Saturday, September 21, 2024

ಮೀಸಲು ನೆಪ , ಒಗ್ಗಟ್ಟು ಜಪ ಪಂಚಮಸಾಲಿ ತಾಕತ್ತು!

ಕೊಪ್ಪಳ: ಮತ್ತೆ ಎದ್ದು ನಿಂತಿದೆ ಲಿಂಗಾಯತ ಧರ್ಮ ಹೋರಾಟಕ್ಕೆ ಪ್ರೇರಕಶಕ್ತಿಯಾಗಿದ್ದ ಪಂಚಮಸಾಲಿ ಸಮಾಜ. ಈ ಸಲ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಸಮಾಜವನ್ನು ಸಂಘಟಿಸುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದ ಪ್ರಬಲ ಶಕ್ತಿಯಾಗಿದ್ದ ಪಂಚಮಸಾಲಿ ಸಮಾಜವನ್ನು ಕಳೆದ ಮೂರು ವರ್ಷಗಳಿಂದ ಸದ್ದಿಲ್ಲದೇ ಹೆಡೆಮುರಿ ಕಟ್ಟುತ್ತಲೇ ಬಂದಿತ್ತು ಬಿಜೆಪಿ. ಪಂಚಮಸಾಲಿಗಳನ್ನು ಹಿಡಿದು ನಿಲ್ಲಿಸಿದರೆ ಲಿಂಗಾಯತರ ತಾಕತ್ತು ಕುಗ್ಗಿಹೋಗುತ್ತದೆ ಎಂಬುದನ್ನು ಅರಿತಿದ್ದ ಬಿಜೆಪಿ ರಾಷ್ಟ್ರೀಯ ನಾಯಕತ್ವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಹೋರಾಟದಿಂದ ರಾಜ್ಯ ಬಿಜೆಪಿಯನ್ನು ದೂರ ಇರಿಸಿತು. ಪಕ್ಷದೊಳಗಿನ ಬಿಜೆಪಿ ಪಂಚಮಸಾಲಿ ನಾಯಕರನ್ನು ಮಟ್ಟ ಹಾಕಲು ಮುಂದಾಯಿತು. ನಂತರ, ಇತರ ಪಕ್ಷದ ಪಂಚಮಸಾಲಿ ಹಾಗೂ ಲಿಂಗಾಯತ ನಾಯಕರ ವಿರುದ್ಧ ಪ್ರಕರಣಗಳ ವಿಚಾರಣೆಗಳಿಗೆ ಚಾಲನೆ ನೀಡಲಾಯಿತು. ಕೊನೆಗೆ ಪೀಠವನ್ನು ಕೂಡಾ ಇಬ್ಭಾಗವಾಗಿಸುವ ಮೂಲಕ ಪಂಚಮಸಾಲಿ ಸಮಾಜದ ಒಗ್ಗಟ್ಟನ್ನೇ ಮುರಿದುಹಾಕಲಾಯಿತು.

ದುರಂತದ ಸಂಗತಿ ಎಂದರೆ, ತಮ್ಮನ್ನು ವ್ಯವಸ್ಥಿತವಾಗಿ ಮುಗಿಸಲಾಗುತ್ತಿರುವ ಸಂಚನ್ನು ಅರ್ಥ ಮಾಡಿಕೊಳ್ಳದ ಲಿಂಗಾಯತ ಪಂಚಮಸಾಲಿ ಜನ ಒಡಕಿನಲ್ಲಿಯೇ ಹಿತ ಕಾಣುತ್ತ ಹೋದರು. ಪೀಠಗಳ ನಡುವೆ ಒಡೆದು ಹೋದರು. ಈಗ ಮೀಸಲಾತಿಯ ನೆಪದಲ್ಲಿ ಪ್ರಾರಂಭವಾಗಿರುವ ಹೋರಾಟ ಪಂಚಮಸಾಲಿ ಸಮಾಜವನ್ನು ಮತ್ತೆ ಒಗ್ಗಟ್ಟಿನತ್ತ ಕರೆದುಕೊಂಡು ಹೊರಟಂತಿದೆ…
——————
ಅದು ರಕ್ತ ದಾಸೋಹ!

ಈ ಹೆಸರನ್ನು ಇಡುವ ಕಲ್ಪನೆ ಯಾರಿಗೆ ಹೊಳೆದಿತ್ತೋ ತಿಳಿಯದು. ಆದರೆ, ಲಿಂಗಾಯತರೆಲ್ಲ ನೆನಪಿನಲ್ಲಿ ಇಡುವಂತಹ ಪರಿಕಲ್ಪನೆಯನ್ನು ಪಂಚಮಸಾಲಿ ಮೀಸಲಾತಿ ಹೋರಾಟ ನೀಡಿಬಿಟ್ಟಿದೆ.

ಸಂಖ್ಯೆಯಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿರುವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡಬೇಕೆಂದು ಪ್ರಾರಂಭವಾಗಿರುವ ಹೋರಾಟಕ್ಕೆ ಈಗ ಸಾಕಷ್ಟು ಕಸುವು. ಹೋರಾಟಗಳಲ್ಲಿ ಸಾಮಾನ್ಯವಾಗಿ ಕಾಣುವ ಜನವಿರೋಧಿ, ಪ್ರಕೃತಿ ವಿರೋಧಿ ಕೆಲಸಗಳಾದ ರಸ್ತೆ ತಡೆ, ಸಾರ್ವಜನಿಕರಿಗೆ ಕಿರುಕುಳ, ಒತ್ತಾಯದಿಂದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವುದು, ಹಲ್ಲೆ, ಟೈರ್ ಸುಡುವುದು, ಅಶ್ಲೀಲವಾಗಿ ಕೂಗಾಡುವುದು, ಅಣಕು ಶವಯಾತ್ರೆ- ಇಂಥವನ್ನೇನೂ ಮಾಡದೇ ಹೊಸ ರೀತಿಯ ಹೋರಾಟಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ ಚಾಲನೆ ನೀಡಿದೆ.

ಅದರ ಹೆಸರೇ ರಕ್ತ ದಾಸೋಹ.

ಲಿಂಗಾಯತ ಪರಂಪರೆಯಲ್ಲಿ ದಾಸೋಹಕ್ಕೆ ವಿಶಾಲ ಅರ್ಥವಿದೆ. ಅಷ್ಟೇ ಉದಾತ್ತ ಪರಿಕಲ್ಪನೆ ಹಾಗೂ ಹಿನ್ನೆಲೆಯೂ ಇದೆ. ಅನ್ನದಿಂದ ರೂಪಿತವಾಗಿರುವ ಈ ಶರೀರದ ಪ್ರಾಥಮಿಕ ಅವಶ್ಯಕತೆಯಾದ ಹಸಿವನ್ನು ತಣಿಸಿದ ನಂತರವೇ ಆತನಲ್ಲಿ ಅಧ್ಯಾತ್ಮದ ಹಸಿವನ್ನು ತಣಿಸಬೇಕೆಂಬುದು ದಾಸೋಹದ ಪರಿಕಲ್ಪನೆ. ಸಾಮೂಹಿಕ ದಾಸೋಹದ ಮೂಲಕ ವರ್ಗ, ಲಿಂಗ, ಜಾತಿ, ಧರ್ಮದ ಭೇದವನ್ನೂ ಅಳಿಸಿ ಹಾಕುವುದು ದಾಸೋಹದ ಸಾಮಾಜಿಕ ಉದ್ದೇಶವೂ ಹೌದು. ಅನ್ನದ ಮೂಲಕ ಎಲ್ಲರನ್ನೂ ಒಂದು ಸದುದ್ದೇಶಕ್ಕೆ ಒಟ್ಟುಗೂಡಿಸುವುದೂ ದಾಸೋಹದಿಂದ ಸುಲಭ.

ಕೇವಲ ಭೋಜನ ಮತ್ತು ಸತ್ಸಂಗದ ಉದ್ದೇಶವನ್ನಷ್ಟೇ ಹೊಂದಿದ್ದ ದಾಸೋಹದ ಪರಿಕಲ್ಪನೆಯನ್ನು ಪಂಚಮಸಾಲಿ ಮೀಸಲಾತಿ ಹೋರಾಟ ಇನ್ನಷ್ಟು ವಿಸ್ತರಿಸಿದೆ. ಆಧುನಿಕ ಜೀವನಶೈಲಿಗೆ ಅವಶ್ಯವಾದ ರಕ್ತವನ್ನು ದಾನವಾಗಿ ನೀಡುವ ಮೂಲಕ ರಕ್ತ ದಾಸೋಹಕ್ಕೆ ಚಾಲನೆ ನೀಡಿದೆ. ಹೋರಾಟದಲ್ಲಿ ಭಾಗಿಯಾಗುವವರು ಸ್ವಇಚ್ಛೆಯಿಂದ ರಕ್ತದಾನ ಮಾಡುವ ಮೂಲಕ, ಹೋರಾಟವನ್ನು ಬಲಪಡಿಸುವ ಉದ್ದೇಶ ಇದು. ಮೀಸಲಾತಿ ಹೋರಾಟಕ್ಕೆ ನಾವೂ ರಕ್ತ ಬಸಿದಿದ್ದೇವೆ ಎಂಬ ಹುಮ್ಮಸ್ಸನ್ನು ಹೋರಾಟಗಾರರಲ್ಲಿ ತುಂಬುವ ಮೂಲಕ ಹೋರಾಟ ಬಲಪಡಿಸುವ ಹೊಸ ಕಲ್ಪನೆ ಇದು.

ಹೀಗೆ ಹೊಸ ಪರಿಕಲ್ಪನೆಯ ಮೂಲಕ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರಾರಂಭಿಸಿದ್ದಾರೆ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ.

ಇದಕ್ಕಾಗಿ ಅವರು ವಿಶಿಷ್ಟ ದಿನವನ್ನೇ ಆಯ್ದುಕೊಂಡಿದ್ದರು. ಡಿಸೆಂಬರ್ 23 ಸ್ವಾಮೀಜಿ ಅವರ ಜನ್ಮದಿನ. ಜೊತೆಗೆ ರೈತ ದಿನಾಚರಣೆಯೂ ಹೌದು. ಈ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯ ಹೋರಾಟ ರೂಪಿಸಿದ ಸ್ವಾಮೀಜಿ ಅಂದು ಸ್ವತಃ ರಕ್ತದಾನ ಮಾಡುವ ಮೂಲಕ ರಕ್ತದಾಸೋಹಕ್ಕೆ ಚಾಲನೆ ನೀಡಿದರು. ‘ರಕ್ತ ಕೊಡುವೆವು, ಮೀಸಲಾತಿ ಪಡೆವೆವು’ ಎಂಬ ಘೋಷಣೆ ಮೊಳಗಿಸಿದರು. ಸ್ವಾಮೀಜಿ ಜೊತೆಗೆ ಸಮಾಜದ ಮುಖಂಡರು, ಭಕ್ತರು ರಕ್ತದಾನ ಮಾಡುವ ಮೂಲಕ ಅದನ್ನೊಂದು ಅಭಿಯಾನವಾಗಿಸಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಅದೊಂದೇ ದಿನ 5 ಸಾವಿರಕ್ಕೂ ಹೆಚ್ಚು ಭಕ್ತರು ರಕ್ತದಾನ ಮಾಡುವ ಮೂಲಕ ರಕ್ತ ದಾಸೋಹದ ಮೀಸಲಾತಿ ಹಕ್ಕೊತ್ತಾಯ ಮಾಡಿದರು. ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಮಠದ ಆವರಣದಲ್ಲಿಯೂ ರಕ್ತದಾಸೋಹ ನಡೆಯಿತು.

ಈ ವಿಶಿಷ್ಟ ಅಭಿಯಾನ ಮೀಸಲಾತಿ ಹೋರಾಟದ ತಾಕತ್ತನ್ನು ಬಲಪಡಿಸಿತು. ಅದಕ್ಕೆ ಶಕ್ತಿ ತುಂಬುವ ಜೊತೆಗೆ ಜನಸಮೂಹವನ್ನು ಬಡಿದೆಬ್ಬಿಸಿತು.

ಲೇಖಕರ ಚಾಮರಾಜ ಸವಡಿ  ಭಾವಚಿತ್ರ

(ಮುಂದುವರಿಯುವುದು)

ಲೇಖನ: ಚಾಮರಾಜ ಸವಡಿ

ಜಿಲ್ಲೆ

ರಾಜ್ಯ

error: Content is protected !!