Saturday, July 27, 2024

ಶಿಸ್ತುಬದ್ಧ ಅಧ್ಯಯನದಿಂದ ಸಾಧನೆ ಸಾಧ್ಯ – ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ

ಬೈಲಹೊಂಗಲ: ಶಿಸ್ತುಬದ್ಧ ಅಧ್ಯಯನದಿಂದ ಮಾತ್ರ‌ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದು ರಾಮದುರ್ಗ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪ್ರೇರಣಾ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಉತ್ತಮ ಬರವಣಿಗೆ ಬಹಳ ಮುಖ್ಯವಾಗಿದ್ದು ಪಠ್ಯಪುಸ್ತಕಗಳ ಜೊತೆಗೆ ಪ್ರತಿದಿನ ದಿನಪತ್ರಿಕೆ ಮತ್ತು ಮ್ಯಾಗಜಿನ್ ಗಳನ್ನು ಓದುವ ಹ್ಯವಾಸವನ್ನು ರೂಢಿಸಿಕೊಳ್ಳಲು ಮಕ್ಕಳಿಗೆ ಸಲಹೆ ನೀಡಿದರು. ಸಮಯದ ಸದುಪಯೋಗ ಮಾಡಿಕೊಂಡು ಸಾಕಷ್ಟು ಪುನರಾವರ್ತನೆ ಮಾಡಿ ಸಮಚಿತ್ತದಿಂದ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸ್ಪೂರ್ತಿ ತುಂಬಿದರು. ಅಧ್ಯಯನ ಕ್ರಮ, ಓದುವ ಸಮಯ, ನೆನಪಿಟ್ಟುಕೊಳ್ಳುವ ತಂತ್ರಗಳು, ಆರೋಗ್ಯದ ಕಾಳಜಿ, ಟಿಪ್ಪಣಿ ಬರೆಯುವ ಕಲೆ ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಶಾಲೆಯ ವಾತಾವರಣ, ಮಕ್ಕಳ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ವಿದ್ಯಾರ್ಥಿಗಳು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಕಲೆಹಾಕಿ ತಮ್ಮ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಹೊಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಸದಸ್ಯರಾದ ರಮೇಶ ಸೂರ್ಯವಂಶಿ, ಶಿಕ್ಷಕರಾದ ಶಿವಾನಂದ ಬಳಿಗಾರ, ಅರುಣ ಕತ್ತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಸುನೀಲ ಭಜಂತ್ರಿ ನಿರೂಪಿಸಿದರು. ಜಗದೀಶ ನರಿ ಸ್ವಾಗತಿಸಿದರು. ಪ್ರವೀಣ ಗುರುನಗೌಡರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!