Tuesday, May 28, 2024

ಖರೀದಿ ನಡೆಸದೇ ಅನುದಾನ ಗುಳುಂ, ಪ.ಜಾ./ಪ.ಪಂ. ಅನುದಾನ ದುರ್ಬಳಕೆ ಮಾದರಿ ವಿವರಿಸಿದ ಮಹಾಲೆಕ್ಕಪರಿಶೋಧಕ

ಸುದ್ದಿ ಸದ್ದು ನ್ಯೂಸ್

ಕೊಪ್ಪಳ: ಕಿಮ್ಸ್ (ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಅಕ್ರಮಗಳ ವಿವರಗಳನ್ನು ಮಹಾಲೆಕ್ಕಪರಿಶೋಧಕರು 2020ನೇ ವರ್ಷದ ವರದಿ ಸಂಖ್ಯೆ-3 ರಲ್ಲಿ ಈ ಕೆಳಗಿನಂತೆ ಎಳೆಎಳೆಯಾಗಿ ಬಿಚ್ಚಿಟ್ಟಿದೆ:

‘ನಾವು 2017-18ರಿಂದ 2018-19ರ ಅವಧಿಯಲ್ಲಿ 15 ವೈದ್ಯಕೀಯ ಕಾಲೇಜುಗಳನ್ನೊಳಗೊಂಡ ಇಲಾಖೆಯ ಅನುಸರಣಾ ಲೆಕ್ಕಪರಿಶೋಧನೆಯನ್ನು ನಡೆಸಿದೆವು. ಇದರಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೂ ಸೇರಿತ್ತು. ಎಸ್‌ಸಿಪಿ/ಟಿಎಸ್‌ಪಿ ಅಡಿಯಲ್ಲಿ ರೂ.4.21 ಕೋಟಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಪ್ರತಿಯಾಗಿ ಸಂಸ್ಥೆಯು ರೂ.80 ಲಕ್ಷಗಳನ್ನು ವೆಚ್ಚ ಮಾಡಿತ್ತು ಎಂದು ದಾಖಲೆಗಳ ಪರಿಶೀಲನೆ ತೋರಿಸಿತು. ಇದರಲ್ಲಿ ಸಂಸ್ಥೆಗೆ ಲಗತ್ತಿಸಲಾದ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಎಸ್‌ಸಿ/ಎಸ್‌ಟಿ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಇಂಪ್ಲಾಂಟ್‌ಗಳು/ಉಪಕರಣಗಳನ್ನು ಖರೀದಿಸಲು ರೂ.64 ಲಕ್ಷವನ್ನು ವೆಚ್ಚ ಮಾಡಲಾಗಿತ್ತು. ಉಳಿದ ಮೊತ್ತವನ್ನು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪುಸ್ತಕಗಳ ಸರಬರಾಜು (ರೂ.10 ಲಕ್ಷ) ಮತ್ತು ಎಸ್‌ಸಿ/ಎಸ್‌ಟಿ ರೋಗಿಗಳಿಗೆ ಔಷಧಿ/ರಕ್ತ (ರೂ.6 ಲಕ್ಷ) ಇತ್ಯಾದಿಗಳನ್ನು ಖರೀದಿಸಲು ಮಾಡಲಾಗಿತ್ತು. ಲೆಕ್ಕಪರಿಶೋಧನೆಗೆ ಲಭ್ಯಗೊಳಿಸಿದ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದಾಗ ನಾವು ಈ ಕೆಳಗಿನವುಗಳನ್ನು ಗಮನಿಸಿದೆವು:

1. ರೂ. ಒಂದು ಲಕ್ಷಕ್ಕಿಂತ ಮೇಲಿನ ಸರಕು ಮತ್ತು ಸೇವೆಗಳನ್ನು ಟೆಂಡರ್ ಮೂಲಕವೇ ಖರೀದಿಸಬೇಕೆಂದು ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಪರಿಚ್ಛೇದ 4(ಇ)(ii) ನಿಗದಿಪಡಿಸುತ್ತದೆ. ಇದಕ್ಕೆ ವಿರುದ್ಧವಾಗಿ ಸಂಸ್ಥೆಯು ರೂ.60.47 ಲಕ್ಷ ಮೌಲ್ಯದ ಸರ್ಜಿಕಲ್ ಇಂಪ್ಲಾಂಟ್ಸ್/ಉಪಕರಣಗಳನ್ನು ಎರಡು ಕಂಪನಿಗಳಿಂದ (ಕೊಪ್ಪಳದ ನೀಲ್ ಫಾರ್ಮಾ, ರೂ.50.18 ಲಕ್ಷ ಮತ್ತು ಗಂಗಾವತಿಯ ಶ್ರೀ ಮಂಜುನಾಥಸ್ವಾಮಿ ಮೆಡಿಕಲ್ ಹೌಸ್, ರೂ.10.29 ಲಕ್ಷ) ನೇರವಾಗಿ ಖರೀದಿಸಿತು. ಈ ಖರೀದಿಗಳ ಬೆಂಬಲಕ್ಕಾಗಿ ಕೇವಲ ಬಿಲ್ಲುಗಳನ್ನು ಮಾತ್ರ ಲೆಕ್ಕಪರಿಶೋಧನೆಗೆ ಒದಗಿಸಲಾಯಿತು.

2. ಸಂಸ್ಥೆಯು ರೂ.3.56 ಲಕ್ಷಗಳನ್ನು (2.3.2018ರಂದು ಚೆಕ್ ನಂಬರ್ 230914 ಮೂಲಕ ರೂ.94,524 ಮತ್ತು 14.3.2018ರಂದು ಚೆಕ್ ನಂಬರ್ 230940 ಮೂಲಕ ರೂ.2,61,468) ವೆಚ್ಚ ಮಾಡಿತ್ತು ಎಂದು ಸಂಸ್ಥೆಯು ಲಭ್ಯಗೊಳಿಸಿದ ದಾಖಲೆಗಳು ತೋರಿಸಿದವು. ಆದರೆ, ವಸ್ತುವಿನ ಹೆಸರು, ಕಂಪನಿಯ ಹೆಸರು ಮುಂತಾದ ಯಾವುದೇ ವಿವರಗಳನ್ನು ದಾಖಲಿಸಿರಲಿಲ್ಲ. ಬ್ಯಾಂಕ್ ಲೆಕ್ಕ ವಿವರಣೆ ಪತ್ರ ಸಹ ಎರಡೂ ಚೆಕ್‌ಗಳನ್ನು ನಗದೀಕರಣಗೊಳಿಸಿರುವುದನ್ನು ತೋರಿಸಿತು.

3. ಅಗತ್ಯತೆಯ ಅಂದಾಜು ಮಾಡಲು ಖರೀದಿಯ ಪ್ರಭಾರಿಯಾಗಿರುವ ಸರ್ಕಾರಿ ನೌಕರನು ಬೇಡಿಕೆಗಳನ್ನು ಪಡೆದಿರಬೇಕು ಎಂಬುದು ಒಂದು ಸಾಮಾನ್ಯ ವಿವೇಚನೆಯಾಗಿದೆ. ಆದರೆ, ಜಿಲ್ಲಾ ಆಸ್ಪತ್ರೆಯಿಂದ ಬೇಡಿಕೆಗಳನ್ನು ಪಡೆಯಲು ಯಾವುದೇ ವಿಧಾನವನ್ನು ಅನುಸರಿಸುತ್ತಿರಲಿಲ್ಲ ಎಂಬುದನ್ನು ದಾಖಲೆಗಳು ಸೂಚಿಸಿದವು. ಇಂಪ್ಲಾಂಟ್‌ಗಳ ಮತ್ತು ಔಷಧಗಳ ಸರಬರಾಜಿಗಾಗಿ ಯಾವುದೇ ಬೇಡಿಕೆಯನ್ನು ಕಳುಹಿಸಿರಲಿಲ್ಲ ಎಂದು ಜಿಲ್ಲಾ ಆಸ್ಪತ್ರೆಯು ಖಚಿತಪಡಿಸಿತು (ಆಗಸ್ಟ್ 2019).

4. ದಾಸ್ತಾನು ರಿಜಿಸ್ಟರ್‌ಗಳನ್ನು ನಿರ್ವಹಣೆ ಮಾಡಬೇಕು ಮತ್ತು ದಾಸ್ತಾನಿನ ಪ್ರತಿಯೊಂದು ಬಾಬ್ತಿನ ಸ್ವೀಕರಣೆ ಮತ್ತು ನೀಡಿಕೆಯನ್ನು ದಾಖಲಿಸಿರಬೇಕು ಎಂದು ಕರ್ನಾಟಕ ಆರ್ಥಿಕ ಸಂಹಿತೆಯ ನಿಯಮ 164(ಎ) ತಿಳಿಸುತ್ತದೆ. ಆದರೆ, ಸಂಸ್ಥೆಯು ಅಂತಹ ಯಾವುದೇ ರಿಜಿಸ್ಟರ್‌ಗಳನ್ನು ನಿರ್ವಹಿಸಿರಲಿಲ್ಲ. ಜಿಲ್ಲಾ ಆಸ್ಪತ್ರೆಯ ದಾಖಲೆಗಳು ಸಹ 2017-18 ಮತ್ತು 2018-19ರಲ್ಲಿ ಸಂಸ್ಥೆಯಿಂದ ಯಾವುದೇ ಸರಬರಾಜುಗಳನ್ನು ಸ್ವೀಕರಿಸಿರಲಿಲ್ಲ ಎಂಬುದನ್ನು ಸೂಚಿಸಿತ್ತು.

5. ಎಸ್‌ಸಿ/ಎಸ್‌ಟಿ ರೋಗಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಕ್ರೋಡೀಕರಿಸದಿದ್ದುದರಿಂದ ಎಸ್‌ಸಿಪಿ/ಟಿಎಸ್‌ಪಿ ನಿಧಿಗಳಿಂದ ಎಸ್‌ಸಿ/ಎಸ್‌ಟಿ ರೋಗಿಗಳಿಗೆ ಯಾವುದೇ ಚಿಕಿತ್ಸಾ ವೆಚ್ಚವನ್ನು ಜಿಲ್ಲಾ ಆಸ್ಪತ್ರೆಯು ಮರುಪಾವತಿ ಮಾಡಿರಲಿಲ್ಲ.

6. ಇಂಪ್ಲಾಂಟ್‌ಗಳು/ಸಲಕರಣೆಗಳ ಖರೀದಿಗೆ ಪಾವತಿ ವೋಚರ್‌ಗಳು ದಾಖಲೆಯಲ್ಲಿದ್ದರೂ ಸಹ ಸರಬರಾಜುದಾರರಿಂದ ಸರಕನ್ನು ಸ್ವೀಕರಿಸಿರುವುದಕ್ಕೆ ಸಂಸ್ಥೆಯು ದಾಸ್ತಾನು ಪ್ರಮಾಣಪತ್ರವನ್ನು ಹೊಂದಿರಲಿಲ್ಲ.

*ದಲಿತರ ಹೆಸರಲ್ಲಿ ಹಣ ಲೂಟಿ*

ಇದು ಕಿಮ್ಸ್‌ನ ಹಂಗಾಮಿ ನಿರ್ದೇಶಕ ಡಾ. ವಿಜಯನಾಥ ಇಟಗಿ ಅವರ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ವಿವರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯುದಯಕ್ಕೆ ಮೀಸಲಿಟ್ಟಿರುವ ಹಣದಲ್ಲಿ ರೂ.80 ಲಕ್ಷದಷ್ಟು ಹಣವನ್ನು ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎತ್ತಿ ಹಾಕಿರುವುದನ್ನು ಮಹಾಲೆಕ್ಕಪರಿಶೋಧಕರ ವರದಿ ಎತ್ತಿ ತೋರಿಸಿದೆ.

ಅಸಲಿಗೆ ಪಜಾ/ಪ.ಪಂಗಡದ ಯಾವುದೇ ವ್ಯಕ್ತಿಗೆ ಯೋಜನೆಯಡಿ ಒಂದೇ ಒಂದು ಪೈಸೆ ನೆರವು ಹೋಗಿಲ್ಲ. ಇವರು ಖರೀದಿ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ವಸ್ತುಗಳ ಖರೀದಿ ಕೂಡಾ ನಡೆದಿಲ್ಲ. ಆದರೆ, ಬಿಲ್‌ಗಳನ್ನು ಹಾಜರುಪಡಿಸಲಾಗಿದೆ. ಆ ಬಿಲ್‌ಗಳನ್ನು ಮಹಾಲೆಕ್ಕಪರಿಶೋಧಕರು ಮಾನ್ಯ ಮಾಡಿಲ್ಲ ಎಂಬುದು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

 

ಇಂತಹ ವ್ಯಕ್ತಿಗಳು ಕಿಮ್ಸ್‌ನಂತಹ ಪ್ರಮುಖ ಸಂಸ್ಥೆಯ ಆಡಳಿತ ನಿರ್ವಹಣೆಯಲ್ಲಿ ತೊಡಗಿಕೊಂಡಿರುವಾಗ, ಸಂಸ್ಥೆಯಲ್ಲಿ ಇನ್ನೂ ಅದೆಷ್ಟು ಭ್ರಷ್ಟಾಚಾರಗಳನ್ನು ನಡೆಸಿರಬಹುದು? ಇಂತಹ ವ್ಯಕ್ತಿಯನ್ನು, ಸದರಿ ಹುದ್ದೆಯಲ್ಲಿ ಮುಂದುವರಿಸಲು ಪ್ರತಿಜ್ಞೆ ಮಾಡಿದವರಂತೆ ವರ್ತಿಸುತ್ತಿರುವ ಸಂಸದ ಸಂಗಣ್ಣ ಕರಡಿ ಮತ್ತವರ ಪುತ್ರರತ್ನ ಅಮರೇಶ ಕರಡಿ ದಲಿತರ ಅದೆಷ್ಟು ಹಣದಲ್ಲಿ ಪಾಲುದಾರರಾಗಿರಬಹುದು?

ಡಾ. ವಿಜಯನಾಥ ಇಟಗಿ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಎಲ್ಲವೂ ಬಯಲಾಗಲಿದೆ.

 

ಜಿಲ್ಲೆ

ರಾಜ್ಯ

error: Content is protected !!