Tuesday, May 28, 2024

ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮೋದನೆ ಪಡೆಯಲು ವಿಶೇಷ ಯತ್ನ:ಸಿಎಂ

ಹುಬ್ಬಳ್ಳಿ: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮೋದನೆ ಪಡೆಯಲು ವಿಶೇಷ ಯತ್ನ ಕೈಗೊಂಡಿದ್ದು, ಈ ಸಂಬಂಧ ಅಧಿವೇಶನ ನಂತರ ದೆಹಲಿಗೆ ಹೋಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (ಇಂದು)ಭಾನುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಳಸಾ ಬಂಡೂರಿ ಯೋಜನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಯೋಜನೆಗೆ ಅನುಮೋದನೆ ವಿಚಾರ ಅಂತಿಮ ಘಟ್ಟದಲ್ಲಿದೆ. ಅಧಿವೇಶನ ಮುಗಿದ ನಂತರ ದೆಹಲಿಗೆ ತೆರಳಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಮಹದಾಯಿ ನ್ಯಾಯಾಧೀಕರಣದಿಂದ ಹಂಚಿಕೆಯಾದ ನಮ್ಮ ಪಾಲಿನ ನೀರು ಬಳಕೆಗೆ ಯಾವುದೇ ಅಡ್ಡಿಯಾಗದು. ನಮ್ಮ ಡಿಪಿಆರ್ ಮಾದರಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಮಹದಾಯಿ ನದಿ ನೀರು ಹಂಚಿಕೆ ಬಗ್ಗೆ ಮೂರು ರಾಜ್ಯಗಳ ವ್ಯಾಜ್ಯ ಸುಪ್ರೀಂಕೋರ್ಟ್ ನಲ್ಲಿದೆ. ಅದು ಕಳಸಾ ಬಂಡೂರಿಗೆ ಅಡ್ಡಿಯಾಗದು, ಮುಂದಿನ ತಿಂಗಳ ಅಂತ್ಯದ ವೇಳೆಗೆ ಅನುಮೋದನೆ ದೊರೆಯುವ ವಿಶ್ವಾಸವಿದೆ. ಯೋಜನೆಗೆ ಆಯವ್ಯಯದಲ್ಲಿ 1000 ಕೋಟಿ ರೂ ತೆಗೆದಿರಿಸಿರುವುದು ದೊಡ್ಡ ನೆಗೆತ ಎಂದರು.

ಮೇಕದಾಟು ಯೋಜನೆ ವಿವಾದ 1996 ರಿಂದ ಇದೆ 2012ರಲ್ಲಿ ನಾನೇ ಡಿಪಿಆರ್ ಬದಲು ಮಾಡಲು ಕ್ರಮ ಕೈಗೊಂಡಿದ್ದೆ, ಯೋಜನೆಗೆ ಕೇಂದ್ರದ ಅನುಮೋದನೆ ಅವಶ್ಯವಾಗಿದೆ. ಅನುಮೋದನೆ ವಿಶ್ವಾಸದಲ್ಲಿ ಆಯವ್ಯಯದಲ್ಲಿ 1000 ಕೋಟಿ ರೂ. ಇರಿಸಿದ್ದೇನೆ ವಿನಹ ಕಾಂಗ್ರೆಸ್ ಹೋರಾಟ ಕಾರಣಕ್ಕಾಗಿ ಅಲ್ಲ ಎಂದರು.

ಕೃಷ್ಣ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆ ಘೋಷಣೆ ಬೇಡಿಕೆ ಇದೆ. ಇದಕ್ಕೆ ಕೆಲವೊಂದು ಮಾನದಂಡಗಳಿದ್ದು, ತಾಂತ್ರಿಕ ವರದಿ ಸಿದ್ದಪಡಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದರು.ರಾಜ್ಯಾದ್ಯಂತ ಎಪಿಎಂಸಿ ಹಮಾಲರು, ಕೆಲಸಗಾರರಿಗೆ ವಸತಿ ಸೌಲಭ್ಯಕ್ಕೆ ಯೋಜನೆ ರೂಪಿಸಲಾಗುವುದು ಎಂದ ಸಿಎಂ ಹೇಳಿದರು.

ಜಿಲ್ಲೆ

ರಾಜ್ಯ

error: Content is protected !!