Saturday, July 27, 2024

ಜಿಲ್ಲಾಡಳಿತ ನಡೆ ಗ್ರಾಮಗಳ ಕಡೆ” ಅಭಿಯಾನಕ್ಕೆ ಹೊಸಹುಡ್ಯ ಗ್ರಾಮದಲ್ಲಿ ಚಾಲನೆ

ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ 4,266 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ.

ಚಿಕ್ಕಬಳ್ಳಾಪುರ : ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ “ಜಿಲ್ಲಾಡಳಿತ ನಡೆ ಗ್ರಾಮಗಳ ಕಡೆ” ಕಾರ್ಯಕ್ರಮವನ್ನು ಆಯೋಜಿಸಿತ್ತು ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ 4,266 ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

“ಜಿಲ್ಲಾಡಳಿತ ನಡೆ ಗ್ರಾಮಗಳ ಕಡೆ” ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಆರ್.ಲತಾ ಅವರು ಹೊಸಹುಡ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಆಲಿಸಿದರು.

ಜಿಲ್ಲಾಧಿಕಾರಿಗಳು ಆಗಮಿಸಿದ ವೇಳೆ ಹೊಸಹುಡ್ಯ ಗ್ರಾಮದ ರಸ್ತೆಯಲ್ಲಿ ಸ್ಥಳಿಯ ಮಹಿಳೆಯರು ಜಿಲ್ಲಾಧಿಕಾರಿಯವರನ್ನು ಆರತಿ ಬೆಳಗುವ ಮೂಲಕ ಸಂಭ್ರಮದ ಸ್ವಾಗತ ನೀಡಿದರು. ಗ್ರಾಮದಲ್ಲಿ ಹಬ್ಬದ ಸಡಗರ, ಸಂಭ್ರಮದ ವಾತಾವರಣ ಮನೆ ಮನಗಳಲ್ಲಿ ಕೆಳಗಟ್ಟಿತ್ತು. ಜಿಲ್ಲಾಧಿಕಾರಿಗಳು ಗ್ರಾಮಸ್ಥರೊಂದಿಗೆ ಮೊದಲಿಗೆ ಲಕ್ಷ್ಮೀ ಜನಾರ್ಧನ ದೇವರಿಗೆ ಪೂಜೆ ಸಲ್ಲಿಸಿ ಆ ನಂತರ ಗ್ರಾಮವಾಸ್ತವ್ಯದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿದರು.

ಮೊದಲಿಗೆ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹೊಸಹುಡ್ಯ ಗ್ರಾಮದ ಮನೆ ಮನೆಗಳಿಗೆ ಭೇಟಿ ಕೊಟ್ಟು ಅಲ್ಲಿನ ವಾಸ ಸ್ಥಳದ ಸ್ಥಿತಿಗತಿ, ಬೀದಿ ದೀಪ, ಸ್ವಚ್ಛತೆ, ನೀರಿನ ವ್ಯವಸ್ಥೆ ಸೇರಿದಂತೆ ಗ್ರಾಮದಲ್ಲಿನ ಮೂಲ ಸೌಕರ್ಯಗಳ ಕುರಿತು ಹಲವು ಮಾಹಿತಿಗಳನ್ನು ಸ್ಥಳೀಯರಿಂದ ಪಡೆದುಕೊಂಡು ಕೆಲವು ಅಹವಾಲುಗಳನ್ನು ವಿಲೇವಾರಿ ಮಾಡುವಂತೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ತದ ನಂತರ ಹೊಸಹುಡ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ 10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

50 ಸಾವಿರ ಯುವಜನರಿಗೆ ಉದ್ಯೋಗಾವಕಾಶ ಅರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಮುಂದಿನ ಐದು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗುವ ವಿಶ್ವಾಸವಿದ್ದು, ಈ ಭಾಗದಲ್ಲಿ ಬೃಹತ್ ಕೈಗಾರಿಕೆಗಳು ತಲೆ ಎತ್ತಲಿವೆ. ಇದರಿಂದಾಗಿ ಸುಮಾರು 50 ಸಾವಿರ ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಭರವಸೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸುವ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿವೆ. ಜಿಲ್ಲೆಯಲ್ಲಿ ನೀರಿನ ಕೊರತೆ ನೀಗಿದ ನಂತರ ಜಿಲ್ಲಾಡಳಿತದ ಮುಂದಿರುವುದೇ ಬೃಹತ್ ಕೈಗಾರಿಕೆಗಳನ್ನು ತರುವ ಕೆಲಸವಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಸಾವಿರ ಎಕರೆ ಭೂಮಿಯನ್ನು ಗುರುತಿಸಿದೆ. ಈ ಭಾಗದಲ್ಲಿ ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಬೃಹತ್ ಕೈಗಾರಿಕೆಗಳು ತಲೆ ಎತ್ತುವ ವಿಶ್ವಾಸವಿದೆ ಎಂದು ತಿಳಿಸಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಡು ಹಾಡಿದ ಸಚಿವ ಡಾ.ಕೆ.ಸುಧಾಕರ್

“ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ” ವೇದಿಕೆ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಾಡು ಹಾಡುವ ಮೂಲಕ ಮನರಂಜಿಸಿದರು.

ಹೊಸಹುಡ್ಯ ಸ್ಥಳೀಯ ನಿವಾಸಿ ಮನೆಯಲ್ಲಿ ಭೋಜನ ಸವಿದ ಸಚಿವ ಡಾ.ಕೆ.ಸುಧಾಕರ್

ಹೊಸಹುಡ್ಯ ಗ್ರಾಮದ ಸ್ಥಳೀಯ ನಿವಾಸಿಯದ ಲಕ್ಷ್ಮೀನರಸಿಂಹಮೂರ್ತಿ ಅವರ ಮನೆಯಲ್ಲಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭೋಜನ ಸವಿದರು.

ಅಧಿಕಾರಿಗಳೊಂದಿಗೆ ಯೋಗಾಭ್ಯಾಸ ಮಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮುಂಜಾನೆಯ ಯೋಗಾಭ್ಯಾಸ ಮಾಡಿ ಸಾರ್ವಜನಿಕರಿಗೆ ಅರೋಗ್ಯದ ಮಹತ್ವ ಹಾಗೂ ಜಾಗೃತಿ ಮೂಡಿಸಿದರು.

ಕ್ರಿಕೆಟ್ ಆಟವಾಡಿ ಯುವಕರಿಗೆ ಸ್ಫೂರ್ತಿ ನೀಡಿದ ಸಚಿವ ಡಾ.ಕೆ.ಸುಧಾಕರ್

ಹೊಸಹುಡ್ಯ ಸಮೀಪದ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್ ಆಟವಾಡಿದರು. ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಬೌಲಿಂಗ್ ಮಾಡಿ ಗಮನ ಸೆಳೆದರು.

ಸ್ಥಳೀಯ ಯುವಕರು ಸಚಿವರ ನ್ನು ಔಟ್ ಮಾಡಲು ಪ್ರಯತ್ನ ಪಟ್ಟು ವಿಫಲರಾದರು.
ಚನ್ನಾಗಿ ಅಭ್ಯಾಸ ಮಾಡಿ ಇನ್ನೊಮ್ಮೆ ನಿಮ್ಮೊಂದಿಗೆ ಕ್ರಿಕೆಟ್ ಆಡುವ ಎಂದು ಹೇಳಿ ಯುವಕರಿಗೆ ಸಚಿವರು ಸ್ಫೂರ್ತಿದಾಯಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗಣೇಶಶಾಸ್ತ್ರಿ, ಕರ್ನಾಟಕ ರಾಜ್ಯ ಮಾವು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ವಿ.ನಾಗರಾಜು, ನಗರಸಭಾ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ಎಂಪಿಸಿಎಸ್ ಸದಸ್ಯರು ಮರಳುಕುಂಟೆ ಕೃಷ್ಣಮೂರ್ತಿ, ನಗರಸಭಾ ಸದಸ್ಯರು ಊರಿನ ಮುಖಂಡರು ಮತ್ತು ಸಾರ್ವಜನಿಕರು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 ವರದಿ : ಎ. ಧನಂಜಯ.  ಚಿಕ್ಕಬಳ್ಳಾಪುರ

ಜಿಲ್ಲೆ

ರಾಜ್ಯ

error: Content is protected !!