Friday, July 26, 2024

ಕೃಷ್ಣೆಯ ನಾಡಿನ ಕಬೀರ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ

ಬೆಳಗಾವಿ(ಫೆ.05): ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಕೊನೆಯುಸಿರೆಳದಿದ್ದಾರೆ. ಇಂದು ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಕೃಷ್ಣೆಯ ನಾಡಿನ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಇನ್ನಿಲ್ಲ. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕೋಮು ದ್ವೇಷ, ಜಾತಿ–ಧರ್ಮದ ಅಮಲು ಮಾನವತೆಯನ್ನು ಮಂಕಾಗಿಸಿರುವ ವಿಪ್ಲವದ ಈ ದಿನಗಳಲ್ಲಿ ಜನಸಾಮಾನ್ಯರ ನಡುವಿದ್ದ ಈ ಕಬೀರ ದಿಢೀರನೆ ಕಣ್ಮರೆಯಾಗಿದ್ದಾರೆ. 

ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್ ಹಾಗೂ ಅಮೀನಾಬಿ ದಂಪತಿ ಪುತ್ರ ಇಬ್ರಾಹಿಂ ಸುತಾರ 1940 ಮೇ 10 ಜನಿಸಿದ್ದರು. ಅವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿಗೆ ಶಿಕ್ಷಣ ಅಪೂರ್ಣಗೊಂಡಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.

ಇಬ್ರಾಹಿಂ ಸುತಾರ ಕುಟುಂಬ

ಬಾಲ್ಯದಲ್ಲಿ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಈ ವೇಳೆ ಬೇರೆ ಧರ್ಮಗಳ ಸಾರ ಅರಿಯುವ ಆಶಯ ಮೊಳಕೆಯೊಡೆಯಿತು. ಅದಕ್ಕೆ ಊರಿನ ಸಾಧುನ ಗುಡಿಯಲ್ಲಿದ್ದ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮ್ಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು

Koo App

ಸರ್ವಧರ್ಮ ಭಾವೈಕ್ಯತೆಯ ಸಂದೇಶ ಸಾರಿದ ಸೂಫಿ ಸಂತ, ತತ್ವಪದಕಾರರು, ಪ್ರವಚನಕಾರರು, ಪದ್ಮಶ್ರೀ ವಿಜೇತ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅನುಯಾಯಿಗಳು, ಕುಟುಂಬ ವರ್ಗ ಹಾಗೂ ಹಿತೈಷಿಗಳಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 5 Feb 2022

ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಅರಿವಿಗೆ ಬಂದಿತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು’ ಎಂದು ವಿನಮ್ರವಾಗಿ ಹೇಳುತ್ತಿದ್ದರು.

‘1970ರಲ್ಲಿ ಸಾಧುನ ಗುಡಿಯಲ್ಲಿಯೇ ಸಮಾನ ಮನಸ್ಕ ಗೆಳೆಯರು ಸೇರಿ ‘ಭಾವೈಕ್ಯದ ಜನಪದ ಸಂಗೀತ ಮೇಳ’ ಆರಂಭಿಸಿದ್ದರು. ಅದರ ಮೂಲಕ ಭಜನೆ, ತತ್ವಪದಗಳ ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರ ಮನವರಿಕೆ ಮಾಡತೊಡಗಿದರು. 1980ರಲ್ಲಿ ತರೂರಿನ ಶಂಭುಲಿಂಗ ಶಾಸ್ತ್ರಿಗಳು ಮೊದಲ ಬಾರಿಗೆ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಸಿಂಧೂರಿನಲ್ಲಿ (ವೀರ ಸಿಂಧೂರ ಲಕ್ಷ್ಮಣನ ಹುಟ್ಟೂರು) ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಪ್ರವಚನ ಮಾಡುವ ಕಾರ್ಯಕ್ಕೆ ಸುತಾರ ಅವರನ್ನು ಕಳುಹಿಸಿದ್ದರು. ಮಹಾರಾಷ್ಟ್ರದಲ್ಲಿನ ಕನ್ನಡ ನೆಲದಲ್ಲಿ ಭಾವೈಕ್ಯತೆ ಹರಡುವ ಚೈತ್ರ ಯಾತ್ರೆ ಸುತಾರ ಆರಂಭಿಸಿದ್ದರು. ಅಲ್ಲಿಂದ ಪ್ರತಿ ವರ್ಷ ನಾಡಿನ ಉದ್ದಗಲಕ್ಕೂ ಪ್ರವಚನ, ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು.

ಧರ್ಮದ ಕಠಿಣ ಅಂಶಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಪ್ರಶ್ನೋತ್ತರದ ಜೊತೆಗೆ ತತ್ವಪದ ಹಾಡುವುದನ್ನು ರೂಢಿಸಿಕೊಂಡಿದ್ದರು.

ಮಹಾಲಿಂಗಪುರದಲ್ಲಿಯೇ ಬದುಕಿನ ಸಂಧ್ಯಾಕಾಲ ಕಳೆಯುತ್ತಿದ್ದ ಸುತಾರ ಅವರಿಗೆ ನಾಲ್ಕು ವರ್ಷಗಳ ಹಿಂದೆ (2018 ಏಪ್ರಿಲ್ 2) ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು. ಈ ಕಬೀರ, 81ರ ಇಳಿ ವಯಸ್ಸಿನಲ್ಲೂ ಗದ್ದಲದ ಸಂತೆಯಲ್ಲಿ ನಿಂತು ಭಾವೈಕ್ಯದ ಭಾವ ಬಿತ್ತುತ್ತಿದ್ದರು. ಈಗ ಅವರ ಮಾತಿಗೆ ಪೂರ್ಣ ವಿರಾಮ ಬಿದ್ದಿದೆ.

Koo App

ಕನ್ನಡದ ಕಬೀರ ಎಂದೇ ಖ್ಯಾತರಾಗಿದ್ದ ಸರ್ವ ಧರ್ಮ ಸಮನ್ವಯ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಸಮಾಜದಲ್ಲಿ ಸಮಾನತೆಯನ್ನು ಸಾರಲು ಅವರು ಶ್ರಮಿಸಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #IbrahimSutara

Araga Jnanendra (@aragajnanendra) 5 Feb 2022

 

ಜಿಲ್ಲೆ

ರಾಜ್ಯ

error: Content is protected !!