Wednesday, May 22, 2024

“ಚುಟುಕು ಸಾಹಿತ್ಯದ ಸದೃಢತೆಗೆ ಚುಟುಕು ಸಾಹಿತ್ಯ ಪರಿಷತ್ತಿಗೂ ಅನುದಾನವನ್ನು ನೀಡಿ”ಡಾ.ಶ್ರೀ.ಬಸವರಮಾನಂದ ಮಹಾಸ್ವಾಮೀಜಿಗಳು

ಶಿರಸಿ : ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿಯವರ ಯೋಗಾಂಗ ತ್ರಿವಿಧಿಯಿಂದ ಇಲ್ಲಿಯವರೆಗೆ ಬಂದಿರುವ ಎಲ್ಲಾ ಸಾಹಿತ್ಯದಲ್ಲಿ ಚುಟುಕಿನ ಮನಸ್ಥಿತಿಯನ್ನು ನಾವು ಕಾಣಬಹುದು.ಇದಕ್ಕೆ ಪೂರ್ವದಲ್ಲಿ ಕಪ್ಪೆಅರಭಟ್ಟನ ಶಾಸನದಲ್ಲಿ ಕಂಡುಬರುವ ‘ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ಮಾಧವನೀತನ್‌ ಪೆರನಲ್ಲ’ ಎಂಬ ಚುಟುಕು ಎಂಬ ಕನ್ನಡದ ಮೊದಲ ಚುಟುಕು ಸಾಹಿತ್ಯ ಎನ್ನಿಸುತ್ತದೆ. ಅಗಾಧವಾದ ವಿಚಾರಗಳನ್ನು, ವಿಶಾಲವಾದಂತಹ ಕಥೆಗಳನ್ನ, ಸೀಮಾತೀತವಾದoತಹ ಕಾದಂಬರಿಗಳ ಸಾರ ತಿರುಳನ್ನು ನಾಲ್ಕು ಸಾಲಿನ ಮಿತಿಯೊಳಗೆ ಒಳಪಡಿಸುವಂತಹ ಒಂದು ಆಯಾಮ ಇದ್ದರೆ ಅದು ಚುಟುಕು ಸಾಹಿತ್ಯ. ಅನೇಕ ಕವಿಗಳು, ಅನೇಕ ಮಹಾನ್ ವಿದ್ವಾಂಸರು ಈ ಚುಟುಕು ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ” ಎಂದು ನೆಲಮಂಗಲ ತಾಲ್ಲೂಕು ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ಶ್ರೀ ಶ್ರೀ ಬಸವರಮಾನಂದ ಮಹಾ ಸ್ವಾಮೀಜಿಗಳು ತಿಳಿಸಿದ್ದಾರೆ. ಅವರು ಶಿರಸಿಯಲ್ಲಿ ನಡೆದ ೯ನೇ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

“ಚುಟುಕು ಸಾಹಿತ್ಯ ಪ್ರಕಾರವಾಗಿ ಕಂಡದ್ದು ಅಥವಾ ಗುರುತಿಸಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ, ಹಾಗೆ ನೋಡಿದರೆ ಚುಟುಕುಗಳ ಹೊಳಹು ಪ್ರಾಚೀನ ಸಾಹಿತ್ಯದಿಂದಲೂ ಕಾಣುತ್ತದೆ. ವಚನ ಸಾಹಿತ್ಯ, ಜಾನಪದ ತ್ರಿಪದಿ, ಸರ್ವಜ್ಞನ ವಚನ, ನವೋದಯ ಕಾಲದ ಕವಿಗಳ ಚೌಪದಿ ,ತ್ರಿಪದಿ, ತೀರ ಇತ್ತೀಚಿನ ಹನಿಗವನ- ಮಿನಿಗವನಗಳೆಲ್ಲ ಚುಟುಕು ಸಾಹಿತ್ಯವೇ ಆಗಿದೆ.ಕನ್ನಡ ಪ್ರಸಿದ್ಧ ಕವಿಗಳೆಲ್ಲ ಹನಿಗವನ ಬರೆದವರೇ. ಹಾಗೆಯೇ ಮುಕ್ತಕಗಳು, ರುಬಾಯಿ, ಶಾಯಿರಿ, ಗಜಲ್, ಹಾಯಿಕು, ಲಿಮರಿಕ್, ರೈಮ್ಸ್ ಗಳು ಇಂದು ಚುಟುಕುಗಳಲ್ಲಿ ಬೆರೆತು ಹೋಗಿವೆ. ಹೊಸಗನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ, ಸ್ತ್ರೀ ಸಂವೇದನೆ ಮತ್ತು ಇತ್ತೀಚಿನ ನವತಲೆಮಾರಿನ ಸಾಹಿತ್ಯವನ್ನು ಗಮನಿಸಿದಾಗ ಆಯಾ ಕಾಲಘಟ್ಟದಲ್ಲಿ ಚುಟುಕು ಎಲ್ಲರನ್ನ ಕುಟುಕಿ ಮೇಲೆ ಬಂದಿರುವುದನ್ನು ಕಾಣಬಹುದು.

“ತೀ.ನಂ ಶ್ರೀ, ಸಿ.ಪಿ.ಕೆಯವರ ಮುಕ್ತಕಗಳು, ಜಿ ಪಿ ರಾಜರತ್ನಂರವರ ನೂರು ಪುಟಾಣಿ ಕವನ ಸಂಕಲನ,ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಬೀಚಿಯವರ ಚುಟುಕುಗಳು, ಚುಟುಕು ಬ್ರಹ್ಮ ದಿನಕರ ದೇಸಾಯಿ, ಎಂ,ಅಕ್ಬರ್ ಆಲಿ, ಪರಮೇಶ್ವರ ಭಟ್ಟ, ಹನಿಗವನಗಳ ರಾಜ ದುಂಡಿರಾಜ, ವಿಡಂಬಾರಿ ಅರಾಸೆ,ಜರಗನಹಳ್ಳಿ ಶಿವಶಂಕರ್ – ಮೊದಲಾದವರು ಚುಟುಕು ಪ್ರಕಾರವನ್ನು ಗಟ್ಟಿಗೊಳಿಸಿದರು. ನೂರಕ್ಕೂ ಹೆಚ್ಚು ಜನಪ್ರಿಯ ಚುಟುಕು ಕವಿಗಳು ನಮ್ಮ ನಾಡಿನಲ್ಲಿದ್ದಾರೆ

“ಬಹಳ ಸಂದರ್ಭದಲ್ಲಿ ಚುಟುಕು ಸಾಹಿತ್ಯವನ್ನು ಮತ್ತು ಚುಟುಕು ಸಾಹಿತಿಗಳನ್ನ ಕನ್ನಡಸಾಹಿತ್ಯ ಗಂಭೀರವಾಗಿ ತೆಗೆದುಕೊಂಡಿಲ್ಲದಿರುವುದು ವಿಷಾದಕರ. ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವಂತೆಯೇ ಚುಟುಕು ಸಾಹಿತ್ಯ ಪರಿಷತ್ತಿಗೂ ಅನುದಾನವನ್ನು ನೀಡುವುದರ ಮೂಲಕ ಚುಟುಕು ಸಾಹಿತ್ಯವನ್ನು ಸದೃಢಗೊಳಿಸುವ, ಮಾನ್ಯಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ” ಎಂದು ಆಶಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೇಖಕ ಹಾಗೂ ಪತ್ರಕರ್ತ ಮಣ್ಣೆ ಮೋಹನ್ ವಿರಚಿತ ಆತ್ಮಾರ್ಪಣ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ “ನಾಡಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿಯವರನ್ನು ಕೊಟ್ಟದ್ದು ನಮ್ಮ ಉತ್ತರ ಕನ್ನಡ ಜಿಲ್ಲೆ. ತಮ್ಮ ಸಾಹಿತ್ಯದ ಮೂಲಕ ಅವರು ಪ್ರಖ್ಯಾತವಾಗಿದ್ದಾರೆ. ಸಾಹಿತ್ಯ ಎಂದಿಗೂ ಶಾಶ್ವತವಾದುದು. ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಾಹಿತ್ಯದ ಪಾತ್ರ ಹಿರಿದಾದುದು. ಚುಟುಕು ಸಾಹಿತ್ಯ ಪರಿಷತ್ ಗೆ ಬೇಕಾದ ಅನುದಾನವನ್ನು ಕೊಡಿಸಲು ನಾನು ಶ್ರಮಿಸುವೆ” ಎಂದು ಭರವಸೆ ನೀಡಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸಿರಸಿಯ ರುದ್ರದೇವರ ಮಠದ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾಗಿದ್ದ ಮಾಯಣ್ಣ, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರೊ ಡಿ ಡಿ ಎಂ ದೇಸಾಯಿ, ಕೃಷ್ಣಮೂರ್ತಿ ಕುಲಕರ್ಣಿ, ಚನ್ನಬಸಪ್ಪ ಧಾರವಾಡಶೆಟ್ರು, ಪ್ರೊ ಜಿ ಯು ನಾಯಕ್,ಗಣಪತಿ ಭಟ್ಟ ವರ್ಗಾಸರ,ಸಾಹಿತಿಗಳಾದ ಮಲ್ಲಿಕಾರ್ಜುನ ಮೈಲನಹಳ್ಳಿ, ಹರಳೂರು ಶಿವಕುಮಾರ್, ನಾಗವೇಣಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ, ಚುಟುಕು ಕವಿಗೋಷ್ಠಿ ಏರ್ಪಡಿಸಲಾಗಿತ್ತು.

ವರದಿ: ಮಣ್ಣೆ ಮೋಹನ್

ಜಿಲ್ಲೆ

ರಾಜ್ಯ

error: Content is protected !!