Thursday, September 19, 2024

ಜ್ಞಾನ ದೇಗುಲದಲ್ಲಿ ಮತೀಯ ಜ್ವಾಲೆ…

ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವಾಗುವ ಪರಿಸರದಲ್ಲಿಗ ನಾವಾ? ಅಥವಾ ನೀವಾ ? ಎನ್ನುವ ಮತೀಯ ಸಮರ ಭುಗಿಲೆದ್ದಿದೆ. ಇದಕ್ಕೆಲ್ಲ ಕಾಣದ ಕೈಗಳ ಕುತಂತ್ರವೂ ವಿರಬಹುದು, ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮುಂದಿರಿಸಿಕೊಂಡು ಭವಿಷ್ಯದ ಉತ್ತಮ ರೂವಾರಿಗಳಾಗಬೇಕಾದ ಇಂದಿನ ಮಕ್ಕಳಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ವಿಷದ ಬೀಜವನ್ನು ಬಿತ್ತುತ್ತಿರುವ ಸಂಗತಿಯನ್ನು ನೆನಸಿಕೊಂಡರೆ ಅಸಹ್ಯವೆನಿಸುತ್ತದೆ.

“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂದು ಮಗುವನ್ನ ಆಹ್ವಾನಿಸುವ ವಿದ್ಯಾಮಂದಿರದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕಾದ ಎಳೆಯ ಮನಸ್ಸುಗಳಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಸದ್ದು ಮಾಡಿದರೆ ಈಗ ಜೈಭೀಮ್ ಎನ್ನುವ ಹೆಸರಿನಲ್ಲಿ ನೀಲಿ ಶಾಲಿನ ಹವಾ ಎದ್ದಿದೆ ಮತ್ತೆ ನಾಳೆಗೆ ಮತ್ತೊಂದು ಧರ್ಮದ ಹೆಸರಿನಲ್ಲಿ ಮತ್ಯಾವ ಬಣ್ಣದ ಶಾಲು ಅಥವಾ ಧಿರಿಸು ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ.. ಆದರೆ ಇದ್ಯಾವುದರ ಪರಿವೆಯೇ ಇಲ್ಲದೆ ಜ್ಞಾನಾರ್ಜನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳಲ್ಲಿ ಈ ತರಹದ ವಿಷದಜ್ವಾಲೆಯನ್ನು ಹೊತ್ತಿಸಿ ದಿನಕ್ಕೊಂದೊಂದು ಹೇಳಿಕೆಗಳು ದಿನಕ್ಕೊಂದೊಂದು ಅನವಶ್ಯಕ ವಿಚಾರಗಳು ಶಾಲಾ-ಕಾಲೇಜಿನ ಮಕ್ಕಳಲ್ಲಿ ಗೊಂದಲವನ್ನುಂಟು ಮಾಡಿವೆ.

ಹಲವು ಜಾತಿ-ಮತ-ಪಂಥ ಧಾರ್ಮಿಕ ಆಚಾರ ವಿಚಾರ ಸಂಪ್ರದಾಯ ಎಲ್ಲವನ್ನೂ ಒಳಗೊಂಡ ವೈವಿಧ್ಯತೆಯಿಂದ ಕೂಡಿದ ನಮ್ಮ ದೇಶ ಏಕತೆಯನ್ನು ಹೊಂದುವುದು ಅವಶ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆ ಎನ್ನುವ ವಿಚಾರವನ್ನು ಮರೆತು ಕೆಲವು ಮುಸ್ಲಿಂ ಸಂಘಟನೆಗಳು, ಹಿಂದೂ ಸಂಘಟನೆಗಳು ಹೋರಾಟವನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಇಂತಹ ವಿಷಯದ ಜ್ವಾಲೆಗೆ ಬಳಸಿಕೊಳ್ಳುತ್ತಿರುವುದು ದುರಂತದ ಸಂಗತಿ, ಇಂತಹದೇ ಸಮಯಕ್ಕೆ ಕಾಯ್ದು ಕುಳಿತಂತಿರುವ ರಾಜಕೀಯ ಪಕ್ಷಗಳು ತಮ್ಮ ಚುನಾವಣೆಯ ಗಿಮಿಕ್ ಗಳಾಗಿ ಇಂತಹ ಅನವಶ್ಯಕ ಸಂಗತಿಗಳನ್ನು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಗತಿಗಳನ್ನು ಬಳಸಿಕೊಂಡು ಹಿಜಾಬ್ ವರ್ಸಸ್ ಕೇಸರಿ ಶಾಲು ಎನ್ನುವ ನೆಪವನ್ನೊಡ್ಡಿ ಆರೋಪ ಪ್ರತ್ಯಾರೋಪದ ಕಾರ್ಯದಲ್ಲಿ ತೊಡಗಿವೆ,ಶಿಕ್ಷಣ ಕ್ಷೇತ್ರವನ್ನು ಸಹ ರಾಜಕೀಕರಣ ಗೊಳಿಸುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ಎಚ್ಚರಿಕೆ ವಹಿಸಲೇಬೇಕು.

ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ಬೆಳೆಸುವುದು ಶಿಕ್ಷಣದ ಗುರಿ, ಮಕ್ಕಳಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರ ಮೂಲಕ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ, ಸರ್ವಾಂಗೀಣ ವ್ಯಕ್ತಿತ್ವ ವಿಕಾಸ ಗೊಳಿಸುವುದೇ ಶಿಕ್ಷಣ ಎನ್ನುವ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಶೈಕ್ಷಣಿಕ ವಿಚಾರಧಾರೆಗಳನ್ನು ನೆನಪಿಸಿಕೊಳ್ಳೋಣ.

ಇಡೀ ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಇದರಲ್ಲಿರುವ ಸಾರ ಸತ್ವವನ್ನ ತಿಳಿಸಿದ ಯುವಶಕ್ತಿಯ ಚೈತನ್ಯ ಶಿಕ್ಷಣ ಚಿಂತಕರಾಗಿದ್ದ ಸ್ವಾಮಿ ವಿವೇಕಾನಂದರು ಒಂದು ಮಗುವಿನಲ್ಲಿರುವ ದೈವಿಕ ಪರಿಪೂರ್ಣತೆಯನ್ನು ಹೊರ ಸೆಳೆಯುವಂತೆ ಮಾಡುವುದೇ ಶಿಕ್ಷಣ ಎನ್ನುವ ಅವರ ವಿಚಾರ ಗಮನಿಸಿದರೆ ಹುಟ್ಟುತ್ತಲೇ ಮಗುವಿನಲ್ಲಿ ದೈವೀ ಗುಣಗಳು ಇದ್ದೇ ಇರುತ್ತದೆ ಆದರೆ ಆ ಮಗುವಿನಲ್ಲಿರುವ ದೈವಿಕ ಅಂಶವನ್ನು ನಾವೆಲ್ಲರೂ ಸೇರಿ ಜಾತಿ ಮತ ಧರ್ಮ ಪಂಥ ಇವುಗಳ ಹೆಸರಿನಲ್ಲಿ ಭಿನ್ನ ಎನ್ನುವ ಕಲ್ಪನೆಯನ್ನು ಬೆಳೆಸುತ್ತಿರುವ ಇಂದಿನ ಸಂಗತಿಗಳು ಒಂದು ಮಗುವಿನ ಕಲಿಕಾ ಹಿನ್ನಡೆಯ ಜೊತೆಗೆ ಮೌಲ್ಯಗಳ ಕುಸಿತಕ್ಕೂ ಸಹ ಇದು ಕಾರಣವಾಗುತ್ತಿದೆ.

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಎನ್ನುವ ಭೇದ ಭಾವವನ್ನು ಮರೆತು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎನ್ನುವ ಹೆಮ್ಮೆಯ ಭಾವನಾತ್ಮಕ ನಂಟನ್ನು ಮಕ್ಕಳಲ್ಲಿ ಬೆಳೆಸುವ ಮೌಲ್ಯಯುತ ಶಿಕ್ಷಣ ಇಂದು ಮತೀಯ ಗಲಭೆಗಳಲ್ಲಿ ಮಕ್ಕಳನ್ನು ಸಿಕ್ಕಿ ಹಾಕಿಸಿ ವಿರೋಧಾಭಾಸದ ಮನೋಭಾವನೆಗಳನ್ನು ಉಂಟು ಮಾಡುತ್ತಿದೆ.

ಒಂದು ಸಮಾಜದ, ಒಂದು ಶಿಕ್ಷಣ ವ್ಯವಸ್ಥೆಯ ಸ್ವಾಸ್ತ್ಯವನ್ನು ಹಾಳು ಮಾಡುತ್ತಿರುವ ಕೆಲವು ಕುತಂತ್ರಿಗಳು ಉದ್ದೇಶಪೂರಿತವಾಗಿ ಹಿಜಾಬ್ ಎನ್ನುವ ವಿಚಾರವನ್ನು ಸಮಸ್ಯಾತ್ಮಕವಾಗಿ ಬಿಂಬಿಸುತ್ತಿವೆ. ಅದರ ಪರಿಣಾಮ ಇನ್ನೂ ಕೆಲವು ಮಕ್ಕಳು ಅದಕ್ಕೆ ಭುಗಿಲೆದ್ದು ಕೇಸರಿ ಶಾಲು ಹೊದ್ದುಕೊಂಡು ಬಂದರೆ ಏನು ತಪ್ಪು ನೀಲಿ ಶಾಲುಹೊದಿಸಿ ಕೊಂಡು ಬಂದರೆ ಏನು ತಪ್ಪು ಎನ್ನುವ ಉದ್ಧಟತನದ ವರ್ತನೆಯನ್ನು ತೋರುತ್ತಿದ್ದಾರೆ.

ಹಿಜಾಬ್ ಕೇಸರಿ ಶಾಲು ನೀಲಿ ಶಾಲು ಇನ್ಯಾವುದೋ ಬಣ್ಣದ ಶಾಲು ಅಥವಾ ಧಿರಿಸು ಹಾಕಿಕೊಂಡು ಬಂದರೆ ನಮ್ಮ ಧರ್ಮ ತತ್ವ ಸಿದ್ಧಾಂತ ಉಳಿಸುತ್ತೇವೆ ಎನ್ನುವ ಭ್ರಮೆಯನ್ನು ಬಿಟ್ಟು, ಒಂದು ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಾರ್ಜನೆಯೇ ಮೂಲ ಉದ್ದೇಶವನ್ನಿಟ್ಟುಕೊಂಡು ಬಂದು ದಾಖಲಾದ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಖಾಸಗಿ ಶಾಲಾ ಕಾಲೇಜಿನ ನಿಯಮಾನುಸಾರ ಸಮವಸ್ತವನ್ನು ಕಡ್ಡಾಯವಾಗಿ ಧರಿಸಲೇಬೇಕು. ಸಮಾನತೆಯ ಸಂಕೇತವನ್ನು ಸಾರುವ ನಿಗದಿಪಡಿಸಿದ ಸಮವಸ್ತ್ರ ಯಾವುದೇ ಬಡವ-ಬಲ್ಲಿದ ಶ್ರೀಮಂತ ಉಚ್ಚ-ನೀಚ ಹೆಚ್ಚು ಕಡಿಮೆ ಎನ್ನುವ ಭಾವನೆಯನ್ನು ತೊಡೆದು ಹಾಕಿ, ಆ ಶಾಲೆಯ ಅಥವಾ ಆ ಕಾಲೇಜಿನ ನಿಯಮಾವಳಿಗಳನ್ನು ಪಾಲಿಸುವುದು ಪ್ರತಿ ವಿದ್ಯಾರ್ಥಿಯ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿರುತ್ತದೆ.

ಹೈಕೋರ್ಟ್ ಮೆಟ್ಟಿಲೇರುವ ವರೆಗೂ ಈ ಪ್ರಕರಣವನ್ನು ಬೆಳೆಸುವ ಅವಶ್ಯಕತೆ ಇರಲಿಲ್ಲ, ಪ್ರಜ್ಞಾವಂತ ಸಮಾಜವನ್ನು ಕಟ್ಟುವುದು ಈ ಸಮಾಜದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ, ಸಂವಿಧಾನದ ಹಕ್ಕು, ಶಿಕ್ಷಣ ಹಕ್ಕು ,ಸಮಾನತೆಯ ಹಕ್ಕು ,ಎನ್ನುವ ಸಂಗತಿಗಳನ್ನು ಮುಂದಿಟ್ಟುಕೊಂಡು ಅನವಶ್ಯಕ ಮತೀಯ ಗಲಭೆಗಳನ್ನು ಎಬ್ಬಿಸುತ್ತಿರುವ ದನ್ನು ನೋಡಿದರೆ ಉದ್ದೇಶಪೂರಿತವಾದ ಪೂರ್ವಯೋಜಿತ ಸಂಚು ಎನ್ನುವುದು ತಿಳಿಯುತ್ತದೆ.

ಈ ಹಿಂದೆಯೂ ಇಂತಹ ಸಮವಸ್ತ್ರ ಸಂಹಿತೆಯ ಪ್ರಕರಣಗಳು ಬಂದಾಗ ಕಾನೂನಿನ ಚೌಕಟ್ಟಿನಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯೇ ನಿಯಮಾನುಸಾರ ಕ್ರಮ ವಹಿಸಿತ್ತು. ಆದರೆ ಮತ್ತೆ ಈಗ ದಿಡೀರನೆ ಇಂತಹ ಅನವಶ್ಯಕ ಅಂಶಗಳನ್ನು ಮಕ್ಕಳ ಮನಸ್ಸಿನಲ್ಲಿ ಆಕ್ರೋಶದ ರೂಪದಲ್ಲಿ ಹೊರಹೊಮ್ಮುತ್ತಿರುವದನ್ನು ನೋಡುತ್ತಿದ್ದರೆ ಇದು ನೇರವಾಗಿ ಮಕ್ಕಳ ಕಲಿಕಾ ಪ್ರಗತಿಯ ಮೇಲೆಯೇ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.

ಒಂದು ದೇಶದ ಸಮಗ್ರತೆಯನ್ನು ಹಾಳು ಮಾಡುವ ಇಂತಹ ಪಿತೂರಿಗಳನ್ನು ಬೆಳೆಸಿಕೊಡದೆ, ನಾವೆಲ್ಲರೂ ಕರ್ನಾಟಕ ಶಿಕ್ಷಣ ಕಾಯಿದೆಯ ಅನುಸಾರ ಸರಕಾರ ಏನು ಆದೇಶದಲ್ಲಿ ವಿಷಯವನ್ನು ಪ್ರಸ್ತಾಪಿಸಿದೆಯೋ ಶಿಕ್ಷಣ ಇಲಾಖೆಯ ನಿಯಮಗಳನ್ನು ಶಾಲಾ-ಕಾಲೇಜುಗಳು ಪಾಲಿಸುತ್ತದೆ ಅಂತಹ ವಿದ್ಯಾಮಂದಿರದಲ್ಲಿ ಶಿಕ್ಷಣ ಪಡೆಯುವ ಮಕ್ಕಳೂ ಶಾಲಾ ಕಾಲೇಜಿನ ನಿಯಮಗಳಿಗೆ ಬದ್ಧವಾಗಿ ಕಲಿಕೆಯೊಂದೇ ಉದ್ದೇಶವಾಗಿರಿಸಿಕೊಂಡು ಜ್ಞಾನಾರ್ಜನೆಯಲ್ಲಿ ತೊಡಗಿದಾಗ ಮಾತ್ರ ಒಂದು ಮಗು ನಿಜವಾದ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವ ಮೂಲಕ ಸರ್ವಾಂಗೀಣ ವ್ಯಕ್ತಿತ್ವ ವಿಕಾಸದೊಂದಿಗೆ ತನ್ನ ಸುತ್ತಲಿನ ಸಮಾಜ, ಒಂದು ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

 

ಲೇಖಕರು: ಸುಧಾ ಹುಚ್ಚಣ್ಣವರ
ಉಪನ್ಯಾಸಕರು.ಶಿರಹಟ್ಟಿ

ಜಿಲ್ಲೆ

ರಾಜ್ಯ

error: Content is protected !!