Tuesday, April 16, 2024

“ನೇಪಥ್ಯದಿಂದ ನೆನಪಿನಂಗಳಕ್ಕೆ ನೇತಾಜಿ” ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಹಳೆ ಊದಿದ ನೇತಾಜಿ ಅವರ ಜನ್ಮ ದಿನ

ಯಾರ ಹೆಸರು ಕೇಳಿದರೆ ಭಾರತೀಯರ ನರನಾಡಿಗಳಲ್ಲಿ ರೋಮಾಂಚನ ಸೃಷ್ಟಿಯಾಗುತ್ತದೆಯೋ, ಬಿಸಿ ರಕ್ತ ಕುದಿಯುತ್ತದೆಯೋ, ದೇಶಪ್ರೇಮ ಉಕ್ಕಿ ಹರಿಯುತ್ತದೆಯೋ ಅಂತಹ ಹೆಸರೇ ಭಾರತದ ಅಪ್ರತಿಮ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರದು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯ ಕಹಳೆ ಊದಿ, ಆಜಾದ್ ಹಿಂದ್ ಪೌಜ್ (ಇಂಡಿಯನ್ ನ್ಯಾಷನಲ್ ಆರ್ಮಿ- ಐಎನ್‍ಎ) ಎಂಬ ಸೇನೆಯನ್ನು ಕಟ್ಟಿದ ಸುಭಾಷ್ ಚಂದ್ರ ಬೋಸ್ ರವರು ದೇಶದ ಸ್ವಾತಂತ್ರ್ಯಕ್ಕಾಗಿ ವಿದೇಶಿ ನೆಲದಲ್ಲೂ ಹೋರಾಟವನ್ನು ಸಂಘಟಿಸಿದ್ದರು.”ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ”- ಎಂಬ ಸ್ವಾಭಿಮಾನದ ಕರೆಯ ಮೂಲಕ ದೇಶ ಪ್ರೇಮದ ಕಿಚ್ಚು ಹಚ್ಚಿ, ಕ್ರಾಂತಿಯ ಕಿಡಿಯನ್ನು ಕಾಡ್ಗಿಚ್ಚಿನಂತೆ ಪಸರಿಸಿದ್ದರು.

1897 ಜನವರಿ 23 ರಂದು ರಾವ್ ಬಹದ್ದೂರ್ ಜಾನಕೀನಾಥ ಬೋಸ್ ಮತ್ತು ಪ್ರಭಾವತಿ ಬೋಸರ 14 ಮಂದಿ ಮಕ್ಕಳಲ್ಲಿ ಒಂಬತ್ತನೆಯವರಾಗಿ ಒರಿಸ್ಸಾ ರಾಜಧಾನಿ ಕಟಕ್ ನಲ್ಲಿ ಬೋಸರ ಜನನವಾಯಿತು. ಪ್ರಸಿದ್ಧ ವಕೀಲರಾಗಿದ್ದ ಜಾನಕೀನಾಥರು ಮಹಾನ್ ಮೇಧಾವಿಯಾಗಿದ್ದರು. ಪ್ರಭಾವತಿಯವರು ಸನಾತನ ಧರ್ಮ, ಆಚಾರ ವಿಚಾರಗಳಲ್ಲಿ ಶ್ರದ್ಧೆ ಉಳ್ಳವರಾಗಿದ್ದರು. ತಾಯಿಯಿಂದ ಅಪಾರ ರಾಷ್ಟ್ರಪ್ರೇಮದ ಗುಣ ಮತ್ತು ತಂದೆಯಿಂದ ಸರಿಸಾಟಿಯಿಲ್ಲದ ಮೇಧಾವಿತನ ಬೋಸರ ವ್ಯಕ್ತಿತ್ವವನ್ನು ರೂಪಿಸಿದವು.

ಪ್ರಾಥಮಿಕ ಶಿಕ್ಷಣದಿಂದ ಮೊದಲುಗೊಂಡು ಪ್ರೌಢ ಶಿಕ್ಷಣದವರೆಗೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದುದು ಬೋಸರ ವಿಶೇಷವಾಗಿತ್ತು. 1913 ರಲ್ಲಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದುವಾಗ ಅವರ ಜೀವನದಲ್ಲಿ ಪರಿವರ್ತನೆಯ ಪರ್ವ ಆರಂಭವಾಯಿತು. ಸ್ವಾಮಿ ವಿವೇಕಾನಂದರಂತೆ ನಾನೂ ಗುರುವನ್ನು ಹುಡುಕಬೇಕು, ಅವರಿಂದ ಪ್ರಭಾವಿತನಾಗಿ, ಪ್ರಪಂಚವನ್ನೇ ನನ್ನ ಶಕ್ತಿಯಿಂದ ಚತಗೊಳಿಸಬೇಕು ಎಂದು ನಿಶ್ಚಯ ಮಾಡಿದರು. ತನ್ನ 16ನೇ ವಯಸ್ಸಿನಲ್ಲಿ ಮನೆಬಿಟ್ಟು ಗುರುಗಳ ಅನ್ವೇಷಣೆಗಾಗಿ ಹಿಮಾಲಯದತ್ತ ತೆರಳಿದರು. 6 ತಿಂಗಳ ಹುಡುಕಾಟದ ನಂತರ ನಿರಾಸೆಯಿಂದ ವಾಪಸ್ ಬಂದರು. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ವಿಶ್ವರೂಪ ದರ್ಶನವಾದಂತೆ ನನಗೂ ಆದರೆ ಎಷ್ಟು ಚೆನ್ನ? ಎಂದು ತನ್ನ ತಾಯಿಯಲ್ಲಿ ಹೇಳಿಕೊಂಡರು. ನರೇಂದ್ರನಂತೆ ನೀನು ನರೋತ್ತಮ ಆಗುತ್ತಿ ಎಂದು ತಾಯಿಯಿಂದ ಆಶೀರ್ವಾದ ಪಡೆದರು. ದೇಶಸೇವೆ ಮತ್ತು ಮನುಕುಲದ ಸೇವೆಗಾಗಿ ಜೀವನ ಮುಡಿಪಾಗಿಡಬೇಕು ಎಂದು ನಿರ್ಧರಿಸಿದರು.

ಬೋಸರ ಹೋರಾಟದ ಕೆಚ್ಚು ಹೆಚ್ಚುತ್ತಾ ಹೋಯಿತು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓಟಿನ್ ಎಂಬ ಬ್ರಿಟಿಷ್ ಉಪಾಧ್ಯಾಯ ಭಾರತೀಯ ವಿದ್ಯಾರ್ಥಿಗಳಿಗೆ ಸದಾ ಅಪಮಾನ ಮಾಡುತ್ತಿದ್ದ. ಒಮ್ಮೆ ಕ್ಷುಲ್ಲಕ ಕಾರಣಕ್ಕೆ ಬೋಸರ ಸಹಪಾಠಿಗಳ ಮೇಲೆ ಕೈ ಮಾಡಿದ. ಇದು ಬೋಸರನ್ನು ಕೆರಳಿಸಿತು.ಮಾರನೇ ದಿನ ಹುಡುಗರು ಸೇರಿ ಓಟಿನ್ ಮೇಲೆ ಬಿದ್ದರು. ಕಾಲೇಜಿಗೆ ಬಹಿಷ್ಕಾರ ಹಾಕಿದರು. ಈ ಕಾರಣಕ್ಕೆ ಬೋಸರನ್ನು ಕಾಲೇಜಿನಿಂದ ಹೊರಗೆ ಕಳಿಸಿದರು. ಆ ನಂತರ ಅವರು ಸ್ಕಾಟಿಷ್ ಚರ್ಚ್ ಕಾಲೇಜ್ ಸೇರಿ ಓದು ಮುಂದುವರಿಸಿದರು.

1919 ರಲ್ಲಿ ಸುಭಾಷರು ಎಂ ಎ ಪರೀಕ್ಷೆಗೆ ಓದುತ್ತಿದ್ದಾಗ ಅವರ ತಂದೆ ಇಂಗ್ಲೆಂಡಿಗೆ ಹೋಗಿ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಸೂಚಿಸಿದರು.ಅದರಂತೆ ಇಂಗ್ಲೆಂಡಿಗೆ ಹೋಗಿ ಕೇವಲ 8 ತಿಂಗಳ ಅವಧಿಯಲ್ಲಿ ಓದಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದರು.ಇದೀಗ ಬೋಸರಿಗೆ ಧರ್ಮಸಂಕಟ. ಬ್ರಿಟಿಷ್ ಸರ್ಕಾರದ ಸೇವಕನಾಗಿ ಕೆಲಸ ಮಾಡಲು ಅವರ ಸ್ವಾಭಿಮಾನದ ಮನಸು ಒಪ್ಪಲಿಲ್ಲ.ಸಿವಿಲ್ ಸರ್ವಿಸಿಗೆ ರಾಜಿನಾಮೆ ಕೊಟ್ಟು ಬ್ರಿಟನ್ ಬಿಟ್ಟು ಬೋಸರು 1921 ಜುಲೈ 16 ರಂದು ಮುಂಬೈಗೆ ಬಂದರು.

ದೇಶದಲ್ಲಿ ಆಗತಾನೆ ಅಸಹಕಾರ ಚಳವಳಿ ಆರಂಭವಾಗಿತ್ತು. ಬೋಸರು ಗಾಂಧಿ ಅವರನ್ನು ಭೇಟಿ ಮಾಡಿದರು.ಮೊದಲ ಭೇಟಿಯಲ್ಲಿಯೇ ಅಹಿಂಸೆಯಲ್ಲಿ ಈ ತರುಣನಿಗೆ ನಂಬಿಕೆ ಇಲ್ಲ ಎಂಬುದು ಗಾಂಧಿಯವರಿಗೆ ಸ್ಪಷ್ಟವಾಯಿತು. ನಂತರ ಬೋಸರು ಕಲ್ಕತ್ತೆಗೆ ಬಂದರು. ಗಾಂಧೀಜಿಯವರ ಸಲಹೆಯಂತೆ ಚಿತ್ತರಂಜನದಾಸರನ್ನು ಕಂಡು ಚರ್ಚಿಸಿದರು. ಸ್ವಾತಂತ್ರ್ಯ ಹೋರಾಟದ ಕಹಳೆಯೂದಿದರು.

1921ರಲ್ಲಿ ಬ್ರಿಟನ್ನಿನ ಯುವರಾಜನ ಭಾರತ ಭೇಟಿ ಕಾರ್ಯಕ್ರಮವಿತ್ತು. ಕಾಂಗ್ರೆಸ್ ಈ ಭೇಟಿಯನ್ನು ಬಹಿಷ್ಕರಿಸಲು ಕರೆ ನೀಡಿತು. ದೇಶಾದ್ಯಂತ ಬಹಿಷ್ಕಾರ ಯಶಸ್ವಿಯಾಯಿತು.ಬಂಗಾಳದಲ್ಲಿ ವಿದ್ಯಾರ್ಥಿಗಳು, ಕಾರ್ಖಾನೆ ಕೆಲಸಗಾರರು ಸುಭಾಷ್ ಚಂದ್ರ ಬೋಸ್ ರವರ ನಾಯಕತ್ವದಲ್ಲಿ ಹೋರಾಟಕ್ಕಿಳಿದರು. ಬಂಗಾಲ ಸರಕಾರ 1921 ಡಿಸೆಂಬರ್ 10 ರಂದು ಬೋಸರನ್ನು ಬಂಧಿಸಿತು. ಇದು ಬೋಸರ ಮೊದಲ ಸೆರೆಮನೆವಾಸ.

1924ರಲ್ಲಿ ನಡೆದ ಕಲಕತ್ತೆಯ ಪೌರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿತು.ಚಿತ್ತರಂಜನ್ ದಾಸ್ ಮೇಯರ್, ಸುಭಾಷ್ ಚಂದ್ರ ಬೋಸ್  ಆಡಳಿತಾಧಿಕಾರಿಯಾದರು .ಈ ಈರ್ವರ ಜೋಡಿ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ತಂದು ಸ್ವರಾಜ್ಯದ ಆಡಳಿತದ ಮಾದರಿಗೆ ಸಾಕ್ಷಿಯಾಯಿತು.ಇದು ಬ್ರಿಟಿಷರ ನಿದ್ರೆಗೆಡಿಸಿತು. ಬೋಸರನ್ನು ಬಂಧಿಸಿ ಬರ್ಮಾ ದೇಶದ ಮಾಂಡಲೆ ಸೆರೆಮನೆಯಲ್ಲಿಟ್ಟರು.ಎರಡೂವರೆ ವರ್ಷಗಳ ಜೈಲುವಾಸದಲ್ಲಿ ಬೋಸರ ಆರೋಗ್ಯ ಕೆಟ್ಟಿತು. ಅವರನ್ನು 1927ರಲ್ಲಿ ಬಂಧನದಿಂದ ಮುಕ್ತಗೊಳಿಸಲಾಯಿತು. ಬೋಸರು ನೇರವಾಗಿ ಕಲ್ಕತ್ತೆಗೆ ಬಂದರು.ಅವರ ಮಾರ್ಗದರ್ಶಕರಾಗಿದ್ದ ಚಿತ್ತರಂಜನ ದಾಸರು ಮರಣಹೊಂದಿದ್ದರು. ಗಾಂಧಿಯವರು ಯಾವ ಹೋರಾಟವನ್ನು ಮಾಡದೆ ಸುಮ್ಮನಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಶೂನ್ಯ ಆವರಿಸಿತ್ತು.ಎಲ್ಲೆಲ್ಲೂ ನಿರಾಸೆಯ ಛಾಯೆ ಆವರಿಸಿತ್ತು.

ಬೋಸರು ಬಂಗಾಳ ಪ್ರಾಂತ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು. ಅದೇ ವೇಳೆಗೆ ಬ್ರಿಟಿಷ್ ಸರಕಾರ ಸೈಮನ್ ಕಮಿಷನ್ ನೇಮಿಸಿತ್ತು.ದೇಶಾದ್ಯಂತ ಇದರ ವಿರುದ್ಧ ಹೋರಾಟದ ಕಹಳೆ ಮಾರ್ದನಿಸಿತು.ಕಲಕತ್ತೆಯಲ್ಲಿ 1928ರಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿತು.ಪೂರ್ಣ ಸ್ವರಾಜ್ಯವೇ ನಮ್ಮ ಗುರಿ ಎಂಬುದು ಬೋಸರ ಒತ್ತಾಯವಾಗಿತ್ತು. ಇದರಿಂದ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಸುಭಾಶ್ಚಂದ್ರ ಬೋಸರ ಕೀರ್ತಿ ಗಗನಕ್ಕೇರಿತು.

1938 ರಲ್ಲಿ ಬೋಸರು ಗುಜರಾತಿನ ಹರಿಪುರದಲ್ಲಿ ಜರಗಿದ 51ನೇ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿ ರಾಷ್ಟ್ರದ ಗಮನ ಸೆಳೆದರು.1920 ರಿಂದ 1938 ರ ವರೆಗೆ ಮಹಾತ್ಮಾ ಗಾಂಧೀಜಿ ಅವರು ಸೂಚಿಸಿದ ವ್ಯಕ್ತಿಗೆ ಕಾಂಗ್ರೆಸ್ ನ ಅಧ್ಯಕ್ಷರಾಗುವ ಸಂಪ್ರದಾಯ ಬೆಳೆದು ಬಂದಿತ್ತು. ಆದರೆ ಪ್ರಥಮ ಬಾರಿಗೆ ಗಾಂಧಿಯವರಿಗೆ ಹಿನ್ನಡೆಯಾಗಿತ್ತು. ಬೋಸರ ನಾಯಕತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾವು ತೀವ್ರವಾಯಿತು.ಇಡೀ ವರ್ಷ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪಕ್ಕೆ ಹೊಸ ಆಯಾಮವನ್ನು ನೀಡಿ ಎಲ್ಲರ ಗಮನ ಸೆಳೆದರು ಬೋಸ್.

ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ ಬೋಸ್ ರವರು 1939 ರಲ್ಲಿ ತ್ರಿಪುರಾದ ಕಾಂಗ್ರೆಸ್ ಅಧಿವೇಶನದಲ್ಲಿ ಎರಡನೇ ಅವಧಿಗೂ ಪುನರಾಯ್ಕೆ ಬಯಸಿ ಚುನಾವಣೆಗೆ ನಿಂತರು. ಆದರೆ ಗಾಂಧೀಜಿಯವರಿಗೆ ಇದು ಸರಿಬರಲಿಲ್ಲ. ಅವರು ಪಟ್ಟಾಭಿ ಸೀತಾರಾಮಯ್ಯ ನವರನ್ನು ಅಭ್ಯರ್ಥಿಯನ್ನಾಗಿಸಿದರು. ಕಾಂಗ್ರೆಸ್ ನ ಎಲ್ಲ ಘಟಾನುಘಟಿ ನಾಯಕರುಗಳು, ದೇಶದ ಎಲ್ಲ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯವರು ಗಾಂಧೀಜಿಯವರ ಅಭ್ಯರ್ಥಿಯನ್ನು ಬೆಂಬಲಿಸಿದರು. ದೇಶಾದ್ಯಂತ ಪ್ರಚಾರ ಆರಂಭಿಸಿದ ಬೋಸರು ತಮ್ಮ ಪ್ರಖರ ವಾಗ್ಜರಿಯಿಂದ ಎಲ್ಲರ ಗಮನ ಸೆಳೆದರು.ಒಳಾಡಳಿತದಲ್ಲಿ ಇನ್ನಷ್ಟು ಅಧಿಕಾರಕ್ಕಾಗಿ ಕಾಂಗ್ರೆಸ್ ಕರೆ ನೀಡಿದರೆ, ಸಂಪೂರ್ಣ ಸ್ವರಾಜ್ಯವೇ ನಮ್ಮ ಗುರಿ ಎಂಬುದು ಬೋಸರ ರಣಕಹಳೆಯಾಗಿತ್ತು.

ನಾಯಕರುಗಳ ಪ್ರತಿಷ್ಠೆಯ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಬೋಸರು 1580 ಮತಗಳನ್ನು, ಪಟ್ಟಾಭಿ ಸೀತಾರಾಮಯ್ಯ ನವರು 1377 ಮತಗಳನ್ನು ಪಡೆದಿದ್ದರು. ಸುಭಾಸರು 203 ಮತಗಳ ಅಂತರದಿಂದ ವಿಜಯ ದುಂದುಬಿ ಮೊಳಗಿಸಿದರು.ಇದು ಗಾಂಧೀಜಿಯವರ ಸೋಲೆಂದು ಎಲ್ಲೆಡೆ ಚರ್ಚಿತವಾಯಿತು. ಪ್ರಥಮ ಬಾರಿಗೆ ಗಾಂಧೀಜಿಯವರಿಗೆ ಹಿನ್ನೆಡೆಯಾದಂತಾಯಿತು.ಮುಂದೆ ಗಾಂಧಿ ನೆಹರೂ ಮತ್ತು ಬೋಸರ ನಡುವೆ ಸೈದ್ಧಾಂತಿಕ ಸಂಘರ್ಷವೇರ್ಪಟ್ಟಿತು.ಇದು ಮನಸ್ತಾಪಕ್ಕೆ ಕಾರಣವಾಗಿ ಬೋಸರು ಅಧ್ಯಕ್ಷ ಪದವಿಗೆ ರಾಜಿನಾಮೆ ಕೊಡಬೇಕಾಯಿತು.3 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ಬೋಸರಿಗೆ ಯಾವ ಅಧಿಕಾರ ಸ್ಥಾನವು ದೊರಕದಂತೆ ಠರಾವು ಪಾಸಾಯಿತು.ಬೋಸರು ಕಾಂಗ್ರೆಸ್ ನಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಪಕ್ಷ ಕಟ್ಟಿದರು.

ದೇಶಾದ್ಯಂತ ಬ್ರಿಟಿಷರ ವಿರುದ್ಧ ಫಾರ್ವರ್ಡ್ ಬ್ಲಾಕಿನ ಚಳವಳಿ ತೀವ್ರವಾಯಿತು.ಬೋಸ್ ಅವರನ್ನು ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ಬಂಗಾಳ ಸರ್ಕಾರವು 1940ರ ಜುಲೈನಲ್ಲಿ ಬಂಧಿಸಿತು. ಅದೇ ವರ್ಷದ ನವೆಂಬರ್ ನಲ್ಲಿ ಅವರು ನನ್ನನ್ನು ಬಿಡುಗಡೆಗೊಳಿಸದಿದ್ದರೆ ಉಪವಾಸ ಕೂರುವುದಾಗಿ ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಅವರ ಗುಟುರಿಗೆ ಹೆದರಿದ ಬ್ರಿಟಿಷ್ ಸರ್ಕಾರ ಅವರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿ ಗೃಹಬಂಧನದಲ್ಲಿರಿಸಿತು.

1941 ನೇ ಜನವರಿಯಲ್ಲಿ ಬೋಸರು ಗೃಹಬಂಧನದಿಂದ ಚಾಣಕ್ಯ ರೀತಿಯಲ್ಲಿ ತಪ್ಪಿಸಿಕೊಂಡರು.ವೇಷ ಮರೆಸಿಕೊಂಡು ಭಾರತದ ಗಡಿ ದಾಟಿ ಆಫ್ಘಾನಿಸ್ತಾನದ ಪೇಶಾವರ್ ಗೆ ತೆರಳಿದರು.ನಂತರ ಕಾಬೂಲ್ ಸೇರಿದರು.
ನಂತರ ಅಲ್ಲಿಂದ ನಾಜಿ ಜರ್ಮನಿಗೆ ತೆರಳಿ ಹಿಟ್ಲರ್ ನೊಂದಿಗೆ ಮಾತುಕತೆ ನಡೆಸಿದರು. ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲಿನ ಸರ್ಕಾರದ ಸಹಾಯವನ್ನು ಯಾಚಿಸಿದರು.ನವೆಂಬರ್ 2ರಂದು ಆಜಾದ್ ಹಿಂದ್ ಕೇಂದ್ರದ ಮೊದಲ ಸಮ್ಮೇಳನ ಬರ್ಲಿನ್ ನಗರದಲ್ಲಿ ಜರುಗಿತು ‘ಚಲೋ ಡಿಲ್ಲಿ’ ಎಂಬ ಘೋಷವಾಕ್ಯ ಮೊಳಗಿತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಸಂಘಟಿಸಲು,ಹೋರಾಟಕ್ಕೆ ಕರೆ ಕೊಡಲು ಜರ್ಮನ್ ಸರ್ಕಾರ ಬೋಸ್ ರ ವರೆಗೆ 1942 ರಲ್ಲಿ ಆಜಾದ್ ಹಿಂದ್ ರೇಡಿಯೊವನ್ನು ಸ್ಥಾಪಿಸಿತು.ಬರ್ಲಿನ್ ನಲ್ಲಿ ಸ್ವತಂತ್ರ ಭಾರತದ ರಾಯಭಾರ ಕಾರ್ಯಾಲಯವು ಆರಂಭವಾಯಿತು.

1942 ರಲ್ಲಿ ರಷ್ಯಾ -ಜರ್ಮನ್ ನಡುವಿನ ಸೆಣಸಾಟದಲ್ಲಿ ಜರ್ಮನಿಗೆ ಸೋಲಾಯಿತು.ಇದೇ ವೇಳೆಗೆ ಏಷ್ಯಾ ವಲಯದಲ್ಲಿ ಜಪಾನ್ ದೇಶವು ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು.ತಂತ್ರಗಾರಿಕೆಯಲ್ಲಿ ನಿಪುಣರಾದ ಬೋಸ್ ರವರು ಬದಲಾದ ಸನ್ನಿವೇಶದಲ್ಲಿ ಆಗ್ನೇಯ ಏಷ್ಯಾಕ್ಕೆ ತನ್ನ ಕಾರ್ಯಕ್ಷೇತ್ರ ಬದಲಿಸಲು ತೀರ್ಮಾನಿಸಿದರು.1943 ರಲ್ಲಿ ಜರ್ಮನ್ ಜಲಾಂತರ್ಗಾಮಿ ನೌಕೆಯಲ್ಲಿ ಮಡಗಾಸ್ಕರ್‌ನಿಂದ ಅವರನ್ನು ಜಪಾನಿನ ಜಲಾಂತರ್ಗಾಮಿ ನೌಕೆಗೆ ವರ್ಗಾಯಿಸಲಾಯಿತು, 90 ದಿನಗಳ ಪಯಣದ ನಂತರ ಅವರು ಜಪಾನಿಯರ ಹಿಡಿತದಲ್ಲಿದ್ದ ಸುಮಾತ್ರಾ ತಲುಪಿದರು. ದಾರಿಯುದ್ದಕ್ಕೂ ಬ್ರಿಟನ್ನಿನ ಸೈನಿಕರ ಕಣ್ಣು ತಪ್ಪಿಸಿ ಅವರು ಇಲ್ಲಿಗೆ ತಲುಪಿದ್ದೇ ಪವಾಡ ಸದೃಶವಾದುದು. ನಂತರ ಟೋಕಿಯೊಗೆ ಪ್ರವೇಶಿಸಿದರು.ಜಪಾನ್ ಸರ್ಕಾರದೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

1943 ಜುಲೈ 2ರಂದು ಬೋಸರು ಜಪಾನೀಯರ ವಶದಲ್ಲಿದ್ದ ಸಿಂಗಪುರವನ್ನು ಪ್ರವೇಶಿಸಿದರು. ಸ್ವಾತಂತ್ರ್ಯ ಭಾರತ ಸಂಘದ’ ನಾಯಕರಾದ ರಾಸ್ ಬಿಹಾರಿ ಬೋಸ್ ಅವರನ್ನು ಭೇಟಿಯಾದರು. ಅಲ್ಲಿ ಸುಭಾಶ್ಚಂದ್ರ ಬೋಸರಿಗೆ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಪಟ್ಟವನ್ನು ಕಟ್ಟಲಾಯಿತು. ಭಾರತ ರಾಷ್ಟ್ರೀಯ ಸೇನೆಯ ಪ್ರಚಂಡ ಮಹಾದಂಡ ನಾಯಕರನ್ನಾಗಿ ಆರಿಸಲಾಯಿತು. ಅಲ್ಲಿನ ಯೋಧರನ್ನು ಕುರಿತು ಮಾತನಾಡಿದ ನೇತಾಜಿಯವರು.”ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಭಾರತ ಕೊಡುತ್ತೇನೆ” ಎಂದು ಕರೆ ನೀಡಿದರು. ಪ್ರತಿಯಾಗಿ ಯೋಧರಿಂದ “ಸ್ವೀಕರಿಸಿ ನಮ್ಮ ರಕ್ತವನ್ನು” ಎಂಬ ಘೋಷಣೆ ಮೊಳಗಿಸಿ,ರಕ್ತದಿಂದ ಸಹಿ ಮಾಡಿದ ಪ್ರತಿಜ್ಞಾಪತ್ರವನ್ನು ನೇತಾಜಿ ಅವರಿಗೆ ಸಮರ್ಪಿಸಿದರು.

ಜಪಾನಿನ ಬೆಂಬಲದೊಂದಿಗೆ, ಬೋಸ್ ರವರು ಇಂಡಿಯನ್ ನ್ಯಾಷನಲ್ ಆರ್ಮಿ (INA) ಅನ್ನು ಆಧುನಿಕರಿಸಿದರು.ಬರ್ಮಾ, ಥೈಲ್ಯಾಂಡ್, ಮಲಯ, ಇಂಡೋಚೈನಾ ಗಳಿಗೆ ಭೇಟಿ ನೀಡಿ ಸೈನ್ಯವನ್ನು ಸಂಘಟಿಸಿದರು.ಸುಮಾರು 40,000 ತರಬೇತಿ ಪಡೆದ ಸೈನ್ಯವನ್ನು ಆಗ್ನೇಯ ಏಷ್ಯಾದಲ್ಲಿ ಸಂಘಟಿಸಿದರು.ಇದರಲ್ಲಿ ಸಾವಿರಾರು ಮಹಿಳೆಯರನ್ನೊಳಗೊಂಡ ‘ಝಾನ್ಸಿ ಪಡೆ’ ಕೂಡ ಸೇರಿತ್ತು. 1943ರ ಅಕ್ಟೋಬರ್ 21ರಂದು ‘ಆಜಾದ್ ಹಿಂದ್ ಸರ್ಕಾರ’ ಅಸ್ತಿತ್ವಕ್ಕೆ ಬಂತು. ಮಂತ್ರಿಮಂಡಲವೂ ರಚನೆಗೊಂಡಿತು.

ಜಪಾನ್ ಸೈನ್ಯ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಗಳು ಜಂಟಿಯಾಗಿ ಯುದ್ಧದ ಕಾರ್ಯಾಚರಣೆಗಿಳಿದವು.1943 ಡಿಸೆಂಬರ್ 29 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರ ಹಿಡಿತದಿಂದ ವಶಪಡಿಸಿಕೊಳ್ಳಲಾಯಿತು. ಬೋಸ್ ಅವರ ಅಧ್ಯಕ್ಷತೆಯಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರ ರಚನೆಯಾಯಿತು. ‘ಆಜಾದ್ ಹಿಂದ್ ಆಕಾಶವಾಣಿಯ ಮೂಲಕ ಈ ವಿಷಯ ಭಾರತದಲ್ಲೆಲ್ಲ ಪ್ರಚಾರವಾಗಿ ಹೊಸ ಸಂಚಲನವನ್ನುಂಟು ಮಾಡಿತು. ಮಾರ್ಚ್ 18, 1944 ರಂದು ಭಾರತೀಯ ರಾಷ್ಟ್ರೀಯ ಸೈನ್ಯ (ಆಜಾದ್ ಹಿಂದ್ ಫೌಜ್), ಜಪಾನಿನ ಸೈನ್ಯದೊಂದಿಗೆ ರಂಗೂನ್ (ಬರ್ಮಾ ) ಗೆ ತೆರಳಿ, ಅಲ್ಲಿಂದ ಭಾರತದ ಗಡಿ ದಾಟಿ, ಬ್ರಿಟಿಷ್ ಭಾರತೀಯ ಸೈನ್ಯದ ವಿರುದ್ಧ ಹೋರಾಟಕ್ಕೆ ಸನ್ನದ್ಧವಾಯಿತು.ವೀರಾವೇಶದಿಂದ ಸಿದ್ಧವಾಗಿದ್ದ ಸೈನ್ಯಕ್ಕೆ ಗೆಲುವು ನಮ್ಮದೇ ಎಂಬುದು ಖಾತ್ರಿಯಾಗಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

1944 ರ ಕೊನೆಯಲ್ಲಿ ಮತ್ತು 1945 ರ ಆರಂಭದಲ್ಲಿ ನಡೆದ ಯುದ್ಧದಲ್ಲಿ ಬ್ರಿಟಿಷ್ ಭಾರತೀಯ ಸೇನೆಯು ವಾಯು ಸೇನೆಯ ನೆರವಿನಿಂದ ಜಪಾನಿ ನೇತೃತ್ವದ ಭೂಸೇನೆಯ ದಾಳಿಯನ್ನು ಹಿಮ್ಮೆಟ್ಟಿಸಿತು. ಬರ್ಮಾದಿಂದ ಸೈನಿಕರಿಗೆ ಆಗುತ್ತಿದ್ದ ಸರಬರಾಜಿಗೆ ಅಡಚಣೆಯಾಗಿ ಸೇನೆ ಹಿಂದೆ ಸರಿಯಬೇಕಾಯಿತು. ಆದರೂ ಭಾರತೀಯ ರಾಷ್ಟ್ರೀಯ ಸೈನ್ಯವು ಬರ್ಮ ಮತ್ತು ಇಂಡೋಚೈನಾದಲ್ಲಿ ವಿಮೋಚನಾ ಸೈನ್ಯವಾಗಿ ತನ್ನ ಗುರುತನ್ನು ಉಳಿಸಿಕೊಂಡಿತು. ನೇತಾಜಿ ಮತ್ತು ಅವರ ಮಂತ್ರಿಮಂಡಲದವರು ರಂಗೂನಿನಿಂದ ಬ್ಯಾಂಕಾಕ್, ಮಲಯ, ಸೆರಂಬನ್ನಿಗೆ ಪ್ರಯಾಣ ಬೆಳೆಸಿದರು.ಅಷ್ಟರಲ್ಲಿ ರಷ್ಯಾವು ಜಪಾನಿನ ಮೇಲೆ ಯೂದ್ದ ಆರಂಭಿಸಿರುವ ಸುದ್ದಿ ತಲುಪಿತು. ಜಪಾನ್ ಸೋತರೆ ನಮ್ಮ ಹೋರಾಟಕ್ಕೆ ಅರ್ಥವಿಲ್ಲವೆಂದು ನೇತಾಜಿ ಅವರಿಗೆ ಅನಿಸಿತು. .

1945 ಆಗಸ್ಟ್ 15 ರಂದು ಜಪಾನ್ ಸೈನ್ಯ ರಷ್ಯಾದೆದುರು ಸೋತು ಶರಣಾಯಿತು.ಇದೀಗ ಬೋಸ್ ಅವರು ಸೋವಿಯತ್ ಒಕ್ಕೂಟವನ್ನು ತನ್ನ ಕಾರ್ಯ ಕ್ಷೇತ್ರವನ್ನಾಗಿಸಲು ನಿಶ್ಚಯಿಸಿದರು. ಆಗಸ್ಟ್ 18 ರಂದು ಬ್ಯಾಂಕಾಕಿನಲ್ಲಿ ವಿಮಾನ ಹತ್ತಿ ಪಯಣ ಹೊರಟರು.ಹಾಗೆ ತಪ್ಪಿಸಿಕೊಂಡು ಪಯಣಿಸುವಾಗ ತೈವಾನ್‌ನ ತಾಯ್‌ಹೊಕುವಿನಲ್ಲಿ ವಿಮಾನ ಪತನಗೊಂಡು ಮರಣ ಹೊಂದಿದರು ಎಂದು ಟೋಕಿಯೋ ರೇಡಿಯೋ 5 ದಿನಗಳ ನಂತರ ಆಗಸ್ಟ್ 22 ರಂದು ಘೋಷಿಸಿತು. ಟೋಕಿಯೋದಲ್ಲಿ ಸೇನಾ ಗೌರವದ ಸಮೇತ ಅವರಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ವರದಿ ಮಾಡಲಾಯಿತು.

ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಮರುಕ್ಷಣದಿಂದಲೇ ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗತೊಡಗಿದವು.ಬೋಸ್ ರವರ ಸಾವು ಕಟ್ಟುಕತೆಯೆಂದು ಎಲ್ಲೆಡೆಯಿಂದ ಗಾಳಿಮಾತುಗಳು ತೇಲತೊಡಗಿದವು. ಅಮೇರಿಕದ ವರದಿಯೊಂದರ ಪ್ರಕಾರ ಅವರು 1964ರ ಫೆಬ್ರವರಿಯಲ್ಲಿ ಚೀನಾದ ಮೂಲಕ ಭಾರತಕ್ಕೆ ಆಗಮಿಸಿರುವುದು ದೃಢಪಟ್ಟಿದೆ.ನೆಹರು ನೇತೃತ್ವದ ಕಾಂಗ್ರೆಸ್ ಸರಕಾರ ಬೋಸ್ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿತ್ತು. ನೆಹರು ಅವರೇ ನೇತಾಜಿ ಅವರು ರಷ್ಯಾ ಪ್ರವೇಶಿಸಿದ್ದನ್ನು ಬ್ರಿಟನ್-ಅಮೆರಿಕಕ್ಕೆ ತಿಳಿಸಿದ್ದರು ಎಂಬ ಗೌಪ್ಯ ಅಂಶಗಳು ಪಶ್ಚಿಮ ಬಂಗಾಳ ಸರಕಾರ ಹೊರಗೆಡಹಿದ ಕಡತಗಳಿಂದ ಜಾಹೀರಾಗಿವೆ. ಹಾಗೆಯೇ 1949 ರಲ್ಲಿ ನೇತಾಜಿ ಅವರ ಅಣ್ಣ ಶರತ್ ಬೋಸ್ ರವರು ‘ನೇತಾಜಿ ಇನ್ ಚೀನಾ’ ಹೆಸರಿನಲ್ಲಿ ಬರೆದ ಲೇಖನ ಸಹ ಬೋಸ್ ರವರ ವಿಮಾನ ಅಪಘಾತದ ಸಾವು ಕಟ್ಟುಕತೆ ಎಂಬುದನ್ನು ದೃಢಪಡಿಸುತ್ತದೆ.

ಮಾಜಿ ಸಚಿವ ಸುಬ್ರಹ್ಮಣ್ಯ ಸ್ವಾಮಿ ಅವರು ನೆಹರೂರವರೇ ಬೋಸ್ ರವರ ಸಾವಿನ ಸುದ್ದಿಯನ್ನು ಹೊಸೆದಿದ್ದು ಎಂದು ನೇರವಾಗಿ ಆರೋಪಿಸಿದ್ದಾರೆ. ವಾಜಪೇಯಿಯವರ ಸರ್ಕಾರ ಬೋಸ್ ರವರ ಸಾವಿನ ರಹಸ್ಯ ತಿಳಿಯಲು ಮುಖರ್ಜಿ ಆಯೋಗವನ್ನು ನೇಮಿಸಿತ್ತು. ಆಯೋಗವು ಹೆಚ್ಚಿನ ತನಿಖೆಗೆಂದು ರಷ್ಯಾಗೆ ಹೋದಾಗ, ಅಲ್ಲಿನ ಪತ್ರಾಗಾರದಲ್ಲಿ ನೇತಾಜಿಗೆ ಸಂಬಂಧಿಸಿದ ದಾಖಲೆ ಪತ್ರಗಳು ನಿಗೂಢವಾಗಿ ನಾಪತ್ತೆಯಾದವು. “ಬೋಸ್ ರವರು ತನ್ನ ಕೊನೆಯ ದಿನಗಳನ್ನು ಸೈಬೀರಿಯಾದ ಜೈಲುಗಳಲ್ಲಿ ಯಾತನಾದಾಯಕವಾಗಿ ಕಳೆದರು. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಪತ್ರಾಗಾರದಲ್ಲಿ ಇದ್ದವು” ಎಂದು ಮಾಸ್ಕೋ ರಾಮಕೃಷ್ಣ ಮಿಷನ್‌ನ ಮುಖ್ಯಸ್ಥರಾದ ರತಿನ್ ಮಹಾರಾಜ್ ಅವರು ಟಿಒಐಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ದಾಖಲೆಗಳು ಸಿಗದ ಕಾರಣಕ್ಕಾಗಿ ತನಿಖೆ ಪ್ರಗತಿಯಾಗಲಿಲ್ಲ. ಆದರೂ 2005 ರಲ್ಲಿ ಆಯೋಗ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ “ನೇತಾಜಿ ತೀರಿಕೊಂಡರು ಎಂದು ಹೇಳಲಾದ ದಿನಾಂಕದಂದು ಯಾವುದೇ ವಿಮಾನ ಅಪಘಾತ ನಡೆದಿಲ್ಲ”ಎಂಬ ಸ್ಫೋಟಕ ಮಾಹಿತಿಯನ್ನು ಬಯಲಿಗೆಳೆದಿತ್ತು.

ಇಂತಹ ಅಪ್ರತಿಮ ದೇಶ ಭಕ್ತನಿಗೆ ನೆಹರೂ ಮತ್ತು ಕಾಂಗ್ರೆಸ್ ಸರ್ಕಾರ ನೀಡಬೇಕಾದ ಪ್ರಾಮುಖ್ಯತೆಯನ್ನಾಗಲೀ, ಮನ್ನಣೆಯನ್ನಾಗಲೀ ನೀಡಲಿಲ್ಲ. ಸ್ವಾತಂತ್ರ್ಯಾನಂತರದ ಭಾರತದ ಪಠ್ಯಗಳಲ್ಲಿ ಕೆಲವೇ ಸಾಲುಗಳಿಗೆ ನೇತಾಜಿಯವರ ವ್ಯಕ್ತಿತ್ವವನ್ನು ಸೀಮಿತಗೊಳಿಸಲಾಯಿತೆ ಹೊರತು, ಅವರ ಸಮಗ್ರ ಹೋರಾಟದ ಕಥನವನ್ನು ದೇಶದ ಯುವಜನತೆಗೆ ಸ್ಫೂರ್ತಿಯಾಗುವಂತೆ ಕಟ್ಟಿಕೊಡುವಲ್ಲಿ ನೆಹರೂ ಸರ್ಕಾರ ಸಂಪೂರ್ಣವಾಗಿ ವಿಫಲವಾಯಿತು. ಅತ್ಯಂತ ನಾಜೂಕಾಗಿ ನೇತಾಜಿಯವರ ಸಾಹಸಮಯ ಬದುಕನ್ನು ನೇಪಥ್ಯಕ್ಕೆ ಸರಿಸಲಾಯಿತು. ಇದು ಕಾಂಗ್ರೆಸ್ ಸರ್ಕಾರ ಈ ದೇಶಕ್ಕೆ ಮಾಡಿದ ಮಹಾನ್ ದ್ರೋಹವಾಗಿದೆ.

ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮದಿನವಾದ ಜ.23 ರಿಂದಲೇ ಗಣರಾಜ್ಯೋತ್ಸವದ ಆಚರಣೆಗಳನ್ನು ಆರಂಭಿಸಲು ನರೇಂದ್ರ ಮೋದಿಯವರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ನೇತಾಜಿ ಜನ್ಮ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲಾಗುತ್ತಿದೆ. ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಗಣರಾಜ್ಯೋತ್ಸವದ ಆಚರಣೆಯಲ್ಲಿ ಸೇರಿಸಲು ಜ.24 ಬದಲಿಗೆ ಜ.23ರಿಂದ ಗಣರಾಜ್ಯೋತ್ಸವದ ಆಚರಣೆ ಆರಂಭವಾಗಲಿದೆ. ಇದರಿಂದ ನೇಪಥ್ಯಕ್ಕೆ ಸರಿದಿದ್ದ ನೇತಾಜಿಯವರ ನೆನಪು, ಮತ್ತೆ ಪ್ರಧಾನ ಭೂಮಿಕೆಗೆ ಮರಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೇಖಕರು:ಮಣ್ಣೆ ಮೋಹನ್
(M)-6360507617
[email protected]

ಜಿಲ್ಲೆ

ರಾಜ್ಯ

error: Content is protected !!