Saturday, July 27, 2024

ರಷ್ಯಾ-ಉಕ್ರೇನ್‌ ಸುದೀರ್ಘ 3.5 ತಾಸು ಮಾತುಕತೆ: ಸಂಧಾನ ವಿಫಲ

ಕೀವ್‌  (ಮಾ 01): 5 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್‌ನಲ್ಲಿ  ಸಂಧಾನ ಮಾತುಕತೆ ನಡೆಸಿವೆ. ಸುಮಾರು ಮೂರೂವರೆ ಗಂಟೆಗಳ ಕಾಲ ಮಾತುಕತೆ ನಡೆದಿದೆಯಾದರೂ, ಎರಡೂ ನಿಯೋಗಗಳು ಪರಸ್ಪರ ಕೆಲವು ಷರತ್ತು ವಿಧಿಸಿಕೊಂಡ ಕಾರಣ ಚರ್ಚೆ ಅಪೂರ್ಣವಾಗಿದೆ. ಹೀಗಾಗಿ ಬೆಲಾರಸ್‌-ಪೋಲೆಂಡ್‌ ಗಡಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಏತನ್ಮಧ್ಯೆ, ಅತ್ತ ಸಂಧಾನ ನಡೆದಿದ್ದರೆ, ಇತ್ತ ಸಂಘರ್ಷಮಯ ಪರಿಸ್ಥಿತಿ ಮುಂದುವರಿದಿದೆ. ರಷ್ಯಾ ವಿರೋಧದ ನಡುವೆಯೇ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆಯಲು ಉಕ್ರೇನ್‌ ಅರ್ಜಿ ಸಲ್ಲಿಸಿದೆ. ಇದೇ ವೇಳೆ, ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಉಕ್ರೇನ್‌ ಪ್ರತಿನಿಧಿ, ಬೇಷರತ್ತಾಗಿ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ತಾಕೀತು ಮಾಡಿದ್ದಾರೆ.

ಅದಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ದೇಶಗಳ ಮೇಲೆ ಸಿಡಿದ ರಷ್ಯಾ ಪ್ರತಿನಿಧಿ, ‘ಉಕ್ರೇನ್‌ನ ನ್ಯಾಟೋ ಸೇರ್ಪಡೆ ಯತ್ನವೇ ವಿವಾದದ ಮೂಲವಾಗಿದೆ. ಉಕ್ರೇನ್‌ ಈ ನಿಲುವು ಸಡಿಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.ಇನ್ನೊಂದೆಡೆ ಪಾಶ್ಚಾತ್ಯ ದೇಶಗಳಿಗೆ ಸಡ್ಡು ಹೊಡೆದ ರಷ್ಯಾ ತನ್ನ 36 ದೇಶಗಳ ವಿಮಾನಗಳಿಗೆ ನಿಷೇಧ ಹೇರಿದೆ ಹಾಗೂ ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.

ಮಾತುಕತೆ ಅಪೂರ್ಣ: ಸಂಜೆ ಆರಂಭವಾದ ಸಭೆ 3 ಸುತ್ತಿನ ಮಾತುಕತೆ ನಡೆಸಿತು. ಯುದ್ಧವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್‌ ಆಗ್ರಹಿಸಿತು. ಇದೇ ವೇಳೆ ಉಕ್ರೇನ್‌ ನ್ಯಾಟೋ ಸಂಘಟನೆ ಸೇರುವುದನ್ನು ರಷ್ಯಾ ವಿರೋಧಿಸಿತು. ಈ ವೇಳೆ ಉಭಯ ದೇಶಗಳ ನಿಯೋಗದ ಪ್ರತಿನಿಧಿಗಳು ಪರಸ್ಪರ ಕೆಲವು ಷರತ್ತು ವಿಧಿಸಿದರು. ಹೀಗಾಗಿ ಷರತ್ತುಗಳ ವಿವರವನ್ನು ತಮ್ಮ ದೇಶಗಳ ಮುಖ್ಯಸ್ಥರ ಮುಂದಿಡಲು ಉಭಯ ದೇಶಗಳ ನಿಯೋಗಗಳು ತೀರ್ಮಾನಿಸಿದವು. ಈ ಸಭೆಯಲ್ಲಿ ಹೊರಬೀಳುವ ನಿಲುವುಗಳನ್ನು ಮುಂದಿನ ಸುತ್ತಿನ ಸಂಧಾನ ಮಾತುಕತೆಯಲ್ಲಿ ಚರ್ಚಿಸುವ ತೀರ್ಮಾನ ಮಾಡಲಾಯಿತು ಎಂದು ಮೂಲಗಳು ಹೇಳಿವೆ.

ಅನುಮಾನ: ಸೋಮವಾರದ ಸಭೆಗೆ ಉಕ್ರೇನ್‌ ತನ್ನ ರಕ್ಷಣಾ ಸಚಿವರು ಸೇರಿದಂತೆ ಹಿರಿಯ ಸಚಿವರ ನಿಯೋಗ ಕಳುಹಿಸಿದ್ದರೆ, ರಷ್ಯಾ ಅಧ್ಯಕ್ಷ ಪುಟಿನ್‌ ಸಂಸ್ಕೃತಿ ವಿಷಯದಲ್ಲಿ ತಮ್ಮ ಸಲಹೆಗಾರ ನೇತೃತ್ವದಲ್ಲಿ ನಿಯೋಗ ರವಾನಿಸಿದ್ದರು. ಹೀಗಾಗಿ ಸಂಧಾನ ಮಾತುಕತೆ ವಿಷಯದಲ್ಲಿ ಪುಟಿನ್‌ ಎಷ್ಟುಗಂಭೀರವಾಗಿದ್ದರೆ ಎಂಬ ಅನುಮಾನ ಹುಟ್ಟುಹಾಕಿದೆ.

ರಷ್ಯಾದಲ್ಲಿ ಅಣ್ವಸ್ತ್ರ ಸಜ್ಜು: ನ್ಯಾಟೋ ದೇಶಗಳಿಗೆ ಸಡ್ಡು ಹೊಡೆಯಲು ನಮ್ಮ ಅಣ್ವಸ್ತ್ರ ಪಡೆಗಳನ್ನು ಸಜ್ಜುಗೊಳಿಸಿ ಎಂಬ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೂಚನೆ ಬೆನ್ನಲ್ಲೇ ರಷ್ಯಾ ಸೇನೆ ತನ್ನ ಅಣ್ವಸ್ತ್ರಗಳನ್ನು ಸಮರ ಸನ್ನದ್ಧ ಸ್ಥಿತಿಗೆ ಸಜ್ಜುಗೊಳಿಸಿದೆ. ಒಂದು ವೇಳೆ ರಷ್ಯಾ ಮತ್ತು ನ್ಯಾಟೋ ಪಡೆಗಳು ಪರಸ್ಪರ ಅಣ್ವಸ್ತ್ರ ದಾಳಿ ನಡೆಸಿದ್ದೇ ಆದಲ್ಲಿ ಅದು ವಿಶ್ವ ಇದುವರೆಗೆ ಕಂಡುಕೇಳರಿಯದ ಅನಾಹುತಕ್ಕೆ ಸಾಕ್ಷಿಯಾಗುವ ಕಾರಣ, ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಭಾರಿ ಆತಂಕ, ಭೀತಿಗೆ ಕಾರಣವಾಗಿದೆ. ರಷ್ಯಾ ಇಡಿ ವಿಶ್ವದಲ್ಲಿಯೇ ಅತಿ ಹೆಚ್ಚು (6200) ಅಣ್ವಸ್ತ್ರಗಳನ್ನು ಹೊಂದಿದೆ.

36 ದೇಶದ ವಿಮಾನಕ್ಕೆ ರಷ್ಯಾದಿಂದ ನಿಷೇಧ: ತನ್ನ ವಿಮಾನಗಳಿಗೆ ನ್ಯಾಟೋ ಸೇರಿದಂತೆ ಹಲವು ದೇಶಗಳು ನಿಷೇಧ ಹೇರಿದ್ದಕ್ಕೆ ತಿರುಗೇಟು ನೀಡಿರುವ ರಷ್ಯಾ ಸರ್ಕಾರ, ಬ್ರಿಟನ್‌, ಜರ್ಮನಿ ಸೇರಿದಂತೆ ನ್ಯಾಟೋ, ಯುರೋಪಿಯನ್‌ ಒಕ್ಕೂಟದ 36 ದೇಶಗಳ ವಿಮಾನಗಳಿಗೆ ತನ್ನ ವಾಯುಸೀಮೆ ಬಳಸಲು ನಿಷೇಧ ಹೇರಿದೆ. ಪಾಶ್ಚಾತ್ಯ ದೇಶಗಳ ಕ್ರಮಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಂಡಿದ್ದಾಗಿ ರಷ್ಯಾ ನೇರವಾಗಿ ಹೇಳಿದೆ.

ಯುದ್ಧದ ಅಬ್ಬರ ಕೊಂಚ ಇಳಿಮುಖ: ನೆರೆಯ ದೇಶ ಬೆಲಾರಸ್‌ನಲ್ಲಿ ಸೋಮವಾರ ಸಂಧಾನ ಮಾತುಕತೆ ಆರಂಭಗೊಂಡ ಬೆನ್ನಲ್ಲೇ ಉಕ್ರೇನ್‌ನಲ್ಲಿ ನಡೆಸುತ್ತಿರುವ ತನ್ನ ದಾಳಿಯ ತೀವ್ರತೆಯನ್ನು ರಷ್ಯಾ ಭಾರಿ ಪ್ರಮಾಣದಲ್ಲಿ ತಗ್ಗಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ಉಕ್ರೇನ್‌ ಒಡ್ಡುತ್ತಿರುವ ಪ್ರಬಲ ಪ್ರತಿರೋಧ ಕಾರಣವೋ ಅಥವಾ ಮಾತುಕತೆ ಫಲಿತಾಂಶ ಆಧರಿಸಿ ಮುನ್ನಡೆಯುವ ಉದ್ದೇಶವೋ ಎಂಬುದು ತಿಳಿದುಬಂದಿಲ್ಲ.

ಜಿಲ್ಲೆ

ರಾಜ್ಯ

error: Content is protected !!