Saturday, July 27, 2024

ಕಾಂಗ್ರೆಸ್‌ನಲ್ಲಿ ಇದೀಗ ಲಿಂಗಾಯತ ನಾಯಕರಿಗೆ ಶುಕ್ರದೆಸೆ

 

ಬೆಂಗಳೂರು (ಅ.08):  ರಾಜ್ಯದಲ್ಲಿ ಉಪಸಮರದ ಬೆನ್ನಲ್ಲೇ ಲಿಂಗಾಯತ ನಾಯಕರೊಬ್ಬರಿಗೆ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನವೊಂದನ್ನು ನೀಡಬೇಕು ಎಂಬ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ಒತ್ತಡ ನಿರ್ಮಾಣವಾಗಿದ್ದು, ಇದಕ್ಕೆ ಹೈಕಮಾಂಡ್‌ ಕೂಡ ಬಹುತೇಕ ಒಪ್ಪಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲಿಂಗಾಯತ ಸಮುದಾಯದ ನಾಯಕ ಎನಿಸಿಕೊಡಿದ್ದ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಿಜೆಪಿ ಪಕ್ಷ ಕೆಳಗಿಳಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಇಂತಹದೊಂದು ಚಿಂತನೆ ಆರಂಭವಾಗಿತ್ತು.

ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಬೇಸರಗೊಳ್ಳಬಹುದಾದ ಸಮುದಾಯವನ್ನು ಕಾಂಗ್ರೆಸ್‌ನತ್ತ ಸೆಳೆಯಲು ಇದು ಒಳ್ಳೆಯ ಅವಕಾಶ ಎಂದೇ ಕಾಂಗ್ರೆಸ್ಸಿಗರು ನಂಬಿದ್ದರು. ಆದರೆ, ಯಡಿಯೂರಪ್ಪ ಅವರ ನಂತರ ಲಿಂಗಾಯತ ಸಮುದಾಯದವರೇ ಆದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಬಂದರು.

ಆದರೆ, ಇದೀಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಎರಡು ತಿಂಗಳಾಗುತ್ತ ಬಂದಿದ್ದರೂ ಸಮುದಾಯದಲ್ಲಿ ಅವರ ವರ್ಚಸ್ಸು ನಿರೀಕ್ಷೆಯಂತೆ ಬೆಳೆದಿಲ್ಲ. ಲಿಂಗಾಯತ ಸಮುದಾಯ ಅವರನ್ನು ತಮ್ಮ ಪ್ರಶ್ನಾತೀತ ನಾಯಕ ಎಂದು ಸ್ವೀಕರಿಸುವ ಲಕ್ಷಣ ಕಂಡುಬಂದಿಲ್ಲ ಎಂದೇ ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಹೀಗಾಗಿ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ ಸೆಳೆಯುವ ಸಾಧ್ಯತೆ ಇದೆ ಎಂದೇ ಈ ನಾಯಕರ ನಂಬಿಕೆ. ಹೀಗಾಗಿ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಮುಖ ಸ್ಥಾನ ನೀಡುವ ಮೂಲಕ ಆ ಸಮುದಾಯವನ್ನು ಸೆಳೆಯಬಹುದು ಎಂಬ ಚಿಂತನೆ ಹುಟ್ಟಿಕೊಂಡಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಲ್ಲಿ ಈಶ್ವರ್‌ ಖಂಡ್ರೆ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಹುದ್ದೆಯಲ್ಲಿ ಎಸ್‌.ಆರ್‌.ಪಾಟೀಲ್‌ ಅವರಂತಹ ಲಿಂಗಾಯತ ನಾಯಕರು ಇದ್ದರೂ ಸಹ ರಾಷ್ಟ್ರ ಮಟ್ಟದ ಪ್ರಮುಖ ಹುದ್ದೆ (ಉದಾಹರಣೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ಎಐಸಿಸಿಗೆ ಕಾರ್ಯಾಧ್ಯಕ್ಷ?) ಅಥವಾ ರಾಜ್ಯಮಟ್ಟದ ಪ್ರಮುಖ ಹುದ್ದೆ (ಪ್ರಚಾರ ಸಮಿತಿ ಅಧ್ಯಕ್ಷ ಅಥವಾ ಹೊಸದಾಗಿ ಸಮನ್ವಯ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷ) ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಸೋನಿಯಾಗಾಂಧಿ ಅವರೊಂದಿಗೆ ನಡೆಸಿದ ಚರ್ಚೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರಮುಖ ಹುದ್ದೆ ನೀಡುವ ವಿಚಾರವೂ ಚರ್ಚೆಯಾಗಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರಂತೆ ಲಿಂಗಾಯತ ಸಮುದಾಯವನ್ನು ಸೆಳೆಯುವ ಸಾಮರ್ಥ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲ. ಹೀಗಾಗಿ ಕಾಂಗ್ರೆಸ್‌ ಲಿಂಗಾಯತರನ್ನು ತನ್ನತ್ತ ಸೆಳೆಯುವ ಗಂಭೀರ ಪ್ರಯತ್ನ ನಡೆಸುವುದು ಉತ್ತಮ ಎಂದೇ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಲಹೆ ಸೋನಿಯಾ ಗಾಂಧಿ ಅವರಿಗೂ ಪಕ್ಷದ ಬೆಳವಣಿಗೆಗೆ ಒಳ್ಳೆಯದು ಎಂದೆನಿಸಿದೆ.

ಹೀಗಾಗಿ ಕಾಂಗ್ರೆಸ್‌ನ ಲಿಂಗಾಯತ ನಾಯಕರ ಪೈಕಿ ಎಂ.ಬಿ.ಪಾಟೀಲ್‌, ಈಶ್ವರ್‌ ಖಂಡ್ರೆ, ಶಿವಾನಂದ ಪಾಟೀಲ್‌, ಎಸ್‌.ಆರ್‌.ಪಾಟೀಲ್‌ ಒಬ್ಬರಿಗೆ ಅದೃಷ್ಟಒಲಿಯಲಿದೆ ಎಂದೇ ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿದೆ.

ಅಸಲಿ ಕಾರಣಗಳೇನು?

– ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಸಿದ್ದಕ್ಕೆ ಲಿಂಗಾಯತ ಸಮುದಾಯ ಅಸಮಾಧಾನ ಹೊಂದಿದೆ

– ಬೊಮ್ಮಾಯಿಗೆ ಸಿಎಂ ಸ್ಥಾನ ಕೊಟ್ಟರೂ, ಅವರಿನ್ನೂ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿಲ್ಲ

– ಹೀಗಾಗಿ
ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಸಮಾಧಾನಕೊಂಡ ಸಮುದಾಯದ ಓಲೈಕೆ.

ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವ ಸ್ಥಾನ ನೀಡಬಹುದು?

ರಾಷ್ಟ್ರಮಟ್ಟದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ಎಐಸಿಸಿ ಕಾರ್ಯಾಧ್ಯಕ್ಷ ಸ್ಥಾನ

ರಾಜ್ಯದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಅಥವಾ ಹೊಸದಾಗಿ ಸಮನ್ವಯ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷ ಸ್ಥಾನ ನೀಡಬಹುದು.

 

 

 

ಜಿಲ್ಲೆ

ರಾಜ್ಯ

error: Content is protected !!