Thursday, July 25, 2024

ರಾಜ್ಯಮಟ್ಟದ ೯ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಮಣ್ಣೆ ಮೋಹನ್ ವಿರಚಿತ ‘ಆತ್ಮಾರ್ಪಣಾ’ ಕೃತಿ ಬಿಡುಗಡೆ

*ರಾಜ್ಯಮಟ್ಟದ ೯ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಮಣ್ಣೆ ಮೋಹನ್ ವಿರಚಿತ ‘ಆತ್ಮಾರ್ಪಣಾ’ ಕೃತಿ ಬಿಡುಗಡೆ*

ಶಿರಸಿ: ರಾಜ್ಯಮಟ್ಟದ ೯ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಮತ್ತು ಪತ್ರಕರ್ತ ಮಣ್ಣೆ ಮೋಹನ್ ವಿರಚಿತ ‘ಆತ್ಮಾರ್ಪಣಾ’ ಕೃತಿ ಲೋಕಾರ್ಪಣೆಗೊಂಡಿತು. ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೃತಿಯನ್ನು ಬಿಡುಗಡೆಗೊಳಿಸಿದರು. ಡಾ. ಬಸವರಮಾನಂದ ಮಹಾಸ್ವಾಮಿಗಳು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಲೇಖಕ ಮತ್ತು ಪತ್ರಕರ್ತ ಮಣ್ಣೆ ಮೋಹನ್ ರವರು “ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಡಾ. ಬಸವರಮಾನಂದ ಮಹಾಸ್ವಾಮಿಗಳನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ಆಯ್ಕೆಮಾಡಿದ ಸಂದರ್ಭದಲ್ಲಿ, ಪತ್ರಿಕೆಯೊಂದರ ಸಂಪಾದಕರು ಅವರ ಬಗ್ಗೆ ಲೇಖನವೊಂದನ್ನು ಬರೆಯಲು ಸೂಚಿಸಿದರು. ಅದರಂತೆ ಅಧ್ಯಯನ ಆರಂಭಿಸಿದಾಗ ಸ್ವಾಮೀಜಿಯವರ ಕಾಯಕ ಜೀವನದ ಸಾಕ್ಷಾತ್ಕಾರವಾಯಿತು. ಒಂದು ಲೇಖನಕ್ಕೆಂದು ಆರಂಭಗೊಂಡ ಅವರ ಬಗೆಗಿನ ವಿವರಗಳು, 9 ಅಧ್ಯಾಯಗಳಷ್ಟು ವಿಸ್ತಾರವಾಗಿ ಪ್ರಕಟಗೊಂಡು,ಇದೀಗ ಕೃತಿ ರೂಪದಲ್ಲಿ ಹೊರಬಂದಿದೆ.

“12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆಯುತ್ತಿರುವ ಕೆಲವೇ ಕೆಲವು ಸ್ವಾಮೀಜಿಗಳಲ್ಲಿ ಡಾ. ಬಸವರಮಾನಂದ ಮಹಾಸ್ವಾಮಿಗಳು ಒಬ್ಬರಾಗಿದ್ದಾರೆ. ಕೇವಲ ಪಾದಪೂಜೆಗಷ್ಟೇ ಸೀಮಿತಗೊಳ್ಳದೆ, ತಾವೇ ಹೊಲದಲ್ಲಿ ಉತ್ತು ಬಿತ್ತು ವ್ಯವಸಾಯ ಮಾಡುತ್ತಾ,ಕಳೆ ಕೀಳುತ್ತಾ, ದನಕರುಗಳನ್ನು ಸಾಕುತ್ತಾ, ವೃದ್ಧಾಶ್ರಮ, ಅನಾಥಾಶ್ರಮ ನಡೆಸುತ್ತಾ,ಅನಾಥ ಮಕ್ಕಳ ತಲೆಗೂದಲನ್ನು ತಾವೇ ಕತ್ತರಿಸಿ, ಅವರಿಗೆ ಸ್ನಾನ ಮಾಡಿಸುವುದರ ಮೂಲಕ ನಿಜವಾದ ಅರ್ಥದಲ್ಲಿ ಕಾಯಕಜೀವಿಯಾಗಿ ಬದುಕುತ್ತಿದ್ದಾರೆ. ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನ.

“ಹಾಗೆಯೇ ಜ್ಞಾನಾರ್ಜನೆಯಲ್ಲಿಯೂ ಸ್ವಾಮೀಜಿ ಅವರದ್ದು ಎತ್ತಿದ ಕೈ. 6 ವಿಷಯಗಳಲ್ಲಿ ಎಂ ಎ ಪದವಿ ಪಡೆದು, ಎಂ.ಫಿಲ್ ಪಡೆದು, ಇದೀಗ ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ, ದೇಶದ ಎಲ್ಲ ರಾಜ್ಯಗಳಲ್ಲೂ ಹಾಗೂ ನಾಲ್ಕೈದು ವಿದೇಶಗಳಲ್ಲೂ ಪ್ರವಾಸ ಮಾಡಿ ಅನೇಕ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಗೊಂಡು, ಇದೀಗ ೯ನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ದಿನವೊಂದಕ್ಕೆ ಕೇವಲ 4 ತಾಸುಗಳಷ್ಟು ಮಾತ್ರ ನಿದ್ರಿಸಿ, ಉಳಿದಂತೆ ಸದಾ ಕ್ರಿಯಾಶೀಲ ವ್ಯಕ್ತಿತ್ವದ ಸ್ವಾಮೀಜಿಗಳದ್ದು ಅಗಾಧ ಪ್ರತಿಭೆ ಮತ್ತು ಅನಂತ ಕತೃತ್ವ ಶಕ್ತಿ” ಎಂದು ವಿಶ್ಲೇಷಿಸಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶಿರಸಿಯ ರುದ್ರದೇವರ ಮಠದ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿದ್ದ ಮಾಯಣ್ಣ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರೊ ಡಿ ಡಿ ಎಂ ದೇಸಾಯಿ, ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು, ಪ್ರೊ ಜಿ ಯು ನಾಯಕ್,ಗಣಪತಿ ಭಟ್ಟ ವರ್ಗಾಸರ,ಸಾಹಿತಿಗಳಾದ ಮಣ್ಣೆ ಮೋಹನ್ ಮಲ್ಲಿಕಾರ್ಜುನ ಮೈಲನಹಳ್ಳಿ, ಹರಳೂರು ಶಿವಕುಮಾರ್, ಡಾ. ಜಿ ಎ ಹೆಗಡೆ,ಮಹೇಶಕುಮಾರ ಹನಕೆರೆ, ಶ್ರೀಮತಿ ವಿಜಯ, ಪ್ರತಿಭಾ ನಾಯ್ಕ, ನಾಗವೇಣಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಚುಟುಕು ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸಾಧಕರಿಗೆ ‘ಚುಟಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವರದಿ: ಮಣ್ಣೆ ಮೋಹನ್

ಜಿಲ್ಲೆ

ರಾಜ್ಯ

error: Content is protected !!