Thursday, July 25, 2024

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಆರೋಪ: ಒಂದೇ ತಾಲೂಕಿನಲ್ಲಿ 56 ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು, ಫೆ. 07: ಕರ್ನಾಟಕ ಪೊಲೀಸ್ ಇಲಾಖೆಯ 545 ಸಿವಿಲ್ ಪೊಲೀಸ್ ಸಬ್‌ಇನ್ಸಪೆಕ್ಟರ್ ನೇಮಕಾತಿ ಸಂಬಂಧ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕು ಒಂದರಿಂದಲೇ 56 ಅಭ್ಯರ್ಥಿಗಳು ಆಯ್ಕೆಯಾಗಿರುವುದರ ಸುತ್ತ ಅನುಮಾನ ಹುಟ್ಟು ಹಾಕಿದೆ. ಬ್ಲಟೂತ್ ಬಳಿಸಿ ಪರೀಕ್ಷೆ ಬರೆದಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದ್ದು ಈ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ತರಬೇತಿ ಮತ್ತು ನೇಮಕಾತಿ ವಿಭಾಗದ ಎಡಿಜಿಪಿಗೆ ಕೆಲ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಖಾಲಿಯಿದ್ದ 545 ಪಿಎಸ್ಐ (ಸಿವಿಲ್) ಹುದ್ದೆಗಳ ನೇಮಕಾತಿ ಸಂಬಂಧ ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ದೈಹಿಕ ಪರೀಕ್ಷೆ ಬಳಿಕ ಲಿಖಿತ ಪರೀಕ್ಷೆ ನಡೆದು ಕಳೆದ ಜ. 19 ರಂದೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡಿತ್ತು. ಈ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬೆಚ್ಚಿ ಬೀಳುವ ಸಂಗತಿ ಹೊರ ಬಿದ್ದಿತ್ತು.

ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ ತಾಲೂಕು ಒಂದರಿಂದಲೇ 56 ಪಿಎಸ್ಐಗಳು ನೇಮಕವಾಗಿರುವುದು ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ಒಂದು ಜಿಲ್ಲೆಯಿಂದಲೂ ಇಷ್ಟು ಮಂದಿ ನೇಮಕವಾಗಲು ಅಸಾಧ್ಯ. ಅಫ್ಜಲ್ ಪುರ ತಾಲೂಕಿನಿಂದ ಇಷ್ಟು ಮಂದಿ ಆಯ್ಕೆಯಾಗಲು ಏನು ಕಾರಣ ಎಂದು ಹುಡುಕಿದಾಗ ಸ್ಫೋಟಕ ಸಂಗತಿ ಹೊರ ಬಿದ್ದಿದೆ. ನೇಮಕಾತಿ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಿಸಿ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳಿಸಿಕೊಂಡು ಅಕ್ರಮ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ, ತರಬೇತಿ ಮತ್ತು ನೇಮಕಾತಿ ವಿಭಾಗದ ಎಡಿಜಿಪಿ ಅವರಿಗೆ ಪತ್ರ ರಾಮಚಂದ್ರ ಬಳಶೆಟ್ಟಿಹಾಳ ಎಂಬಾತ ಬರೆದಿರುವ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಒಂದೇ ತಾಲೂಕಿನ 56 ಅಭ್ಯರ್ಥಿಗಳು ಪಿಎಸ್ಐ ಗಳಗಿ ನೇಮಕಾತಿ ಆಗಿರುವುದು, ನೊಂದ ವಿದ್ಯಾರ್ಥಿ ಮಾಡಿರುವ ಆರೋಪಕ್ಕೆ ತಾಳೆಯಾಗುವಂತಿದೆ.

ಬ್ಲೂಟೂತ್ ನೆರವಿನಿಂದ ಪರೀಕ್ಷೆ ಆರೋಪ:-ಯಾದಗಿರಿಯ ಅರೋಗ್ಯ ಇಲಾಖೆಯಲ್ಲಿರುವ ಪ್ರಥಮ ದರ್ಜೆ ಸಹಾಯಕನಾಗಿರುವ ಒಬ್ಬ ಕಿಂಗ್ ಪಿನ್ ಬ್ಲೂಟೂತ್ ನೆರವಿನಿಂದ ಪರೀಕ್ಷೆ ಬರೆಸುತ್ತಾನೆ. ಈ ಹಿಂದೆ ಪ್ರಥಮ ದರ್ಜೆ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಇದೇ ರೀತಿ ಆರೋಪ ಕೇಳಿ ಬಂದಿತ್ತು. ಇದೀಗ ಪಿಎಸ್ಐ ನೇಮಕಾತಿಯಲ್ಲಿ ಒಂದೇ ತಾಲೂಕಿನ 56 ಮಂದಿ ನೇಮಕವಾಗಿರುವುದರ ಹಿಂದೆ ಬ್ಲೂಟೂತ್ ಅಕ್ರಮ ಅಡಗಿದೆ. ಈ ಹಿಂದೆ ಪೊಲೀಸ್ ಪೇದೆ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ಈ ಅಕ್ರಮ ನಡೆದಿದೆ. ವಾಮ ಮಾರ್ಗದ ಮೂಲಕ ನೇಮಕಗೊಂಡವರಿಂದ ವಿದ್ಯಾವಂತ ಯುವಕರಿಗೆ ಅನ್ಯಾಯವಾಗಿದೆ. ಅಫ್ಜಲ್ ಪುರ ತಾಲೂಕಿನಿಂದ ನೇಮಕವಾದವರ ಹಾಗೂ ಕಿಂಗ್ ಪಿನ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದರೆ ಬ್ಲೂಟೂತ್ ಸಾಧನ ಇಟ್ಟುಕೊಂಡು ಪರೀಕ್ಷೆ ಬರೆದು ಪಾಸಾಗುವ ದಂಧೆ ಬಯಲಿಗೆ ಬರಲಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರಾಮಚಂದ್ರ ಬಳಶೆಟ್ಟಿಹಾಳ ಸಹಿಯುಳ್ಳ ಅಭ್ಯರ್ಥಿಯ ದೂರಿನ ಪ್ರತಿ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

 

ಜಿಲ್ಲೆ

ರಾಜ್ಯ

error: Content is protected !!