Saturday, July 20, 2024

ವರ್ಷದೊಳಗೆ ಚಿಕ್ಕಪೇಟೆ ಕ್ಷೇತ್ರಕ್ಕೆ ಹೊಸ ಲುಕ್ : ಉದಯ್ ಗರುಡಾಚಾರ್

ಸುದ್ದಿ ಸದ್ದು ನ್ಯೂಸ್

ಬೆಂಗಳೂರು: ಮುಂದಿನ ಒಂದೂವರೆ ವರ್ಷದೊಳಗೆ ಚಿಕ್ಕಪೇಟೆ ಕ್ಷೇತ್ರ ಬೆಂಗಳೂರಿನ ಸುಂದರ ಕ್ಷೇತ್ರಗಳಲ್ಲಿ ಒಂದಾಗಲಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಭರವಸೆ ನೀಡಿದರು.

ಕಲಾಸಿಪಾಳ್ಯದ ಪಾಪುರಲ್ ಆಟೊ ಮೊಬೈಲ್ ವೃತ್ತದಲ್ಲಿ  ಕಮ್ಯುನಿಟಿ ಸಂಕ್ರಾಂತಿ ಸಂಭ್ರಮದ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ನಾಲ್ಕೈದು ವರ್ಷಗಳ ಹಿಂದೆ, ಅಂದರೆ ನಾನು ಶಾಸಕನಾಗಿ ಬರುವ ಮೊದಲು ಸಾಕಷ್ಟು ಅವ್ಯವಸ್ಥೆಗಳಿದ್ದವು. ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ತೀವ್ರ ಹದಗೆಟ್ಟಿದ್ದವು. ನಮ್ಮ ಬಿಜೆಪಿ ಸರಕಾರ ನಮ್ಮ ಚಿಕ್ಕಪೇಟೆ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಿತು. ಇದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡೆವು. ಶೇ.65ರಷ್ಟು  ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ. ಉಳಿದ ಕೆಲಸಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೃದಯ ಭಾಗದ ಕೇಂದ್ರೀಯ ವ್ಯಾಪಾರಿಗಳ ಹಬ್ ಆಗಿದೆ. ಈ ಕ್ಷೇತ್ರವನ್ನು ನಾವು ಎಷ್ಟು ಅಭಿವೃದ್ಧಿಪಡಿಸುತ್ತೇವೊ ಅಷ್ಟು ವ್ಯಾಪಾರವೂ ಉಜ್ವಲಗೊಳ್ಳುತ್ತದೆ.

ಮುಖ್ಯಮಂತ್ರಿಗಳು ಮತ್ತು  ಪಾಲಿಕೆ ಅಧಿಕಾರಿಗಳು ಇದಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಉದಯ್ ಗರುಡಾಚಾರ್ ತಿಳಿಸಿದರು. ಸುಮಾರು 40 ವರ್ಷಗಳ ಹಿಂದೆ ಕ್ಷೇತ್ರದ ಬಡವರಿಗಾಗಿ ನಿರ್ಮಿಸಿದ್ದ ಮನೆಗಳು  ಶಿಥಿಲಾವಸ್ಥೆಗೆ ತಲುಪಿ, ಎಲ್ಲವೂ ಬಿದ್ದು ಹೋಗಿದ್ದವು. ಇದೀಗ ನನ್ನ ಅಧಿಕಾರಾವಧಿಯಲ್ಲಿ ಕಲಾಸಿಪಾಳ್ಯದ ಮೋತಿ ನಗರದಲ್ಲಿ ನೂತನವಾಗಿ ಎಂ.ಎಸ್. ಬಿಲ್ಡಿಂಗ್‍ನ ಮನೆಗಳನ್ನು ಪುನರ್ ನಿರ್ಮಾಣ ಮಾಡಿಸಿದ್ದೇನೆ. ಇದನ್ನು ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಮಾಡಿಸುವ ಆಶಯವಿದೆ. ಶೀಘ್ರದಲ್ಲೇ ಆ ಕಾರ್ಯಕ್ರಮವನ್ನೂ ಮಾಡಿಸಲಾಗುವುದು ಎಂದರು.

ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ನಮ್ಮ ನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಬೆಂಗಳೂರು ಒಂದು ಮಹಾನಗರವಾದರೂ ಸಂಕ್ರಾಂತಿ ಮತ್ತಿತರ ಹಬ್ಬಗಳ ಆಚರಣೆಯೊಂದಿಗೆ  ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತಿದ್ದೇವೆ.

ಸಂಕ್ರಾಂತಿ ಹಬ್ಬದ ನಿಮಿತ್ತ ಪೊಂಗಲ್ ತಯಾರಿಸುತ್ತಿರುವ ಮಹಿಳೆಯರು

ಚಿಕ್ಕಪೇಟೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಕ್ಷೇತ್ರ ಮತ್ತಷ್ಟು ಉತ್ಕೃಷ್ಟ ರೀತಿಯಲ್ಲಿ ಅಭಿವೃದ್ಧಿ ಹೊಂದಲಿದೆ. ಕ್ಷೇತ್ರಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಮಾಜಿ ಸದಸ್ಯ ಪಿ. ಧನರಾಜ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ  ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಲಯ ಆಯುಕ್ತರಾದ ತುಳಸಿ, ನಿಕಟ ಪೂರ್ವ ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್, ಜಂಟಿ ಆಯುಕ್ತ ಜಗದೀಶ್ ನಾಯಕ್, ಮುಖ್ಯ ಅಭಿಯಂತರ ರಾಜೀವ್, ಈಶ್ವರ್, ಕಾರ್ಯನಿರ್ವಾಹಕ ಎಂಜಿನಿಯರ್ ರೆಡ್ಡಿ, ಮಾಜಿ ಕಾರ್ಪೊರೇಟರ್ ಪಿ. ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸಂಕ್ರಾಂತಿ ಹಬ್ಬದ ನಿಮಿತ್ತ ಶೃಂಗಾರಗೊಂಡ ದೃಶ್ಯ

ಕಲಾಸಿಪಾಳ್ಯದ ಅಟೊಮೊಬೈಲ್ ವೃತ್ತದಲ್ಲಿ ಮಹಿಳೆಯರು ಬೆಳಗ್ಗೆಯೇ ಬಣ್ಣ ಬಣ್ಣದ ರಂಗವಲ್ಲಿಗಳನ್ನು ಬಿಡಿಸಿ ಇಡೀ ರಸ್ತೆಗೆ ಹೊಸ ಲುಕ್ ನೀಡಿದ್ದರು. ರಸ್ತೆಯಲ್ಲೇ ಒಲೆಯಿಟ್ಟು ಘಮ ಘಮಿಸುವ ಪೊಂಗಲ್ ಮಾಡಿ ನೆರೆದಿದ್ದವರಿಗೆ ವಿತರಿಸಿ ಹಬ್ಬದ ಕಳೆ ಹೆಚ್ಚಿಸಿದ್ದರು.

 

ಜಿಲ್ಲೆ

ರಾಜ್ಯ

error: Content is protected !!