Saturday, July 20, 2024

ಕೊಡಗು,ಕನ್ನಡ, ಚಂಪಾ ಇತ್ಯಾದಿಗಳ ಒಂದು ನೋಟ

ಅಬ್ಬಬ್ಬಾ ಎಂದರೆ ಒಂದು ತಾಸಿನ ಭಾಷಣ, ಎರಡು ತಾಸಿನ ಕಾರ್ಯಕ್ರಮ ಹಾಜರಾಗಲು ಏಳು ನೂರು ಕಿಲೋಮೀಟರ್ ಪಯಣದ ಅಗತ್ಯ ಇದೆಯಾ? ಎಂಬ ಪ್ರಶ್ನೆ ದೂರದೂರಿಗೆ ಪಯಣಿಸುವಾಗಲೆಲ್ಲ ಕಾಡುತ್ತದೆ. ಗದುಗಿನಿಂದ ಮೈಸೂರು, ಮೈಸೂರಿನಿಂದ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕಸಾಪ ಆಯೋಜಿಸಿದ್ದ ಪ್ರೊ.ಚಂಪಾ ಅವರ ನುಡಿನಮನಕ್ಕೆ ಬರಬೇಕೆಂದು ಫೋನಾಯಿಸಿದಾಗ ನಿಜವಾಗಿಯೂ ನಂಬಲಾಗಲಿಲ್ಲ. ನಾನಿರುವುದು ಗದುಗಿನಲ್ಲಿ ಎಂದು ಹೇಳಿದಾಗಲೂ, ‘ ಹೌದು ಗೊತ್ತು, ಆದರೂ ನೀವು ಬರಬೇಕು’ ಎಂದು ಸಂಘಟಿಕರಾದ, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮತ್ತು ಹಾಲಿ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಒತ್ತಾಯಿಸಿದಾಗ ಅದೇನೋ ಕುತೂಹಲದಿಂದ ಒಪ್ಪಿಕೊಂಡೆ. ಸಾಹಿತ್ಯ, ಸಂಸ್ಕೃತಿಗಳ ಆಸಕ್ತ ಮನಸಿಗೆ ಪಯಣ ಕೂಡ ಸ್ಪೂರ್ತಿ ನೀಡುತ್ತದೆ.

ಈ ಹಿಂದೆ ಅನೇಕ ಬಾರಿ ನನ್ನ ಓಡಾಟದ ವಿವರಣೆಯನ್ನು ಹಂಚಿಕೊಂಡಿದ್ದೇನೆ. ಕರೋನ ಕಾಲದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇರುವ ನಿರ್ಬಂಧದ ನಡುವೆ, ಕೊಡಗು ಕಸಾಪ ತನ್ನ ಚಟುವಟಿಕೆಗಳಿಗೆ ಚಾಲನೆ ನೀಡಲು, ಪ್ರೊ. ಚಂಪಾ ನುಡಿ ನಮನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪ್ರೊ.ಚಂಪಾ ಅವರು ತೆಗೆದುಕೊಂಡ ಧೈರ್ಯದ ನಿಲುವು ಮತ್ತು ಸಾರ್ವಜನಿಕವಾಗಿ ಎಡಪಂಥೀಯ ಬದ್ಧತೆಯನ್ನು ಎಂದಿನಂತೆ ವಿವರಿಸಿ ಮಾತನಾಡಿದೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಹಿಂದಿ ಪ್ರಾಧ್ಯಾಪಕ ಡಾ.ಶ್ರೀಧರ ಹೆಗಡೆ ಅವರ ಅಮೂಲ್ಯ ಸಮಯವನ್ನು ನಾನೇ ಕಿತ್ತುಕೊಂಡೆ ಆದರೆ ಯಾರಿಗೂ ಬೇಸರವಾಗಲಿಲ್ಲ ಎಂಬುದು ಸಮಾಧಾನಕರ. ಇದೇ ಸಂದರ್ಭದಲ್ಲಿ ಚಂಪಾ ಅವರ ಸ್ಮರಣೆಯಾಚೆಗೆ ಒಂದಿಷ್ಟು ಸಂಕಟಗಳನ್ನು ತೋಡಿಕೊಂಡೆ.

ಮಾತುಕತೆ, ಭಾಷಣ ಮತ್ತು ಸಂವಾದಗಳನ್ನು ಮೀರಿ, ಕನ್ನಡ ಕಟ್ಟುವ ಮತ್ತು ಪುಸ್ತಕ ಓದುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾಗಿದೆ. ಇತ್ತೀಚೆಗೆ ಹೆಚ್ಚುತ್ತಿರುವ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ವಿಶ್ವವಿದ್ಯಾಲಯಗಳ ಚರ್ಚೆ ಮತ್ತು ಅನಾರೋಗ್ಯಕರ ವಾದ,ವಿವಾದಗಳು ಅಸಹ್ಯಕರ ಜಗಳಗಳಾಗಿ ಮಾರ್ಪಟ್ಟಿರುವುದನ್ನು ನೋಡಿದರೆ ಖೇದವೆನಿಸುತ್ತದೆ. ಪುಸ್ತಕ ಓದುವುದನ್ನು ನಮ್ಮ ಯುವಕರು ಮರೆತುಬಿಟ್ಟಿದ್ದಾರೆ. ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡು ಅಲ್ಲ, ಪುಕ್ಕಟೆ ಕೊಟ್ಟರೂ ಓದುವವರು ಇಲ್ಲದಂತಾಗಿದೆ.

ಸರಕಾರದ ಸಗಟು ಖರೀದಿಯನ್ನು ನಂಬಿ ಒಂದಿಷ್ಟು ಪ್ರಕಾಶಕರು ತಮಗೆ ಸರಿಕಂಡಂತೆ ಪುಸ್ತಕ ಪ್ರಕಟಿಸಿದ ಲೇಖಕರ ಅಸ್ತಿತ್ವ ಕಾಪಾಡಿದ್ದಾರೆ. ಆದರೆ ಯಾರಿಗೂ ನಿಜವಾದ ಓದುಗರನ್ನು ಸೃಷ್ಟಿ ಮಾಡುವ ಚೈತನ್ಯ ಉಳಿದಿಲ್ಲ. ಕವಿತೆ,ಕತೆ,ಕಾದಂಬರಿಯಂತಹ ಸುದೀರ್ಘ ಪ್ರಕಾರಗಳ ಓದು ಯುವಕರಿಗೆ ಬೇಡವಾಗಿದೆ, ಕೆಲವೇ ಕೆಲವು ಯುವಕರು ಆಧ್ಯಾತ್ಮ ಮತ್ತು ವ್ಯಕ್ತಿತ್ವ ವಿಕಸನ ಮಾಲಿಕೆಗಳನ್ನು ಮಾತ್ರ ಓದುತ್ತಿದ್ದಾರೆ. ಒಟ್ಟಾರೆ ಮುದ್ರಣ ಮಾಧ್ಯಮ ಅಪಾಯದಲ್ಲಿದೆ.

ದಿನಪತ್ರಿಕೆಗಳನ್ನು ಟಿವಿ ಸುದ್ದಿ ವಾಹಿನಿಗಳು ನುಂಗಿ ಹಾಕಿವೆ. ಸರಕಾರದ ಜಾಹಿರಾತುಗಳನ್ನು ನಂಬಿ ಹಲವಾರು ಪತ್ರಿಕೆಗಳು ಉಳಿದುಕೊಂಡಿವೆ; ನಿಜವಾದ ಓದುಗರನ್ನು ನಂಬಿ ಅಲ್ಲ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಮೊಬೈಲ್ ಮೂಲಕ ತಾಜಾ ಸುದ್ದಿ ತಲುಪುವ ಈ ಹೊತ್ತಿನಲ್ಲಿ ಮರುದಿನ ಬರುವ ಸುದ್ದಿಗಳನ್ನು ಓದುವ ಮನಸ್ಸು ಬರುವುದಿಲ್ಲ. ಅಂಕಣ ಮತ್ತು ಸಂಪಾದಕೀಯ ಬರಹಗಳು ಕೂಡ ಈಗ ಸೋಷಿಯಲ್‌ ಮೀಡಿಯಾ ಮತ್ತು ಇತರ ಡಿಜಿಟಲ್ ಮಾಧ್ಯಮದ ಮೂಲಕ ಬೇಗ ದೊರಕುತ್ತವೆ.

ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ, ಅಕಾಡೆಮಿ, ಪರಿಷತ್ತು, ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮಗಳು ಪ್ರಭುತ್ವದ ವಿರುದ್ಧ ಧ್ವನಿ ಎತ್ತುವ ನೈತಿಕ ಶಕ್ತಿ ಕಳೆದುಕೊಂಡ ಹೊತ್ತಿನಲ್ಲಿ, ಲಂಕೇಶ್, ಪ್ರೊ.ಚಂಪಾ ಮತ್ತು ಅವರ ಸಮಕಾಲೀನ ಹಿರಿಯರು ಮತ್ತೆ, ಮತ್ತೆ ನೆನಪಾಗುವುದು ಅಷ್ಟೇ ಸಹಜ. ‌ಪ್ರಭುತ್ವದ ವಿರುದ್ಧ ಮಾತನಾಡಿದರೆ ನಮಗೆ ಸಿಗಬಹುದಾದ ಅವಕಾಶಗಳಿಂದ ವಂಚಿತರಾಗುತ್ತೇವೆ ಎಂಬ ಅಳುಕು ನಮ್ಮದಾಗಿರಬಹುದು.

ಆದರೆ ‘ನಮ್ಮ ನೆಲ,ನೀರು ಮತ್ತು ನುಡಿಗೆ ಧಕ್ಕೆಯಾದರೆ‌ ದನಿ ಎತ್ತಲು ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ಮುಂದಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಮತ್ತು ಗಡಿ ರಾಜ್ಯದ ಕನ್ನಡ ಮನಸುಗಳ ಪ್ರತಿನಿಧಿ. ಚುನಾಯಿತ ಅಧ್ಯಕ್ಷರು ಇಡೀ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಿ, ಕನ್ನಡದ ಕಾವಲುಗಾರ‌ನಾಗಬೇಕು, ಯಾರದೋ ಅಡಿಯಾಳಲ್ಲ’ ಎಂಬ ಆಲೋಚನೆಯಲ್ಲಿ ಮಾತನಾಡುವಾಗ, ಕನ್ನಡದ ಸಾಕ್ಷಿಪ್ರಜ್ಞೆಯಾಗಿದ್ದ ಗಟ್ಡಿ ದನಿಯ ಪ್ರೊ.ಚಂಪಾರಂತಹ ಹಿರಿಯರು ನೆನಪಾಗಿ ಕಾಡಿದರು.

ಅನೇಕ ಹಿರಿಯರು ಕೇವಲ ದೈಹಿಕವಾಗಿ ಮರೆಯಾಗಿ, ನಾವು ಅನುಸರಿಸಬೇಕಾದ ಮೌಲ್ಯಗಳ ಮೂಲಕ ಜೀವಂತವಾಗಿರುತ್ತಾರೆ ಎಂಬುದ ಮರೆಯಬಾರದು. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸುವ ಕಾಳಜಿ ಇಟ್ಟುಕೊಂಡ ಕೊಡಗಿನ ಸಾಹಿತ್ಯಾಸಕ್ತ ಗೆಳೆಯರು ಚಂಪಾ ಅವರನ್ನು ಸ್ಮರಿಸುವುದರ ಜೊತೆಗೆ, ಪರಿಸರ ರಕ್ಷಣೆ ಮತ್ತು ಜವಾಬ್ದಾರಿಯನ್ನು ಹೇಳುವ ಬಿ.ಆರ್. ಜೋಯಪ್ಪ ಅವರ ‘ಬದುಕು’ ಕೃತಿಯ ಲೋಕಾರ್ಪಣೆಯನ್ನು ಮಾಡಿದರು.

ಸ್ಥಾನಿಕ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನದಲ್ಲಿರುವ ‘ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ’ ದ ಕಲಾವಿದರು ಮಧುರವಾಗಿ ಹಾಡಿದರು. ಕೋವಿಡ್ ಭೀತಿಯನ್ನು ದೂರ ದೂಡಿ ನೆರೆದಿದ್ದ ಸಾಹಿತ್ಯಾಸಕ್ತರು ನನ್ನ ಪಯಣದ ದಣಿವನ್ನು ನೀಗಿಸಿದರು. ಕಾರ್ಯಕ್ರಮ ಮುಗಿದ ನಂತರ ಸಂಜೆ ಕೊಡಗು ಜಿಲ್ಲಾಧಿಕಾರಿಗಳಾದ ಡಾ.ಸತೀಶ್ ಮತ್ತು ಅನುವಾದಕಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ.ನಯನಾ ಕಶ್ಯಪ್ ಅವರ ಆತಿಥ್ಯ ಕೊಡಗಿನ ಭೇಟಿಯ ಮೆರುಗನ್ನು ಹೆಚ್ಚಿಸಿತು.

ಪ್ರೊ.ಸಿದ್ದು ಯಾಪಲಪರವಿ.
9448358040.

ಜಿಲ್ಲೆ

ರಾಜ್ಯ

error: Content is protected !!