Monday, April 15, 2024

ಗ್ರಾಮೀಣ ಪ್ರದೇಶಗಳಿಗೆ ರಂಗಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಗಿದೆ:ಮಂಗಳಾ ಮೆಟಗುಡ್ಡ

ಧಾರವಾಡ: ರಂಗಾಯಣವು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿರದೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೂ ರಂಗಭೂಮಿಯ ಚಟುವಟಿಕೆಗಳನ್ನು ವಿಸ್ತರಿಸಿದ ಕೀರ್ತಿ ರಂಗಾಯಣಕ್ಕೆ ಸಲ್ಲುತ್ತದೆ ಎಂದು ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಹೇಳಿದರು.

ಯುವಕರ ಚಿತ್ತ ರಂಗಭೂಮಿಯತ್ತ ನುಡಿಗಟ್ಟಿನೊಂದಿಗೆ ಮಾ.10 ರಿಂದ 17ರವರೆಗೆ ರಂಗಾಯಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಕಾಲೇಜು ಯುವ ರಂಗೋತ್ಸವದ ಏಳನೇ ದಿನದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ಧಾರವಾಡ ರಂಗಾಯಣವು ಹಲವಾರು ಕಾರ್ಯಚಟುವಟಿಕೆಗಳ ಮೂಲಕ ಜನಸಾಮಾನ್ಯರು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಅವರನ್ನು ರಂಗಭೂಮಿಯಲ್ಲಿ ತೊಡಗುವಂತೆ ಪ್ರೇರೆಪಿಸುತ್ತಿದೆ. ರಂಗಾಯಣವು ಉತ್ತಮ ಸಂದೇಶಗಳನ್ನು ಹೊಂದಿದ ಶ್ರೇಷ್ಠವಾದ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶನ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಇದೇ ರೀತಿ ರಂಗಾಯಣ ನೊಂದವರ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರಲಿ ಎಂದು ಶ್ಲಾಘಿಸಿದರು.

ಬೆಳಗಾವಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಮೋಹನಗೌಡ ಬಸವನಗೌಡ ಪಾಟೀಲ ಅವರು ಮಾತನಾಡಿ, ಧಾರವಾಡಕ್ಕೆ ಮಾತ್ರ ಸೀಮಿತವಾಗಿದ್ದ ರಂಗಾಯಣವನ್ನು ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೂ ಪರಿಚಯಿಸುವ ಕಾರ್ಯವನ್ನು ಇಂದು ಧಾರವಾಡ ರಂಗಾಯಣ ಮಾಡುತ್ತಿರುವುದು ಹೆಮ್ಮೆಯ ವಿಷಯ. ಧಾರವಾಡ ರಂಗಾಯಣವು ಹಲವಾರು ಉತ್ತಮ ರಂಗಚಟುವಟಿಕೆಗಳ ಮೂಲಕ ಕಲಾವಿದರನ್ನು ಸೆಳೆಯುತ್ತಿದೆ ಎಂದು ಹೇಳಿದರು.

ರಂಗಸಮಾಜದ ಸದಸ್ಯ ಪ್ರಭುದೇವ ಕಪ್ಪಗಲ್ಲು ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಂದ ರಂಗಭೂಮಿಯನ್ನು ಬೆಳೆಸುವ ಕಾರ್ಯವನ್ನು ಧಾರವಾಡ ರಂಗಾಯಣ ಮಾಡುತ್ತಿದೆ. ಈ ಕಾಲೇಜು ಯುವ ರಂಗೋತ್ಸವದಲ್ಲಿ ಕಲಾವಿದರಾಗಿ ಅಭಿನಯಿಸಿದ ವಿದ್ಯಾರ್ಥಿಗಳು ಮುಂದೆ ಉತ್ತಮ ಕಲಾವಿದರಾಗಿ ಬೆಳೆಯಬಹುದು. ಅಂತಹ ತರಬೇತಿಯನ್ನು ಧಾರವಾಡ ರಂಗಾಯಣ ವಿದ್ಯಾರ್ಥಿಗಳಿಗೆ ನೀಡಿದೆ. ಕಾಲೇಜುಗಳಲ್ಲಿ ಪ್ರಾಂಶುಪಾಲರು ರಂಗಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ಹಾಗೂ ಸಹಕಾರವನ್ನು ನೀಡಿ ವಿದ್ಯಾರ್ಥಿಗಳಲ್ಲಿರುವ ಕಲೆಗಳನ್ನು ಬೆಳೆಸಬೇಕು ಎಂದು ಹೇಳಿದರು.

ಈ ವೇಳೆ ಜಿ.ಶಿವೇಶ್ವರಗೌಡ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಏರ್ಪಡಿಸುವ ಸಾಂಸ್ಕøತಿಕ ಕಾರ್ಯಕ್ರಗಳಲ್ಲಿ ಮಕ್ಕಳಿಗೆ ಕಿರುನಾಟಕಗಳ ತರಬೇತಿಯನ್ನು ನೀಡಿ, ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಮಾಡಬೇಕು. ಕಲಾರಂಗದಿಂದ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಬೇಕು. ಈ ವರ್ಷ ಮಕ್ಕಳಿಗಾಗಿ ರಂಗತರಬೇತಿ ಶಿಬಿರವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಧಾರವಾಡ ರಂಗಾಯಣವು ಸುಮಾರು 150ಕ್ಕೂ ಹೆಚ್ಚು ಕಲಾವಿದರನ್ನು ಕಾಲೇಜು ಯುವ ರಂಗೋತ್ಸವದ ಮೂಲಕ ರಂಗಭೂಮಿಗೆ ಪರಿಚಯಿಸಿದೆ. ಐದು ಜಿಲ್ಲೆಗಳಲ್ಲಿ ಎಂಟು ಕಾಲೇಜುಗಳಿಂದ ವಿಭಿನ್ನ ಹಾಗೂ ಸಂದೇಶವನ್ನು ಸಾರುವ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ದಿನದಿಂದ ದಿನಕ್ಕೆ ಹೆಚ್ಚು ರಂಗಾಸಕ್ತರು ನಾಟಕಗಳ ವೀಕ್ಷಣೆಗೆ ಬರುತ್ತಿರುವುದು ಖುಷಿಯ ಸಂಗತಿ. ಇದೇ ರೀತಿ ರಂಗಾಯಣದ ಕಾರ್ಯಕ್ರಮಗಳಿಗೆ ಸಲಹೆ, ಸಹಕಾರಗಳನ್ನು ನೀಡಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಬಿ.ಪಿ ಮಠದ, ಪ್ರಾಧ್ಯಾಪಕರಾದ ರಾಜು ತಲ್ಲೂರ, ನಾಟಕ ಲೇಖಕ ಡಾ.ಶಶಿಧರ ನರೇಂದ್ರ ಅವರು ಉಪಸ್ಥಿತರಿದ್ದರು.

ಫಕ್ಕೀರಪ್ಪ ಮಾಧನಭಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ.ಶಶಿಧರ ನರೇಂದ್ರ ರಚಿಸಿ, ಬಸವರಾಜ ಗುಡ್ಡಪ್ಪನವರ ನಿರ್ದೇಶಿಸಿದ ಒಳಿತಲ್ಲ ನಿನ್ನ ಸಲಿಗೆ ನಾಟಕವನ್ನು ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಜಿಲ್ಲೆ

ರಾಜ್ಯ

error: Content is protected !!