Saturday, July 27, 2024

ಎಲ್ಲಾ ಕಾರ್ಮಿಕರಿಗೆ ಉಚಿತ ತಪಾಸಣೆ: ಬೆಳಗಾವಿ ಡಿ.ಸಿ ಎಂ.ಜಿ.ಹಿರೇಮಠ

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಭಿತರಿಗರ ಆರೋಗ್ಯ ತಪಾಸಣಾ ಶಿಬಿರದ ಕುರಿತು ಜಾಗೃತಿ

ಬೆಳಗಾವಿ,ಮಾ.3: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣಾ ಮತ್ತು ತರಬೇತಿ ಶಿಬಿರದ ಕುರಿತು ಜಾಗೃತಿ ಮೂಡಿಸುವ ವಾಹನಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹಸಿರು ನಿಶಾನೆ ತೋರಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಗುರುವಾರ(ಮಾ.3) ಆಯೋಜಿಸಿದ ಜಾಗೃತಿ ವಾಹನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಆರೋಗ್ಯ ತಪಾಸಣಾ ಮತ್ತು ತರಬೇತಿ ಶಿಬಿರದ ಕುರಿತು ಜಾಗೃತಿ ಕಾರ್ಯಕ್ರಮವು ಇಡೀ ಜಿಲ್ಲೆಯಲ್ಲಿ ನಡೆಯಲಿದೆ. ಎಷ್ಟೋ ಕಾರ್ಮಿಕರು ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಅವರಿಗೆ ಕಾಯಿಲೆಗಳು ಬಂದಿರುವುದು ತಿಳಿದಿರುವುದಿಲ್ಲ. ಅಂತರಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರಿಗೆ ಉಚಿತವಾಗಿ ತಪಾಸಣೆ ಮಾಡಲಾಗುತ್ತದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ದರಿಂದ ಎಲ್ಲಾ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿಜಯ ದೆವರಾಜ ಅರಸು ಮಾತನಾಡಿ, ಕಟ್ಟಡ ಕಾರ್ಮಿಕರಾಗಲಿ ಅಥವಾ ಇತರೆ ಕಾರ್ಮಿಕರು ಮುಂಜಾನೆಯಿಂದ ಸಂಜೆಯವರೆಗೆ ಮಳೆ, ಚಳಿ, ಬಿಸಿಲು ಎನ್ನದೆ ಕೆಲಸ ಮಾಡುತ್ತಿರುತ್ತಾರೆ. ಆದರೆ ಅವರಿಗೆ ಯಾವುದೇ ಆರೋಗ್ಯ ತಪಾಸಣೆ ವ್ಯವಸ್ಥೆ ಇರುವುದಿಲ್ಲ. ಈ ದೃಷ್ಟಿಯಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಮತ್ತು ತರಬೇತಿ ಶಿಬಿರದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ಕಾರ್ಮಿಕರ ಆಯುಕ್ತರು ವೆಂಕಟೇಶ್ ಸಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತರು ಮಹಮ್ಮದ ಅನಸಾರಿ, ಕಾರ್ಮಿಕ ಅಧಿಕಾರಿಗಳಾದ ಮಹೇಶ ಕುಳಲಿ ಮತ್ತು ತರನ್ನುಂ ಬೆಂಗಾಲಿ, ಹಿರಿಯ ಕಾರ್ಮಿಕರ ನಿರೀಕ್ಷಕರಗಳಾದ ಅಡಿವೆಪ್ಪ ಗಡದವರ, ರಮೇಶ್ ಕೇಸೂರ, ಸಂಜೀವ್ ಬೋಸಲೆ ಮತ್ತು ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಚ್.ಎಲ್.ಎಲ್ ಸಿಬ್ಬಂದಿಗಳಾದ ಗಿರೀಶ ಮತ್ತು ಇತರರು ಇದ್ದರು.

ಆರೋಗ್ಯ ತಪಾಸಣಾ ಮತ್ತು ತರಬೇತಿ ಶಿಬಿರದ ಕುರಿತು ಜಾಗೃತಿ ವಾಹನ ಬೆಳಗಾವಿ ವ್ಯಾಪ್ತಿಯ ಕಾಗವಾಡ, ಚಿಕ್ಕೋಡಿ, ಅಥಣಿ, ಗೋಕಾಕ, ನಿಪ್ಪಾಣಿ ಮತ್ತು ಹುಕ್ಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿದೆ.

ಆರೋಗ್ಯ ತಪಾಸಣೆ ಪರೀಕ್ಷೆಗಳ ವಿವರ:

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವೈದ್ಯರ ಸಮಾಲೋಚನೆ-ಸಂಪೂರ್ಣ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ಆಡಿಯೋಮೆಟ್ರಿ ಸ್ಕ್ರೀನ್ ಟೆಸ್ಟ್, ದೃಷ್ಟಿ ತಪಾಸಣೆ ಪರೀಕ್ಷೆ, CBC ಪರೀಕ್ಷೆ, ESR ಪರೀಕ್ಷೆ, ಬ್ಲಡ್ ಸುಗರ್ ಪರೀಕ್ಷೆ, ಕಿಡ್ನಿ ಪರೀಕ್ಷೆ, ಮಲೇರಿಯಾ ಪ್ಯಾರಸೈಟ್ ಪರೀಕ್ಷೆ, ಮೂತ್ರ ಪರೀಕ್ಷೆ, ಲಿಪಿಡ್ ಪ್ರೋಫೈಲ್ ಪರೀಕ್ಷೆ, ಕೋವಿಡ್-19 RTPCR ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳನ್ನು ಫಲಿತಾಂಶವನ್ನು ಅವಲೋಕಿಸಿ ಆರೋಗ್ಯ ನಿರ್ವಹಣಾ ತರಬೇತಿಯನ್ನು ನಡೆಸಲಾಗುವುದು.

ಶಿಬಿರದಲ್ಲಿ ಭಾಗವಹಿಸಲು ಅರ್ಹತೆ:

ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವಲಂಬಿತರು ತಪಾಸಣೆ ಮತ್ತು ತರಭೇತಿ ಶಿಬಿರದಲ್ಲಿ ಭಾಗವಹಿಸಬಹುದು.

ಸಲ್ಲಿಸಬೇಕಾದ ದಾಖಲೆಗಳು:

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಲಾದ ನೋಂದಣಿ ಕಾರ್ಡ್, ಆಧಾರ ಕಾರ್ಡ್ ಮತ್ತು ಅವಲಂಬಿತರಿಗಾಗಿ ರೇಷನ್ ಕಾರ್ಡ್ ಪ್ರತಿಗಳನ್ನು ಈ ಶಿಬಿರದಲ್ಲಿ ಭಾಗವಹಿಸಲು ದಾಖಲೆಗಳನ್ನು ಸಲ್ಲಿಸಬೇಕು.

 

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರ ಸಹಾಯವಾಣಿ 155214(24/7), ಕಾರ್ಮಿಕರ ಅಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕರು/ ಕಾರ್ಮಿಕರ ನಿರೀಕ್ಷಿತಕರು, ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಬಹುದು.

ಜಿಲ್ಲೆ

ರಾಜ್ಯ

error: Content is protected !!