Friday, September 20, 2024

ಮುರಗೋಡ ಡಿಸಿಸಿ ಬ್ಯಾಂಕ್ ಲೂಟಿಕೊರರ ಬಂಧನ : ನಗದು ಆಭರಣ ಜಪ್ತಿ

ಯರಗಟ್ಟಿ: ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸವರಾಜ ಹುಣಶಿಕಟ್ಟಿ (30), ಯರಗಟ್ಟಿ ಗ್ರಾಮದ ಸಂತೋಷ ಕಂಬಾರ(31) ಹಾಗೂ ಸವದತ್ತಿ ತಾಲೂಕಿನ ಜೀವಾಪೂರ ಗ್ರಾಮದ ಗಿರೀಶ ಬೆಳವಲ(26) ಬಂಧಿತ ಆರೋಪಿಗಳು. ಬಂಧಿತರಿಂದ 4.37ಕೋಟಿ ನಗದು,1.63 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 6 ಕೋಟಿ ಮೌಲ್ಯದ ಸ್ವತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಂದೇ ವಾರದಲ್ಲಿ ಖದೀಮರು ಅರೆಸ್ಟ್​: ಮಾರ್ಚ್6ರಂದು ಮುರಗೋಡ ಡಿಸಿಸಿ ಬ್ಯಾಂಕ್​​​ನಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ಪ ಯಲಿಗಾರ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಒಂದೇ ವಾರದಲ್ಲಿ ಖದೀಮರನ್ನು ಬಂಧಿಸಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಕದ್ದ ಹಣ, ಒಡವೆ ಹೂತಿಟ್ಟಿದ್ದ ಭೂಪ: ಬಂಧಿತ ಆರೋಪಿ ಬಸವರಾಜ ಹುಣಶಿಕಟ್ಟಿ ಡಿಸಿಸಿ ಬ್ಯಾಂಕ್​ನಲ್ಲಿ ಕ್ಲರ್ಕ್ ಕಮ್​​ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ನಕಲಿ ಕೀ ಬಳಸಿ ಬ್ಯಾಂಕ್​ ಕಳ್ಳತನ ಮಾಡಿ 4.37ಕೋಟಿ ಹಣ,1.63ಕೋಟಿ ಮೌಲ್ಯದ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದನು. ಕದ್ದ ಹಣ, ಒಡವೆಗಳನ್ನು ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ತನ್ನ ಕಬ್ಬಿನ ಗದ್ದೆಯಲ್ಲಿ ಆರು ಅಡಿ ಆಳ ತೆಗೆದು ಹೂತಿಟ್ಟಿದ್ದನು.

ತನಿಖೆಯಲ್ಲಿ ಸತ್ಯ ಬಯಲು: ಇತ್ತ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಸಿಬ್ಬಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಲ್ಲದೇ ಕದ್ದು ಹೂತಿಟ್ಟಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಮಾಹಿತಿ ಮೇರೆಗೆ ಪೊಲೀಸರು ‌ಸ್ಥಳಕ್ಕೆ ತೆರಳಿ ಹಣವನ್ನು ಜಪ್ತಿ ಮಾಡಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

(ವರದಿ :ಈರಣ್ಣಾ ಹುಲ್ಲೂರ. ಯರಗಟ್ಟಿ)

ಜಿಲ್ಲೆ

ರಾಜ್ಯ

error: Content is protected !!