Sunday, September 8, 2024

ನಾಳೆ ‘ಪವರ್​ಸ್ಟಾರ್’ ಪುನೀತ್ ನ ಕೊನೇ ಸಿನಿಮಾ! ಜೇಮ್ಸ್​ ಹಬ್ಬಕ್ಕೆ ಕ್ಷಣಗಣನೆ;

ಬೆಂಗಳೂರು: ‘ಪವರ್​ಸ್ಟಾರ್’ ಪುನೀತ್ ರಾಜಕುಮಾರ್ ಅವರ ಕೊನೇ ಸಿನಿಮಾ ‘ಜೇಮ್ಸ್’ ಆಗಮನಕ್ಕೆ ಇನ್ನೊಂದೇನ ದಿನ ಬಾಕಿ. ಇದೇ 17ರಂದು ಅಪ್ಪು ಬರ್ತ್​ಡೇ ಪ್ರಯುಕ್ತ ರಾಜ್ಯ, ದೇಶ ಮಾತ್ರವಲ್ಲ ವಿಶ್ವದಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಸಾವಿರಾರು ತೆರೆಗಳ ಮೇಲೆ ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಿಶ್ವಾದ್ಯಂತ 4 ಸಾವಿರ ಶೋಗಳು: ಸದ್ಯದ ಪ್ಲಾನ್ ಪ್ರಕಾರ ಪ್ರಪಂಚದಾದ್ಯಂತ ಒಟ್ಟು ನಾಲ್ಕು ಸಾವಿರ ಶೋಗಳು ‘ಜೇಮ್ಸ್’ಗೆ ಸಿಕ್ಕಿವೆ. ಪುನೀತ್ ಅವರ ಸಿನಿಮಾ ಕೆರಿಯರ್​ನಲ್ಲಿಯೇ ಅತ್ಯಧಿಕ ಶೋಗಳು ಈ ಚಿತ್ರಕ್ಕೆ ಸಿಕ್ಕಿರುವುದು ಮತ್ತೊಂದು ವಿಶೇಷತೆ. ಅಮೆರಿಕಾ, ಆಸ್ಟ್ರೇಲಿಯಾ, ಸಿಂಗಾಪುರ, ಮಲೇಷಿಯಾ, ಉಗಾಂಡ, ದುಬೈ, ಕತಾರ್, ರಷ್ಯಾ, ಶ್ರೀಲಂಕಾ ಹೀಗೆ ಇನ್ನೂ ಹಲವು ದೇಶಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಕರ್ನಾಟಕದಲ್ಲಿ ಬೆಳಗ್ಗೆ 6ರಿಂದಲೇ ಶೋ ಶುರು: ಪುನೀತ್ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇದ್ದಿದ್ದೇ. ಅದೇ ರೀತಿ ಜೇಮ್ಸ್’ ಮೇಲೆ ಅದೆಲ್ಲದಕ್ಕಿಂತ ದೊಡ್ಡ ಸೆಂಟಿಮೆಂಟ್ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ. ಈ ಹಿಂದಿನ ಸಿನಿಮಾಗಳಂತೆ ಈ ಸಲವೂ ಬೆಳಗ್ಗೆ 6ರಿಂದಲೇ ಜೇಮ್ಸ್’ ಮೊದಲ ಶೋ ಶುರುವಾಗಲಿದೆ. ಈಗಾಗಲೇ ಬೆಂಗಳೂರು, ಮೈಸೂರು ಸೇರಿ ಹಲವೆಡೆಗಳಲ್ಲಿ ಚಿತ್ರದ ಟಿಕೆಟ್ ಸಹ ಸೋಲ್ಡ್ ಔಟ್ ಆಗಿವೆ. ವಿಶೇಷ ಏನೆಂದರೆ ಮೈಸೂರಿನಲ್ಲಿ 5 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮತ್ತು ಮೂರು ಮಲ್ಟಿಫ್ಲೆಕ್ಸ್​ಗಳಲ್ಲಿ ಮೊದಲ ದಿನದ ಟಿಕೆಟ್​ಗಳು ಈಗಾಗಲೇ ಬಿಕರಿಯಾಗಿವೆ. ಮೈಸೂರಿನ ಇತಿಹಾಸದಲ್ಲಿಯೇ ಈ ರೀತಿ ಆಗಿದ್ದು ಇದೇ ಮೊದಲ ಬಾರಿಯಂತೆ.

ವೀರೇಶ್ ಚಿತ್ರಮಂದಿರ ಅಪ್ಪುಮಯ: ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರ ಅಕ್ಷರಶಃ ಅಪುಪಮಯವಾಗಿದೆ. ಅದಕ್ಕೆ ಕಾರಣ ಪುನೀತ್ ಕಟೌಟ್​ಗಳು. ಇದೇ ಮೊದಲ ಸಲ ಅಭಿಮಾನಿಗಳೆಲ್ಲ ಸೇರಿ ಪುನೀತ್ ನಾಯಕನಾಗಿ ನಟಿಸಿರುವ 31 ಸಿನಿಮಾಗಳ ಕಟೌಟ್​ಗಳನ್ನು ವೀರೇಶ್ ಚಿತ್ರಮಂದಿರದಲ್ಲಿ ಅಳವಡಿಸಲಾಗಿದೆ. ‘ಅಪ್ಪುʼ ಚಿತ್ರದಿಂದ ‘ಜೇಮ್ಸ್’ ಚಿತ್ರದ ಕಟೌಟ್​ಗಳನ್ನು ಕಾಣಬಹುದಾಗಿದೆ. ಕನ್ನಡ ಸಿನಿಮಾದ ಇತಿಹಾಸದಲ್ಲಿಯೇ ಇಂಥ ಪ್ರಯತ್ನ ಹಿಂದೆಂದೂ ಆಗಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡುವ ವೀರೇಶ್ ಚಿತ್ರಮಂದಿರದ ಮಾಲೀಕ, ಕೆ.ವಿ, ಚಂದ್ರಶೇಖರ್, ‘ಅಪುಪ ಅವರು ಇಲ್ಲ ಎಂಬ ನೋವನ್ನು ಅವರ ಅಭಿಮಾನಿಗಳು ಈ ರೀತಿಯಲ್ಲಿ ತೋರ್ಪಡಿಸುತ್ತಿದ್ದಾರೆ’ ಎಂದಿದ್ದಾರೆ.

ರಾಜ್ಯದಲ್ಲಿ ಜೇಮ್ಸ್​ಗೆ 400 ಚಿತ್ರಮಂದಿರ: ಕರ್ನಾಟಕದಲ್ಲಿ 600 ಪ್ಲಸ್ ಚಿತ್ರಮಂದಿರಗಳಿವೆ. ಆ ಪೈಕಿ 400ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಜೇಮ್ಸ್ ಚಿತ್ರ ತೆರೆಕಾಣಲಿದೆ. ಅಪ್ಪು ಕೊನೇ ಚಿತ್ರ ಎಂಬ ಕಾರಣಕ್ಕೆ ಬಹುಪಾಲು ಪ್ರದರ್ಶಕರು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ದಾಖಲೆ: ವಿದೇಶಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆ ಆಗುವುದು ಹೊಸತೇನಲ್ಲ. ಆದರೆ, ಜೇಮ್ಸ್ ಬೇರೆ ರೀತಿಯ ದಾಖಲೆಯೊಂದನ್ನೇ ಬರೆದಿದೆ. ವಿದೇಶಗಳಲ್ಲಿ ಕನ್ನಡದ ಸಿನಿಮಾಗಳಿಗೆ ಬೆರಳೆಣಿಕೆ ಶೋಗಳು ಮಾತ್ರ ಸಿಗುತ್ತಿದ್ದವು. ಇದೀಗ ಆಸ್ಟ್ರೇಲಿಯಾವೊಂದರಲ್ಲಿಯೇ ಮೊದಲ ಸಲ 150 ಸ್ಕ್ರಿನ್​ಗಳ ಮೇಲೆ ಅಪ್ಪು ಅಬ್ಬರಿಸಲಿದ್ದಾರೆ. ಅಮೆರಿಕಾದ 32 ರಾಜ್ಯಗಳ 72 ನಗರಗಳಲ್ಲಿ 175ಕ್ಕೂ ಅಧಿಕ ಶೋಗಳು ಜೇಮ್ಸ್​ಗೆ ಸಿಕ್ಕಿವೆ. ಈವರೆಗೂ ಕನ್ನಡ ಚಿತ್ರಗಳನ್ನು ಈ ದೇಶಗಳಲ್ಲಿ ಸೆನ್ಸಾರ್ ಮಾಡುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಕನ್ನಡದ ಜೇಮ್ಸ್’ ಸಿನಿಮಾಕ್ಕೆ ಮೊದಲ ಬಾರಿ ಸೆನ್ಸಾರ್ ಸಹ ಮಾಡಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!