Tuesday, September 17, 2024

ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದ ಹೋರಾಟಗಾರ ಜಾರ್ಜ್ ಫರ್ನಾಂಡೀಸ್.

ಸಮಾಜವಾದಿ ನಾಯಕ. ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡೀಸ್ ಸಂಸ್ಮರಣೆ.. ನಮನಗಳು…….

ಪ್ರಸಿದ್ಧ ಕಾರ್ಮಿಕ ಹೋರಾಟಗಾರ, ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿ, ಕ್ರಿಯಾಶೀಲ ವ್ಯಕ್ತಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ಹಲವು ಕಾಲದ ಅನಾರೋಗ್ಯದ ನಂತರ ಬದುಕಿನಿಂದ ವಿರಮಿಸಿದ್ದು 2019ರ ಜನವರಿ 29 ರಂದು. ಅನಾರೋಗ್ಯಕ್ಕೆ ಹಿಂದೆ ಅವರು ಜನಪ್ರತಿನಿಧಿಗಳಾಗಿ ಲೋಕಕ್ಕಾಗಿ ಸವೆಸಿದ ಪ್ರಾಮಾಣಿಕ ಬದುಕು ಅನನ್ಯವಾದದ್ದು.

ಜಾರ್ಜ್ ಫಾರ್ನಾಂಡಿಸ್ 1930ರ ಜೂನ್ 3ರಂದು ಮಂಗಳೂರಿನಲ್ಲಿ ಜನಿಸಿದರು. ಎಸ್ಎಸ್ಎಲ್‍ಸಿ ಓದಿದ ನಂತರ ಮನೆಯವರು ಪಾದ್ರಿಯಾಗಲು ತರಬೇತಿ ಪಡೆಯಲು ಬೆಂಗಳೂರಿಗೆ ಕಳುಹಿಸಿದರೆ, ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವ್ಯತ್ಯಯದಿಂದ ಜಿಗುಪ್ಸೆಕೊಂಡು ಹೊರಬಂದರು. ಅಲ್ಲಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಿನಗಳಲ್ಲೇ ಮಂಗಳೂರಿನ ಸರಕು ಸಾಗಾಣೆ ಸಂಸ್ಥೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಘಟಿತ ಶೋಷಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಪರವಾದ ಹೋರಾಟಗಳಿಗೆ ಧ್ವನಿಯಾದರು.

ಮುಂದೆ ಮುಂಬೈಗೆ ಬಂದು ಕೆಲಸ ಹುಡುಕುತ್ತಾ ಹಲವಾರು ಬಾರೀ ರಸ್ತೆಗಳ ಬದಿಯಲ್ಲಿ ಮಲಗಿ ಬದುಕು ಸವೆಸಿದರು. ನಂತರ ಒಬ್ಬ ಪ್ರೂಫ್ ರೀಡರ್ ಆದರು. ಹಲವಾರು ಪತ್ರಿಕೆಗಳಲ್ಲಿ ಸಂಪಾದಕೀಯ ನಡೆಸಿದರು. ರೈತರ ಮತ್ತು ಕಾರ್ಮಿಕರ ಧ್ವನಿಯಾದರು. ಮುಂದೆ ಪ್ಲಾಸಿಡ್ ಡಿ’ಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರುಗಳ ಕಾರ್ಯದಿಂದ ಪ್ರೇರಿತರಾಗಿ ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ಐವತ್ತು ಅರವತ್ತರ ದಶಕದಲ್ಲಿ ಅವರು ಮುಂಬೈನ ಪ್ರಭಾವಿ ಕಾರ್ಮಿಕ ನಾಯಕರಾಗಿದ್ದರು. 1961ರಿಂದ 1968ರ ಅವಧಿಯಲ್ಲಿ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. 1967ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು.

ಕ್ರಮೇಣವಾಗಿ ಮುಂಬೈನಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ ಅವರು ರೈಲ್ವೇ ಫೆಡರೆಶನ್ನಿನ ಅಧ್ಯಕ್ಷರಾಗಿ ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ತಬ್ಧವೆನಿಸಿತ್ತು.

ಜಾರ್ಜ್ ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಗೆ ತೊಡಗಿದ್ದರು. 1949ರಲ್ಲಿ ಅವರು ‘ಕೊಂಕಣಿ ಯುವಕ್’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. 1952-53ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ‘Dockman’ ವಾರಪತ್ರಿಕೆಯನ್ನು ಪುನಃಚೇತನಗೊಳಿಸಿದರು. ಅವರು ರಚಿಸಿದ ವೈಚಾರಿಕ ಗ್ರಂಥಗಳೆಂದರೆ What Ails the Socialists (1972), The Kashmir Problem, Railway Strike of 1974, Dignity for All: Essays in Socialism and Democracy (1991), ಮತ್ತು ಅವರ ಆತ್ಮಚರಿತ್ರೆಯಾದ George Fernandes Speaks (1991). ಇದಲ್ಲದೆ ಅವರು ಇಂಗ್ಲಿಷ್ ಮಾಸಿಕವಾದ The Other Side ಪತ್ರಿಕೆಯ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್’ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ Amnesty International, People’s Union for Civil Liberties ಸಂಸ್ಥೆಗಳ ಸದಸ್ಯರಾಗಿದ್ದರು.

ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. ಅವರನ್ನು ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ ‘ಸಂಸ್ಕಾರ’ ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರಿಗೆ ಅನಾರೋಗ್ಯವಿದ್ದಾಗಿಯೂ ಬಂಧಿಸಿ ತೊಂದರೆಗೊಳಪಡಿಸಿದರು.

ಇತ್ತ ಜಾರ್ಜ್ ಫರ್ನಾಂಡೀಸ್ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ನೇಯ್ದಿದ್ದರು. ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಣಾಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಸೆರೆಸಿಕ್ಕ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತು. ಮುಂದೆ ಚುನಾವಣೆಗಳು ಘೋಷಿತವಾದಾಗ ಜೈಲಿನಿಂದಲೇ ಚುನಾವಣಾ ನಾಮಪತ್ರ ಸಲ್ಲಿಸಿ ಒಮ್ಮೆ ಕೂಡಾ ಚುನಾವಣಾ ಪ್ರಚಾರ ಮಾಡುವ ಅವಕಾಶ ಸಿಗದಿದ್ದಾಗಿಯೂ ಪ್ರಚಂಡವಾದ ಜಯ ಸಾಧಿಸಿದರು. ಮುರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾದ ಜಾರ್ಜ್ ಫರ್ನಾಂಡೀಸ್ ತಮ್ಮ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿದರು.

ಅಮರ ಅಕ್ಬರ್ ಆಂಟೋನಿ ಅವರಂತೆ ಇದ್ದ ಅಟಲ್ ಜಾರ್ಜ್ ಅಬ್ದುಲ್

ಮುಂದೆ ಅವರ ರೈಲ್ವೇ ಮಂತ್ರಿಗಳಾದಾಗ ಪ್ರಸಿದ್ಧವಾದ ಕೊಂಕಣ್ ರೈಲ್ವೇ ಅಸ್ತಿತ್ವಕ್ಕೆ ಬಂತು. ಅವರು ರಕ್ಷಣಾ ಸಚಿವರಾದಾಗ ಕಾರ್ಗಿಲ್ ಯುದ್ಧದ ಹೋರಾಟ ಏರ್ಪಟ್ಟಿತು. ಭಾರತ ಧೈರ್ಯದಿಂದ ಪರಮಾಣು ಸ್ಪೋಟ ನಡೆಸಿತು. ಚೀನಾ ದೇಶ ಭಾರತದ ವಿರುದ್ಧ ಆಗಾಗ ನಡೆಸುತ್ತಿದ್ದ ಕುತಂತ್ರಗಳನ್ನು ಧೈರ್ಯದಿಂದ ಬಯಲಿಗೆಳೆದರು. ಕೆಲವೊಂದು ಹಗರಣಗಳಲ್ಲಿ ಅವರ ಹೆಸರು ಸಿಲುಕಿತ್ತಾದರೂ ಅವರು ಧೈರ್ಯವಾಗಿ ಎದುರಿಸಿ ನಿಂತು ಸಮಜಾಯಿಷಿ ನೀಡಿದರು. ಅವರನ್ನು ವಿಚಾರಣೆಗೆ ಗುಣಪಡಿಸಿದ ಆಯೋಗಗಳೆಲ್ಲವೂ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿದವು.

ಹೀಗೆ ಪುಟ್ ಪಾತಿನಿಂದ ಹಲವಾರು ಮಂತ್ರಿಸ್ಥಾನದ ವರೆಗೆ ಮೇಲೇರಿದರೂ ಸರ್ವೇ ಸಾಧಾರಣನಂತೆ ಬದುಕಿ, ಅಸಾಧಾರಣ ಧೈರ್ಯಶಾಲಿಯಾಗಿ ಸಾಹಸಮಯ ಬದುಕನ್ನು ನಡೆಸಿದ ಜಾರ್ಜ್ ಫರ್ನಾಂಡೀಸ್ ಕಾಲನ ದೆಸೆಗೆ ಸಿಕ್ಕಿ ಹಲವು ವರ್ಷಗಳ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನೋವಿನಿಂದ ನಲುಗುವ ದೇಹಕ್ಕೆ ಸಾವೇ ಸುಖದ ಬಿಡುಗಡೆ. ಇಂತಹ ಮಹಾನ್ ಚೇತನ ಸತ್ತಾಗಲೇ ಜನಕ್ಕೆ ನೆನಪಾಗಿ ಪುನಃ ಸ್ಮೃತಿಯಿಂದ ಅಳಿದು ಹೋಗುವುದು ನಿಜವಾದ ದುಃಖದ ಸಂಗತಿ. ಇಂತಹ ಸ್ವಾರ್ಥ ರಹಿತ ಪುತ್ರನನ್ನು ಕೊಟ್ಟ ಭಾರತ ಮಾತೆ ನಿಜಕ್ಕೂ ಧನ್ಯೆ. ನಮ್ಮ ಕಾಲದಲ್ಲಿ ಇವರನ್ನು ಕಂಡ ನಾವು ಕೂಡಾ.

ಜಿಲ್ಲೆ

ರಾಜ್ಯ

error: Content is protected !!