Sunday, September 8, 2024

“ಸ್ವಾಮಿ ವಿವೇಕಾನಂದರ ಮೂರುವರೆ ನಿಮಿಷಗಳ ಒಂದು ಭಾಷಣ,ಇಡೀ ಭಾರತದ ಗೌರವವನ್ನು ನೂರ್ಮಡಿಗೊಳಿಸಿತು” -ಪತ್ರಕರ್ತ ಮಣ್ಣೆ ಮೋಹನ್

ನೆಲಮಂಗಲ:ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ನಮ್ಮ ದೇಶ ಸಮರ್ಥ ಭಾರತ,ಆತ್ಮನಿರ್ಭರ ಭಾರತವಾಗುತ್ತದೆ. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಹೆಚ್ಚೆಚ್ಚು ಓದಿ ಅರಿತುಕೊಳ್ಳಬೇಕು,ಅಳವಡಿಸಿಕೊಳ್ಳಬೇಕು.ನಾವೆಲ್ಲ ಮನೆಕೆಲಸ, ಜಮೀನು ಕೆಲಸಗಳನ್ನು ಮಾಡುತ್ತ ಓದಬೇಕಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಓದುವುದನ್ನು ಬಿಟ್ಟು ಬೇರೆ ಕೆಲಸವಿಲ್ಲ.ಹಾಗಾಗಿ ಓದುವ ಅವಕಾಶವನ್ನು ಉಪಯೋಗಿಸಿಕೊಂಡು ಚೆನ್ನಾಗಿ ಓದಿ ಈ ದೇಶಕ್ಕೆ ಸೇವೆ ಸಲ್ಲಿಸಿ. ಹಾಗೆಯೇ ಕನ್ನಡ ಸಾಂಸ್ಕೃತಿಕ ರಂಗವು ಪ್ರತಿ ತಿಂಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ನಾಡಿಗೆ ಮಾದರಿಯಾಗಿದೆ. ಇದಕ್ಕಾಗಿ ಅಧ್ಯಕ್ಷರಾದ ಸಿದ್ದರಾಜು ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ” ಎಂದು ನೆಲಮಂಗಲ ಪವಾಡ  ಬಸವಣ್ಣದೇವರ ಮಠದ  ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.ಅವರು ಕನ್ನಡ ಸಾಂಸ್ಕೃತಿಕ ರಂಗದ ವತಿಯಿಂದ ಏರ್ಪಡಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ‘ಯುವ ದಿನೋತ್ಸವ’ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

“ಶನಿವಾರ, ಭಾನುವಾರದ ರಜೆ ದಿನಗಳಂದು ಕೂಲಿ ಮಾಡಿ ಸಂಪಾದಿಸಿದ ಹಣದಿಂದ ವಿದ್ಯಾಭ್ಯಾಸ ಮಾಡಿ ಈ ಹಂತದವರೆಗೂ ಬೆಳೆದು ಬಂದಿದ್ದೇನೆ.ನನ್ನ ವಿದ್ಯಾಭ್ಯಾಸ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲೇ ಆಗಿತ್ತು. ಕನ್ನಡ ಎಂದರೆ, ನೆಲಮಂಗಲ ಎಂದರೆ ನನಗೆ ಪಂಚಪ್ರಾಣ. ದೆಹಲಿಯಲ್ಲಿ ನೆಲೆ ನಿಲ್ಲುವ ಅವಕಾಶವಿದ್ದರೂ ತಾಯ್ನೆಲದ ಪ್ರೀತಿಯಿಂದ ಇಲ್ಲಿ ಬಂದು ನೆಲೆಸಿದ್ದೇನೆ.ನೀವು ಸಹ ಸ್ವಾಮಿ ವಿವೇಕಾನಂದರ, ನೇತಾಜಿಯವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಚೆನ್ನಾಗಿ ಓದಿ ಉನ್ನತ ಸ್ತರಕ್ಕೇರಬೇಕು” ಎಂದು ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲರು ಮತ್ತು ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರಾದ ಎಚ್. ದೊಡ್ಡೇರಿ ವೆಂಕಟೇಶ್ ಅವರು ನುಡಿದರು. ಹಾಗೆಯೇ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ಮೂರನೇ ಅಲೆ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಎರಡೂವರೆ ಲಕ್ಷ ರೂ. ಬೆಲೆಬಾಳುವ 4 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ದೇಣಿಗೆಯಾಗಿ ನೀಡಿದರು.

“ಸ್ವಾಮಿ ವಿವೇಕಾನಂದರನ್ನು ತಿಳಿಯದವರು ಯಾರೂ ಇಲ್ಲ. ಹಾಗೆಯೇ ಸಂಪೂರ್ಣ ತಿಳಿದವರೂ ಯಾರೂ ಇಲ್ಲ.ಇದು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ. ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಮೂರುವರೆ ನಿಮಿಷಗಳ ಒಂದು ಭಾಷಣ, ಅಲ್ಲಿಯವರೆಗೂ ಹಾವಾಡಿಗರ ದೇಶವೆಂದು, ವಿಚಿತ್ರ ಧರ್ಮವಿರುವ ದೇಶವೆಂದು ಪಾಶ್ಚಾತ್ಯ ಜಗತ್ತಿನಲ್ಲಿ ನಗೆಪಾಟಲಾಗಿದ್ದ ಭಾರತದ ಗೌರವವನ್ನು ನೂರ್ಮಡಿಗೊಳಿಸಿತು.ಅಲ್ಲಿಯವರೆಗೂ ಭಿಕ್ಷಾಟನೆ ನೀಡಲು ನಿರಾಕರಿಸಿ ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದ ಅಮೆರಿಕ ದೇಶ ಅವರನ್ನು 4 ವರ್ಷಗಳ ಕಾಲ ತನ್ನಲ್ಲಿರಿಸಿಕೊಂಡು, ಉಪನ್ಯಾಸವನ್ನು ಏರ್ಪಡಿಸಿಕೊಂಡು, ಅವರ ಜ್ಞಾನವನ್ನು ಆರಾಧಿಸಿತು” ಎಂದು ಲೇಖಕ ಮತ್ತು ಪತ್ರಕರ್ತ ಮಣ್ಣೆ ಮೋಹನ್ ತಿಳಿಸಿದರು.

“ಸ್ವಾಮೀಜಿಗಳ ಹಾರೈಕೆಯೊಂದಿಗೆ ಪ್ರತಿ ತಿಂಗಳು ಕನ್ನಡ ರಾಜ್ಯೋತ್ಸವನ್ನು ಹಾಗೂ ಇತರೆ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದೇವೆ. ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಕೊಡುಗೆ ಕೊಡಬೇಕು ಎಂಬುದು ನಮ್ಮ ಆಶಯ.ಹಾಗಾಗಿ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ” ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷರಾದ ಡಿ.ಸಿದ್ದರಾಜುರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕುಮಾರಿ ರೇಖಾ ರವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಭಾರತದ ಸಂಸ್ಕೃತಿ ಪರಂಪರೆಗಳ ಹೆಗ್ಗಳಿಕೆಯನ್ನು,ಸ್ವಾಮಿ ವಿವೇಕಾನಂದರ, ನೇತಾಜಿಯವರ ಸಾಧನೆಯನ್ನು ಸವಿವರವಾಗಿ ವಿವರಿಸಿದರು.

ನೆಲಮಂಗಲ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದುದ್ದಕ್ಕೂ ಶಶಿಧರ್ ಕೋಟೆಯವರ ಸುಮಧುರ ಗಾಯನ ಸಭಿಕರ ತಲೆದೂಗಿಸಿತು.ಸಾಹಿತಿಗಳು ಹಾಗೂ ಚಿಂತಕರಾದ ಡಾ. ವೆಂಕಟೇಶ್ ಆರ್ ಚೌತಾಯಿಯವರ ಸೊಗಸಾದ ನಿರೂಪಣೆ ಸಭಿಕರ ಮನಸೆಳೆಯಿತು.ಸ್ವಾಮಿ ವಿವೇಕಾನಂದರ ಕುರಿತು ಅಂತರಕಾಲೇಜು ಪ್ರಬಂಧ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಚಲನಚಿತ್ರ ನಟರು ಹಾಗೂ ಸಾಹಿತಿಗಳಾದ ರಾಜ್ ಕಿರಣ್ ರವರು ಸ್ವಾಮಿ ವಿವೇಕಾನಂದರ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದರು.ಹಿರಿಯ ಶಿಕ್ಷಣ ತಜ್ಞರಾದ ಡಾ. ಭೋಗಣ್ಣ, ನೆಗಳೂರು,ಪದಾಧಿಕಾರಿಗಳಾದ ಪಿ ಗಿರಿಧರ್,ಎಚ್ ಜಿ ರಾಜು, ಎನ್ ಎಸ್ ಮೂರ್ತಿ,ಚಿಕ್ಕರಾಮಯ್ಯ,ಜೀವನ್ ರಂಗನಾಥ್,ಶ್ರೀಮತಿ ಅನ್ನಪೂರ್ಣ ವಿಜಯ್,ಹಬೀಬ, ಸಾಹಿತಿಗಳಾದ ಪ್ರಕಾಶ್ ಮೂರ್ತಿ, ಡಾ.ಶಿವಲಿಂಗಯ್ಯ, ಪ್ರಜಾಕವಿ ನಾಗರಾಜು, ಕನಕರಾಜು, ಆನಂದ್ ಮೌರ್ಯ,ಜನಾರ್ದನ್, ಗಿರೀಶ್, ಶಿವಕುಮಾರ್, ಸಂಪತ್, ಹನುಮಂತು ,ರುದ್ರೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!