Saturday, June 15, 2024

ಮೊದಲ ಸಾರ್ವಜನಿಕ ಬಸವ ಜಯಂತಿಯನ್ನಾಚರಿಸಿದ! ಕರ್ನಾಟಕದ ಗಾಂಧಿ :ಹರ್ಡೇಕರ ಮಂಜಪ್ಪನವರ ಜನ್ಮದಿನ ಇಂದು .

ಮರೆಯಲಾಗದ ಮಹಾನುಭಾವರು; ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು

” ನಾನು ಮತ್ತೆ ಹುಟ್ಟುವದಾದರೆ ಮರಿದುಂಬಿಯಾಗಿಯೋ, ಕೋಗಿಲೆಯಾಗಿಯೋ ಬನವಾಸಿಯಲ್ಲೇ ಹುಟ್ಟಬೇಕು” ಎಂದು ನಮ್ಮ ಆದಿಕವಿ ಪಂಪ ಆಶಿಸಿದ. ” ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದ ಪಂಪನ ಬನವಾಸಿ ನಾಡಿನಲ್ಲಿ ಹುಟ್ಟಿದ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ತಂದೆಯ ಹೆಸರೂ ಮಧುಕೇಶ್ವರಪ್ಪ.

ಉತ್ತರಕನ್ನಡ ಜಿಲ್ಲೆಯ ಬನವಾಸಿಯ ಆರಾಧ್ಯ ದೈವ ಮಧುಕೇಶ್ವರನ ಸನ್ನಿಧಿಯಲ್ಲೇ 1886  ಫೆಬ್ರವರಿ 18 ರಂದು ಹುಟ್ಟಿ ಬೆಳೆದು ಶಿರ್ಸಿಯಲ್ಲಿ ಮುಲ್ಕಿ ಪರೀಕ್ಷೆ ಮಾಡಿ, ಸ್ವಾತಂತ್ರ್ಯ ಹೋರಾಟದಿಂದ ಪ್ರೇರಿತರಾಗಿ‌ ತಮ್ಮ ಸಹೋದರ ಮಧುಲಿಂಗಪ್ಪನವರ ಜೊತೆಗೂಡಿ ದಾವಣಗೆರೆಯಲ್ಲಿ ಲೋಕಮಾನ್ಯ. ಟಿಳಕರ ಕೇಸರಿ ಪತ್ರಿಕೆ ಮಾದರಿಯಲ್ಲಿ ” ಧನುರ್ಧಾರಿ” ಎಂಬ ವಾರಪತ್ರಿಕೆಯನ್ನು ಆರಂಭಿಸಿದರು. ಕೊನೆಗೆ ಸ್ವಂತ ಮುದ್ರಣಾಲಯವನ್ನೂ ಹಾಕಿಕೊಂಡರು. ಆದರೂ ಬ್ರಿಟಿಷರ ವಿರುದ್ಧ ಉಗ್ರವಾಗಿ ಬರೆಯುತ್ತಿದ್ದ ಆ ಪತ್ರಿಕೆಯನ್ನು ಕೊಳ್ಳಲು ಜನರೇ ಹೆದರುತ್ತಿದ್ದರು. ಆದ್ದರಿಂದ ಪತ್ರಿಕೆ ಮುಂದುವರಿಸುವದು ಸಾಧ್ಯವಾಗಲಿಲ್ಲ.

ಮಂಜಪ್ಪನವರು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದು ಬದುಕನ್ನು ಪೂರ್ತಿ ಸಮಾಜ, ರಾಷ್ಟ್ರ ಸೇವೆಗೆ ಮೀಸಲಾಗಿರಿಸಿದರು. ದಾವಣಗೆರೆಯಲ್ಲಿ 1903  ರಲ್ಲಿ ಮೊದಲ ಸಾರ್ವಜನಿಕ ಬಸವ ಜಯಂತಿಯನ್ನಾಚರಿಸಿದ ಶ್ರೇಯಸ್ಸು ಇವರದು. ಬಸವೇಶ್ವರ ತರುಣ ಸಂಘ ಸ್ಥಾಪಿಸಿ ಸಮ್ಮೇಳನವನನ್ನೂ ಮಾಡಿದರು. ಮುಂದೆ ಜ್ಞಾನ ಪ್ರಸಾರಕ ಸಂಘ ಸ್ಥಾಪಿಸಿ ಖಾದಿ ಪ್ರಸಾರ , ಸ್ವದೇಶಿ ಚಳುವಳಿಗಳಲ್ಲಿ ಪಾಲ್ಗೊಂಡರು.1921  ರಲ್ಲಿ ರಾಷ್ಟ್ರಜೀವನ ಗ್ರಂಥಮಾಲೆ ಆರಂಭಿಸಿದರು. ಗಾಂಧೀಜಿ ತತ್ವ ಪ್ರಚಾರಕ್ಕಾಗಿ ಸತ್ಯಾಗ್ರಹ ಸಮಾಜ ಸ್ಥಾಪಿಸಿದರು.ಪುಸ್ತಕಗಳನ್ನು ಬರೆದು ಪ್ರಕಟಿಸುವದು ಮುಂದುವರಿದಿತ್ತು. ಹರಿಹರದ ಬಳಿ ತುಂಗಾನದಿ ತೀರದಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪಿಸಿದರು. ಒಮ್ಮೆ ನೆರೆಯಿಂದ ಅವರ ಆಶ್ರಮ ಪೂರ್ತಿ ನಾಶವಾಯಿತು. ಮಂಜಪ್ಪನವರು ಹೇಗೋ ಪಾರಾದರು.

ಉತ್ತರ ಕರ್ನಾಟಕ ಅವರ ಕಾರ್ಯಕ್ಷೇತ್ರವಾಯಿತು. ವಿಜಾಪುರದಲ್ಲಿ ಒಮ್ಮೆ ಅವರ ಭಾಷಣದ ಸಂದರ್ಭದಲ್ಲಿ ಕರ್ನಾಟಕ ಸಿಂಹ ದೇಶಪಾಂಡೆ ಗಂಗಾಧರರಾಯರು ಹರ್ಡೇಕರ ಮಂಜಪ್ಪನವರನ್ನು ಕರ್ನಾಟಕದ ಗಾಂಧಿ ಎಂದು ಬಣ್ಣಿಸಿದರು. ಬಸವ ತತ್ವಪ್ರಸಾರಕ್ಕಾಗಿ ಕೃಷ್ಣಾ ತೀರದ ಆಲಮಟ್ಟಿಯಲ್ಲಿ  ವಿದ್ಯಾಲಯ ಸ್ಥಾಪಿಸಿದರು. ಅನೇಕ ಶರಣರ ಕುರಿತು ಉಸ್ತಕಗಳನ್ನು ಹೊರತಂದರು.

1928 ರಲ್ಲಿ ” ಖಾದಿ ವಿಜಯ” ಎಂಬ ಪತ್ರಿಕೆ ಹಾಗೂ‌ ಉದ್ಯೋಗ ಮಾಸಿಕ ಆರಂಭಿಸಿದರು. 1931 ರಿಂದ ಶರಣ ಸಂದೇಶ ಎಂಬ ಪತ್ರಿಕೆ ಆರಂಭಿಸಿದರು. ಹೀಗೆ ನಿರಂತರ ಪುಸ್ತಕ ಪತ್ರಿಕೆಗಳ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಕ್ಕಳಿಗಾಗಿ ಹಲವು ಪುಸ್ತಕ ಬರೆದರು. ಋಗ್ವೇದ ಸಾರ ವೆಂಬ ಗ್ರಂಥ ರಚನೆಗೆ ತಯಾರಿ ನಡೆಸಿದ್ದರು. ಐವತ್ತ‌ಕ್ಕೂ ಹೆಚ್ಚು ಕೃತಿಗಳನ್ನು ಬರೆದರು.

ಹರ್ಡೇಕರ ಮಂಜಪ್ಪನವರದು ಮುಖ್ಯವಾಗಿ ರಾಷ್ಟ್ರೀಯ ಮನೋಧರ್ಮದ ಉನ್ನತಿಗಾಗಿಯೂ ಅವರು ಸಾಕಷ್ಟು ಕೆಲಸ ಮಾಡಿದರು. ವಿದ್ವಾಂಸರಾಗಿ, ಪತ್ರಕರ್ತರಾಗಿ, ದೇಶಪ್ರೇಮಿಗಳಾಗಿ, ಸಚ್ಚಾರಿತ್ರ್ಯವಂತರಾಗಿ ಜೀವನವನ್ನೇ ಸಮಾಜ ಸೇವೆಗಾಗಿ ಅರ್ಪಿಸಿಕೊಂಡ ಅವರು ನಮಗೆಲ್ಲ ಪ್ರಾತ: ಸ್ಮರಣೀಯರೇ ಆಗಿದ್ದಾರೆ.

ಲೇಖಕರು- ಎಲ್. ಎಸ್. ಶಾಸ್ತ್ರಿ

ಜಿಲ್ಲೆ

ರಾಜ್ಯ

error: Content is protected !!