Friday, July 26, 2024

ವಿಜ್ಞಾನದಲ್ಲಿ ಕ್ರಾಂತಿಯಾದಾಗ ಮಾತ್ರ ದೇಶದ ಪ್ರಗತಿ ಸಾದ್ಯ : ವಿಶ್ರಾಂತ ಕುಲಪತಿ ಮೂಲಿಮನಿ ಅಭಿಮತ

ಬೆಳಗಾವಿ:-ವಿಜ್ಞಾನ ಬೆಳೆಯಬೇಕೆಂದರೆ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಭಾರತದ ಸುಸ್ಥಿರ ಅಭಿವೃದ್ದಿ ಆಗಬೇಕಿದೆ., ಭಾರತ ಅಭಿವೃಧ್ಧಿ ಸಾಧಿಸಬೇಕಾದರೆ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು. ಆ ನಿಟ್ಟಿನಲ್ಲಿ ದೇಶದ ಯುವ ಜನಾಂಗ ಚಿಂತಿಸಬೇಕಿದೆ ಎಂದು ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು ಹಾಗೂ ಭೌತಶಾಸ್ತ್ರಜ್ಞ ಪ್ರೊ.ಬಿ ಜಿ ಮೂಲಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಗಣಿತ ವಿಜ್ಞಾನಗಳ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡಿದ ಅವರು ವಿಜ್ಞಾನ ಎಂಬುದು ಸತ್ಯದ ಅನ್ವೇಷನೆ. ಮನುಷ್ಯನಿಗೆ ಏನೇ ಮಾಡಬೇಕಾದರೂ ವೈಜ್ಞಾನಿಕ ತಳಹದಿ ಇರಬೇಕು. ಗುರಿ ಇರಬೇಕು. ಪ್ರಯತ್ನ, ಸ್ವಿಚ್ಛೆ, ಆತ್ಮ ನಿರ್ಭರತೆ ಇದ್ದರೆ ಮಾತ್ರ ಛಲದಿಂದ ಏನನ್ನಾದರೂ ಸಾಧಿಸಬಹುದು.

ನಮ್ಮ ದೇಶಕ್ಕೆ ರಾಮನ್ ಅವರಂತಹ ವಿಜ್ಞಾನಿಗಳು ಬೇಕಿದೆ. ಸಮಾಜದಲ್ಲಿ ವಿಜ್ಞಾನದ ಬಗ್ಗೆ ಚಿಂತಿಸಬೇಕಿದೆ. 21ನೇ ಶತಮಾನ ಜ್ಞಾನಕ್ಕೆ ಮೀಸಲಾಗಿದೆ. ಜ್ಞಾನವನ್ನು ಬಳಕೆ ಮಾಡುವ ಮನೋಜ್ಞಾನ ನಮ್ಮಲ್ಲಿರಬೇಕು. ಹಸಿರುಕ್ರಾಂತಿ, ಕ್ಷೀರಕ್ರಾಂತಿ,ಪರಿಸರ ಕ್ರಾಂತಿ, ಅಣ್ವಸ್ತ್ರಕ್ರಾಂತಿ, ಬಾಹ್ಯಾಕಾಶ ಕ್ರಾಂತಿ ಮುಂತಾದವುಗಳಿಂದ ನಮ್ಮ ದೇಶದ ಭವಿಷ್ಯವನ್ನು ಬದಲಿಸಿದ ಸಾರಾಬಾಯಿ, ಕುರಿಯನ್ನ, ಅಬ್ದುಲ್ ಕಲಾಂ, ಧವನ್ ನಮಗೆ ಮಾದರಿಯಾಗಿದ್ದಾರೆ. ಆದ್ದರಿಂದ ಆ ಕ್ರಾಂತಿಗಳ ಹಜ್ಜೆಗಳು ವಿಜ್ಞಾನದಲ್ಲಿ ಮುಂದುವರೆಯಲಿ. ಆ ನಿಟ್ಟಿನಲ್ಲಿ ವಿಜ್ಞಾನದಿನಾಚರಣೆ ಅವುಗಳನ್ನು ನೆನಪಿಸಲು ಆಚರಿಸಲಾಗುತ್ತದೆ. ವಿಜ್ಞಾನದಲ್ಲಿ ಸಾಹಿತ್ಯ ಬೇಕು ಹಾಗೆಯೇ ಸಾಹಿತ್ಯದಲ್ಲೂ ವಿಜ್ಞಾನಬೇಕು. ರಾಜ್ಯದ ಎಲ್ಲ ಕ.ಸಾ.ಪ.ಘಟಕಗಳಿಂದಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ  ಮಂಗಲಾ  ಮೆಟಗುಡ್ಡ ಅವರು ಮಾತನಾಡಿ ಇತೀಚೆಗೆ ಜನರಿಗೆ ಯಾವುದರಲ್ಲೂ ಆಸಕ್ತಿ ಉಳಿದಿಲ್ಲ. ಜ್ಞಾನವಿರುವ ವಿಜ್ಞಾನದತ್ತವಾಗಬೇಕಿದೆ. ವಿಜ್ಞಾನದ ಬಹುತೇಕ ವಿಷಯಗಳು ಜನಸಾಮಾನ್ಯರಿಗೆ ತಿಳಿಯಲು ಕನ್ನಡದಲ್ಲಿ ತರ್ಜುಮೆ ಆಗಬೇಕಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಕೆ.ಎಲ್.ಇ. ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ಎಚ್.ಬಿ.ರಾಜಶೇಖರ ಅವರು ಮಾತನಾಡಿ ಅಜ್ಞಾನ ಓಡಿಸಲು ವಿಜ್ಞಾನ ಬೇಕು. ವಿಜ್ಞಾನ ಬೆಳಗಿಸಲು ಸುಜ್ಞಾನಬೇಕು. ಆ ಮನಸ್ಥಿತಿಯ ವಿಜ್ಞಾನ ನಮಗೆ ಬೇಕಾಗಿದೆ. ವಿಜ್ಞಾನಿಗಳು ಸುಜ್ಞಾನಿಗಳಾಗದಿದ್ದರೆ ಏನೂ ಪ್ರಯೋಜನವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ರೊಟ್ಟಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ .ಅಶೋಕ ಮಳಗಲಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ ಬಸನಗೌಡ ಪಾಟೀಲ, ರಂಗಭೂಮಿ ಕಲಾವಿದರಾದ ಎಫ್.ವೈ.ತಳವಾರ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೋಹನ  ಪಾಟೀಲ ಪ್ರತಿ ಗ್ರಾಮದಲ್ಲಿ ವಿಜ್ಞಾನ ಪರಿಷತ್ತಿನಿಂದ ವಿಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಕ್ರೀಯಾಶೀಲ ಕಾರ್ಯಕ್ರಮಗಳು ಪರಿಷತ್ತಿನಿಂದ ಇದ್ದರೂ ಮಾರ್ಗದರ್ಶನದ ಕೊರತೆ ಇದೆ. ಅದಕ್ಕಾಗಿ ಎಲ್ಲರೂ ಸೇರಿ ಪರಿಷತ್ತನ್ನು ಗುರುತಿಸುವ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕ ಕ.ಸಾ.ಪ. ಅಧ್ಯಕ್ಷ ಸುರೇಶ ಹಂಜಿ, ಎನ್ ಬಿ ಕರವಿನಕೊಪ್ಪ, ಜಯಶ್ರೀ ನಿರಾಕಾರಿ, ಡಾ.ಎಸ್.ಬಿರಾದಾರ, ಎಸ್.ಜಿ.ಸಿದ್ನಾಳ, ಬಿ.ಎಂ.ಮತ್ತಿಕೊಪ್ಪ, ಎ.ಎಂ.ತೆಗ್ಗಿ, ಪ್ರೊ.ಎಸ್.ಬಿ.ಸೋಮಣ್ಣವರ, ರಾಜಶ್ರೀ ದೇಯನ್ನವರ, ಎ.ಬಿ.ಅಳ್ಳಿಗಿಡದ, ವಿನೋದ ಜಗಜಂಪಿ, ಎಫ್.ಬಿ.ಸೋಮಣ್ಣವರ, ಆಯ್.ಎಸ್.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಸಂಯೋಜಕ ಮತ್ತು ಗಣಿತ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ವೆಂಕಟೇಶ ಗಣಿತ ವಿಜ್ಞಾನಗಳ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು. ಪ್ರತಿಭಾ ಕಳ್ಳಿಮಠ ನಾಡಗೀತೆ ಪ್ರಸ್ತುತ ಪಡಿಸಿದರು. ಜಿಲ್ಲಾ ಕ.ಸಾ.ಪ.ಕಾರ್ಯದರ್ಶಿ ಶಿವಾನಂದ ತಲ್ಲೂರ ಸ್ವಾಗತಿಸಿದರು. ಎಂ.ಎಸ್.ಕೋಳಿ ವಂದಿಸಿದರು. ಜಿಲ್ಲಾ ಕಸಾ.ಪ.ಕಾರ್ಯದರ್ಶಿ ಎಮ್.ವೈ.ಮೆಣಸಿನಕಾಯಿ ಕಾರ್ಯಕ್ರಮವನ್ನು ನಿರ್ವಹಿಸಿದರು.

 ವರದಿ:ಆಕಾಶ್ ಅರವಿಂದ ಥಬಾಜ

ಜಿಲ್ಲೆ

ರಾಜ್ಯ

error: Content is protected !!