Thursday, July 25, 2024

ಉತ್ತಮ ಅಭ್ಯಾಸಗಳು ಸಾಧನೆಗೆ ಸಹಕಾರಿ –  ಚಂದ್ರಕಾಂತ ಗಡದೆ 

ಬೈಲಹೊಂಗಲ: ಉತ್ತಮ ಅಭ್ಯಾಸಗಳು ಸಾಧನೆಗೆ ಸಹಕಾರಿ ಎಂದು ಉಡಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಚಂದ್ರಕಾಂತ ಗಡದೆ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ನಿಶ್ಚಿತ ಗುರಿ ಹೊಂದಬೇಕು. ಅದನ್ನು ತಲುಪುವಾಗ ಏನಾದರೂ ಅಡ್ಡಿಯಾದರೆ ದಿಕ್ಕು ಬದಲಿಸಬೇಕೆ ಹೊರತು ಗುರಿ ಬದಲಿಸಬಾರದು ಎಂದು ಕಿವಿಮಾತು ಹೇಳಿದರು. ಹೈಸ್ಕೂಲ್ ಹಂತದಲ್ಲಿ ಮಕ್ಕಳು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದು‌ ಬದುಕಿನ ಬುನಾದಿಯನ್ನು ಭದ್ರಪಡಿಸಿಕೊಳ್ಳಲು ಸಲಹೆ ನೀಡಿದರು.

ಉದ್ಯಮಿಗಳಾದ ಸುನೀಲ ವೆರ್ಣೇಕರ ಮಾತನಾಡಿ ಜೀವನದಲ್ಲಿ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದರೆ ಮಾತ್ರ ಯಶಸ್ಸು ದೊರೆಯುತ್ತದೆ ಎಂದರು. ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ನಗದು ಪುರಸ್ಕಾರ ಹಾಗೂ ಟ್ರೋಫಿಗಳನ್ನು ನೀಡಿ ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಪರೀಕ್ಷೆಗಳನ್ನು ಹಬ್ಬವೆಂದು ಭಾವಿಸಿ ಆತ್ಮವಿಶ್ವಾಸದಿಂದ ಎದುರಿಸಿ ಸಂಭ್ರಮಿಸಬೇಕು ಎಂದು ಹೇಳಿದರು. ಸಮಯ ಸದುಪಯೋಗ ಮಾಡಿಕೊಂಡು ಯೋಜನಾಬದ್ಧ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಖಂಡಿತ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನ್ಯಾಯವಾದಿ ಹಾಗೂ ಕಲಾವಿದರಾದ ದುಂಡಪ್ಪ ಗರಗದ ಮಾತನಾಡಿ ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಶ್ರಮ ಪಟ್ಟು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದರು. ಬಸಯ್ಯ ನರೇಂದ್ರಮಠ ಮಾತನಾಡಿ ವಿದ್ಯಾರ್ಥಿಗಳು ಪಾಠಗಳನ್ನು ಸಾಕಷ್ಟು ಸಲ ಪುನರಾವರ್ತನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ‘ಸಿಂಚನ’ ಶಾಲಾ ಕೈ ಬರಹ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡ ಎನ್.ಆರ್.ಠಕ್ಕಾಯಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ದುಂಡಪ್ಪ ಗರಗದ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕರಾದ ಶಿವಾನಂದ ಬಳಿಗಾರ ಶಾಲೆಯ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು. ಪ್ರವೀಣ ಗುರುನಗೌಡರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಮೇಶ ಸೂರ್ಯವಂಶಿ, ನಿಂಗಪ್ಪ ಅಳಗೋಡಿ, ಮಹಾಂತೇಶ ಸೊಗಲದ, ಫಾತಿಮಾ ಬೆಟಗೇರಿ, ದೇವರಾಜ ಪಾಟೀಲ, ಶಿವಪ್ಪ ಚಿಕ್ಕೋಡಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಸೀಕಟ್ಟಿ, ಸುಮಿತ್ರಾ ಕುಲಕರ್ಣಿ, ಗಂಗವ್ವ ತಳವಾರ, ಗ್ರಾಮಸ್ಥರಾದ ದ್ಯಾಮಪ್ಪ ಜೋಗಿಗುಡ್ಡ, ಮಲ್ಲಪ್ಪ‌ ಹೊಂಗಲ, ಶಿಕ್ಷಕಿಯರಾದ ಹೇಮಲತಾ ಪುರಾಣಿಕ, ವಿದ್ಯಾರ್ಥಿಗಳು ಹಾಗೂ ಹಳೆಯ‌ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಜಗದೀಶ ನರಿ ಸ್ವಾಗತಿಸಿದರು. ಸುನೀಲ ಭಜಂತ್ರಿ ನಿರೂಪಿಸಿದರು. ಅರುಣ ಕತ್ತಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!