Saturday, July 27, 2024

ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು : ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು

ಬೆಳಗಾವಿ 06: ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೇ ಕಣ್ಣನ್ನಾಗಿ ಮಾಡಿಕೊಂಡು ಕನ್ನಡದ ಸೇವೆ ಮಾಡಬೇಕು. ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು. ಪ್ರತಿಯೊಬ್ಬ ಕನ್ನಡಿಗನು ಪೋಸ್ಟಮನ್ ಆಗಿ ಮನ ಮನೆಗಳಿಗೆ ಕನ್ನಡ ತಲುಪಿಸುವ ಕೆಲಸ ಮಾಡಬೇಕು ಎಂದು ಹುಕ್ಕೇರಿ-ಬೆಳಗಾವಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಾಹಾಸ್ವಾಮಿಗಳು ಹೇಳಿದರು.

ನಗರದ ಕನ್ನಡ ಭವನದಲ್ಲಿ ಇಂದು ಜರುಗಿದ್ದ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಕಾರ್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಯೊಬ್ಬರು ಕನ್ನಡಕ್ಕಾಗಿ ಕೈ ಎತ್ತುವದಷ್ಟೆ ಅಲ್ಲದೇ ಸಂದರ್ಭ ಬಂದರೆ ಕನ್ನಡಕ್ಕಾಗಿ ಜೀವವನ್ನು ಕೊಡಲು ಪಣ ತೊಡಬೇಕು. ನಮ್ಮ ಕನ್ನಡ ನಾಡು ನುಡಿ ಉಳಿಸಿ ಬೆಳಸುವುದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ನಾವುಗಳು ನಮ್ಮ ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಾಗ ಮಾತ್ರ ನಮ್ಮ ನಾಡು-ನುಡಿ ರಕ್ಷಣೆ ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಎರಡನೇ ಬಾರಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿ ಕನ್ನಡಾಂಬೆ ಸೇವೆ ಮಾಡಲು ಅವಕಾಶ ಕೊಟ್ಟಿದ್ದೇರಿ ಅಷ್ಟೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ.

ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ನಿಂತು ಸಹಕಾರ ನೀಡಿ ಕನ್ನಡದ ಚಟುವಟಿಕೆ, ಅಭಿವೃದ್ದಿ, ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಗಳ ನೂತನ ಅಧ್ಯಕ್ಷರುಗಳಿಗೆ ಮತ್ತು ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯರುಗಳಗೆ ಶಾಲು ಹೊದಿಸಿ ಕನ್ನಡದ ಕೊರಳು ಪಟ್ಟಿ ನೀಡಿ ಸನ್ಮಾನಿಸಿ ಕಸಾಪದ ಧ್ವಜ ಹಸ್ತಾಂತರ ಮಾಡಲಾಯಿತು.

ಅಗಲಿದ ನಾಡಿನ ಗಣ್ಯರಾದ ಚಂದ್ರಶೇಖರ ಪಾಟೀಲ್, ಬಸಲಿಂಗಯ್ಯ ಹಿರೇಮಠ, ಲತಾ ಮಂಗೇಶ್ಕರ, ಇಬ್ರಾಹಿಂ ಸುತಾರ, ಸುನೀತಾ ಮೊರಬದ, ಶ್ರೀನಿವಾಸ ಕುಲಕರ್ಣಿ ಇವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಲತಾ ಮಂಗೇಶ್ಕರ ಹಾಡಿದ “ಏ ಮೇರೆ ವತನ ಕೇ ಲೋಗೋ” ಹಾಡನ್ನು ಪ್ರತಿಭಾ ಕಳ್ಳಿಮಠ ಹಾಡಿ ಗಾನ ಶೃದ್ದಾಂಜಲಿ ಸಲ್ಲಿಸಿದರು.

ಈ ವೇಳೆ ಸಾಹಿತಿ ವೀರಣ್ಣ ಕಲ್ಲಪ್ಪ ಗಿರಿಮಲ್ಲಣವರ ರವರ ಸನ್ಮಾರ್ಗಿ ನೀನಾಗು “ವಚನಾಂಜಲಿ” ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಹಿರಿಯ ಸಾಹಿತಿಗಳಾದ ಪ್ರೋ ಚಂದ್ರಶೇಖರ ಅಕ್ಕಿ, ಡಾ. ಬಾಳಾ ಸಾಹೇಬ ಲೋಕಾಪುರೆ, ಬಿ.ವಿ.ನರಗುಂದ, ಡಾ.ಎಸ್.ಎಅಸ್.ಅಂಗಡಿ, ಪ್ರೋ.ಎಲ್.ವಿ.ಪಾಟೀಲ್, ಡಾ.ಹೆಚ್.ಬಿ.ಕೋಲಕಾರ, ಡಾ.ಹೆಚ್.ಆಯ್. ತಿಮ್ಮಾಪೂರ, ಬಾಲಶೇಖರ ಬಂದಿ, ಡಾ.ಸ್ಮೀತಾ ಸುರೇಬಾನಕರ, ಮಹಿಳಾ ಸಮಾಜದ ಅದ್ಯಕ್ಷೆ ಶ್ರೀಮತಿ ಶೈಲಜಾ ಬಿಂಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸದಸ್ಯರು, ಸಾಹಿತಿಗಳು, ಗಣ್ಯರು ಪಾಲಗೊಂಡಿದ್ದರು.

ಎಂ.ವೈ.ಮೆಣಶಿನಕಾಯಿ ಸ್ವಾಗತಿಸಿದರು.ವೀರಭದ್ರ ಅಂಗಡಿ ವಂದಸಿದರು. ಪ್ರತಿಭಾ ಕಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು.

 

 

 

ಜಿಲ್ಲೆ

ರಾಜ್ಯ

error: Content is protected !!