Friday, July 26, 2024

ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ:ಹೈಕೋರ್ಟ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ. ಎಂದು ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಕೊಪ್ಪಳದ ಕುಷ್ಟಗಿಯ ವಿಜಯಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.:

ಚೆಕ್‌ಬೌನ್ಸ್ ಪ್ರಕರಣದಲ್ಲಿ ಸಾಲ ಪಡೆದ ಮೊತ್ತದ ಪೈಕಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ತಮಗೆ ಸೂಚಿಸಿ ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಚೆಕ್ ಬೌನ್ಸ್ ಪ್ರಕರಣದಲ್ಲಿ ಸಾಲ ನೀಡಿದ್ದ ದೂರುದಾರರಿಗೆ ಮಧ್ಯಂತರ ಪರಿಹಾರ ಪಾವತಿಸುವಂತೆ ಸಾಲ ಪಡೆದಿದ್ದ ಆರೋಪಿಗೆ ಆದೇಶಿಸುವ ವಿವೇಚನಾಧಿಕಾರವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊಂದಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದು ವೇಳೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಆರೋಪಿ ವಿಜಯಾ, ತಾನು ದೋಷಿಯಾಗಿ ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಯನ್ನು ಸಾಲ ಮರು ಪಾವತಿಗೆ ಹೊಣೆಗಾರರನ್ನಾಗಿ ಮಾಡಿಲ್ಲ. ಹೀಗಿದ್ದರೂ ದೂರುದಾರ ಶೇಖರಪ್ಪ ಅವರಿಂದ ಪಡೆದ ಎರಡು ಕೋಟಿ. ಸಾಲದಲ್ಲಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಮಾಡಬೇಕು ಎಂದು ವಿಜಯಾಗೆ ಯಲಬುರ್ಗಾ ಜೆಎಂಎಫ್‌ಸಿ ಕೋರ್ಟ್ ಆದೇಶಿಸಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಸೂಚಿಸಲು ಸಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ. ಆದ್ದರಿಂದ ಈ ಆದೇಶ ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಂತೆಯೇ ಯಲಬುರ್ಗಾ ಜೆಎಂಎಫ್‌ಸಿ ಕೋರ್ಟ್ ಆದೇಶದ ಮೇರೆಗೆ ದೂರುದಾರ ಶೇಖರಪ್ಪ ಅವರಿಗೆ 40 ಲಕ್ಷ ರೂ. ಅನ್ನು ಮಧ್ಯಂತರ ಪರಿಹಾರವಾಗಿ ಪಾವತಿಸದ್ದಕ್ಕೆ ಆರೋಪಿ ವಿಜಯಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಆಸ್ತಿ ಹರಾಜಿಗೆ ಕೊಪ್ಪಳ ಮುನ್ಸಿಪಲ್ ಆಯುಕ್ತರು 2022ರ ಜ.10ರಂದು ಹೊರಡಿಸಿದ ಸಾರ್ವಜನಿಕ ಪ್ರಕಟಣೆಯನ್ನು ಸಹ ಏಕಸದಸ್ಯಪೀಠ ರದ್ದುಪಡಿಸಿತು.

ಇನ್ನೂ ಜೆಂಎಫ್‌ಸಿ ಕೋರ್ಟ್ ಆದೇಶ ಪ್ರಶ್ನಿಸಿ ವಿಜಯಾ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯನ್ನು ತ್ವರಿತವಾಗಿ ನಡೆಸುವಂತೆ ಕೊಪ್ಪಳ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ಇದೇ ವೇಳೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ವಿಜಯಾ 2020ರಲ್ಲಿ ವ್ಯಾಪಾರ ನಡೆಸುವುದಕ್ಕಾಗಿ ಶೇಖರಪ್ಪ ಅವರಿಂದ ಎರಡು ಕೋಟಿ ನಗದನ್ನು ಸಾಲವಾಗಿ ಪಡೆದಿದ್ದರು. ಸಾಲವನ್ನು ಒಂದು ತಿಂಗಳು ಅಥವಾ 2021ರ ಜ.11ರೊಳಗೆ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಭದ್ರತಾ ಖಾತರಿಯಾಗಿ ಎರಡು ಚೆಕ್ ನೀಡಿದ್ದರು. ಆದರೆ, ಜ.11ರ ನಂತರ ಶೇಖರಪ್ಪ, ವಿಜಯಾ ಅವರು ನೀಡಿದ್ದ ಎರಡು ಚೆಕ್ ಅನ್ನು ಬ್ಯಾಂಕ್‌ಗೆ ನೀಡಿದಾಗ, ಅದು ಬೌನ್ಸ್ ಆಗಿತ್ತು. ಇದರಿಂದ ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿತ್ತು. ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಲಯವು ಸಾಲದ ಹಣದ ಪೈಕಿ ಶೇ.20ರಷ್ಟು ಅಂದರೆ 40ಲಕ್ಷ ರು. ಅನ್ನು ಮಧ್ಯಂತರ ಪರಿಹಾರವಾಗಿ ಪಾವತಿಸುವಂತೆ ವಿಜಯಾಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಜಯಾ ಹೈಕೋರ್ಟ್ ಮೊರೆ ಹೋಗಿದ್ದರು.

ಜಿಲ್ಲೆ

ರಾಜ್ಯ

error: Content is protected !!