Tuesday, April 16, 2024

ದಿನಬಳಕೆ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಉಕ್ರೇನ್‌ ನಲ್ಲಿ ಜನರ ಪರದಾಟ! ಕನ್ನಡಿಗರಿಗೆ ಸಹಾಯವಾಣಿ

ಕೀವ್‌ (ಫೆ.26): ಉಕ್ರೇನ್‌ ಮೇಲಿನ ರಷ್ಯಾ ದಾಳಿ, ಜನಸಾಮಾನ್ಯರ ಬದುಕನ್ನ ಹೈರಣಾಗಿಸಿದೆ. ನಿತ್ಯ ಜೀವನದ ಬಹುತೇಕ ಚಟುವಟಿಕೆಗಳ ಮೇಲೆ ಯುದ್ಧವು ವ್ಯತಿರಿಕ್ತ ಪರಿಣಾಮ ಬೀರಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿ ಮಾಡಿದೆ. ದೇಶಾದ್ಯಂತ ಆನ್‌ಲೈನ್‌ ಮತ್ತು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಪಾವತಿ ಸಂಪೂರ್ಣವಾಗಿ ನಿಷಿದ್ಧವಾಗಿದೆ. 

ಹೀಗಾಗಿ ಜನರು ಯಾವುದೇ ಸಣ್ಣ-ಪುಟ್ಟಖರೀದಿಗೂ ನಗದು ಪಾವತಿಸಲು ಎಟಿಎಂಗಳತ್ತ ಮುಗಿಬೀಳುತ್ತಿದ್ದಾರೆ. ಹೀಗಾಗಿ ನಗರದ ಪ್ರಮುಖ ಭಾಗಗಳಲ್ಲಿರುವ ಎಟಿಎಂಗಳಲ್ಲಿ ಭಾರೀ ಜನದಟ್ಟಣೆ ಎದುರಾಗಿದೆ. ಯುದ್ಧದಿಂದ ದಿನಸಿ, ಔಷಧಿ ಮತ್ತು ಇನ್ನಿತರ ನಿತ್ಯ ಉಪಯೋಗಿ ವಸ್ತುಗಳ ಅಭಾವ ಎದುರಾಗಲಿದೆ ಎಂಬ ಭೀತಿಯಿಂದ ಜನರು ಈ ವಸ್ತುಗಳನ್ನು ಹೆಚ್ಚಾಗಿ ದಾಸ್ತಾನು ಮಾಡಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಹೀಗಾಗಿ ದಿನಸಿ ವಸ್ತುಗಳ ಅಂಗಡಿಗಳ ಮುಂದೆಯೂ ಜೇನು ನೊಣದ ಹಿಂಡಿನಂತೆ ಜನರ ದಂಡು ಹರಿದುಬರುತ್ತಿದೆ.

ಹಿರಿಯ ನಾಗರಿಕರಿಗೆ ಭಾರೀ ಸಂಕಷ್ಟ: ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನ ಪೂರ್ವ ಭಾಗದಲ್ಲಿರುವ 20 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರ ಗೋಳು ಹೇಳತೀರದಾಗಿದೆ. ರಷ್ಯಾದ ದಾಳಿಗೆ ಸಿಲುಕಿರುವ ಪ್ರದೇಶಗಳಿಂದ ಯುವಕರು ಮತ್ತು ಸಾಮಾನ್ಯ ನಾಗರಿಕರು ಪಾರಾಗುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು ಈ ಸ್ಥಳಗಳಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ. ಜತೆಗೆ ತಮ್ಮ ಪ್ರಾಣದ ಹಂಗಿನಲ್ಲಿ ಪೇರೆ ಕಿತ್ತುತ್ತಿರುವ ಯುವಕರು, ಹಿರಿಯರಾದ ತಮ್ಮ ತಂದೆ-ತಾಯಿ ಮತ್ತು ಪೋಷಕರನ್ನು ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ತಮ್ಮ ಪ್ರೀತಿ-ಪಾತ್ರರಿಲ್ಲದೆ ಹಿರಿಯ ನಾಗರಿಕರು ಏಕಾಂಗಿಯಾಗಿದ್ದಾರೆ.

ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಔಷಧಿ ಮತ್ತು ಆಹಾರಗಳಿಂದ ವಂಚಿತರಾಗಿರುವ ಹಿರಿಯ ಜೀವಗಳಿಗೆ ಯುದ್ಧದಲ್ಲಿ ಮಡಿಯುವುದೊಂದೇ ಹಾದಿಯಂಥ ದುಸ್ಥಿತಿ ಏರ್ಪಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಯುದ್ಧದಂಥ ವಾತಾವರಣದಿಂದ ಪ್ರಾಣ ಉಳಿಸಿಕೊಳ್ಳುವುದು ಸುಲಭ. ಆದರೆ ನಾವು ಅಲ್ಲಿಗೆ ಹೋಗಲು ಆಗುವುದೇ ಇಲ್ಲ. ಹೀಗಾಗಿ ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಶೆಲ್ಲಿಂಗ್‌ ಮತ್ತು ಬಾಂಬ್‌ ದಾಳಿಗಳು ಸಂಭವಿಸಿದರೆ, ಮನೆಯ ನೆಲಮಹಡಿಗೆ ಹೋಗುತ್ತೇನೆ. ದಾಳಿಗಳು ನಿಂತ ಬಳಿಕ ಮತ್ತೆ ಮೇಲೆ ಬರುತ್ತೇವೆ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ

ಉಕ್ರೇನ್‌ನಲ್ಲಿ ಕನ್ನಡಿಗರು ಸಿಲುಕಿದ್ದರೆ ಈ ಸಂಖ್ಯೆಗೆ ಕರೆ ಮಾಡಿ: ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಉಕ್ರೇನ್‌ ರಾಷ್ಟ್ರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಆಯುಕ್ತ ಡಾ.ಮನೋಜ್‌ ರಾಜನ್‌ ಅವರನ್ನು ನೊಡೆಲ್‌ ಅಧಿಕಾರಿಯನ್ನಾಗಿ ನಿಯೋಜನೆ ಮಾಡಿದೆ.

ಉಕ್ರೇನ್‌ನ ಕೀವ್‌ನಲ್ಲಿನ ಭಾರತದ ರಾಯಭಾರಿ ಕಚೇರಿಯೊಂದಿಗೆ ಡಾ.ಮನೋಜ್‌ ರಾಜನ್ ಅವರು ಸಮನ್ವಯ ಸಾಧಿಸಲಿದ್ದಾರೆ. ಅಲ್ಲಿನ ಕನ್ನಡಿಗರ ಕುಂದುಕೊರತೆಯನ್ನು ಆಲಿಸುವುದರ ಜತೆಗೆ ರಕ್ಷಣೆಯ ಕಾರ್ಯವನ್ನು ಮಾಡಲಿದ್ದಾರೆ. ದೆಹಲಿಯಲ್ಲಿನ ಉಕ್ರೇನ್‌ ರಾಯಭಾರಿ ಕಚೇರಿಯು 24 ತಾಸುಗಳ ಕಾಲ ಸಹಾಯವಾಣಿ ತೆಗೆದಿದೆ. ಅಂತೆಯೇ ರಾಜ್ಯದಲ್ಲಿಯೂ 24/7 ಸಹಾಯವಾಣಿ ಆರಂಭಿಸಿದೆ. ಇದರ ಜವಾಬ್ದಾರಿಯನ್ನು ಮನೋಜ್‌ ರಾಜನ್‌ ಅವರು ನಿರ್ವಹಿಸಲಿದ್ದಾರೆ.

ಸಹಾಯವಾಣಿ: ಉಕ್ರೇನ್‌ ರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗ ವಿದ್ಯಾರ್ಥಿಗಳು ಮತ್ತು ನಾಗರಿಕರ ಪೋಷಕರು ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ಸಹಾಯವಾಣಿ ಸಂಖ್ಯೆ – 080-1070, 080-22340676, ಇ-ಮೇಲ್‌- [email protected], [email protected] ಗೆ ಸಂಪರ್ಕಿಸಬಹುದು.

ಜಿಲ್ಲೆ

ರಾಜ್ಯ

error: Content is protected !!