ್ಯಮಯೂರಿ ಯಾಗಿ, ಭರತಮುನಿಯ ಆಸ್ಥಾನದ ವಿದುಷಿಯಾಗಿ, ಅದ್ಭುತ ನೃತ್ಯ ಪ್ರದರ್ಶನ ನೀಡಿದ ರಿಷಿಕಾ ನಿಜಕ್ಕೂ ಭರತಮುನಿಯ ವರಪುತ್ರಿ” ಎಂದು ಬಣ್ಣಿಸಿದರು. 4 ಸಾವಿರ ವರ್ಷಗಳ ಹಿಂದೆ ಭೂಮಿಯಿಂದ ಕಣ್ಮರೆಯಾದ ಸರಸ್ವತಿನದಿಯ ನೆನಪನ್ನು ಇಲ್ಲಿಯವರೆಗೂ ಅಚ್ಚಳಿಯದೆ ಉಳಿಸಿರುವ ಮಹಾನ್ ಧರ್ಮದ ಪ್ರತಿನಿಧಿಗಳಾದ ನಾವೆಲ್ಲ ನಮ್ಮ ಸಂಸ್ಕೃತಿಯನ್ನು ಮುಂದಿನ ಸಾವಿರಾರು ವರ್ಷಗಳವರೆಗೆ ದಾಟಿಸುವ ಜವಾಬ್ದಾರಿ ಹೊರಬೇಕಾಗಿದೆ. ಶಿವನಿಂದ ಬ್ರಹ್ಮಾಂಡಕ್ಕೆ ಪರಿಚಯಿಸಲ್ಪಟ್ಟು, ಭರತಮುನಿಯ ನಾಟ್ಯಶಾಸ್ತ್ರದ ರೂಪದಲ್ಲಿ ರೂಪುತಳೆದ ಭರತನಾಟ್ಯ ಕಲೆ ಶ್ರೇಷ್ಠ ವಿದ್ಯೆ. ಅಂತಹ ವಿದ್ಯೆಯನ್ನು ತಮ್ಮ ಮಗಳಲ್ಲಿ ಪಡಿಮೂಡಿಸಿದ ರಿಷಿಕಾ ತಂದೆತಾಯಿ ಮತ್ತು ಆಕೆಯ ಗುರುಗಳ ಕಾರ್ಯ ಸ್ತುತ್ಯಾರ್ಹವಾದುದು. ಅಂದು ಅಲೆಗ್ಸಾಂಡರ್ ಜಗತ್ತನ್ನೆ ಜಯಿಸಿ ಭಾರತಕ್ಕೆ ಭೌಗೋಳಿಕ ದಂಡಯಾತ್ರೆ ಬಂದoತೆ,ಇoದು ರಿಷಿಕಾ ಭಾರತದಿಂದ ತನ್ನ ಸಾಂಸ್ಕೃತಿಕ ದಂಡಯಾತ್ರೆಯನ್ನು ಆರಂಭಿಸಿ ಜಗತ್ತಿನಾದ್ಯಂತ ಯಶಸ್ವಿ ಯಾತ್ರೆ ಮಾಡಲಿ” ಎಂದು ಹಾರೈಸಿದರು.”ಉತ್ತರದಲ್ಲಿ ಪುಣ್ಯಕ್ಷೇತ್ರಗಳಿರುವ ಹಿಮಾಲಯ, ಪೂರ್ವದಲ್ಲಿ ಗಂಗಾಸಾಗರ, ಪಶ್ಚಿಮದಲ್ಲಿ ಸಿಂಧೂಸಾಗರ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಒಳಗೊಂಡ ಈ ಪವಿತ್ರ ಭೂಮಿಯ ಮಕ್ಕಳಾದ ನಾವೆಲ್ಲ ನಮ್ಮ ಧರ್ಮ ಸಂಸ್ಕೃತಿ ಪರಂಪರೆಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ” ಎಂದರು

ಡಾ. ಜಯಲಕ್ಷ್ಮಿ ಜಿತೇಂದ್ರ ಭಾಗವತ್ ರವರು, ಅಭ್ಯಾಸ ಸಮಯದಲ್ಲಿ ರಿಷಿಕಾಳ ತನ್ಮಯತೆ, ಕಲಿಕೆಯ ಆಸಕ್ತಿಯನ್ನು ಕೊಂಡಾಡಿದರು. ಅಂತಾರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಕೆ ಎಸ್ ವಿಶ್ವಾಸ್ ರವರು,ಕಾವೇರಿ ವಿದ್ಯಾ ಕ್ಷತ್ರಂ ಶಾಲೆಯ ಶ್ರೀ ಗಿರೀಶ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ಭಾರತಿ ವೇಣುಗೋಪಾಲ್ ರವರ ಗಾಯನ, ವಿದ್ವಾನ್ ವಿನೋದ್ ಶ್ಯಾಮ್ ಅನೂರ್ ರವರ ಮೃದಂಗ, ವಿದ್ವಾನ್ ಮಧುಸೂದನ್ ರವರ ವಾಯ್ಲಿನ್, ವಿದ್ವಾನ್ , ನರಸಿಂಹಮೂರ್ತಿಯವರ ಫ್ಲೂಟೋಗೆ ಸಭಿಕರು ತಲೆದೂಗಿದರು. ಮಾನಸರವರ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ವರದಿ:ಮಣ್ಣೆ ಮೋಹನ್

ಜಿಲ್ಲೆ

ರಾಜ್ಯ

error: Content is protected !!