Thursday, July 25, 2024

ನವೀನ್ ಸಾವು -ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಚರ್ಚೆ.

ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ ಗೆ ಹೋಗಿರುವ ವಿದ್ಯಾರ್ಥಿಗಳಲ್ಲಿ ನವೀನ್ ಎಂಬ ಯುವಕ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಹತ್ಯೆಯಾಗಿರುವ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಶಿಕ್ಷಣದ ಬಗ್ಗೆ ಕೆಲವು ಚರ್ಚೆಗಳು ಪ್ರಾರಂಭವಾಗಿದೆ.

ಮುಖ್ಯವಾಗಿ ವೈದ್ಯಕೀಯ ಶಿಕ್ಷಣ ವೆಚ್ಚ ಮತ್ತು ಮೀಸಲಾತಿಯ ಸುತ್ತ ಇದು ಹೆಚ್ಚು ಕೇಂದ್ರೀಕೃತವಾಗಿದೆ.

ಕೇವಲ ಒಂದು ಆಕಸ್ಮಿಕ ಘಟನೆ ನಡೆದಿದೆ ಎಂಬ ಕಾರಣಕ್ಕಾಗಿ ಭಾವನಾತ್ಮಕವಾಗಿ ಆ ಘಟನೆಯ ಆಧಾರದ ಮೇಲೆ ದಿಢೀರನೆ ಏನೋ‌ ಸಂಕುಚಿತವಾಗಿ ಮನಬಂದಂತೆ ಮಾತನಾಡಬಾರದು. ಇದೊಂದು ಸ್ವಾಭಾವಿಕ ಮತ್ತು ದೀರ್ಘಕಾಲದ ನಡೆದು ಬರುತ್ತಿರುವ ಪ್ರಕ್ರಿಯೆ.

ಈ‌ ರೀತಿಯಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಶೈಕ್ಷಣಿಕ ಅಧ್ಯಯನವೂ ಸೇರಿದಂತೆ ಅನೇಕ ಕಾರಣಗಳಿಗಾಗಿ ಹೋಗುವುದು, ಅಲ್ಲೇ ನೆಲೆ ನಿಲ್ಲುವುದು ಅಥವಾ ಸ್ವಲ್ಪ ಸಮಯದ ನಂತರ ಹಿಂತಿರುಗುವುದು ಎಲ್ಲವೂ ಸಹಜ ಮತ್ತು ವಿಶ್ವದ ಎಲ್ಲಾ ದೇಶಗಳ ಅನೇಕ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಶತ ಶತಮಾನಗಳಿಂದ ಮಾಡುತ್ತಿದ್ದಾರೆ ಇದು ಅತ್ಯಂತ ಉತ್ತಮ ಮತ್ತು ಸ್ವಾಗತಾರ್ಹ. ಇನ್ನು ಮುಂದೆಯೂ ಈ ರೀತಿಯ ಅವಶ್ಯಕತೆ ಮತ್ತು ಅನುಕೂಲ ಇರುವವರು ಬೇರೆ ದೇಶಗಳಿಗೆ ಅಧ್ಯಯನ ಮತ್ತು ಉದ್ಯೋಗಕ್ಕೆ ಹೋಗಲಿ.

ಕಷ್ಟ ಬಂದಿದೆ ಅಥವಾ ಒಂದು ಯುದ್ಧದ ಪರಿಣಾಮ ಕೆಲವು ಸಾವುಗಳು ಸಂಭವಿಸಿದವು ಎಂಬ ಕಾರಣದಿಂದ ಒಂದು ಅತ್ಯುತ್ತಮ ಶಿಕ್ಷಣ ಮಾರ್ಗವನ್ನೇ ಟೀಕಿಸುವುದು ಸಣ್ಣತನದ ವರ್ತನೆ. ಈ ರೀತಿ ಬೇರೆ ಬೇರೆ ‌ದೇಶಗಳಲ್ಲಿ ಓದುವುದು ಉದ್ಯೋಗ ಮಾಡುವುದು ತುಂಬಾ ಒಳ್ಳೆಯ ನಿರ್ಧಾರ. ಹಾಗೆಯೇ ಅದರಲ್ಲಿ ಇರಬಹುದಾದ ಲಾಭ ನಷ್ಟಗಳನ್ನು ಸಹ ಅನುಭವಿಸಲೇ ಬೇಕು. ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲೇ ಇದ್ದರೆ ನಾವು ಅಮರರೇನು ಅಲ್ಲ. ಅದು ವಿವಿಧ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ.

ಅಪಘಾತಗಳು ಅನಿರೀಕ್ಷಿತಗಳಲ್ಲಿ ಮನುಷ್ಯ ನಿಯಂತ್ರಣ ಕೆಲವೊಮ್ಮೆ ಸಫಲವಾಗುವುದಿಲ್ಲ. ಆದರೆ ಇನ್ನೊಂದಿಷ್ಟು ಮುನ್ನೆಚ್ಚರಿಕೆಯ ಕ್ರಮ ಅಗತ್ಯ.

ಭಾರತದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿದಾಗ ಭಾರತದ ವೈದ್ಯಕೀಯ ಶಿಕ್ಷಣ ಅತ್ಯಂತ ದುಬಾರಿ ಮತ್ತು ಒಂದು ದಂಧೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಅದರಲ್ಲೂ ಜಾಗತೀಕರಣದ ನಂತರ ಖಾಸಗಿ ಕ್ಷೇತ್ರದ ಬೆಳವಣಿಗೆಗಳಿಂದಾಗಿ ಇದು ತುಂಬಾ ಅತಿಯಾಯಿತು. ಆಧುನಿಕತೆ ಬೆಳೆದಂತೆಲ್ಲಾ ತಂತ್ರಜ್ಞಾನದ ಅಭಿವೃದ್ಧಿ ಪರಿಸರ ನಾಶ ಅತಿಯಾದ ಸ್ಪರ್ಧೆ ಮುಂತಾದ ಕಾರಣಗಳಿಂದ ಮನುಷ್ಯನ ದೇಹ ಮತ್ತು ಮನಸ್ಸುಗಳು ದುರ್ಬಲವಾಗಿ ಅನಾರೋಗ್ಯ ಹೆಚ್ಚಾಯಿತು. ಅದರ ದುಷ್ಪರಿಣಾಮ ವೈದ್ಯಕೀಯ ಕ್ಷೇತ್ರ ಹಣ ಮಾಡುವ ದೊಡ್ಡ ಮಾಫಿಯಾ ಆಗಿ ಪರಿವರ್ತನೆ ಹೊಂದಿತು. ಸಹಜವಾಗಿಯೇ ಭಾರತದ ಭ್ರಷ್ಟ ವ್ಯವಸ್ಥೆಯಲ್ಲಿ ರಾಜಕೀಯ ಇದರ ದೊಡ್ಡ ಲಾಭ ಪಡೆಯಿತು.

ಸರ್ಕಾರದ ಸೀಟು ಪಡೆದು ಓದುವುದು ಕಡಿಮೆ ಖರ್ಚು ಎಂಬುದು ನಿಜ ಆದರೆ ಭಾರತದ ಜನಸಂಖ್ಯೆಗೆ ಈ ಸೀಟುಗಳು ತೀರಾ ತೀರಾ ಕಡಿಮೆ. ಸ್ಪರ್ಧೆ ತುಂಬಾ ಇದೆ. ಡೊನೇಷನ್ ಹಾವಳಿ ಕೋಟಿಗಳಲ್ಲಿದೆ. ಈಗ ನಮ್ಮ ಮುಂದಿರುವ ಸವಾಲು ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಎರಡನ್ನೂ ಸರ್ಕಾರವೇ ನಿಯಂತ್ರಣ ಪಡೆಯಬೇಕು ಅಥವಾ ಖಾಸಗಿ ವ್ಯವಸ್ಥೆಯಲ್ಲಿ ಈ ಎರಡೂ ದಂಧೆಯಾಗದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ಸೀಟು ಹೆಚ್ಚಿಸಿ ಆಸಕ್ತರು ಅಥವಾ ಅರ್ಹರು ಎಲ್ಲರೂ ಅದನ್ನು ಓದಲು ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಜ್ಞರ ಸಲಹೆ ಪಡೆದು ಜಾರಿಗೊಳಿಸಬೇಕು.

ಈ ಎಲ್ಲದರ ನಡುವೆಯೂ ವಿದೇಶಗಳಲ್ಲಿ ಓದುವ ಅಥವಾ ವಿದೇಶಿಯರು ಭಾರತದಲ್ಲಿ ಓದುವ ಎರಡೂ ಕ್ರಮಗಳಿಗೆ ಪ್ರೋತ್ಸಾಹ ಮುಂದುವರಿಸಲೇಬೇಕು. ಈ ರೀತಿಯ ವಿನಿಮಯ ನಮ್ಮನ್ನು ಮತ್ತಷ್ಟು ಬೆಳೆಸುತ್ತದೆ.

ಮತ್ತೊಂದು ಮೀಸಲಾತಿ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ತುಂಬಾ ಸರಳ ಹಾಗೆಯೇ ಗಂಭೀರ.

ಭಾರತದ ಸಾಮಾಜಿಕ ವ್ಯವಸ್ಥೆ ಅತ್ಯಂತ ಸಂಕೀರ್ಣ. ಈ ಕ್ಷಣದ ಪರಿಸ್ಥಿತಿ ನೋಡಿಕೊಂಡು ಒಂದು ಅಭಿಪ್ರಾಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಅದು ತುಂಬಾ ತಪ್ಪಾಗುತ್ತದೆ.ಏಕೆಂದರೆ, ಜಾತಿ ಎಂಬ ಅಸಮಾನತೆಯ ಮತ್ತು ಅಮಾನವೀಯತೆಯ ಖಾಯಿಲೆಗೆ ಮೀಸಲಾತಿ ಎಂಬ ಮತ್ತೊಂದು ಅಸಮಾನತೆಯ ವ್ಯಾಕ್ಸಿನ್ ಉಪಯೋಗಿಸಲಾಗಿದೆ. ಸಮಗ್ರವಾಗಿ ಭಾರತೀಯ ಸಮಾಜದ ಹಿತದೃಷ್ಟಿಯಿಂದ ಯೋಚಿಸಿದಾಗ ಇದು ಅನಿವಾರ್ಯ ಮತ್ತು ಸರಿಯಾದ ಕ್ರಮ. ಇದು ಅಸ್ಪೃಶ್ಯರಿಗೆ ಕೊಡುವ ಭಿಕ್ಷೆಯಲ್ಲ ಅದು ಅವರ ಹಕ್ಕು ಮತ್ತು ಎಲ್ಲಾ ಭಾರತೀಯರ ಕರ್ತವ್ಯ ಕೂಡ.ಇದರಿಂದ ಕೆಲವರಿಗೆ ಅನ್ಯಾಯ ಆಗಬಹುದು ನಿಜ. ಆದರೆ ಶತ ಶತಮಾನಗಳ ತುಳಿತಕ್ಕೊಳಗಾದವರಿಗೆ ಈ ನ್ಯಾಯ ಸಿಗಲೇ ಬೇಕು.

ವಾಸ್ತವ:ಮೀಸಲಾತಿ ದೊರೆಯುವುದು ಕೂಡ ನಮ್ಮದೇ ಜನರಿಗೆ ಮತ್ತು ಆ ಸಂಖ್ಯೆ ಕೂಡಾ ತುಂಬಾ ಕಡಿಮೆ. ಬಹುಶಃ ನಿರ್ಲಕ್ಷಿಸಬಹುದಾದಷ್ಟು ಮಾತ್ರ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮೀಸಲಾತಿಯ ಕೋಟಾದಲ್ಲಿ ಸಹ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ. ಅದನ್ನು ಹೆಚ್ಚು ಹೆಚ್ಚು ಪ್ರಶ್ನೆ ಮಾಡಿದಷ್ಟು ಒಂದು ಇಡೀ ಸಮುದಾಯಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಅವರ ನೋವನ್ನು ಗಮನಿಸದಂತೆ ಆಗುತ್ತದೆ. ಅದಕ್ಕೆ ಬದಲಾಗಿ ಮೀಸಲಾತಿಯ ಅವಶ್ಯಕತೆ ಇಲ್ಲದಂತೆ ಎಲ್ಲಾ ರೀತಿಯ ಸೌಕರ್ಯಗಳು ಎಲ್ಲರಿಗೂ ಸಿಗುವಂತೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಜಾತಿ ವ್ಯವಸ್ಥೆಯ ನಿರ್ಮೂಲನೆ ಮಾಡಬೇಕು. ನಮ್ಮ ಎಲ್ಲಾ ಪ್ರಯತ್ನಗಳು ಆ ನಿಟ್ಟಿನ ಅಭಿವೃದ್ಧಿಯ ಕಡೆ ಇರಬೇಕು. ಬೇಡಿಕೆಗಳನ್ನು ಪೂರೈಸಿಕೊಳ್ಳುವುದು ಬಿಟ್ಟು ಬೇಡಿಕೆಗಳ ಬಗ್ಗೆಯೇ ಕಚ್ಚಾಡುತ್ತಾ ನಮ್ಮೊಳಗೆ ಅಸಮಾಧಾನ ಅಸೂಯೆ ಪಡುವುದು ತುಂಬಾ ಅಪಾಯಕಾರಿ.

ದಯವಿಟ್ಟು ಮೀಸಲಾತಿಯ ವಿಷಯದಲ್ಲಿ ಮತ್ತೊಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಅದನ್ನು ಬಹಿರಂಗವಾಗಿ ಚರ್ಚಿಸಿ ಶೋಷಿತರಿಗೆ ಮತ್ತಷ್ಟು ನೋವು ಕೊಡುವುದು ಬೇಡ. ಕೇವಲ ಅಂಕಗಳೇ ಎಲ್ಲಕ್ಕೂ ಮಾನದಂಡವಲ್ಲ. ಮಾನವೀಯತೆಯೇ ನಿಜವಾದ ಮಾನದಂಡ.

ಈ ಮಾಧ್ಯಮಗಳ ಹುಚ್ಚಾಟ ಅತಿಯಾಯಿತು. ಯಾವುದೋ ಭಾವನಾತ್ಮಕ ಸನ್ನಿವೇಶವನ್ನು ದುರುಪಯೋಗ ಪಡಿಸಿಕೊಂಡು ಇನ್ಯಾವುದೋ ವಿಷಯವನ್ನು ಎಳೆಯ ಮಕ್ಕಳೊಂದಿಗೆ ಚರ್ಚಿಸಿ ಅವರಲ್ಲಿ ಸಂಕುಚಿತ ಮನೋಭಾವ ಮೂಡಿಸಿ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿವೆ.

ರಾಷ್ಟ್ರ ಮತ್ತು ದೇಶದ ಒಟ್ಟು ಹಿತಾಸಕ್ತಿಯಿಂದ ನಮ್ಮ ಚಿಂತನೆಗಳು ಟಿಸಿಲೊಡೆಯಬೇಕೆ ಹೊರತು ವೈಯಕ್ತಿಕ ಸ್ವಾರ್ಥದ ಕಾರಣಕ್ಕಾಗಿ ಅಲ್ಲ.

ಜಿಲ್ಲೆ

ರಾಜ್ಯ

error: Content is protected !!