Saturday, July 27, 2024

ಕ್ಷಯ ರೋಗಿಗಳನ್ನು ದತ್ತು ಪಡೆದ ಜಿಲ್ಲಾಧಿಕಾರಿ: ಆರ್.ಲತಾ.

ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಯ ಮೂವರು ಕ್ಷಯರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರೆಗೂ ಅವರ ವೈದ್ಯಕೀಯ ಸೌಲಭ್ಯದ ವೆಚ್ಚ , ಪೌಷ್ಟಿಕ ಆಹಾರ ಪೂರೈಕೆ ಸೇರಿದಂತೆ ಇತರ ಅಗತ್ಯ ವೆಚ್ಚಗಳ ಜವಾಬ್ದಾರಿಯ ಹೊಣೆಯನ್ನು ವೈಯಕ್ತಿಕವಾಗಿ ವಹಿಸಿಕೊಂಡು ಜಿಲ್ಲಾಧಿಕಾರಿ ಆರ್.ಲತಾ ಅವರು ದತ್ತು ಪಡೆದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ‘ಕ್ಷಯ ರೋಗ ವೇದಿಕೆ’ ಕಾರ್ಯಕ್ರಮದಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಆರ್.ಲತಾ ಅವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

ಜಿಲ್ಲೆಯಲ್ಲಿನ ಕ್ಷಯರೋಗಿಗಳು ಸಂಪೂರ್ಣ ಗುಣಮುಖರಾಗಲು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ರಾಜ್ಯದಲ್ಲಿ ಕ್ಷಯರೋಗವನ್ನು ನಿರ್ಮೂಲನೆಗೊಳಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ “ಕ್ಷಯ ವೇದಿಕೆ” ಕಾರ್ಯಕ್ರಮವನ್ನು ರಚಿಸಲಾಗಿದೆ. ಈ ವೇದಿಕೆಯ ಮೂಲಕ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕ್ಷಯ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

2025 ರೊಳಗೆ ಕ್ಷಯಮುಕ್ತಗೊಳಿಸಲು 14 ಗ್ರಾಮ ಪಂಚಾಯ್ತಿಗಳ ಆಯ್ಕೆ:ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಉದ್ದೇಶದಿಂದ ಕ್ಷಯ ವೇದಿಕೆಯು 2025 ರೊಳಗೆ ಜಿಲ್ಲೆಯ 14 ಗ್ರಾಮ ಪಂಚಾಯ್ತಿಗಳನ್ನು ಕ್ಷಯಮುಕ್ತವನ್ನಾಗಿಸುವ ಮಹೋನ್ನತ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಹಾಗೂ ಅಗಲಗುರ್ಕಿ ಗ್ರಾಮ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕಿನ ಕೋನಂಪಲ್ಲಿ ಹಾಗೂ ಕಾಗತಿ ಗ್ರಾಮ ಪಂಚಾಯ್ತಿ, ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಹಾಗೂ ಹುಡಗೂರು ಗ್ರಾಮ ಪಂಚಾಯ್ತಿ, ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಹಾಗೂ ದೇವರ ಗುಡಿಪಲ್ಲಿ ಗ್ರಾಮ ಪಂಚಾಯ್ತಿ, ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಹಾಗೂ ಸಾದಲಿ ಗ್ರಾಮ ಪಂಚಾಯ್ತಿ, ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಹಾಗೂ ತಿರುಮಣಿ ಗ್ರಾಮ ಪಂಚಾಯ್ತಿ, ಮಂಚೇನಹಳ್ಳಿ ತಾಲ್ಲೂಕಿನ ಮಂಚೇನಹಳ್ಳಿ ಹಾಗೂ ತಿರುಮಣಿ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನಿಕ್ಷಯ’ ವೆಬ್ ನಲ್ಲಿ ನೋಂದಣಿ ಅಗತ್ಯ:
ಸರ್ಕಾರದ ‘ನಿಕ್ಷಯ’ವೆಬ್ ನಲ್ಲಿ ಕ್ಷಯ ರೋಗಿಯು ನೋಂದಣಿಯಾಗಿ ನೋಂದಣಿ ಸಂಖ್ಯೆಯನ್ನು ಪಡೆದರೆ ವೈಜ್ಞಾನಿಕವಾಗಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಈ ತಂತ್ರಾಂಶದಲ್ಲಿ ರೋಗಿಯ ಚಿಕಿತ್ಸೆ, ಚಿಕಿತ್ಸಾ ನಂತರದ ಪರೀಕ್ಷೆಗಳು ಇತ್ಯಾದಿ ವಿವರಗಳನ್ನು ದಾಖಲಿಸಲಾಗುವುದರಿಂದ ರೋಗಿಯು ಭಾರತದ ಯಾವುದೇ ಭಾಗದಲ್ಲಿ ಸ್ಥಳಾಂತರಗೊಂಡರೂ ನಿಕ್ಷಯ ನೋಂದಣಿ ಸಂಖ್ಯೆಯ ಮೂಲಕ ಚಿಕಿತ್ಸೆಯನ್ನು ಮುಂದುವರೆಸಬಹುದು ಇದನ್ನು ಕ್ಷಯ ಭಾದಿತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ನಿಕ್ಷಯ ಪೋಷಣೆ ಯೋಜನೆ:
ನಿಕ್ಷಯ ಪೋಷಣೆ ಯೋಜನೆಯಡಿ ನೋಂದಣಿಗೊಂಡ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕ್ಷಯ ರೋಗಿಗೆ ಚಿಕತ್ಸೆ ಪೂರ್ಣವಾಗುವರೆಗೆ, ಉತ್ತಮ ಆಹಾರ – ಪೋಷಣೆ ಪಡೆಯಲು ಸಹಕಾರಿಯಾಗಲು ಪ್ರತಿ ತಿಂಗಳು 500 ರೂಪಾಯಿ, ರೋಗಿಯ ಬ್ಯಾಂಕ್ ಅಕೌಂಟಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.ಈ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಗೊಂಡ ಎಲ್ಲರಿಗೂ 500 ರೂಪಾಯಿ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ ಜಿಲ್ಲೆಯಲ್ಲಿ ಜನವರಿ-2021 ರಿಂದ ಈ ವರೆಗೆ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ 2,80ಸಂಪರ್ಕಿತರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ಪೈಕಿ 73 ಜನರಿಗೆ ಕ್ಷಯರೋಗ ಸೋಂಕು ದೃಢಪಟ್ಟಿದೆ.ಅವರೆಲ್ಲರಿಗೂ ಕ್ಷಯರೋಗ ನಿಯಂತ್ರಣಾ ಚಿಕಿತ್ಸೆ ನೀಡಲಾಗುತ್ತಿದೆ ಜೊತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಇಗ್ಲಾ ಪ್ರಯೋಗಶಾಲೆಯನ್ನು ಪ್ರಾರಂಭಿಸಿದೆ ಎಂದರು.

ಜಿಲ್ಲಾ “ಕ್ಷಯ ವೇದಿಕೆ” ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ದತ್ತು ಪಡೆದ ಕ್ಷಯ ರೋಗಿಗಳೋಂದಿಗೆ ಸಂವಾದ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿ ಮನೋಸ್ಥೈರ್ಯ ತುಂಬಿದರು.ಪ್ರತಿಕ್ರಿಯಿಸಿದ ಕ್ಷಯ ರೋಗಿಗಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹಾಗೂ ಕಷ್ಟ ಕಾರ್ಪಣ್ಯಗಳನ್ನು ಜಿಲ್ಲಾಧಿಕಾರಿಗಳೋಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ವರದಿ: ಎ ಧನಂಜಯ್.ಚಿಕ್ಕಬಳ್ಳಾಪುರ M-9663626276

ಜಿಲ್ಲೆ

ರಾಜ್ಯ

error: Content is protected !!