Friday, April 19, 2024

ಬೈಲಹೊಂಗಲ ಕಸಾಪ ದಿಂದ ಚನ್ನವೀರ ಕಣವಿ ಅವರಿಗೆ ನುಡಿನಮನ 

ಬೈಲಹೊಂಗಲ: ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.

ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮೌನಾಚರಣೆ ಮಾಡಿದರು.

ಖ್ಯಾತ ಪ್ರವಚನಗಾರ್ತಿ ಪ್ರೇಮಕ್ಕ ಅಂಗಡಿ ಮಾತನಾಡಿ ಕಣವಿಯವರ ಮೌಲ್ಯಯುತ ಕವನಗಳು ಸರ್ವಕಾಲಿಕವಾಗಿದ್ದು ಬದುಕಿ‌ನ ಸತ್ಯವನ್ನು ತೆರೆದಿಡುತ್ತವೆ ಎಂದರು. ಕಣವಿಯವರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಹಾಗೂ ಸ್ತ್ರೀಪರ ಕಾಳಜಿಯಿದ್ದು ನೀಲಾಂಬಿಕೆ ಕವನ ಅದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಸಮನ್ವಯದ ಕವಿ, ಸುನೀತಗಳ ಸಾಮ್ರಾಟ ಎನಿಸಿಕೊಂಡ ಶ್ರೇಷ್ಠ ಕವಿಯ ನಿಧನದಿಂದ ಕನ್ನಡ ಸಾಹಿತ್ಯ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಇತ್ತೀಚೆಗೆ ಕಣವಿಯವರನ್ನು ಧಾರವಾಡದ ಅವರ ನಿವಾಸದಲ್ಲಿ ಭೇಟಿಯಾದ ಬದುಕಿನ ಅವಿಸ್ಮರಣೀಯ ಸಾರ್ಥಕ ಕ್ಷಣವನ್ನು ಸ್ಮರಿಸಿಕೊಂಡು ಭಾವಜೀವಿಗಳಾದ ಕಣವಿಯವರ ನಿಧನದಿಂದ ಕನ್ನಡ ಸಾಹಿತ್ಯದ ಹಿರಿಯ ಕೊಂಡಿ ಕಳಚಿದಂತಾಗಿದೆ ಎಂದು ಹೇಳಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಕುಡಸೋಮಣ್ಣವರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಕ್ರಿಯಾಯೋಜನೆಯ ರೂಪುರೇಷೆಗಳನ್ನು ಹಾಗೂ ಯೋಜನೆಗಳನ್ನು ಚರ್ಚಿಸಿದರು. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಪರಿಷತ್ತಿನಿಂದ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷ ಮಹೇಶ ಕೋಟಗಿ, ತಾಲ್ಲೂಕಾ ಪರಿಷತ್ತಿನ ಪದಾಧಿಕಾರಿಗಳಾದ ಭೀಮಪ್ಪ ಕಸಾಳೆ, ಶಶಿಕಲಾ ಯಲಿಗಾರ, ಅನಿಲಕುಮಾರ ರಾಜಣ್ಣವರ, ಶ್ರೀಕಾಂತ ಉಳ್ಳೇಗಡ್ಡಿ, ಸಂತೋಷ ಹಡಪದ, ಲಕ್ಷ್ಮೀ ಮುಗಡ್ಲಿಮಠ, ದುಂಡಪ್ಪ ಗರಗದ, ಸಂತೋಷ ಪಾಟೀಲ ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಪ್ರಕಾಶ ಮೆಳವಂಕಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ರಾಮಕೃಷ್ಣ ಹೋಟಕರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!