Tuesday, April 16, 2024

ವೀಕೆಂಡ್ ಕರ್ಫ್ಯೂ ವೀಕ್ ಆಯ್ತಾ? ಸಾಮಾನ್ಯರಿಗೊಂದು ಕಾನೂನು ಜನಪ್ರತಿನಿಧಿಗಳಿಗೊಂದು ಕಾನೂನು?

, ಸುದ್ದಿ ಸದ್ದು ನ್ಯೂಸ್

ಬೆಳಗಾವಿ: ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ಮತ್ತು ಓಮಿಕ್ರಾನ್ ಎಂಬ ವೈರಾಣು ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಸಭೆ, ಸಮಾರಂಭ, ಪಾದಯಾತ್ರೆ, ಸ್ಪರ್ಧೆ, ಜಾತ್ರೆಗಳಿಗೆ ಅವಕಾಶ ನೀಡ್ಬಾರ್ದು. ಇನ್ನಾದ್ರು ಪಕ್ಷಪಾತದ ಧೋರಣೆ ನಿಲ್ಲಿಸಿ ಎಂದು ಸರ್ಕಾರಕ್ಕೆ ನಿನ್ನೆಯಷ್ಟೇ ಹೈಕೋರ್ಟ್ ಬುದ್ದಿವಾದ ಹೇಳಿತ್ತು. ಆದ್ರೆ, ಇದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಯಾಕಂದ್ರೆ, ವೀಕೆಂಡ್ ಕರ್ಫ್ಯೂ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಬೆಳಗಾವಿಯ ಬಿಜೆಪಿ ಶಾಸಕ ಅನಿಲ್ ಬೆನಕೆ, ಎಮ್ಮೆ ಓಡಿಸುವ ಸ್ಪರ್ಧೆ ನಡೆಸಿದ್ದಾರೆ.
ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ರು. ಮಕರ ಸಂಕ್ರಮಣ ನಿಮಿತ್ತ ಎಮ್ಮೆ ಓಡಿಸುವ ಸ್ಪರ್ಧೆಗೆ ಶಾಸಕ ಅನಿಲ್ ಬೆನಕೆ ಚಾಲನೆ ನೀಡಿದ್ದರು. ನಿನ್ನೆ ಸಂಜೆ ಚವ್ಹಾಟ್ ಗಲ್ಲಿಯಲ್ಲಿ ಚವಾಟ ಯುವಕ ಸಂಘಟನೆ, ಪಂಚ ಸಮಿತಿ, ಗವಳಿ ಸಮಾಜ ಸಹಯೋಗದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ನಡೆಯಿತು. ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನೂರಾರು ಜನರು ಭಾಗಿಯಾಗಿದ್ದರು.

ಬೆಳಗಾವಿಯಲ್ಲಿ ಕೋವಿಡ್ ದಿನೇ ದಿನೇ ತಾಂಡವವಾಡುತ್ತಿದ್ದರೂ ಶಾಸಕ ಅನಿಲ್ ಬೆನಕೆ ಜವಾಬ್ದಾರಿ ಸ್ಥಾನದಲ್ಲಿದ್ದರೂ ತಮ್ಮ ಬೇಜವಾಬ್ದಾರಿತನ ತೋರಿದರು. ಜನರನ್ನು ಎಚ್ಚರಿಸಿ ತಿಳುವಳಿಕೆ ನೀಡಬೇಕಿದ್ದ ಆಡಳಿತಾರೂಢ ಶಾಸಕನಿಂದಲೇ ನಿರ್ಲಕ್ಷ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಕ್ರಮ ಜರುಗಿಸಬೇಕಾಗಿದ್ದ ಜಿಲ್ಲಾಡಳಿತ ಸೈಲೆಂಟಾಗಿದೆ.ಇನ್ನೂ ರಾಯಭಾಗದ ಮುಗಳಖೋಡದಲ್ಲಿ ಯಲ್ಲಮ್ಮನ ಜಾತ್ರೆ ಭರ್ಜರಿಯಾಗಿ ನಡೆದಿದೆ.

ಗಂಗಾವತಿಯ ಚನ್ನಬಸವ ತಾತನವರ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಬೆಂಗಳೂರಿನ ಬನ್ನಪ್ಪ ಪಾರ್ಕ್ ಬಳಿಯ ಮಹಾಗಣಪತಿ ದೇಗುಲ ತುಂಬಿ ತುಳುಕ್ತಾ ಇತ್ತು.

ಬಾಗಲಕೋಟೆ ಇಳಕಲ್‍ನಲ್ಲಿ ಬನಶಂಕರಿ ಭಕ್ತರು ವೀಕೆಂಡ್ ಕರ್ಫ್ಯೂಗೆ ಡೋಂಟ್ ಕೇರ್ ಅಂದ್ರು. ಬದಾಮಿ ಬನಶಂಕರಿ ದೇಗುಲದವರೆಗೆ ಸಾವಿರಾರು ಮಂದಿ ಪಾದಯಾತ್ರೆ ನಡೆಸಿದ್ದಾರೆ. ಎಲ್ಲಾ ಕಡೆ ರೂಲ್ಸ್ ಬ್ರೇಕ್ ಆಗ್ತಿದ್ರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.

ವಿಜಯಪುರದಲ್ಲಿ ರೈತನೋರ್ವ ತನ್ನ ಹೊಲದಲ್ಲಿ ಬೆಳೆದ ತರಕಾರಿ ಮಾರಲು ಪೋಲಿಸರು ಅವಕಾಶ ನೀಡುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿ ತರಕಾರಿಯನ್ನು ರಸ್ತೆಯಲ್ಲೆಲ್ಲ ಚೆಲ್ಲುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿರುವುದು ಕಂಡು ಬಂದಿದೆ.
ಈ ಎಲ್ಲ ಬೆಳವಣಿಗೆಗಳನ್ನೂ ಗಮನಿಸಿದಾಗ ಜನಸಾಮಾನ್ಯರಿಗೆ ಒಂದು ಕಾನೂನು ಜನಪ್ರತಿನಿಧಿಗಳಿಗೊಂದು ಕಾನೂನಾ? ಅನ್ನೋ ಪ್ರಶ್ನೆ ಉದ್ಭವಿಸಿದೆ.

ಜಿಲ್ಲೆ

ರಾಜ್ಯ

error: Content is protected !!