Monday, September 30, 2024

ಅತ್ಯಾಚಾರ ದೂರು!ಕೊಟ್ಟ ಸಂತ್ರಸ್ತ ಮಹಿಳೆ ಸಿಗದೆ ಜೆ.ಪಿ.ನಗರ ಪೊಲೀಸರು ಕಂಗಾಲು!

ಬೆಂಗಳೂರು, ಫೆ. 18: ವಿಳಾಸವಿಲ್ಲದ ದೆಹಲಿ ಮೂಲದ ಮಹಿಳೆಯೊಬ್ಬರು ಇ ಮೇಲ್ ಮೂಲಕ ಸಲ್ಲಿಸಿದ ದೂರನ್ನು ಆಧರಿಸಿ ಬೆಂಗಳೂರು ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದ್ರು. ಆದ್ರೆ, ಐದು ತಿಂಗಳಾದರೂ ಆ ಮಹಿಳೆ, ತನಿಖಾಧಿಕಾರಿಗಳ ಮುಖ ನೋಡಿಲ್ಲ. ತನಿಖಾಧಿಕಾರಿಗಳು ಹೋಗಿ ಆಕೆಯನ್ನು ಪತ್ತೆ ಮಾಡಲಾಗಿಲ್ಲ. ಹೈ ಪ್ರೊಫೈಲ್ ಕೇಸ್ ಅಂತ ಭಾವಿಸಿ ಮೇಲಾಧಿಕಾರಿಗಳ ಆಜ್ಞೆಯ ಮೇರೆಗೆ ಅತ್ಯಾಚಾರ ಕೇಸು ದಾಖಲಿಸಿದ ಜೆ.ಪಿ. ನಗರ ಪೊಲೀಸರು ಇದೀಗ ಸಂತ್ರಸ್ತ ಮಹಿಳೆಗಾಗಿ ‘ಜಪ’ ಮಾಡುವಂತಾಗಿದೆ.

 

ಅತ್ಯಾಚಾರ ಪ್ರಕರಣ ತನಿಖೆ ವೇಳೆ ಹೆಜ್ಜೆ ಹೆಜ್ಜೆಗೂ ಎಡವಟ್ಟು ಮಾಡಿರುವ ಸಂಗತಿ ಹೊರ ಬಿದ್ದಿದೆ. ಇ-ಮೇಲ್ ದೂರಿನ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಆಗಿರುವ ಮಹಾಲೋಪಗಳ ಸಮಗ್ರ ವಿವರ ಇಲ್ಲಿದೆ. ಅತ್ಯಾಚಾರ ಒಂದು ಸೂಕ್ಷ್ಮ ಪ್ರಕರಣ. ಸತ್ಯ, ಸುಳ್ಳು , ದೂರಿನ ಪೂರ್ವ ಪರ ತಿಳಿಯದಿದ್ದರೆ, ಸಮರ್ಥ ಮೇಲಾಧಿಕಾರಿಗಳ ಮೇಲ್ವಿಚಾರಣೆ ಇಲ್ಲದಿದ್ದರೆ ಏನೆಲ್ಲಾ ಎಡವಟ್ಟುಗಳು ಆಗುತ್ತವೆ ಎಂಬದಕ್ಕೆ ಇ-ಮೇಲ್ ದೂರಿನ ಅತ್ಯಾಚಾರ ಪ್ರಕರಣ ಬೆಳಕಿಗೆ ತಂದಿದೆ.

ಅತ್ಯಾಚಾರ ಕೇಸ್ : ವಿಳಾಸ ನೀಡದ ದೆಹಲಿಯ ಮಹಿಳೆಯೊಬ್ಬರು ಬೆಂಗಳೂರು ಕಮೀಷನರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಇ -ಮೇಲ್ ಗುಜರಾಯಿಸಿದ್ದಳು. ‘ಮ್ಯಾಟ್ರಿಮೊನಿ ವೆಬ್ ತಾಣದಲ್ಲಿ ಪರಿಚಯವಾದ ಅಲಿ ಎಂಬಾತ ನನ್ನ ಮೇಲೆ ಐದು ಬಾರಿ ಅತ್ಯಾಚಾರ ಮಾಡಿದ್ದಾನೆ. ನನ್ನಿಂದ ಹಣ ಪಡೆದು ಮೋಸ ಮಾಡಿದ್ದಾನೆ. ನನಗೆ ನ್ಯಾಯ ಒದಗಿಸಿ ಎಂದು ಇ ಮೇಲ್ ಮೂಲಕ ಬೆಂಗಳೂರು ಪೊಲೀಸರಿಗೆ ಆ. 28, 2021 ರಂದು ಮೊದಲ ಇಮೇಲ್ ರವಾನಿಸಿದ್ದಾಳೆ. ಬೆಂಗಳೂರು ಪೊಲೀಸ್ ಆಯುಕ್ತರಿಗೆ, ಡಿಸಿಪಿ ದಕ್ಷಿಣ ಎಲ್ಲರಿಗೂ ಇ ಮೇಲ್ ಬಂದಿದೆ. ಸತತ ನಾಲ್ಕು ಇ ಮೇಲ್ ಮಾಡಿದ್ದ ಮಹಿಳೆ ಉಲ್ಲೇಖಿಸಿದ್ದ ಅಂಶಗಳನ್ನು ನಂಬಿ ಜೆ.ಪಿ.ನಗರ ಪೊಲೀಸರು ನ. 10, 2021 ರಂದು ಆಲಿ ಎಂಬ ಆರೋಪಿ ವಿರುದ್ಧ ಅತ್ಯಾಚಾರ, ವಂಚನೆ ಆರೋಪದಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ನಿರೀಕ್ಷಣಾ ಜಾಮೀನು:ಅತ್ಯಾಚಾರ ಅರೋಪ ಹೊತ್ತ ಆಲಿ ನಿರೀಕ್ಷಣಾ ಜಾಮೀನು ಕೋರಿ ಅಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರ ಗಂಭೀರ ಸ್ವರೂಪದ ಕಾರಣ ಆರೋಪಿ ಅಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ಅಧೀನ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಆ ಬಳಿಕ ನಿರೀಕ್ಷಣಾ ಜಾಮೀನು ಕೋರಿ ಆಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯ ಆಲಿ ಪರ ವಾದ ಮಂಡಿಸಿದ್ದರು. ಸಿ.ಎಚ್. ಹನುಮಂತರಾಯ ಅವರ ವಾದ ಪರಿಗಣಿಸಿದ ಹೈಕೋರ್ಟ್ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಆದರೆ, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಮಹಿಳೆ ಈ ಮೇಲ್ ದೂರಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮಾಡಿರುವ ಮಹಾ ಎಡವಟ್ಟುಗಳು ಹೊರ ಬಿದ್ದಿವೆ.

ಪೊಲೀಸರ ಎಡವಟ್ಟು:ಅತ್ಯಾಚಾರ ನಡೆದಿರುವ ಜಾಗ ದೆಹಲಿ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಜೀರೋ ಎಫ್ಐಆರ್ ಅಂತ ಪರಿಗಣಿಸಿ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಿಸಿದ್ದರೂ, ಅದನ್ನು ದೆಹಲಿಗೆ ವರ್ಗಾವಣೆ ಮಾಡಬೇಕಿತ್ತು. ದೆಹಲಿ ಮಹಿಳೆ ಇ ಮೇಲ್ ದೂರು ಆಧರಿಸಿ ಅತ್ಯಾಚಾರ ಕೇಸ್ ತನಿಖೆ ಮಾಡಿ ಕೀರ್ತಿ ಗಳಿಸಲು ಹೊರಟ ಪೊಲೀಸರು ಹೆಜ್ಜೆ ಹೆಜ್ಜೆಗೂ ಎಡವಟ್ಟು ಮಾಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ 24 ತಾಸಿನಲ್ಲಿ ಸಿಆರ್‌ಪಿಸಿ ಸೆಕ್ಷನ್ 164 (A) ಅಡಿಯಲ್ಲಿ ಅತ್ಯಾಚಾರ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಿತ್ತು. ಅಚ್ಚರಿ ಏನೆಂದರೆ ಸಂತ್ರಸ್ತ ಮಹಿಳೆ ಎಲ್ಲಿದ್ದಾರೆ ಎಂಬುದು ಪೊಲೀಸರಿಗೆ ಇನ್ನೂ ಗೊತ್ತಿಲ್ಲ! ಆಕೆ ಸ್ವಯಂ ಪ್ರೇರಿತವಾಗಿಯೂ ಬಂದು ವೈದ್ಯಕೀಯ ಪರೀಕ್ಷೆಗೆ ಒಳಗಾಗಿಲ್ಲ. ಐದು ತಿಂಗಳಾದರೂ ವೈದ್ಯಕೀಯ ಪರೀಕ್ಷೆಯೇ ನಡೆಸಲಾಗಿಲ್ಲ

ಅತ್ಯಾಚಾರ ಪ್ರಕರಣ ದಾಖಲಾದರೆ, ಸಿಆರ್‌ಪಿಸಿ ಸೆಕ್ಷನ್ 164 (5.A ) ಅಡಿ ಸಂತ್ರಸ್ತ ಹೇಳಿಕೆಯನ್ನು ದಂಡಾಧಿಕಾರಿಗಳ ಮುಂದೆ ದಾಖಲಿಸಬೇಕಿತ್ತು. ಜೆ.ಪಿ.ನಗರ ಪೊಲೀಸರು ಅದನ್ನು ಸಹ ಮಾಡಿಸಲು ಸಾಧ್ಯವಾಗಿಲ್ಲ, ಯಾಕೆಂದರೆ ಆಕೆಯ ವಿಳಾಸ ಪೊಲೀಸರಿಗೆ ಗೊತ್ತಿಲ್ಲ. ಆಕೆ ನೀಡಿಯೂ ಇಲ್ಲ. ಇ ಮೇಲ್ ನ್ನು ನಂಬಿಕೊಂಡು ಪೊಲೀಸರು ಕಳುಹಿಸಿದ ಮಿಂಚಂಚೆ ಸಂದೇಶಗಳಿಗೆ ಸಂತ್ರಸ್ತ ಮಹಿಳೆ ನೋಡಿದಂತೆಯೂ ಕಾಣುತ್ತಿಲ್ಲ. ಇನ್ನು ಸಿಆರ್‌ಪಿಸಿ ಸೆಕ್ಷನ್ 173 ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾದ ಎರಡು ತಿಂಗಳಲ್ಲಿ ತನಿಖೆ ನಡೆಸಿ ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಒಂದು ವೇಳೆ ಆರೋಪಿ ಸಿಕ್ಕದೇ ಇದ್ದ ಪಕ್ಷದಲ್ಲಿ ಇರುವ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ಅರೋಪಿ ಸಿಕ್ಕಿದ ಬಳಿಕ ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎನ್ನುತ್ತದೆ ಕಾನೂನು. ವಿಪರ್ಯಾಸವೆಂದರೆ ಪ್ರಕರಣ ದಾಖಲಾಗಿ ಐದು ತಿಂಗಳು ಕಳೆದರೂ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನೂ ದಾಖಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇನ್ನು ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವೇ? ಈ ವಿಚಾರದಲ್ಲೂ ಪೋಲೀಸರು ಎಡವಿ ಬಿದ್ದಿದ್ದಾರೆ.

ಪಂಚನಾಮೆ ಮಾಡಿಲ್ಲ: ಸಿಆರ್‌ಪಿಸಿ ಸೆಕ್ಷನ್ 161 ಅಡಿಯಲ್ಲಿ ಪೊಲೀಸರೇ ಘಟನಾ ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿ ಸಂತ್ರಸ್ತ ಮಹಿಳೆ ಇಚ್ಛಿಸಿದ ಜಾಗದಲ್ಲಿ ಹೇಳಿಕೆ ಪಡೆಯಬೇಕಿತ್ತು. ಅದನ್ನು ಸಹ ಮಾಡಲು ಜೆ.ಪಿ.ನಗರ ಪೊಲೀಸರಿಂದ ಸಾಧ್ಯವಾಗಿಲ್ಲ. ಯಾಕೆಂದರೆ ಇ- ಮೇಲ್ ಮೂಲಕ ದೂರು ಸಲ್ಲಿಸಿದ ಮಹಿಳೆ ವಿಳಾಸ ಪೊಲೀಸರಿಗೆ ಗೊತ್ತಿಲ್ಲ. ಮುಂದೆ ಗೊತ್ತಾಗಬಹುದೇ ಅದೂ ಯಾರಿಗೂ ಗೊತ್ತಿಲ್ಲ.!

ಅತ್ಯಾಚಾರ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಅತ್ಯಾಚಾರ ಪ್ರಕರಣದ ಅಸಲಿ ಸತ್ಯಾಂಶಗಳು ಹೊರ ಬಿದ್ದಿವೆ. ಈ ಅಂಶಗಳನ್ನು ಪರಿಗಣಿಸಿ ಅರ್ಜಿದಾರನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಳಾಸವಿಲ್ಲದ ಮಹಿಳೆ ರವಾನಿಸಿದ ದೂರನ್ನು ನಂಬಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತನಿಖೆ ಕೈಗೆತ್ತಿಕೊಂಡ ಜೆ.ಪಿ ನಗರ ಪೊಲೀಸರೇ ಫಜೀತಿಗೆ ಸಿಲುಕುವಂತಾಗಿದೆ. ದೂರು ಕೊಟ್ಟ ಮಹಿಳೆ ವಿಳಾಸಕ್ಕಾಗಿ ಇದೀಗ ಪೊಲೀಸರೇ ಪರದಾಡುವಂತಾಗಿದೆ. ದೂರುದಾರ ಸಂತ್ರಸ್ತ ಮಹಿಳೆ ಪತ್ತೆಯಾಗದ ಪಕ್ಷದಲ್ಲಿ ತನಿಖಾಧಿಕಾರಿಯೇ ಸಂತ್ರಸ್ತನಾಗಿ ಕೋರ್ಟ್ ಕಟೆ ಕಟೆ ಮುಂದೆ ನಿಲ್ಲಬೇಕಾದ ಸಂದರ್ಭ ಬರಬಹುದು.

ಜಿಲ್ಲೆ

ರಾಜ್ಯ

error: Content is protected !!