Monday, April 15, 2024

ಗೋಡ್ಸೆ ಆರಾಧಕನಿಗೆ 25 ಲಕ್ಷ ರೂ ನೀಡಿದ ಸರ್ಕಾರ; ”ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು?”…ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗಾಂಧಿಯ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ 25 ಲಕ್ಷ ರೂ. ನೀಡಿದ ಸರ್ಕಾರ, ದೇಶದ ಗಡಿ ಕಾಯುತ್ತಾ ಮೃತನಾದ ಯೋಧ ಅಲ್ತಾಫ್‌ಗೆ ಎಷ್ಟು ನೀಡಿದೆ? ದೇಶಭಕ್ತಿಯ ವ್ಯಾಖ್ಯಾನ ಬದಲಿಸಿದೆಯೇ ಬಿಜೆಪಿ ಸರ್ಕಾರ? ಗೋಡ್ಸೆ ಆರಾಧಕನಿಗೆ ಹಣ ನೀಡುವ ಮೂಲಕ ಗಾಂಧಿ ಹತ್ಯೆಯನ್ನು ಅನುಮೋದಿಸುತ್ತದೆಯೇ ಬಿಜೆಪಿ? ಸಿಎಂ ಉತ್ತರಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಿರುವುದರ ಹಿಂದೆ ಯಾವ ಅಜೆಂಡಾ ಅಡಗಿದೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ನೀಡಲಾಗಿದೆ? ರಾಜ್ಯದಲ್ಲಿ ವೈಯಕ್ತಿಕ ದ್ವೇಷಗಳಿಗೆ ಮೃತಪಟ್ಟವರಿಗೆ ಇದೇ ರೀತಿ ಪರಿಹಾರ ನೀಡುತ್ತದೆಯೇ ಈ ಸರ್ಕಾರ?’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಮೃತ ಹರ್ಷನ ಮೇಲೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು ಎಂಬ ವಿಷಯ ತಿಳಿದುಬಂದಿದೆ. 2020ರಲ್ಲಿ ಇವರದ್ದೇ ಸರ್ಕಾರ ಆತನನ್ನು ಜೈಲಿಗಟ್ಟಿತ್ತು, ಶಿವಮೊಗ್ಗದ ಉಸ್ತುವಾರಿ ಸಚಿವ ನಾರಾಯನಗೌಡರೇ ವೈಯುಕ್ತಿಕ ಕಾರಣಗಳಿಗೆ ನಡೆದ ಕೊಲೆ ಎಂದಿದ್ದಾರೆ. ಪೊಲೀಸರ ತನಿಖಾ ವರದಿಯೂ ಬಂದಿಲ್ಲ. ಹೀಗಿರುವಾಗ ಈ ಪರಿಹಾರ ಹಣ ಕೊಟ್ಟಿದ್ದು ಏಕೆ? ಹೇಗೆ? ಎಂದು ಪ್ರಶ್ನಿಸಿದ್ದಾರೆ. 

‘ನೆರೆ ಸಂತ್ರಸ್ತರಿಗೆ, ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸತಾಯಿಸುವ ಈ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಹಣ ನೀಡಿರುವುದು ಆಶ್ಚರ್ಯಕರ! ಇಂತಹ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಏಕಿಲ್ಲ? ಕೊಡಗಿನ ಯೋಧನ ಕುಟುಂಬಕ್ಕೆ ಏಕಿಲ್ಲ?’ ಎಂದು ಕಿಡಿಗಾರಿದ್ದಾರೆ.

‘ಅನಾರೋಗ್ಯ ಪೀಡಿತರಿಗೆ, ಬಡವರ ನೆರವಿಗೆ, ಯೋಧರ ಕುಟುಂಬಗಳಿಗೆ ಬಳಸಬಹುದಾದ ‘ವಿವೇಚನೆ’ಯನ್ನು ತಮ್ಮ ಪಕ್ಷದ ಕೆಡರ್ ಒಬ್ಬನಿಗೆ ಬಳಸಿದ್ದು ಮುಖ್ಯಮಂತ್ರಿಗಳ ಯೋಚನೆ, ವಿವೇಚನೆ ಎಂತದ್ದು ಎಂದು ತಿಳಿಸುತ್ತದೆ. ಬಿಜೆಪಿ ಪಕ್ಷದ ಮೂಲಕ 25 ಲಕ್ಷವಲ್ಲ 25 ಕೋಟಿಯಾದರೂ ಕೊಡಲಿ, ಆದರೆ ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದ್ದಾರೆ. 

 

ಜಿಲ್ಲೆ

ರಾಜ್ಯ

error: Content is protected !!