Friday, April 19, 2024

“ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯದ ಪಾತ್ರ ಹಿರಿದಾದುದು”-ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ:”ನಾಡಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿಯವರನ್ನು ಕೊಟ್ಟದ್ದು ನಮ್ಮ ಉತ್ತರ ಕನ್ನಡ ಜಿಲ್ಲೆ. ತಮ್ಮ ಚುಟುಕು ಸಾಹಿತ್ಯದ ಮೂಲಕ ಅವರು ಪ್ರಖ್ಯಾತವಾಗಿದ್ದಾರೆ. ನಾಲ್ಕೇ ಸಾಲುಗಳ ಚುಟುಕುಗಳ ಮೂಲಕ ಅಗಾಧವಾದದ್ದನ್ನು ಹೇಳುವುದು ಚುಟುಕು ಸಾಹಿತ್ಯದ ವಿಶೇಷವಾಗಿದೆ. ಸಾಹಿತ್ಯ ಎಂದಿಗೂ ಶಾಶ್ವತವಾದುದು. ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯದ ಪಾತ್ರ ಹಿರಿದಾದುದು.ಕನ್ನಡ ಮತ್ತು ಸಂಸ್ಕೃತಿ ಸಚಿವರ ಜೊತೆ ಮಾತನಾಡಿ ಚುಟುಕು ಸಾಹಿತ್ಯ ಪರಿಷತ್ ಗೆ ಬೇಕಾದ ಅನುದಾನವನ್ನು ಕೊಡಿಸಲು ಶ್ರಮಿಸುವೆ” ಎಂದು ವಿಧಾನಸಭಾಧ್ಯಕ್ಷರಾದ  ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಶಿರಸಿಯ ರುದ್ರದೇವರ ಮಠದಲ್ಲಿ ನಡೆದ ೯ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಹಾಗೂ ಪತ್ರಕರ್ತ ಮಣ್ಣೆ ಮೋಹನ್ ವಿರಚಿತ ‘ಆತ್ಮಾರ್ಪಣಾ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು “ಇತ್ತೀಚೆಗೆ ವಿಧಾನಸಭಾ ಅಧಿವೇಶನವನ್ನು ನಾನು ನಿಭಾಯಿಸಿದ ರೀತಿಯನ್ನು ನೀವು ಪತ್ರಿಕೆಗಳಲ್ಲಿ ಓದಿರಬಹುದು. ಆ ಮೂಲಕ ಎಷ್ಟೋ ಚುಟುಕುಗಳಿಗೆ ನಾನೂ ಕೂಡ ಪಾತ್ರನಾಗಿರಬಹುದು” ಎಂದು ನಗೆ ಚಟಾಕಿ ಹಾರಿಸಿದರು.ಇದೇ ಸಂದರ್ಭದಲ್ಲಿ ಡಾ. ಬಸವ ರಮಾನಂದ ಮಹಾಸ್ವಾಮೀಜಿ ವಿರಚಿತ ‘ಚುಟುಕು ಸಿಂಧು’, ಹರಳೂರು ಶಿವಕುಮಾರ್ ವಿರಚಿತ ‘ನುಡಿ ಲಾವಣ್ಯ’, ಪ್ರೊ. ಜಿ ಯು ನಾಯಕ ವಿರಚಿತ ‘ಇಬ್ಬರು ಸ್ಮರಣೀಯರು’ ಕೃತಿಗಳನ್ನೂ ಲೋಕಾರ್ಪಣೆಗೊಳಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅಲಂಕರಿಸಿದ್ದ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಬಸವರಮಾನಂದ ಮಹಾಸ್ವಾಮೀಜಿ ಮಾತನಾಡಿ “ಸರ್ಕಾರದ ಅಧೀನದಲ್ಲಿರುವ ೬೩ ಕ್ಕೂ ಹೆಚ್ಚು ಇಲಾಖೆಗಳು ಕನ್ನಡ ಕಟ್ಟುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಬಹಳ ದೊಡ್ಡ ಕಾಣಿಕೆಯನ್ನು ನೀಡಬೇಕಾಗಿದೆ.ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ೩೩% ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ಮೂಲಕ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು, ಕನ್ನಡಿಗರನ್ನು ಸಂರಕ್ಷಿಸುವ ಕೆಲಸ ಆಗಬೇಕು. ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ನಮ್ಮ ನೆಲ ಜಲ ಭಾಷೆಗಾಗಿ ಹೋರಾಡಿದವರಿಗೆ ಗೌರವ ಸಲ್ಲಬೇಕು

“ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆಗೆ ಪ್ರಾಶಸ್ತ್ಯವನ್ನು ನೀಡಿ, ಕರ್ನಾಟಕದಲ್ಲಿ ಓದುವ ಪ್ರತಿಯೊಬ್ಬರು ಕನ್ನಡವನ್ನು ಕೇವಲ ಐಚ್ಛಿಕ ವಿಷಯವನ್ನಾಗಿ ಓದದೆ, ಪ್ರಥಮ ವಿಷಯವನ್ನಾಗಿ ತೆಗೆದುಕೊಳ್ಳಲೇಬೇಕು ಎಂಬ ನೀತಿಯನ್ನು ಜಾರಿಗೊಳಿಸಿದರೆ ಕನ್ನಡ ಭಾಷೆಯ ಬೆಳೆವಣಿಗೆ ಉತ್ಕೃಷ್ಟವಾಗಿರುತ್ತದೆ. ಕರ್ನಾಟಕದಲ್ಲಿರುವ ೨೭ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಮೂಲಕ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಕಾಣಿಕೆ ನೀಡಬೇಕಾಗಿದೆ. ಇತ್ತೀಚಿನ ಪ್ರಚಲಿತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಕವಿಗಳ ಕವನ ಸಂಕಲನಗಳನ್ನು, ಚುಟುಕುಗಳನ್ನು, ಕತೆ ಕಾದಂಬರಿಗಳನ್ನು ಪಠ್ಯಕ್ಕೆ ಅಳವಡಿಸಬೇಕು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವಂತಹ ಪಠ್ಯ ನಮಗೆ ಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೊಸ ಹೊಸ ಆಲೋಚನೆಗಳಿಗೆ ಸ್ಥಾನ ನೀಡಿರುವಂತೆ,ಅದಕ್ಕೆ ಪೂರಕ ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಮನುಷ್ಯ ಜೀವನಜನ್ಯವಾದ ವಿಚಾರಗಳು ಪಠ್ಯದಲ್ಲಿ ಬರಲಿ. ನಾವು ಪಡೆದಿರುವ ಶಿಕ್ಷಣವೇ ಬೇರೆ, ನಾವು ಕೆಲಸ ಮಾಡುವ ವಿಭಾಗವೇ ಬೇರೆ ಎಂಬಂತಾಗಬಾರದು. ಶಿಕ್ಷಣಕ್ಕೆ ಸಂಬಂಧಿಸಿದ ವೃತ್ತಿಯೇ ನಮ್ಮದಾದಾಗ ಮನುಷ್ಯನ ಸಾಧನೆ ಸಾಧ್ಯ.ಆ ಮೂಲಕ ಸಮಾಜದ ಏಳಿಗೆ ಸಾಧ್ಯ” ಎಂದು ನುಡಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶಿರಸಿಯ ರುದ್ರದೇವರ ಮಠದ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿದ್ದ ಮಾಯಣ್ಣ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರೊ ಡಿ ಡಿ ಎಂ ದೇಸಾಯಿ, ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು, ಪ್ರೊ ಜಿ ಯು ನಾಯಕ್,ಗಣಪತಿ ಭಟ್ಟ ವರ್ಗಾಸರ,ಸಾಹಿತಿಗಳಾದ ಮಣ್ಣೆ ಮೋಹನ್ ಮಲ್ಲಿಕಾರ್ಜುನ ಮೈಲನಹಳ್ಳಿ, ಹರಳೂರು ಶಿವಕುಮಾರ್, ಡಾ. ಜಿ ಎ ಹೆಗಡೆ,ಮಹೇಶಕುಮಾರ ಹನಕೆರೆ, ಶ್ರೀಮತಿ ವಿಜಯ, ಪ್ರತಿಭಾ ನಾಯ್ಕ, ನಾಗವೇಣಿ, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಚುಟುಕು ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸಾಧಕರಿಗೆ ‘ಚುಟಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವರದಿ: ಮಣ್ಣೆ ಮೋಹನ್

ಜಿಲ್ಲೆ

ರಾಜ್ಯ

error: Content is protected !!