Saturday, July 27, 2024

ವೈಷ್ಣವ ಧರ್ಮ ಸಾರುವ ಮುದಗಲ್ಲ ಕೋಟೆಯ ಮೊಗಸಾಲೆ..

ಮುದಗಲ್ಲ:ಪಟ್ಟಣದ ಐತಿಹಾಸಿಕ ಕೋಟೆಯ ಅಗಸೆ, ಪ್ರಮುಖ ಬೀದಿ, ಪ್ರಾಚೀನ ದೇವಾಲಯಗಳ ಹೊರ ಮತ್ತು ಒಳಮೈ ಗೋಡೆ ಕಂಬಗಳಲ್ಲಿ ಕದಂಬ, ಚಾಲುಕ್ಯ, ವಿಜಯನಗರ ಅರಸರ ವಿಜಯಪುರ ಆದಿಲ್ ಶಾಹಿಗಳ ಅನೇಕ ಉಬ್ಬು ಶಾಸನಶಿಲ್ಪಗಳು ಇವೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣ ಗೊಂಡ ಕಾಟಿದರ್ವಾಜದ ಹತ್ತಿರ ಇರುವ ಒಳ ಅಗಸೆಯ ಮೊಗಸಾಲೆ ವೈಷ್ಣವ ಧರ್ಮದ ಅತಿ ಹೆಚ್ಚು ಉಬ್ಬು ಶಿಲ್ಪಗಳಿವೆ.

ಈ ಮೊಗಸಾಲೆ ಎರಡು ಅಂಕಣದ ಎರಡು ಪಾರ್ಶ್ವಗಳನ್ನು ಹೊಂದಿದ್ದು, ಅಧಿಷ್ಠನ, ಉದಾಸನ, ಪದ್ಮ, ಅಲಂಕಾರಿಕ ಕುಮುದು, ಕಂಠ, ಕಪೋತ ಹಾಗೂ ಪಟ್ಟಿಕೆಗಳು ಇವೆ. ಗೋಡೆಗಳಲ್ಲಿ ವಿಜಯನಗರ ಅರಸರ ಶಾಸನಗಳಿವೆ. ಅಗಸೆ ಎಡ ಬಾಗಿಲಿಗೆ ವೆಂಗಳಪ್ಪ ನಾಯಕನ ಮೇಲೆ ಬೆಳಕು ಚೆಲ್ಲುವ ಶಾಸನ ಕಾಣಬಹುದು.

ಅಗಸಿ ಮಂಟಪದ 12 ಕಂಬಗಳಲ್ಲಿ ಉಬ್ಬು ಕೆತ್ತನೆಗಳು ದುಂಡು ಶಿಲ್ಪಗಳಿಗಿಂತಲೂ ಹೆಚ್ಚಾಗಿ ವಿಜೃಂಭಿಸುತ್ತಿವೆ. ಕೆಲವನ್ನಂತೂ ಇವು ಉಬ್ಬುಶಿಲ್ಪವೇ ಎನ್ನಲೂ ಅನುಮಾನಪಡುವಂತೆ ಶಿಲ್ಪಿ ತನ್ನ ಜಾಣ್ಮೆಯನ್ನು ಪ್ರದರ್ಶನ ಮಾಡಿದ್ದಾನೆ. ಕೆತ್ತನೆ ದೃಷ್ಟಿಯಿಂದ ನೋಡುವುದಾದರೆ ಶಿಲ್ಪಗಾರ ಕೆಲ ಉಬ್ಬುಶಿಲ್ಪಗಳನ್ನು ತಾಳ್ಮೆ ಹಾಗೂ ಸಮಯ ತೆಗೆದುಕೊಂಡು ನಾಜೂಕಾಗಿ ಕೆತ್ತಿದಂತೆ ಕಂಡು ಬರುತ್ತದೆ.

ಮಂಟಪದ ಬಲ ಕಟ್ಟೆಯ ಕೆಳ ಭಾಗದಲ್ಲಿ ಮಂಟಪಕ್ಕೆ ಅಲಂಕಾರಗೊಳಿಸುವ ಸಲುವಾಗಿ ಜನ ಸಾಮಾನ್ಯರು ತಮ್ಮ ಸುತ್ತಲಿನ ಪ್ರಾಣಿಗಳಾದ ಗಿಳಿ, ಸಿಂಹ, ಜಿಂಕೆ, ನವಿಲು, ಆನೆ, ಕುದುರೆ, ಬಾತುಕೋಳಿ, ನಾಗಶಿಲ್ಪಗಳು ಜತೆಗಿನ ಸಂಬಂಧಗಳ ಚಿತ್ರಗಳು ಕಾಣುತ್ತಿವೆ. ಇವುಗಳ ಮೇಲ್ಭಾಗದಲ್ಲಿ ಹೂವಿನ ಲಲಿತ ಸುರಳಿ ಕಾಣಿಸುತ್ತದೆ. ಮತ್ಸ್ಯ ಕನ್ಯೆಯ ಪ್ರಯಣ, ಮೀನನ ಮೇಲೆ ಕುಳಿತ ಮನುಷ್ಯನ ಚಿತ್ರ ಇವೆ. ಮಂಟಪದ 12 ಕಂಬಗಳಲ್ಲಿ ಪ್ರತಿ ಕಂಬದ ಒಂದು ಬದಿಗೆ ವೈಷ್ಣವ ದೇವಸ್ಥಾನದ ಗೋಪುರಗಳು, ಇವುಗಳ ಮುಂದೆ ವೈಷ್ಣವದ ದೇವಾಲಯದ ಇಕ್ಕಲದಲ್ಲಿರುವ ಜಯ-ವಿಜಯ ಎಂಬುವರ ದ್ವಾರ ಪಾಲಕರು ಇದ್ದಾರೆ. ಇವರು ತಲೆಯ ಮೇಲೆ ಕಿರೀಟ ಧರಿಸಿ, ಸೊಂಟಕ್ಕೆ ವಸ್ತ್ರ ಸುತ್ತಿದ, ಕೈಗಳಿಗೆ ಮಣಿ ಕಟ್ಟು ಧರಸಿದ ಮುದ್ದು ರಂಗನಾಥ ಸ್ವಾಮಿಯ ದ್ವಾರಪಾಲಕರಂತೆ ಕಾಣುತ್ತಿದ್ದಾರೆ. ಕಂಬದ ಇನ್ನೊಂದು ಬದಿಗೆ ವಿಜಯನಗರ ಪ್ರಖ್ಯಾತ ಕಲೆಯಾದ ವ್ಯಾಳಿ ಕಂಡು ಬರುತ್ತಿದೆ.ಮತ್ತೋಂದು ಕಂಬದಲ್ಲಿ ಗಂಡು ನವಿಲು ನೃತ್ಯ ಮಾಡುವುದು ಅದನ್ನು ಕಂಡ ಮಹಿಳೆ ಅನುಕರಣೆ ಮಾಡುತ್ತಿರುವ ಕಂಡು ಬರುತ್ತಿದೆ. ಯತಿಗಳು ತಪಸಿಗೆ ಕುಳಿತ ಬಂಗಿಯಲ್ಲಿರುವ ಉಬ್ಬು ಶಿಲ್ಪಗಳಿವೆ. ಇವುಗಳಲ್ಲದೇ ಗಣೇಶ, ಗೋವರ್ಧನಧಾರಿ ಕೃಷ್ಣ ಮತ್ತು ವಿಷ್ಣುವಿನ ಶಿಲ್ಪಗಳಿವೆ.

ಕೆಲ ಕಂಬಗಳಲ್ಲಿ ಸೊಂಟಕ್ಕೆ ಡಾಬು, ಕಿವಿ ಓಲೆ ಕೊರಳಿಗೆ ಪದಕ ಹಾರ ಮಣಿಸರಗಳು, ಕೈಗಳಿಗೆ ಕಡಗ ಮಣಿಬಂಧ, ತಲೆಯ ಕೇಶಗಳನ್ನು ತುರುಬು ಕಟ್ಟಿಕೊಂಡು ಶೃಂಗಾರಗೊಂಡ ಶಿಲಾ ಬಾಲಕಿಯರು ಇದ್ದಾರೆ. ಮೊಗಸಾಲೆಯ ಛಾವಣಿಯಲ್ಲಿ ಕಮಲದ ಭುವನೇಶ್ವರಿ ಇದೆ. ಇಲ್ಲಿನ ಉಬ್ಬುಶಿಲ್ಪಗಳು ಜನರ ಬದುಕಿನ ರೀತಿ-ನೀತಿಗಳು, ವಿವಿಧ ಧರ್ಮದ ಸಂಪ್ರದಾಯ, ಆಚರಣೆಗಳು, ಸ್ತ್ರೀಯರ ಉಡುಗೆ ತೊಡುಗೆಗಳ ಮೊದಲಾದ ವಿಷಯಗಳ ಮೇಲೆ ಬೆಳಕುಚೆಲ್ಲುವ ಜೀವಂತ ಸಾಕ್ಷಿಗಳಾಗಿವೆ.

ಈ ಬಾಗಿಲು ದಾಟಿ ಒಳಗೆ ಬಂದರೆ ಬಲ ಭಾಗಕ್ಕೆ ತಿರುಗಿದರೆ ಸುಂದರವಾದ ಕೆತ್ತನೆಯಿಂದ ಕೂಡಿದ ಎರಡನೇ ಅಗಸಿ ಇದೆ. ಇದರ ಪಕ್ಕದಲ್ಲಿ ಇನ್ನೋಂದು ದಕ್ಷಿಣಾಭಿಮುಖವಾಗಿರುವ ಬಾಗಿಲು ಇದೆ. ಪ್ರವೇಶದ ಇಕ್ಕೆಲಗಳಲ್ಲಿ ವಿಜಯನಗರ ಅರಸ ಕಾಲದ ಉಬ್ಬು ಶಿಲ್ಪಗಳಿವೆ. ಕ್ರಿ.ಶ 1482 ರಲ್ಲಿ ರಾಮರಾಯನ ಮಗನಾದ ಕೃಷ್ಣಪ್ಪರಾಜನ ಅಧಿಕಾರಿಯಾದ ವೆಂಗಳಪ್ಪ ನಾಯಕ ಬಾಗಿಲು ಮಾಡಿಸಿದ್ದಾನೆ ಎಂದು ಬಾಗಿಲು ಮೇಲೆನ ಶಾಸನ ತಿಳಿಸುತ್ತದೆ. ಕರ್ನಾಟಕದಲ್ಲಿ ದೊರೆಯುವ ಪುರಾತನ ಕದಗಳಲ್ಲಿ ಇದು ಒಂದಾಗಿದೆ. ಬಾಗಿಲಿನ ಕಂಬಗಳಲ್ಲಿ, ಹಾಗೂ ಮೊಗಸಾಲಿಯಲ್ಲಿ ಗೋವರ್ಧನಧಾರಿ ಕೃಷ್ಣ, ಗಣೇಶ, ವಿಷ್ಣು, ಆನೆ, ಮೀನು, ಸಿಂಹ ಸೇರಿ ಇನ್ನತರ ಉಬ್ಬು ಶಿಲ್ಪಗಳಿವೆ. ಒಟ್ಟಾರೆಯಾಗಿ ಪುರಾತನ ಕಾಲದ ಈ  ಶಿಲ್ಪಕಲೆಗಳು ನೋಡುಗರನ್ನು ಕೈಬಿಸಿ ಕರೆದು ಇತಿಹಾಸ ಸಾರುತ್ತಿರುವುದಂತು ಸತ್ಯ.

ವರದಿ: ಮಂಜುನಾಥ ಕುಂಬಾರ .

ಜಿಲ್ಲೆ

ರಾಜ್ಯ

error: Content is protected !!