Friday, July 26, 2024

ಸರಕಾರದ ಕೆಲಸ ದೇವರ ಕೆಲಸ? *ಭ್ರಷ್ಟಾಚಾರದ ವಂಶವೃಕ್ಷ* ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ!

ಗೆಳೆಯನೊಬ್ಬ ಹೇಳುತ್ತಿದ್ದ, “ಪಕ್ಕದ ಮನೆಯವರು ಪೊಲೀಸ್ ಇಲಾಖೆಯಲ್ಲಿದ್ದಾರೆ, ಹಾಗಾಗ್ಗೆ ಸ್ಯಾನಿಟೈಸರ್ ಬಾಟಲ್ ಗಳನ್ನು ತಂದು ಅಕ್ಕಪಕ್ಕದ ಮನೆಯವರಿಗೆ ಕೊಡುತ್ತಿರುತ್ತಾರೆ. ನಮಗೂ ಕೊಡಲು ಬಂದರು, ನಾನು ಬೇಡವೆಂದೆ”. ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಹತ್ತಾರು ಬಾಟಲ್ ಗಳನ್ನು ಹೊತ್ತುತರುತ್ತಾರೆಂದರೆ, ಸಬ್ ಇನ್ಸ್ಪೆಕ್ಟರ್ ಹಾಗೂ ಇನ್ಸ್ಪೆಕ್ಟರ್ ಗಳು ಮತ್ತೇನೆಲ್ಲವನ್ನು ಎಷ್ಟೆಷ್ಟು ಕೊಂಡೊಯ್ಯಬಹುದು. ಅಷ್ಟಕ್ಕೂ ಅವರೆಲ್ಲ ಕೊಂಡೊಯ್ದು ಬಿಟ್ಟದ್ದನ್ನು ತಾನೇ ಕಾನ್ಸ್ಟೇಬಲ್ ಗಳು ತರುವುದು. ಇನ್ನೂ ಮುಂದುವರೆದರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು, ದಾಖಲಿಸದೆ ಇರಲು- ಹೀಗೆ ಎರಡು ಬಗೆಯ ಕ್ರಮಕೈಗೊಳ್ಳಲು ಸಾವಿರಾರು ರೂ.ಗಳ ಡೀಲ್ ನಡೆಯುವುದು ಸರ್ವವಿಧಿತ.

ಇದರ ಜೊತೆಗೆ ಕಳ್ಳರ ಜೊತೆಗೆ ಶಾಮೀಲಾಗಿ ಪಾಲು ಹಂಚಿಕೊಳ್ಳುವುದು; ಅನೇಕ ಅಕ್ರಮಗಳಿಗೆ ಬೆಂಗವಲಾಗಿ ನಾನಾ ಬಗೆಯ ಗಿಫ್ಟ್ ಪಡೆಯುವುದು (ಸೈಟು, ಕಾರು, ಮನೆ ಇತ್ಯಾದಿ); ಬಾರ್, ಪಬ್, ಕ್ಲಬ್ ಗಳಿಂದ ಮಂತ್ಲಿ ವಸೂಲಿ-ಒಂದೇ ಎರಡೇ- ಇವರ ಲಂಚಾವತಾರದ ಕರಾಳ ಮುಖಗಳು. ಇನ್ನೂ ಮೇಲಿನ ಹಂತಕ್ಕೆ ಬಂದರೆ, ಕಮಿಷನರ್ ಗಳು ಎರಡೇ ವರ್ಷದಲ್ಲಿ ಮುಂದೆ ಚುನಾವಣೆಗೆ ನಿಂತು ಶಾಸಕರಾಗಿ ಆಯ್ಕೆಯಾಗಿ ಬರುವಷ್ಟರ ಮಟ್ಟಕ್ಕೆ ಬೆಳೆದು ಬಿಡುವ ಚಮತ್ಕಾರವು ಇಲ್ಲಿ ನಡೆಯುತ್ತದೆ. ಪಾಪ! ಇವರೇನು ಮಾಡಿಯಾರು? ಇವರೆಲ್ಲ ಆಯಕಟ್ಟಿನ ಸ್ಥಾನಕ್ಕೆ ಬರಲು ಲಕ್ಷಾಂತರ ರೂಗಳನ್ನು ಕಾಣಿಕೆಯಾಗಿ ನೀಡಿ ಬಂದಿರುತ್ತಾರೆ ಅಲ್ಲವೇ? ಒಮ್ಮೆ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ಇನ್ಸ್ಪೆಕ್ಟರ್ ಆಗಿ ಬಂದವರೊಬ್ಬರು “60 ಲಕ್ಷ ಕೊಟ್ಟು ಈ ಸ್ಥಾನಕ್ಕೆ ಬಂದಿದ್ದೇನೆಂದು” ಎದೆಯುಬ್ಬಿಸಿಕೊಂಡು ಹೇಳಿಕೊಳ್ಳುತ್ತಿದ್ದರು. ಹಾಗಾದರೆ ಈ ಲಕ್ಷಾಂತರ ರೂ.ಗಳು ಎಲ್ಲಿಗೆ ಹೋಯಿತು? ಗೃಹ ಸಚಿವರೇ ಉತ್ತರ ನೀಡಬೇಕು.

ಇನ್ನೊಬ್ಬ ಗೆಳೆಯ ಹೇಳುತ್ತಿದ್ದ “ನನ್ನ ತಮ್ಮ ಪ್ರಾಥಮಿಕ ಶಾಲಾ ಶಿಕ್ಷಕ. ಶಾಲೆಯಿಂದ ಆಗಾಗ್ಗೆ ಅಡುಗೆಎಣ್ಣೆ, ತೊಗರಿಬೇಳೆ, ಅಕ್ಕಿ ಇತ್ಯಾದಿ ವಸ್ತುಗಳನ್ನು ಮನೆಗೆ ತರುತ್ತಿರುತ್ತಾನೆ. ಒಂದು ಕಾಲದಲ್ಲಿ ಬಡಮೇಸ್ಟ್ರು ಎನ್ನುತ್ತಿದ್ದರು. ಆದರೆ ಈಗ ಶಿಕ್ಷಕ ಹುದ್ದೆ ಕೂಡ ಲಾಭದಾಯಕವಾಗಿದೆ” ಎಂದು. ಶಿಕ್ಷಕ ಬಿಸಿಯೂಟಕ್ಕೆ ಬಳಸುವ ದಿನಸಿ ಪದಾರ್ಥಗಳನ್ನು ತರಬಹುದಾದರೆ, ಹೆಡ್ಮಾಸ್ಟರ್, ಬಿಇಒಗಳು, ಕ್ಷೇತ್ರಶಿಕ್ಷಣಾಧಿಕಾರಿಗಳು ಏನೆಲ್ಲವನ್ನು ಸ್ವಾಹ ಮಾಡಬಹುದು ಸ್ವಲ್ಪ ಯೋಚಿಸಿ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆಂದು ತರಿಸುವ ಯೂನಿಫಾರಂ, ಪುಸ್ತಕ, ಬ್ಯಾಗ್, ಶೂ- ಹೀಗೆ ಎಲ್ಲದರಲ್ಲಿ ಕಮಿಷನ್ ರೂಪದಲ್ಲಿ ಲಕ್ಷಾಂತರ ರೂ.ಗಳು ಸಂಬಂಧಿಸಿದವರಿಗೆ ಹಂಚಿಕೆಯಾಗುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾ! ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಪಾಲಿಗೆ ಅಕ್ಷಯ ಪಾತ್ರೆಗಳಿದ್ದಂತೆ. ಅದು ಸರಿ ಇಲ್ಲ, ಇದು ಹೀಗಲ್ಲ ಎನ್ನುತ್ತಾ ಇವರೆಲ್ಲಾ ಪಡೆಯುವ ಹಣವೆಷ್ಟೊ? ಖಾಸಗಿ ಶಾಲೆ ನಡೆಸುವ ನನ್ನ ಇನ್ನೊಬ್ಬ ಗೆಳೆಯ ಹೇಳುತ್ತಿದ್ದ “ಹೊಸದಾಗಿ ಆರಂಭಿಸಿದ ಶಾಲೆಗೆ ಅನುಮತಿ ಪಡೆಯಲು ಮೂರು ಲಕ್ಷ ಹಣವನ್ನು ತೆತ್ತೆ”ನೆಂದು. ಮೂರು ಲಕ್ಷ ಹಣದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಯಿತೊ! ಶಿಕ್ಷಣ ಸಚಿವರೇ ಉತ್ತರ ಹೇಳಬೇಕು.

ನನ್ನ ಪರಿಚಿತರೊಬ್ಬರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಒಮ್ಮೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ “ಹಣ ಎಣಿಸಿ ಎಣಿಸಿ ಕೈನೋವು ಬರುತ್ತದೆ” ಎಂದರು. ನಾನು “ಯಾವ ಹಣ?” ಎಂದಿದ್ದಕ್ಕೆ “ಸಂಥಿಂಗ್ ಹಣ” ಎಂದರು. ನಿಜಕ್ಕೂ ಶಾಕ್ ಆಯಿತು. ಯಾವ ಲಜ್ಜೆಯೂ ಇಲ್ಲದೆ ಹೀಗೆ ಬಹಿರಂಗವಾಗಿ, ಏನೋ ಸಾಧಿಸಿದಂತೆ ಹೇಳಿಕೊಳ್ಳುವುದನ್ನು ಕಂಡು ಅಸಹ್ಯವೂ ಆಯಿತು. “ನೀವು ಗೊಟಕ್ ಎಂದಾಗ ಇದೆಲ್ಲ ಜೊತೆಗೆ ಬರುವುದಿಲ್ಲ, ಅವಕಾಶ ಸಿಕ್ಕಾಗ ಸಮಾಜಕ್ಕೆ ಒಳ್ಳೆಯದು ಮಾಡಿ” ಎಂದು ಬುದ್ಧಿ ಹೇಳಿದೆ. ಅವರೇನು ಉನ್ನತ ಅಧಿಕಾರಿಯಾಗಿರಲಿಲ್ಲ. ಬಹುಶಃ ಕೆಳಗಿನ ಅಧಿಕಾರಿ ಇರಬಹುದು ಅಷ್ಟೇ. ಹಾಗಾದರೆ ಉನ್ನತಾಧಿಕಾರಿಗಳಿಗೆ ಸಂಥಿಂಗ್ ಹಣ ಎಣಿಸಲು ಎಷ್ಟು ಕೈಗಳು ಬೇಕಾಗುತ್ತವೆ?

ಎಣಿಸಲು ಅಸಾಧ್ಯವಾದಷ್ಟು ಲಂಚದ ಹಣ ಇವರಿಗೆ ಹೇಗೆ ಸಿಗುತ್ತದೆ? ವೆರಿ ಸಿಂಪಲ್, ಹಾಸ್ಟೆಲ್ಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲವೆಂದು, ತಿನ್ನುವ ಊಟವೂ ತಿನ್ನದಂತಿರುತ್ತದೆಂದು, ಆಗಾಗ್ಗೆ ವಿದ್ಯಾರ್ಥಿಗಳು ಸ್ಟ್ರೈಕ್ ಮಾಡುವುದನ್ನು ನೆನಪಿಸಿಕೊಳ್ಳಿ. ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆಂದು ಕೊಂಡುಕೊಂಡ 600 ರೂ. ಬೆಲೆಬಾಳುವ ಹಾಸಿಗೆ 6000 ರೂ. ಆಗುವುದು; ಸಾವಿರ ಹಾಸಿಗೆ ಕೊಂಡರೆ ಐದಾರು ಸಾವಿರ ಕೊಂಡಂತೆ ಬಿಲ್ ಹಾಕುವುದು; ಮಂಚಗಳು ಮುರಿದಿವೆಯೆಂದು ಷರಾ ಬರೆದು, ಅವೇ ಮಂಚಗಳನ್ನು ರಿಪೇರಿ ಮಾಡಿಸಿ, ಹೊಸ ಮಂಚಗಳನ್ನು ಕೊಂಡಂತೆ ಬಿಲ್ ಸೃಷ್ಟಿಸುವುದು- ಇಂತಹ ಪವಾಡಗಳಿಗೆಲ್ಲ ಸಮಾಜ ಕಲ್ಯಾಣ ಸಚಿವರೇ ಉತ್ತರಿಸಬೇಕು.

ಕೆಲವು ವರ್ಷಗಳ ಹಿಂದೆ ಆರ್ ಟಿ ಓ ಆಫೀಸ್ ಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದಾಗ ಲಕ್ಷಾಂತರ ರೂ‌ ಹಣ ಪತ್ತೆಯಾಗಿದ್ದೂ, ಇನ್ನೂ ಕೆಲವು ಕಡೆ ಕಿಟಕಿಯಾಚೆಗೆ ಹಣದ ಚೀಲ ಎಸೆದದ್ದೂ ನಿಮಗೂ ಗೊತ್ತಿರಬಹುದು. ಹಾಗೆಯೇ ಸಬ್ ರಿಜಿಸ್ಟರ್ ಆಫೀಸ್ ಗಳಲ್ಲಿನ ಬ್ರಹ್ಮಾಂಡ ಭ್ರಷ್ಟತೆ ಬಲು ಜನಜನಿತ. ಇಂತಿಂಥ ಕೆಲಸಕ್ಕೆ ಇಷ್ಟಿಷ್ಟು ಹಣವೆಂದು ಅನಧಿಕೃತ ಪಟ್ಟಿ ಏಜೆಂಟರ ಬಳಿ ಇರುತ್ತದೆ. ಇಲ್ಲಿ ಎಲ್ಲವೂ ಏಜೆಂಟ್ ಮಯ. ತಿಂಗಳಾದರೂ ಕಚೇರಿ ಅಂಗಳ ಬಿಟ್ಟು ಕದಲದ ಫೈಲುಗಳು, ಸೇರಬೇಕಾದ್ದು ಸೇರಿದ ತಕ್ಷಣ ಮಂಗ ಮಾಯವಾದಂತೆ ಕ್ಲಿಯರ್ ಆಗುತ್ತವೆ. ಇವರೆಲ್ಲ ಯಕ್ಷಿಣೆ ವಿದ್ಯೆಯ ಪಂಡಿತರು.ಇವುಗಳ ಉತ್ತರದಾಯಿತ್ವ ಸಾರಿಗೆ ಹಾಗೂ ಕಂದಾಯ ಸಚಿವರದ್ದು.

ಕೊರೋನಾಕಾಲದಲ್ಲಿ ನಮ್ಮ ಕಳಪೆ ಆರೋಗ್ಯ ವ್ಯವಸ್ಥೆಯ ನಗ್ನದರ್ಶನವಾಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ. ಸ್ವಾತಂತ್ರ್ಯಾನಂತರದ ಎಪ್ಪತ್ತೈದು ವರ್ಷಗಳ ಸುದೀರ್ಘ ಅವಧಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಆಸ್ಪತ್ರೆಗಳನ್ನು ನಿರ್ಮಿಸಲು ನಮ್ಮಿಂದ ಸಾಧ್ಯವಾಗದಿರುವುದು ನಮ್ಮ ದೇಶದ ದುರಂತವಾಗಿದೆ. ಪ್ರತಿವರ್ಷ ಬಜೆಟ್ನಲ್ಲಿ ಸಾವಿರಾರು ಕೋಟಿ ರೂ.ಗಳ ಅನುದಾನ ಪಡೆಯುವ ಸರ್ಕಾರಿ ಆರೋಗ್ಯ ವ್ಯವಸ್ಥೆ ಎಷ್ಟು ಅದ್ವಾನದಲ್ಲಿದೆ ಎಂದರೆ ಅದಕ್ಕೆ ಸಾಕ್ಷಿಯಾಗಿ ಸರ್ಕಾರಿ ಆಸ್ಪತ್ರೆಗಳ ಇಂದಿನ ದಾರುಣಸ್ಥಿತಿ ಕಣ್ಣೆದುರು ನಿಲ್ಲುತ್ತದೆ. ಹಾಗಾದರೆ ಎಲ್ಲಿ ಹೋಯಿತು ಸಾವಿರಾರು ಕೋಟಿ ರೂ.ಗಳ ಅನುದಾನ? ಆರೋಗ್ಯ ಸಚಿವರೇ ಉತ್ತರಿಸಬೇಕು.

ಇವೆಲ್ಲವೂ ಕೇವಲ ಉದಾಹರಣೆಗಳಷ್ಟೇ. ಯಾವುದೇ ಸರ್ಕಾರಿ ಕಚೇರಿಗೆ ನೀವು ಹೋದರೂ, ಗುಮಾಸ್ತನಿಂದ ಹಿಡಿದು ಅಧಿಕಾರಿಗಳವರೆಗೂ ಭ್ರಷ್ಟತೆಯ ವ್ಯೂಹ ಹೆಣೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ-ಮಾತ್ರೆಗಳ ಸಾವಿರಾರು ಡೋಸ್ ಗಳು ಬಂದಿದೆಯೆಂದು ಸುಳ್ಳು ಲೆಕ್ಕ ಬರೆಯುವುದು; ಪಡಿತರಕ್ಕೆಂದು ಸರಬರಾಜಾಗುವ ಆಹಾರಧಾನ್ಯ ಕಳ್ಳಸಂತೆಯಲ್ಲಿ ಮಾರಾಟವಾಗುವುದು; ಡ್ರೈವಿಂಗ್ ಗಂಧಗಾಳಿ ಗೊತ್ತಿಲ್ಲದಿದ್ದರೂ ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು; ಬಾರ್, ರೆಸ್ಟೋರೆಂಟ್, ಪಬ್ ಗಳ ಲೈಸೆನ್ಸ್ ಪಡೆಯಲು ಲಕ್ಷಾಂತರ ರೂ. ಕಿಕ್ ಬ್ಯಾಕ್ ಪಡೆಯುವುದು- ಇವೆಲ್ಲ ಪವಾಡ ಪಂಡಿತರ ಪವಾಡ ಲೀಲೆಗಳು. ಇನ್ನು ಅಪಾರ್ಟ್ಮೆಂಟ್ ಗಳ ವಿಚಾರಕ್ಕೆ ಬಂದರೆ, ಅವುಗಳು ಮೆಲ್ಲುವೀರರು ಮೆಲ್ಲುವಷ್ಟು ಮೆಯ್ಯಬಹುದಾದ ಹುಲುಸಾದ ಹುಲ್ಲುಗಾವಲುಗಳು.

ಇದು ಕೆಳಮಟ್ಟದವರ ಸಂಥಿಂಗ್ ಸಂಗತಿಯಾಯಿತು.ಮೇಲೆ ಹೋದಂತೆ ತಹಸಿಲ್ದಾರ್ ಗಳ, ಜಿಲ್ಲಾಧಿಕಾರಿಗಳ ಲಂಚದ ವಹಿವಾಟು ಲಕ್ಷಾಂತರ ರೂ.ಗಳಲ್ಲಿ ನಡೆಯುತ್ತದೆ. ಅವರದೇನಿದ್ದರೂ ದೊಡ್ಡ ದೊಡ್ಡ ಡೀಲುಗಳು. ಯಾರದೋ ಜಮೀನನ್ನು ಇನ್ಯಾರಿಗೋ ಖಾತೆ ಮಾಡಿಕೊಟ್ಟು ಕೋಟ್ಯಾಂತರ ರೂ.ಗಳನ್ನು ಜೇಬಿಗಿಳಿಸುವುದು ಅಲ್ಲಿ ಮಾಮೂಲು. ಭೂಸ್ವಾಧೀನಾಧಿಕಾರಿಗಳ ಲಂಚದ ಕಥೆಯಂತೂ ಬಲು ರೋಚಕ. ಕೆಲವು ವರ್ಷಗಳ ಹಿಂದೆ ಭೂಸ್ವಾಧೀನಾಧಿಕಾರಿಯಾಗಿಧ್ದವರೊಬ್ಬರು ಕೋಟ್ಯಾಂತರ ರೂ.ಗಳ ಆಸ್ತಿ ಮಾಡಿದ್ದು ಆ ಕಾಲದ ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿತ್ತು. ಇನ್ನೊಬ್ಬರ ಬಂಧನವೂ ಆಗಿತ್ತು. ಇದು ಸಂಕೇತ ಮಾತ್ರ. ಕೆಲವರನ್ನು ಹೊರತುಪಡಿಸಿದರೆ ಉಳಿದೆಲ್ಲ ಎಸಿ-ಡಿಸಿಗಳ ಕತೆ ಇದಕ್ಕಿಂತ ಹೆಚ್ಚು ಅಥವಾ ಇದರಷ್ಟೇ.

ಇವರೆಲ್ಲ ಮೇಟಿಯ ಸುತ್ತ ತಲೆಬಗ್ಗಿಸಿ ಸುತ್ತುವ ದನಗಳು ಅಷ್ಟೇ. ಇವರಿಗೆಲ್ಲಾ ಆಸರೆ, ಆಶ್ರಯ ಮೇಟಿ. ಮೇಟಿ ಎಂದರೆ ರಾಜಕಾರಣಿಗಳು. ನೀವು ಆಶ್ಚರ್ಯ ಪಡಬಹುದು. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಲು ಒಬ್ಬ ವ್ಯಕ್ತಿ 25 ಲಕ್ಷ ಖರ್ಚು ಮಾಡಿದ್ದೇನೆಂದು ಹೇಳಿಕೊಂಡಿದ್ದ. ಆ 25 ಲಕ್ಷ ವ್ಯವಹಾರದಲ್ಲಿ ಹೂಡಿರುವ ಅಸಲು. ಅದಕ್ಕೆ ಬಡ್ಡಿ ಕನಿಷ್ಠ 25 ಲಕ್ಷ ಸೇರಿಸಿದರೆ 50 ಲಕ್ಷ ಹಣವನ್ನು ಅವನು ತನ್ನ
ಅಧಿಕಾರವಧಿಯಲ್ಲಿ ಸಂಪಾದಿಸುತ್ತಾನೆ. ಹೇಗೆಂದು ಕುತೂಹಲವೇ? ಒಂದೇ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಐದೂವರೆ ಲಕ್ಷ ರೂ ಗಳನ್ನು ಖರ್ಚು ಮಾಡಿ ನಿರ್ಮಿಸಿದ ನನ್ನೂರಿನ ಒಂದು ರಸ್ತೆ, 5 ವಾರವೂ ಬದುಕುಳಿಯಲಿಲ್ಲ.ಒಂದೇ ಒಂದು ಮಳೆಗೆ ಕೊಚ್ಚಿ ಹೋಗಿತ್ತು. ಪೆನ್ನು, ಪೇಪರ್, ಕ್ಯಾಲ್ಕುಲೇಟರ್ ಎಲ್ಲವನ್ನೂ ಎದುರಿಗಿಟ್ಟುಕೊಂಡು ಲೆಕ್ಕ ಹಾಕಿದರೆ,ಆ ರಸ್ತೆಗೆ ಖರ್ಚು ಮಾಡಿದ್ದು ಕೇವಲ ಐವತ್ತು ಸಾವಿರ ರೂ.ಗಳು ಮಾತ್ರ. ಉಳಿದ ಐದು ಲಕ್ಷ ಹಣ, ಒಂದೇ ಒಂದು ರಸ್ತೆಯಲ್ಲಿ ಅವನು ಪಡೆದ ಲಾಭ.ಅದು ಅವನ ಬಡ್ಡಿಯ ದುಡ್ಡು.

 

ಇದೇ ಹಾದಿಯಲ್ಲಿ ನೀವು ಯೋಚಿಸುತ್ತಾ ಹೋದರೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರಸಭೆಗಳ ಸದಸ್ಯರುಗಳ, ಅಧ್ಯಕ್ಷರುಗಳ ವ್ಯವಹಾರವನ್ನು ಸುಲಭವಾಗಿ ಲೆಕ್ಕ ಹಾಕಬಹುದು. ಆದರೆ ನೀವು ಲೆಕ್ಕಹಾಕಲು ಸಾಧ್ಯವಾಗದಂತಹ ವ್ಯವಹಾರಗಳು ಕಾರ್ಪೋರೇಟರ್ ಗಳು, ಶಾಸಕರು, ಮಂತ್ರಿಗಳಿಗೆ ಸಂಬಂಧಿಸಿದವು. ಇವುಗಳ ಆಳ-ಅಗಲ ಸಾಗರದಷ್ಟು ವಿಶಾಲ. ಇವುಗಳು ಊಹೆಗೂ ನಿಲುಕದ ವ್ಯವಹಾರಗಳು. ಇವರೆಂದೂ ಯಾರ ಕೈಗೂ ಸಿಕ್ಕಿಹಾಕಿಕೊಳ್ಳದೆ ವ್ಯವಹಾರ ಕುದುರಿಸುವುದರಲ್ಲಿ ನಿಪುಣರು. ಆಗೊಮ್ಮೆ ಈಗೊಮ್ಮೆ ಮಾತ್ರ ಒಬ್ಬೊಬ್ಬರು ಸಿಕ್ಕಿಬೀಳಬಹುದು, ಆದರೆ ಒಟ್ಟಾರೆ ಈ ತಿಮಿಂಗಿಲಗಳ ಗುಂಪು ಯಾವ ಬಲೆಯಲ್ಲೂ ಬೀಳದೆ ಪಾರಾಗುವುದರಲ್ಲಿ ನಿಷ್ಣಾತ.

ಉದ್ಯಮಿಯೊಬ್ಬರಿಗೆ ಅನುಕೂಲಮಾಡಿಕೊಡಲು ಐದು ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಅದರಲ್ಲಿ ಮೊದಲ ಕಂತನ್ನು ಪಡೆಯುತ್ತಿದ್ದಾಗ ಲೋಕಾಯುಕ್ತದಿಂದ ನೇರ ದಾಳಿಗೊಳಗಾಗಿ ಜೈಲಿಗೋದ ಕೆಜಿಎಫ್​ ಶಾಸಕ ಮಹಾಶಯರ ವಿಷಯ ನಿಮಗೆಲ್ಲಾ ಗೊತ್ತಿದೆ. ಹಾಗೆಯೇ ಸರ್ಕಾರದಲ್ಲಿ ಬಹಳ ಪ್ರಭಾವಶಾಲಿಯಾಗಿದ್ದ, ಒಮ್ಮೆ ಮಂತ್ರಿಯೂ ಆಗಿದ್ದ ಅಸಾಮಿಯೊಬ್ಬರು ತಮ್ಮ ಪಾಲಿಕೆ ಸದಸ್ಯ ಪುತ್ರನೊಂದಿಗೆ ಸೇರಿ ಸಾಫ್ಟ್‌ವೇರ್ ಕಂಪನಿಯೊಂದಕ್ಕೆ 325 ಎಕರೆ ಜಮೀನು ಮಂಜೂರು ಮಾಡಲು 87 ಕೋಟಿ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಆ ಕಾಲದ ರಾಷ್ಟ್ರಮಟ್ಟದ ಬಹು ದೊಡ್ಡ ಸುದ್ದಿಯಾಗಿತ್ತು. ಇವು ಸ್ಯಾಂಪಲ್ ಗಳಷ್ಟೇ.

ಸಾಮಾನ್ಯ ಪೊಲೀಸ್ ಕಾನ್ಸ್ಟೇಬಲ್ ರವರ ಮಗ ಇಡೀ ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿಕೊಂಡು, ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು, ಗಣಿಯನ್ನು ಲೂಟಿ ಹೊಡೆದು ಮೆರೆದದ್ದು, ಸಾವಿರಾರು ಕೋಟಿ ರೂಗಳನ್ನು ಅಕ್ರಮವಾಗಿ ಸಂಪಾದಿಸಿದ್ದು ಈ ದೇಶದಲ್ಲಿ ಮಾತ್ರ ಸಾಧ್ಯವೇನೋ.ಹಾಗೆಯೇ ಸಾಮಾನ್ಯ ಶಿಕ್ಷಕರೊಬ್ಬರ ಮಗ ಕನಕಪುರದ ಬಂಡೆ ಕರಗಿಸಿ ಕೋಟ್ಯಾಧೀಶನಾದ ಕಥೆಯು ನಾಡಿನ ಜನರ ಬಾಯಲ್ಲಿ ಜನಜನಿತ. ಇದೀಗ ಮೊದಲನೆಯವರು ಕೋರ್ಟ್ ಅತಿಥಿಯಾಗಿ, ಎರಡನೆಯವರು ಇ ಡಿ ಇಲಾಖೆಯ ಅತಿಥಿಯಾಗಿ ಜೀವನ ನೂಕುತ್ತಿದ್ದಾರೆ. ಇವು ಕೇವಲ ಉದಾಹರಣೆಗಳು. ಎಲ್ಲರ ಉದಾಹರಣೆ ಕೊಡುತ್ತಾ ಹೋದರೆ ಅದು ಒಂದು ಬೃಹದ್ಗ್ರಂಥವಾಗುತ್ತದೆ.

ಮಂತ್ರಿಗಳೆನಿಸಿಕೊಂಡವರ ಅಂಧ ದರ್ಬಾರು ಅಷ್ಟಿಷ್ಟಲ್ಲ. ಪ್ರಮಾಣವಚನ ಸ್ವೀಕರಿಸಿದ್ದೇ ತಡ, ಕೊಠಡಿಗಳಿಗಾಗಿ ಕಾದಾಟ, ಕೊಠಡಿಗಳಲ್ಲಿನ ವಾಸ್ತು ಬದಲಾವಣೆಗೆಂದು, ಪೀಠೋಪಕರಣಕ್ಕೆಂದು ಲಕ್ಷಾಂತರ ರೂಪಾಯಿ ವ್ಯಯ, ಗೂಟದ ಲಕ್ಸುರಿ ಕಾರುಗಳಿಗೆ ಬೇಡಿಕೆ ಇತ್ಯಾದಿ. ಇವರು ಎಲ್ಲಿ ಹೋದರೂ ಹಿಂದೆ ಮುಂದೆ ಒಂದಿಪ್ಪತ್ತು ಕಾರುಗಳು ಹಿಂಬಾಲಿಸಿ ಹೋಗಬೇಕು. ಅವರ ಪಟಾಲಂ ಸದಾ ಜೊತೆಗಿರಬೇಕು. ಎಲ್ಲವೂ ಅವರು ಹೇಳಿದಂತೆ ನಡೆಯಬೇಕು. ಎಲ್ಲರೂ ಅವರು ಹೇಳಿದ್ದನ್ನೇ ಕೇಳಬೇಕು. ಎಲ್ಲಾ ಪೈಲುಗಳು ಕೂಡ ಮುಂದಕ್ಕೆ ಮೂವಾಗಲು, ಮೂವಾಗದಿರಲು ಇವರ ಕೃಪಾಕಟಾಕ್ಷ ತುಂಬಾ ಅವಶ್ಯಕ. ವರ್ಗಾವಣೆ ದಂಧೆಯಂತೂ ಇವರಿಗೆ ದುಡ್ಡಿನ ಸುರಿಮಳೆ ಸುರಿಸುವ ಚಿರಾಪುಂಜಿ. ಎಲ್ಲ ಇಲಾಖೆಗಳಿಂದ
ತಿಂಗಳಿಗಿಷ್ಟೆಂದು ಇವರಿಗೆ ಕಾಣಿಕೆ ಸಲ್ಲಲೇಬೇಕು. ಇವೆಲ್ಲಾ ಏನಿದ್ದರೂ ಲಕ್ಷ, ಕೋಟಿ ರೂ.ಗಳ ನಿಗೂಢ ವ್ಯವಹಾರ.

ಇನ್ನು ಯಥಾ ರಾಜ ತಥಾ ಪ್ರಜಾ ಎಂಬ ಗಾದೆಯಂತೆ ಉಳಿದಿರುವುದು ಮುಖ್ಯಮಂತ್ರಿಯಾದವರ ಕಥೆ-ವ್ಯಥೆ.
ಭ್ರಷ್ಟ ವ್ಯವಸ್ಥೆಯನ್ನು ಮಟ್ಟಹಾಕುವುದು ಅಥವಾ ಪೋಷಿಸುವುದು ಇವರ ಕೈಯಲ್ಲೇ ಇದೆ. ಇವರು ಮನಸ್ಸು ಮಾಡಿದರೆ ಇಡೀ ವ್ಯವಸ್ಥೆಯನ್ನು ಶುದ್ಧಗೊಳಿಸಬಹುದು ಹಾಗೆಯೇ ಅಶುದ್ಧಗೊಳಿಸಲೂಬಹುದು. ಮುಖ್ಯಮಂತ್ರಿಯನ್ನೊಳಗೊಂಡಂತೆ ಎಲ್ಲರ ಭ್ರಷ್ಟಾಚಾರ ತನಿಖೆ ಮಾಡುವ ಅಧಿಕಾರವಿರುವ ಲೋಕಾಯುಕ್ತವನ್ನು ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದರು. ಬಾಟ್ಲಿಂಗ್ ಹಗರಣದಲ್ಲಿ ಅವರೇ ರಾಜೀನಾಮೆ ಕೊಡಬೇಕಾಗಿತು. ಕೊನೆಗೆ ಚಿಂತಕರೆನಿಸಿಕೊಂಡವರ ಸಲಹೆಯಂತೆ ಮುಖ್ಯಮಂತ್ರಿಗಳನ್ನು ಹೊರಗಿಟ್ಟು ತಿದ್ದುಪಡಿ ತಂದರು. ಆನಂತರ ಅಧಿಕಾರಕ್ಕೆ ಬಂದ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಲೋಕಾಯುಕ್ತವನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸಿದವರೇ.

ಮದಿರೆ – ಮಹಿಳೆ ನನ್ನ ವೀಕ್ನೆಸ್ ಎಂದು ಲಜ್ಜೆಗೆಟ್ಟು ಹೇಳಿದರು ಮುಖ್ಯಮಂತ್ರಿಯೊಬ್ಬರು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡವರು ಮತ್ತೊಬ್ಬರು. ಲಂಚವನ್ನು ಚೆಕ್ ನಲ್ಲಿ ಸ್ವೀಕರಿಸಿ ರಾಜೀನಾಮೆ ಕೊಡಬೇಕಾಯಿತು ಇನ್ನೊಬ್ಬರು. ನಾನು ಸಮಾಜವಾದಿಯೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರೊಬ್ಬರು 80 ಲಕ್ಷ ರೂ. ಬೆಲೆಬಾಳುವ ಕೈವಾಚನ್ನು ಕಟ್ಟಿಕೊಂಡು ತಮ್ಮ ಸಮಾಜವಾದದ ಮುಖವಾಡವನ್ನು ಕಳಚಿಕೊಂಡರು ಇನ್ನೊಬ್ಬರು. ಹಾಗೆಯೇ ಮಣ್ಣಿನ ಮಕ್ಕಳ ರಾಜಕಾರಣ ತನ್ನ ಕಬಂಧಬಾಹುಗಳಿಂದ ತಮ್ಮ ಬಗೆಗಿನ ಆರೋಪಗಳ ಒಂದೇ ಒಂದು ದಾಖಲಾತಿಯು ಇಲ್ಲದಂತೆ ನೋಡಿಕೊಂಡಿತು. ಮುಖ್ಯಮಂತ್ರಿಗಳ ಕಥೆಯೇ ಹೀಗಾದರೆ ಇನ್ನು ಮಂತ್ರಿಗಳ, ನಿಗಮ ಮಂಡಳಿಗಳ ಅಧ್ಯಕ್ಷರ, ಶಾಸಕರ, ಕಾರ್ಪೊರೇಟರ್ ಗಳ, ನಗರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಕತೆಯನ್ನು ಕೇಳುವುದು ಬೇಡ ಅಲ್ಲವೇ?

ಭ್ರಷ್ಟಾಚಾರದ ವಂಶವೃಕ್ಷವನ್ನು ಉಳಿಸಲೆಂದೇ, ರಾಜ್ಯದ ಜನತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಆಶಾಭಾವನೆ ಬಿತ್ತಿ, ಇಡೀ ದೇಶದಲ್ಲಿ ತನ್ನ ಕ್ರಾಂತಿಕಾರಕ ನಿಲುವಿನಿಂದ ಮೆಚ್ಚಿಗೆ ಪಡೆದಿದ್ದ ಲೋಕಾಯುಕ್ತವನ್ನು 2014ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂಲೆಗುಂಪು ಮಾಡಿ, ಅದರ ಕತ್ತನ್ನು ಹಿಸುಕಿ,ಎಸಿಬಿ ಎಂಬ ಹಲ್ಲಿಲ್ಲದ ಹಾವನ್ನು ಸೃಷ್ಟಿಸಿತು.ಹಾಗಯೇ ಸಂದರ್ಭದ ಶಿಶುವಾಗಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಕೂಡ ಲೋಕಾಯುಕ್ತವನ್ನು ಬಲಪಡಿಸಲು ಪ್ರಯತ್ನಿಸಲಿಲ್ಲ. ಅಧಿಕಾರಕ್ಕೆ ಬಂದರೆ ಎಸಿಪಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರುಜೀವ ಕೊಡುತ್ತೇವೆ ಎಂದೇಳಿದ್ದ ಯಡಿಯೂರಪ್ಪನವರು ಇದೀಗ ಜಾಣಮೌನ ವಹಿಸಿದ್ದಾರೆ. ಪಕ್ಷ ಬೇರೆಬೇರೆಯಾದರು ಇವರೆಲ್ಲರೂ ಅಣ್ಣತಮ್ಮಗಳು. ಲೋಕಾಯುಕ್ತವನ್ನು ಬಲಪಡಿಸಿದರೆ ನಮ್ಮ ಕೊರಳಿಗೆ ಉರುಳು ಎಂಬುದು ಇವರೆಲ್ಲರ ಅವ್ಯಕ್ತಭಯ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ಎಸ್ಪಿ ಮಧುಕರ ಶೆಟ್ಟಿಯವರು ಜೊತೆಗೂಡಿ ಅನೇಕ ರಾಜಕಾರಣಿಗಳ ಹೆಡೆಮುರಿಕಟ್ಟಿದ್ದು ನಿಮಗೆಲ್ಲ ನೆನಪಿದೆ ತಾನೇ? ಹೀಗಾಗಿ ಲೋಕಾಯುಕ್ತ ಸಂಸ್ಥೆ ಇಂದು ಯಾರಿಗೂ ಬೇಡವಾಗಿ ಅಸ್ಪೃಶ್ಯವಾಗಿದೆ.

ಹಾಗಾದರೆ ಈ ವ್ಯವಸ್ಥೆಯಲ್ಲಿ ಒಳ್ಳೆಯವರೇ ಇಲ್ಲವೇ? ಎಂದು ವಾದಕ್ಕೆ ಬರಬೇಡಿ. ಖಂಡಿತ ಇಂತಹ ಭ್ರಷ್ಟ ವ್ಯವಸ್ಥೆಯ ಮಧ್ಯೆಯೂ ಪ್ರಾಮಾಣಿಕರು ಬಹಳಷ್ಟು ಜನರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ವೀರೇಂದ್ರ ಪಾಟೀಲ್,ನಜೀರ್ ಸಾಬ್, ಕೆ ಆರ್ ಪೇಟೆ ಕೃಷ್ಣ, ಗೋವಿಂದೇಗೌಡ, ವೈ.ಕೆ. ರಾಮಯ್ಯ, ದತ್ತ, ವಿಶ್ವೇಶ್ವರ ಹೆಗಡೆ ಕಾಗೇರಿಯವರಂತಹ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ ಅಧಿಕಾರಿ ವರ್ಗದಲ್ಲೂ ಕೂಡ. ಇವರೆಲ್ಲರ ಪ್ರಾಮಾಣಿಕ ವೃತ್ತಿಪರತೆಯನ್ನು ಗೌರವಿಸುವುದೇ ಈ ಲೇಖನದ ಉದ್ದೇಶ. ಕತ್ತಲ ಕೂಪದಲ್ಲಿದ್ದು ಬಂದಾಗಲೇ ಬೆಳಕಿನ ಮಹತ್ವ ಅರಿವಾಗುವುದು. ಹಾಗೆಯೇ ಭ್ರಷ್ಟಾಚಾರಿಗಳ ಬಗ್ಗೆ ಚರ್ಚಿಸಿದಾಗಲೇ ಒಳ್ಳೆಯವರ ವಿಶೇಷತೆ ಎದ್ದುಕಾಣುವುದು. ಎಲ್ಲಾ ಪ್ರಾಮಾಣಿಕರು ಸದಾ ಮಿನುಗುವ ಧ್ರುವತಾರೆಗಳಿದ್ದಂತೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಭ್ರಷ್ಟಾಚಾರಿಗಳು ಕುಖ್ಯಾತಿಯಿಂದ ದಾಖಲಾಗಿದ್ದರೆ, ಪ್ರಾಮಾಣಿಕರು ವಿಖ್ಯಾತಿಯಿಂದ ದಾಖಲಾಗಿರುವುದನ್ನು ಕಾಣಬಹುದು.ಅಂತಹ ಎಲ್ಲಾ ಪ್ರಾಮಾಣಿಕರಿಗೆ ಈ ಲೇಖನ ಸಮರ್ಪಣೆ.

ಇಲ್ಲಿ ಉಲ್ಲೇಖಿಸಿರುವ ಎಲ್ಲಾ ರಾಜಕಾರಣಿಗಳು ಹಾಗೂ ಅಧಿಕಾರಿವರ್ಗ ಈಗಿನ ಸರಕಾರದ್ದು ಮಾತ್ರವೆಂದು ಯಾರು ಭಾವಿಸಬೇಡಿ. ಸ್ವಾತಂತ್ರ್ಯಾನಂತರದ 3-4 ಸರ್ಕಾರಗಳನ್ನು ಬಿಟ್ಟರೆ ಉಳಿದೆಲ್ಲಾ ಸರ್ಕಾರಗಳ ಹಣೆಬರಹ ಇದೇ ಆಗಿದೆ. ಹಾಗಾಗಿ ಇದು ಈಗಿನ ಸರ್ಕಾರಕ್ಕೆ ಮಾತ್ರ ಅನ್ವಯಿಸುತ್ತದೆ, ನಮಗಲ್ಲವೆಂದು ಯಾರೂ ಖುಷಿಗೊಳ್ಳುವಂತಿಲ್ಲ. ನಿಮ್ಮ ನಿಮ್ಮ ಅಧಿಕಾರವಧಿಯಲ್ಲಿ ನೀವು ಮಾಡಿದ್ದೆಲ್ಲವನ್ನೂ ಎದೆ ಮುಟ್ಟಿ ನೋಡಿಕೊಳ್ಳಿ, ನಿಮಗೆ ತಿಳಿಯುತ್ತದೆ.

ಸರ್ಕಾರದ ಕೆಲಸ ದೇವರ ಕೆಲಸ. ಹಾಗಾದರೆ ಮೇಲೆ ಉಲ್ಲೇಖಿಸಿರುವ ಎಲ್ಲವೂ ದೇವರ ಕೆಲಸವೇ? ಇಂತಹ ಕೆಲಸ ಮಾಡಲು ದೇವರು ಹೇಳಿದ್ದಾನೆಯೇ? ಇದನ್ನು ದೇವರು ಮೆಚ್ಚುತ್ತಾನೆಯೇ? ತಿರುಪತಿ, ಧರ್ಮಸ್ಥಳ, ಶೃಂಗೇರಿ, ಚಾಮುಂಡೇಶ್ವರಿ, ತಮಿಳುನಾಡು ಹಾಗೂ ಕೇರಳದ ದೇವಸ್ಥಾನಗಳು, ವೈಷ್ಣೋದೇವಿ ಯಾತ್ರೆಗಳನ್ನು ಮಾಡಿ ಬಂದು ನಿಮ್ಮ ದೈವತ್ವವನ್ನು ತೋರಬೇಕಿಲ್ಲ. ನಿಮ್ಮ ದೈವತ್ವ ತೋರಬೇಕಾಗಿರುವುದು ಪ್ರಮಾಣಿಕ ಆಡಳಿತದಲ್ಲಿ, ಪ್ರಭುತ್ವದೆಡಗಿನ ತುಡಿತದಲ್ಲಿ. ಇಡೀ ಆಡಳಿತವರ್ಗ ಇಂತಹ ನಿಜವಾದ ದೈವತ್ವದ ಕಡೆಗೆ ಸಾಗಲಿ.

ಮತ್ತೊಂದು ವಿಚಾರ. ದಯವಿಟ್ಟು ದೈವತ್ವವನ್ನು ಯಾರೂ ಅಣಕಿಸಬೇಡಿ. ಅದೊಂದು ಪರಿಶುದ್ಧ ಭಾವ. ಕೋಟ್ಯಾನುಕೋಟಿ ಜನರ ನಂಬಿಕೆಯ ಜೀವ. ಹನುಮಜಯಂತಿಯ ದಿನ ಮಾಂಸಾಹಾರ ಸೇವಿಸುತ್ತಾ, ಅದನ್ನು ಪ್ರಶ್ನಿಸಿದವರನ್ನು ಹನುಮನ ಜನ್ಮದಿನಾಂಕ ನಿನಗೆ ಗೊತ್ತೆ? ಎಂದು ಕೇಳುವ, ರಾಮ ಯಾವ ಯೂನಿವರ್ಸಿಟಿಯಲ್ಲಿ ಪದವಿ ಪಡೆದ? ಎಂಬ ಧಾಷ್ಟ್ರ ತೋರುವ ಗೊಡ್ಡು ರಾಜಕಾರಣಿಗಳ ಪರಂಪರೆ ಈ ನಾಡಿನಲ್ಲಿ ಬೆಳೆಯುವುದು ಬೇಡ. ಜನರ ನಂಬಿಕೆಗಳನ್ನು ಘಾಸಿಗೊಳಿಸಲು ಯಾರೂ ಪ್ರಯತ್ನಿಸಬೇಡಿ. ಸಾಧ್ಯವಾದರೆ ಒಳ್ಳೆಯ ಆಡಳಿತ ನೀಡಲು ಪ್ರಯತ್ನಿಸಿ, ಇಲ್ಲದಿದ್ದರೆ ನಿಮ್ಮ ಪಾಡಿಗೆ ತೆಪ್ಪಗಿರಿ. ಬೇರೆಲ್ಲಾ ಅಧಿಕಪ್ರಸಂಗತನ ನಿಮಗೆ ಬೇಡ.

ಈಗಿನ ಸರ್ಕಾರ ನಡೆಸುವವರಲ್ಲಿ ನನ್ನದೊಂದು ವಿನಮ್ರ ಮನವಿ. ನಿಮ್ಮಲ್ಲಿ ಬಹಳಷ್ಟು ಜನ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರು.ಆರೆಸ್ಸೆಸ್ ಎಂದರೆ ದೇಶಭಕ್ತಿಗೆ, ನಿಸ್ವಾರ್ಥಸೇವೆಗೆ ಇನ್ನೊಂದು ಹೆಸರು. ಆದರೆ ನೀವು ಅಧಿಕಾರಕ್ಕೆ ಬಂದಾಗಲೆಲ್ಲಾ ಇತರೆ ಪಕ್ಷಗಳ ಸರ್ಕಾರಗಳಂತೆಯೇ ಹಗರಣಗಳ ಘಾಟು ಅಮರಿಕೊಳ್ಳುತ್ತದೆ ಯಾಕೆ? ಅಪ್ರತಿಮ ದೇಶಪ್ರೇಮ, ನಿಸ್ವಾರ್ಥ ಸಮಾಜಸೇವೆ ನಿಮ್ಮಿಂದ ಸಾಧ್ಯವಿಲ್ಲವೇ? ಮಾಮೂಲಿ ರಾಜಕಾರಣದ ಹೊರತಾದ ಪರಿಶುದ್ಧ ರಾಜಕಾರಣ ಮಾಡಲು ನಿಮಗೆ ಬರುವುದಿಲ್ಲವೇ? ರಾಮರಾಜ್ಯದ ಕನಸನ್ನು ನನಸಾಗಿಸಲು ನೀವೇಕೆ ಪ್ರಯತ್ನಿಸುತ್ತಿಲ್ಲ? ಶುದ್ಧ ಚಾರಿತ್ರದ, ಪರಿಶುದ್ಧ ಆಡಳಿತದ ಕಲ್ಪನೆಯನ್ನು ಸಾಕಾರಗೊಳಿಸಿ, ಇಡೀ ದೇಶದಲ್ಲಿಯೇ ವಿಭಿನ್ನ ಸರ್ಕಾರವೊಂದನ್ನು ಜನತೆಗೆ ನೀಡಲು ನಿಮಗೆ ಇಚ್ಚಾಶಕ್ತಿ ಇಲ್ಲವೇ? ಈ ಬಗ್ಗೆ ನೀವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಿ. ಇಡೀ ರಾಜ್ಯದ ಜನತೆ ನಿಮ್ಮಿಂದ ಬಯಸುವುದು ಅಂತಹ ಆಡಳಿತವನ್ನು. ಇದು ನಿಮ್ಮಿಂದ ಸಾಧ್ಯವೇ? ಈಗಿನ ಸರ್ಕಾರದ ಮುಖ್ಯಮಂತ್ರಿಗಳು, ಎಲ್ಲಾ ಮಂತ್ರಿಗಳು ಹಾಗೂ ಶಾಸಕರುಗಳು ಇದಕ್ಕೆ ಉತ್ತರಿಸಬೇಕು. ನಿಮ್ಮೆಲ್ಲರಿಂದ ಉತ್ತರ ನಿರೀಕ್ಷಿಸೋಣವೇ?


ಲೇಖನ: ಮಣ್ಣೆ ಮೋಹನ್
ಫೋನ್: 6360507617
email: [email protected]

ಜಿಲ್ಲೆ

ರಾಜ್ಯ

error: Content is protected !!